ಬೊಚ್ಚುಬಾಯಿ ಪುಢಾರಿಯ ಭಾಷಣದ ಗುಟ್ಟು ರಟ್ಟು
ಒಬ್ಬ ಹಿರಿಯ ಪುಢಾರಿ ಇದ್ದಬದ್ದ ಹಲ್ಲುಗಳನ್ನೆಲ್ಲ ದಂತ ವೈದ್ಯನ ಬಳಿ ಹೋಗಿ ಕಿತ್ತಿಸಿಕೊಂಡು ಬಂದಿದ್ದ. ಆದರೆ, ಚುನಾವಣೆ ಹತ್ತಿರವಾಗಿದ್ದರಿಂದ ಮತ್ತು ದಂತಪುರಿ ವಿಧಾನಸಭೆ ಕ್ಷೇತ್ರಕ್ಕೆ ಆತನೇ ಸ್ವತಃ ಚುನಾವಣೆಗೆ ನಿಂತಿದ್ದರಿಂದ ಪ್ರಚಾರ ಕಾರ್ಯದಲ್ಲಿ ತೊಡಗಲೇಬೇಕಾಗಿತ್ತು. ಏಳು ದಿನಗಳ ಅಂತರದಲ್ಲಿ ಮೂರ್ನಾಲ್ಕು ಕಡೆ ಪ್ರಚಾರದ ವ್ಯವಸ್ಥೆ ಮಾಡಲಾಗಿತ್ತು.
ಹಿಂದಿನ ದಿನ ತಾನೆ ಒಂದು ಹಲ್ಲು ಉಳಿಯದಂತೆ ಎಲ್ಲವನ್ನೂ ಕಿತ್ತಿಸಿಕೊಂಡು ಬಂದಿದ್ದರಿಂದ, ಅದ್ಭುತ ಭಾಷಣಕಾರನಾಗಿದ್ದರೂ ಕೇವಲ 10 ನಿಮಿಷ ಮಾತ್ರ ಮಾತನಾಡಲು ಆತನಿಗೆ ಸಾಧ್ಯವಾಯಿತು. ಬಾಯಿ ಬೊಚ್ಚಾಗಿದ್ದರಿಂದ ಆ ಹತ್ತು ನಿಮಿಷ ಏನು ಮಾತನಾಡಿದ ಎಂದು ಕೂಡ ತಿಳಿಯಲಿಲ್ಲ.
ಮುಂದಿನ ಭಾನುವಾರ ಆಯೋಜಿಸಲಾಗಿದ್ದ ಮತ್ತೊಂದು ಚುನಾವಣಾ ಪ್ರಚಾರ ಸಭೆಯಲ್ಲಿ, ಹೊಸ ಹಲ್ಲಿನ ಸೆಟ್ ಹಾಕಿಸಿಕೊಂಡು ಬಂದಿದ್ದರೂ ಹತ್ತೇ ನಿಮಿಷಗಳ ಕಾಲ ಕಷ್ಟಪಟ್ಟು ಮಾತನಾಡಿದ. ಆದರೆ, ನೋವು ಸ್ವಲ್ಪ ಕಡಿಮೆಯಾಗಿದ್ದರಿಂದ ಸ್ವಲ್ಪ ಸ್ಪಷ್ಟವಾಗಿ ಆತನಿಗೆ ಮಾತನಾಡಲು ಸಾಧ್ಯವಾಯಿತು. ಆತ ಆಡಿದ ಮಾತುಗಳು ಅರ್ಧಮಟ್ಟಿಗೆ ಅರ್ಥವಾಗಿತ್ತು.
ಆದರೆ, ಮುಂದಿನ ಭಾನುವಾರ ಇದ್ದಕ್ಕಿದ್ದಂತೆ ಹತ್ತಲ್ಲ ಇಪ್ಪತ್ತಲ್ಲ ಅನಾಮತ್ ಎರಡು ಗಂಟೆಗಳ ಕಾಲ ಭಾಷಣ ಬಿಗಿದ. ಆತನ ಜೊತೆಗಿದ್ದವರಿಗೆ ಆಶ್ಚರ್ಯವೋ ಆಶ್ಚರ್ಯ. ಕಳೆದೆರಡು ವಾರಗಳ ಭಾಷಣದಲ್ಲಿ ಬಾಯಿ ತೆರೆಯಲೂ ಕಷ್ಟಪಡುತ್ತಿದ್ದ ಪುಢಾರಿ ಇದ್ದಕ್ಕಿದ್ದಂತೆ ಎರಡು ಗಂಟೆ ಭಾಷಣ ಮಾಡಿದ್ದು ಹೇಗೆಂದು ಆತನನ್ನು ಕೇಳಿದರು.
ಆತ ಹೇಳಿದ್ದೆಂದರೆ, "ಅವತ್ತಿನ ದಿನ ಅಕಸ್ಮಾತಾಗಿ ನನ್ನ ಹೆಂಡತಿಯ ಹಲ್ಲಿನ ಸೆಟ್ ಹಾಕಿಕೊಂಡೆ ನೋಡಿ, ಆಡುತ್ತಿದ್ದ ಮಾತುಗಳನ್ನು ನಿಲ್ಲಿಸಲೇ ಸಾಧ್ಯವಾಗಲಿಲ್ಲ!"












Click it and Unblock the Notifications