101ನೇ ವಯಸ್ಸಿನಲ್ಲೂ ಕೋಕಾ ಕೋಲಾ, ಸ್ಪ್ರೈಟ್ ಕುಡಿಯುವ ಅಜ್ಜ! ಇವರ ದೀರ್ಘಾಯಸ್ಸಿನ ಗುಟ್ಟೇನು?

ಆರೋಗ್ಯವಾಗಿರಲು ಸಕ್ಕರೆ ತ್ಯಜಿಸಬೇಕು, ಹೊರಗಿನ ಆಹಾರ ಸೇವಿಸಬಾರದು, ಕಟ್ಟುನಿಟ್ಟಿನ ಆಹಾರ ಪದ್ಧತಿ ಪಾಲಿಸಬೇಕು ಎಂಬ ಸಲಹೆಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಈಗ ವೈರಲ್‌ ಆಗಿರುವ, ಚೀನಾದ 101 ವರ್ಷದ ವೃದ್ಧರೊಬ್ಬರ ಜೀವನಶೈಲಿ ಈ ಎಲ್ಲ ಸಾಮಾನ್ಯ ನಂಬಿಕೆಗಳ ನಡುವೆ ಕುತೂಹಲ ಮೂಡಿಸಿದೆ. ಇವರಿಗೆ ಕೋಕಾ ಕೋಲಾ ಮತ್ತು ಸ್ಪ್ರೈಟ್ ಎಂದರೆ ಅಚ್ಚುಮೆಚ್ಚು. ಸಮುದ್ರಾಹಾರವನ್ನು ಇಷ್ಟಪಟ್ಟು ತಿನ್ನುತ್ತಾರೆ. ಆದರೂ ವಯಸ್ಸು 101 ದಾಟಿದ್ದರೂ ಆರೋಗ್ಯವಾಗಿದ್ದಾರೆ!

ಚೀನಾದ ಝೆಜಿಯಾಂಗ್ ಪ್ರಾಂತ್ಯದ ಲು ಶಿಜೆಂಗ್ (Lu Shizeng) ಎಂಬ ಈ ಹಿರಿಯ ವ್ಯಕ್ತಿ ತಮ್ಮ ವಿಭಿನ್ನ ಆಹಾರ ಪದ್ಧತಿ ಮತ್ತು ದಿನಚರಿಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆಯುತ್ತಿದ್ದಾರೆ. ಅವರ ಜೀವನಶೈಲಿಯ ಬಗ್ಗೆ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

101-Year-Old Chinese Man Loves Coca-Cola and Sprite What s His Longevity Secret

ಮೀನು, ಏಡಿ, ಸೀಗಡಿ ಇವರ ನೆಚ್ಚಿನ ಆಹಾರ

ಲು ಅವರಿಗೆ ಆಹಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅವರು ಪ್ರತಿ ಐದು ದಿನಗಳಿಗೊಮ್ಮೆ ಸ್ಥಳೀಯ ಮಾರುಕಟ್ಟೆಗೆ ಹೋಗಿ ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಖರೀದಿಸುತ್ತಾರೆ. ಮೀನು, ಸೀಗಡಿ, ಏಡಿ ಸೇರಿದಂತೆ ವಿವಿಧ ಬಗೆಯ ಸಮುದ್ರಾಹಾರ, ಹಂದಿಮಾಂಸ ಮತ್ತು ತಾಜಾ ತರಕಾರಿಗಳನ್ನು ಮನೆಗೆ ತರುತ್ತಾರೆ.

ಕಳೆದ ವರ್ಷದವರೆಗೂ ಅವರು ಸ್ವತಃ ತ್ರಿಚಕ್ರ ವಾಹನದಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದರು. ಆದರೆ ಒಮ್ಮೆ ಬಿದ್ದು ಗಾಯಗೊಂಡ ನಂತರ ಕುಟುಂಬದವರು ವಾಹನ ಚಲಾಯಿಸುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಈಗ ರಿಕ್ಷಾದಲ್ಲಿ ಮಾರುಕಟ್ಟೆಗೆ ತೆರಳುತ್ತಾರೆ.

ತಮ್ಮ ಉಳಿತಾಯದ ಹಣದ ಗಣನೀಯ ಭಾಗವನ್ನು ಆಹಾರಕ್ಕಾಗಿ ಖರ್ಚು ಮಾಡುತ್ತಾರೆ. ಅವರ ಇಬ್ಬರು ಪುತ್ರರು ತಂದೆಯ ಆರೈಕೆಗಾಗಿ ಒಬ್ಬ ಸಹಾಯಕಿಯನ್ನೂ ನೇಮಿಸಿದ್ದಾರೆ. ಲು ಅವರ ಆಹಾರದ ಪ್ರಮಾಣವೂ ಅಚ್ಚರಿ ಮೂಡಿಸುವಂತಿದೆ. ಒಂದು ಊಟಕ್ಕೆ ಅರ್ಧ ಬಟ್ಟಲು ಅನ್ನದ ಜೊತೆಗೆ ಒಂದು ತಟ್ಟೆ ಪೂರ್ತಿ ಏಡಿಯನ್ನು ತಿನ್ನಬಲ್ಲರು ಎಂದು ಅವರ ಆರೈಕೆದಾರರು ತಿಳಿಸಿದ್ದಾರೆ.

ಕೋಲಾ, ಸ್ಪ್ರೈಟ್ ಇಲ್ಲದೆ ಇವರ ದಿನ ಸಾಗುವುದಿಲ್ಲ!

ಲು ಅವರ ಮನೆಯ ಫ್ರಿಡ್ಜ್‌ನಲ್ಲಿ ಯಾವಾಗಲೂ ಕೋಕಾ ಕೋಲಾ ಮತ್ತು ಸ್ಪ್ರೈಟ್ ಬಾಟಲಿಗಳು ಇರುತ್ತವೆ. ಇವೆರಡೂ ಅವರಿಗೆ ಇಷ್ಟವಾದ ಪಾನೀಯಗಳು. ಅದರಲ್ಲೂ ತಣ್ಣನೆಯ ಸ್ಪ್ರೈಟ್‌ಗೆ ಕೆಲವು ಹನಿ ಬಿಳಿ ವೈನ್ ಸೇರಿಸಿಕೊಂಡು ಕುಡಿಯುವುದೆಂದರೆ ಅವರಿಗೆ ಬಹಳ ಪ್ರೀತಿ. ಇದರ ಜೊತೆಗೆ ಕಲ್ಲಂಗಡಿ ಹಣ್ಣು, ಪೇರಳೆ ಮತ್ತು ಕಿತ್ತಳೆ ಸೇರಿದಂತೆ ಸಿಹಿ ಹಣ್ಣುಗಳನ್ನೂ ಇಷ್ಟಪಟ್ಟು ಸೇವಿಸುತ್ತಾರೆ.

ಇಂದಿನ ಯುವಜನರು ಸಕ್ಕರೆ ಸೇವನೆ ಕಡಿಮೆ ಮಾಡಲು ಪ್ರಯತ್ನಿಸುತ್ತಿರುವಾಗ, 101 ವರ್ಷದ ಲು ಮಾತ್ರ ಇಷ್ಟದ ತಂಪು ಪಾನೀಯಗಳನ್ನು ಕುಡಿಯುತ್ತಾ ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದೇ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಳಗ್ಗೆ 4 ಗಂಟೆಗೆ ಎಚ್ಚರ, ರಾತ್ರಿ 8 ಗಂಟೆಗೆ ನಿದ್ರೆ

ಲು ಅವರ ಆಹಾರ ಪದ್ಧತಿ ವಿಚಿತ್ರವಾಗಿದ್ದರೂ ದಿನಚರಿ ಮಾತ್ರ ಸಾಕಷ್ಟು ಶಿಸ್ತಿನಿಂದ ಕೂಡಿದೆ. ಪ್ರತಿದಿನ ಸಂಜೆ 5 ಗಂಟೆಯೊಳಗೆ ರಾತ್ರಿ ಊಟ ಮುಗಿಸುತ್ತಾರೆ. ರಾತ್ರಿ ಸುಮಾರು 8 ಗಂಟೆಗೆ ಮಲಗುತ್ತಾರೆ. ಬೆಳಗಿನ ಜಾವ 4 ಗಂಟೆಗೆ ಎಚ್ಚರವಾಗುತ್ತದೆ. ಆದರೆ ತಕ್ಷಣ ಹಾಸಿಗೆಯಿಂದ ಏಳುವುದಿಲ್ಲ. ಇನ್ನೆರಡು ಗಂಟೆಗಳ ಕಾಲ ಹಾಸಿಗೆಯಲ್ಲೇ ದೇಹವನ್ನು ಹಿಗ್ಗಿಸುವ ವ್ಯಾಯಾಮ ಮತ್ತು ವಿಶ್ರಾಂತಿ ಪಡೆಯುತ್ತಾರೆ. ಬೆಳಗ್ಗೆ 6 ಗಂಟೆಗೆ ಹಾಸಿಗೆಯಿಂದ ಎದ್ದು ತಮ್ಮ ದಿನಚರಿ ಆರಂಭಿಸುತ್ತಾರೆ. ಮಧ್ಯಾಹ್ನವೂ ಸ್ವಲ್ಪ ಹೊತ್ತು ನಿದ್ರೆ ಮಾಡುತ್ತಾರೆ.

ಇತ್ತೀಚೆಗೆ ಬಿದ್ದ ಗಾಯದಿಂದಲೂ ಅವರು ಉತ್ತಮವಾಗಿ ಚೇತರಿಸಿಕೊಂಡಿದ್ದಾರೆ. ತಮ್ಮ ಯೌವನದ ದಿನಗಳ ಘಟನೆಗಳನ್ನು ನೆನಪಿಸಿಕೊಳ್ಳುವಷ್ಟು ಮಾನಸಿಕ ಚುರುಕುತನ ಹೊಂದಿದ್ದಾರೆ. ತಮಗೆ ಶೀತ ಆಗುವುದು ಕೂಡ ಬಹಳ ಅಪರೂಪ ಮತ್ತು ರಕ್ತದೊತ್ತಡವೂ ಕಡಿಮೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ.

ದೀರ್ಘಾಯಸ್ಸಿನ ಗುಟ್ಟು ಕೋಕಾ ಕೋಲಾನಾ?

ಲು ಅವರ ಜೀವನಶೈಲಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೋಕಾ ಕೋಲಾ ಕುಡಿಯುತ್ತಿದ್ದರೂ 101 ವರ್ಷ ಬದುಕಿರುವುದು ಆರೋಗ್ಯ ತಜ್ಞರನ್ನು ಅಚ್ಚರಿಗೊಳಿಸಬಹುದು ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ಅವರ ಸಂತೋಷದ ಮನಸ್ಥಿತಿ ಮತ್ತು ನಿಯಮಿತ ನಿದ್ರೆಯೇ ದೀರ್ಘಾಯಸ್ಸಿಗೆ ಕಾರಣವಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕೆಲವರ ಪ್ರಕಾರ, ಪ್ರತಿಯೊಬ್ಬರ ದೇಹದ ರಚನೆ, ಅನುವಂಶಿಕ ಗುಣಗಳು ಮತ್ತು ಜೀವನಶೈಲಿ ವಿಭಿನ್ನವಾಗಿರುವುದರಿಂದ ಒಬ್ಬರ ಅನುಭವವನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಕೋಕಾ ಕೋಲಾ ಅಥವಾ ಸ್ಪ್ರೈಟ್ ಕುಡಿಯುವುದರಿಂದ ಆಯಸ್ಸು ಹೆಚ್ಚುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಬದಲಾಗಿ, ಅಪಾಯವೇ ಹೆಚ್ಚು. ಇಂತಹ ಪಾನೀಯಗಳಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ. ಅತಿಯಾದ ಸಕ್ಕರೆ ಸೇವನೆಯು ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಒಟ್ಟಿನಲ್ಲಿ, 101 ವರ್ಷ ವಯಸ್ಸಿನಲ್ಲೂ ತಮ್ಮ ಇಷ್ಟದ ಆಹಾರವನ್ನು ಸವಿಯುತ್ತಾ, ಶಿಸ್ತಿನ ದಿನಚರಿಯನ್ನು ಪಾಲಿಸುತ್ತಾ ಬದುಕುತ್ತಿರುವ ಲು ಶಿಜೆಂಗ್ ಅವರ ಕಥೆ ಮಾತ್ರ ನಿಜಕ್ಕೂ ವಿಶೇಷ!

ಬರಹ: ಭವಾನಿ ಭಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+