AC, ಫ್ಯಾನ್ ಬೇಡ, ವಿಭಿನ್ನ ವಿನ್ಯಾಸದಿಂದ ಮನೆ ಕೂಲ್ ಕೂಲ್, ಬೆಂಗಳೂರಲ್ಲೊಂದು ವಿಶಿಷ್ಟ ಮನೆ
ಕಳೆದ ಕೆಲವು ದಿನಗಳಿಂದ, ಭಾರತದ ಹಲವಾರು ಭಾಗಗಳು ಸೂರ್ಯನ ಶಾಖಕ್ಕೆ ಸುಸ್ತು ಹೊಡೆದಿದೆ. ತಾಪಮಾನ 40 ಡಿಗ್ರಿ ಗಡಿಯನ್ನು ದಾಟುತ್ತಿದೆ. ಮನೆಯ ಹೊರಗೆ ಅಲ್ಲ ಮನೆಯೊಳಗೆ ಇರುವುದು ಕೂಡಾ ಕಷ್ಟವಾಗುತ್ತಿದೆ. ಈ ಹಂತದಲ್ಲಿ ಮನೆಯನ್ನು ಕೂಲ್ ಆಗಿ ಇರಿಸಲು ಅನುಸರಿಸುವ ಸುಲಭ ಮಾರ್ಗವೆಂದರೆ ಎಸಿ ಆನ್ ಮಾಡಿ ಇಡೀ ಕೋಣೆ ತಂಪಾಗಿರುವಂತೆ ಮಾಡುವುದು. ಇದು ಸರಳ ಉಪಾಯ ಎನ್ನುವುದರಲ್ಲಿ ಎರಡು ಮಾತಿಲ್ಲ ಆದರೆ ಎಸಿಯನ್ನು ಇಡೀ ದಿನ ಬಳಸಿದರೆ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಾತ್ರವಲ್ಲದೆ ಅದು ಎಸಿಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ.ಹೀಗಾಗುವಾಗ ಎಸಿ ಕೂಡಾ ಪದೇ ಪದೇ ರಿಪೇರಿಗೆ ಬರಬಹುದು. ಎಸಿ ಅಡಿಯಲ್ಲಿ ಇಡೀ ದಿನ ಕಳೆಯುವುದು ಆರೋಗ್ಯದ ಮೇಲೆ ಕೂಡಾ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೆ ಬೆಂಗಳೂರಿನ ವ್ಯಕ್ತಿಯೊಬ್ಬರು ಎಸಿಯಿಲ್ಲದೆ, ಬೇಸಿಗೆಯ ಬಿಸಿಯಿಂದ ಬಚಾವಾಗಲು ನೈಸರ್ಗಿಕ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಬಿಸಿಲಿನ ತಾಪ ನಿವಾರಣೆಗೆ ಮನೆಯ ವಿಶಿಷ್ಟ ವಿನ್ಯಾಸ:
ಬೇಸಿಗೆಯಲ್ಲಿ ಸೂರ್ಯನ ತಾಪವನ್ನು ನಿಯಂತ್ರಿಸುವುದು ನಮ್ಮ ಕೈಯ್ಯಲ್ಲಿ ಇಲ್ಲ. ಆದರೆ ಶಾಖ ನಮ್ಮ ಮೇಲೆ ಪರಿಣಾಮ ಬೀರದಂತೆ ನಾವು ಮಾಡಿಕೊಳ್ಳಬಹುದು. ದಿ ಬೆಟರ್ ಇಂಡಿಯಾ ವರದಿಯ ಪ್ರಕಾರ, ಸತ್ಯ ಪ್ರಕಾಶ್ ವಾರಣಾಸಿ ಎಂಬವರು ಬಿರು ಬೇಸಿಗೆಯಲ್ಲಿಯೂ ತಮ್ಮ ಮನೆಯನ್ನು 2-3 ಡಿಗ್ರಿ ತಂಪಾಗಿರುವಂತೆ ವಿನ್ಯಾಸಗೊಳಿಸಿದ್ದಾರೆ.

ಸತ್ಯಪ್ರಕಾಶ್ ವಾರಣಾಸಿ ಈ ಮನೆಗೆ ಸಿಮೆಂಟ್ ಗೋಡೆಗಳನ್ನು ನಿರ್ಮಿಸಿಲ್ಲ. ಸಿಮೆಂಟ್ ಯಾವಾಗಲೂ ಶಾಖವನ್ನು ಎಳೆದುಕೊಳ್ಳುತ್ತದೆ. ಈ ಕಾರಣದಿಂದ ಕಾಂಕ್ರೀಟ್ ಮನೆಗಳು ಬೇಸಿಗೆಯಲ್ಲಿ ಒಂದೇ ಸಮನೆ ಬಿಸಿಯಾಗುತ್ತದೆ. ಇದರ ಬದಲು ಕೊಠಡಿಗಳೊಳಗಿನ ತಾಪಮಾನವನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಜೇಡಿ ಮಣ್ಣಿನ ಇಟ್ಟಿಗೆಗಳನ್ನು ಬಳಸಿದ್ದಾರೆ. ನೈಸರ್ಗಿಕ ಬೆಳಕು ತಂಪಾದ ಗಾಳಿ ಮನೆಯೊಳಗೆ ಹರಿಯುವಂತೆ ಮಾಡಲು ಸ್ಲೈಡಿಂಗ್ ಡೋರ್‌ಗಳನ್ನು ಬಳಸಲಾಗಿದೆ. ಮಾತ್ರವಲ್ಲ ಬಿಸಿ ಗಾಳಿ ಹೊರಗೆ ಹೋಗಲು ಮತ್ತು ತಂಪು ಗಾಳಿ ಒಳಗೆ ಹರಿಯುವಂತೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಅಲ್ಲಲ್ಲಿ ಸ್ಥಳಗಳನ್ನು ಬಿಡಲಾಗಿದೆ. ವಿವಿಧ ರೀತಿಯ ಹೂವುಗಳು ಮತ್ತು ಸಸ್ಯಗಳನ್ನು ಒಳಗೊಂಡ ಸೊಂಪಾದ ಉದ್ಯಾನವು ಈ ಮನೆಯ ಮತ್ತೊಂದು ಹೈ ಲೈಟ್.
ಸತ್ಯಪ್ರಕಾಶ್ ವಾರಣಾಸಿ ಅವರ ಬೆಂಗಳೂರಿನ ಮನೆಯ ಮತ್ತೊಂದು ವಿಶೇಷ ಲಕ್ಷಣವೆಂದರೆ, ಇಲ್ಲಿ ಫ್ರೆಂಚ್ ಕಿಟಕಿಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ಈ ನಿರ್ದಿಷ್ಟ ವಿನ್ಯಾಸವು ನೈಸರ್ಗಿಕ ಬೆಳಕನ್ನು ಹೆಚ್ಚಿಸಲು ಮತ್ತು ನಿರಂತರ ಗಾಳಿಯ ಹರಿವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಸತ್ಯಪ್ರಕಾಶ್ ಪ್ರಕಾರ, ಅವರ ಈ ಕೂಲ್ ಕೂಲ್ ಮನೆಯ 3 ಪ್ರಮುಖ ವಿನ್ಯಾಸ ಅಂಶಗಳೆಂದರೆ ಕ್ರಾಸ್ ವೆಂಟಿಲೇಶನ್, ಡಿಸ್ಪ್ಲೇಸ್‌ಮೆಂಟ್ ವೆಂಟಿಲೇಶನ್, ಮತ್ತು ಬಾಡಿ ಲೆವೆಲ್ ಏರ್ ಫ್ಲೋ.
ನೈಸರ್ಗಿಕ ಅಂಶಗಳು ಮತ್ತು ಸುಸ್ಥಿರ ಜೀವನ ಪರಿಸರ:
ಇಲ್ಲಿ ಹವಾಮಾನ ನಿಯಂತ್ರಿತ ವಾತಾವರಣಕ್ಕಾಗಿ ನೀರನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಮೀನಿನ ಕೊಳ, ಅಂತರ್ಜಲವನ್ನು ಮರುಪೂರಣಗೊಳಿಸುವ ಮತ್ತು ತಾಪಮಾನವನ್ನು ತಂಪಾಗಿಡುವ ತೆರೆದ ಬಾವಿ ಇದೆ. ಹೂವಿನ ಉದ್ಯಾನದ ಕೆಳಗೆ ಪ್ರಾಯೋಗಿಕ ಬಳಕೆಗಾಗಿ 15,000 ಲೀಟರ್ ಮಳೆನೀರು ಸಂಗ್ರಹಿಸಲಾಗಿದೆ.
ಮನೆಯೊಳಗೆ ಹೆಜ್ಜೆ ಹಾಕಿದಾಗ, ಮರುಬಳಕೆಯ ಪೈನ್ ಮರ ಮತ್ತು ಗ್ರಾನೈಟ್ ಕಲ್ಲಿನ ಮೆಟ್ಟಿಲುಗಳನ್ನು ಒಳಗೊಂಡಿರುವ ಅತ್ಯಂತ ಸುಂದರವಾದ, ಹಳ್ಳಿಗಾಡಿನ ಪ್ರಕೃತಿಯೊಂದಿಗೆ ಬೆರೆತ ವಾತಾವರಣವನ್ನು ಸೃಷ್ಟಿಸುತ್ತದೆ. ಲಿವಿಂಗ್ ರೂಮ್ ನೆಲಕ್ಕೆ ರೆಡ್ ಆಕ್ಸೈಡ್ ಬಳಸಲಾಗಿದೆ. ಮರದ ಪೀಠೋಪಕರಣಗಳ ಬಳಕೆ ಮತ್ತು ಕೃತಕ ಹವಾನಿಯಂತ್ರಣಗಳ ಬದಲಿಗೆ ನೈಸರ್ಗಿಕ ಗಾಳಿಯ ಸಂಚಾರವನ್ನು ಉತ್ತೇಜಿಸುವ ವಿನ್ಯಾಸಗಳನ್ನು ಇಲ್ಲಿ ನೀಡಲಾಗಿದೆ. ಪತ್ನಿ ಇಶಾಲ, ಪುತ್ರಿಯರಾದ ಗೌರಿ ಮತ್ತು ಸಿರಿಯ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಿ ಈ ಪರಿಸರ ಸ್ನೇಹಿ ಮನೆಯನ್ನು ವಿನ್ಯಾಸಗೊಳಿಸಲಾಗಿದೆ ಎನ್ನುವುದು ಈ ಮನೆಯ ಮತ್ತೊಂದು ವಿಶೇಷ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications