ಅರ್ಥವಾಯ್ತಾ ಮಕ್ಕಳೇ, ಅರ್ಥವಾಯ್ತು ಗುರುಗಳೇ!
ಮೇಷ್ಟ್ರೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ನಮ್ಮ ದೇಹದಲ್ಲಿ ಆಗುವ ರಕ್ತ ಸಂಚಾರದ ಬಗ್ಗೆ ಪಾಠ ಮಾಡುತ್ತಿದ್ದರು. ಎಷ್ಟೇ ವಿವರಣೆ ನೀಡಿದರೂ ಮಕ್ಕಳಿಗೆ ರಕ್ತ ಸಂಚಾರದ ಪಾಠ ಅರ್ಥ ಆಗಲಿಲ್ಲ. ಆಗ, ಮೇಷ್ಟ್ರೇ ಒಂದು ನಿರ್ಧಾರಕ್ಕೆ ಬಂದರು.
ಪ್ರಾಯೋಗಿಕವಾಗಿ ತಿಳಿಸಿದರೆ ಮಕ್ಕಳು ಬೇಗನೆ ಅರ್ಥ ಮಾಡಿಕೊಳ್ಳುತ್ತಾರೆ ಎಂದು, ತಾವೇ ಸ್ವತಃ ಗೋಡೆಗೆ ತಲೆಕೆಳಗಾಗಿ ಒರಗಿ ನಿಂತರು. ತಲೆಕೆಳಗಾಗಿ ನಿಂತ ಭಂಗಿಯಲ್ಲೇ ಮೇಷ್ಟ್ರು ಪಾಠ ಆರಂಭಿಸಿದು.
"ಮಕ್ಕಳೇ ನೋಡಿರಿಲ್ಲಿ, ನಾನು ತಲೆಕೆಳಗಾಗಿ ನಿಂತಿದ್ದೇನೆ. ನೋಡ್ತಾ ಇದ್ದೀರಿ, ನನ್ನ ಮುಖಕ್ಕೆ ರಕ್ತ ನುಗ್ಗುತ್ತಿದ್ದಂತೆ ಮುಖ ಕೆಂಪಾಗುವುದು" ಎಂದು ಹೇಳಿ ಮತ್ತೆ ಸರಿಯಾದ ಭಂಗಿಯಲ್ಲಿ ನಿಂತರು.
ಉಲ್ಟಾ ನಿಂತಿದ್ದರಿಂದ ಅಂಗಿ ಕೆಳಗಿಳಿದು ಕಾಣುತ್ತಿದ್ದ ದುಂಡಗಿನ ಹೊಟ್ಟೆಯ ಮೇಲೆ ಅಂಗಿಯನ್ನು ಎಳೆದುಕೊಳ್ಳುತ್ತ, "ಅರ್ಥವಾಯ್ತಾ ಮಕ್ಕಳೇ?"
"ಅರ್ಥವಾಯ್ತು ಗುರುಗಳೇ" ಅಂತ ಮಕ್ಕಳು ಒಕ್ಕೊರಲಿನಿಂದ ಕೂಗಿದರು.
"ಒಳ್ಳೇದು, ಆದರೆ ಒಂದು ಮಾತು ಹೇಳಿ. ತಲೆಕೆಳಗಾದಾಗ ತಲೆಗೆ ರಕ್ತವೇನೋ ನುಗ್ಗಿತು. ಆದರೆ, ಸರಿಯಾದ ಭಂಗಿಯಲ್ಲಿ ನಿಂತಾಗ ಕಾಲಿಗೆ ರಕ್ತ ನುಗ್ಗಿ ಕೆಂಪಗೇಕೆ ಆಗುವುದಿಲ್ಲ?" ಎಂದು ಪ್ರಶ್ನೆ ಕೇಳಿದರು.
ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿ, "ಯಾಕಂದ್ರೆ ಮೇಷ್ಟ್ರೇ, ಕಾಲು ಖಾಲಿ ಇರುವುದಿಲ್ಲವಲ್ಲ!" ಎಂದು ಮೇಷ್ಟ್ರಿಗೇ ವಿದ್ಯಾರ್ಥಿ ಪಾಠ ಹೇಳಿದ.












Click it and Unblock the Notifications