ಡಾಕ್ಟರ್ ಕೊಟ್ಟ ಮಾತ್ರೆ ನೋಡಿ ರೋಗಿ ಪಲಾಯನ!
ಎಂಥಾ ರೋಗವೇ ಇರಲಿ ಅದನ್ನು ಡಾ. ಸುಬ್ಬು ಗುಣಪಡಿಸುತ್ತಾರೆ, ಅವರ ಕೈಯಲ್ಲಿ ಏನೋ ಚಮತ್ಕಾರವಿದೆ ಎಂದು ಊರಲ್ಲೆಲ್ಲಾ ಸುದ್ದಿ ಹಬ್ಬಿತ್ತು. ಡಾ. ಸುಬ್ಬು ಅವರ ಕೈಗುಣವನ್ನು ಮತ್ತು ರೋಗ ಗುಣಪಡಿಸುವ ರೀತಿಯನ್ನು ಹಳ್ಳಿಯ ಜನರೆಲ್ಲ ಪವಾಡವೆಂದೇ ನಂಬಿದರು. ಪವಾಡ ನಡೆಯುತ್ತಿದೆ ಎಂಬ ಸುದ್ದಿಯನ್ನು ಡಾ. ಸುಬ್ಬು ಒಪ್ಪಲೂ ಇಲ್ಲ, ನಿರಾಕರಿಸಲೂ ಇಲ್ಲ.
ಆದರೆ, ಡಾ. ಡಿಬ್ಬಿಗೆ ಸುಬ್ಬುವನ್ನು ಕಂಡರೆ ಏನೋ ಅಸೂಯೆ. ಅದ್ಹೇಗೆ ಎಲ್ಲರೂ ಸುಬ್ಬುವಿನ ಬಳಿ ಹೋಗುತ್ತಿದ್ದಾರೆ, ನನ್ನ ಬಳಿ ಏಕೆ ಬರುತ್ತಿಲ್ಲ ಎಂಬ ಸಂದೇಹ. ಹಳ್ಳಿ ಜನರನ್ನೆಲ್ಲ ಡಾಕ್ಟರ್ ಸುಬ್ಬು ಮರಳು ಮಾಡಿಬಿಟ್ಟಿದ್ದಾರೆ ಎಂಬ ನಿರ್ಧಾರಕ್ಕೆ ಬಂದ ಡಾ. ಡಿಬ್ಬಿ ಏನಾದ್ರು ಮಾಡಿ ಡಾ. ಸುಬ್ಬುವನ್ನು ಸೋಲಿಸಬೇಕು ಅಥವಾ ಆತ ಮಾಡುತ್ತಿರುವ ಟ್ರಿಕ್ಕನ್ನು ತಾನು ಕಲಿಯಬೇಕು ಎಂಬ ತೀರ್ಮಾನಕ್ಕೆ ಬಂದ.
ಒಂದು ದಿನ ಡಿಬ್ಬಿ ವೇಷ ಮರೆಸಿಕೊಂಡು ರೋಗಿಯಂತೆ ಡಾ. ಸುಬ್ಬು ಕ್ಲಿನಿಕ್ಕಿಗೆ ಬಂದ. ಡಿಬ್ಬಿಯನ್ನು ನೋಡಿದ ಕೂಡಲೆ ಸುಬ್ಬುವಿನ ಮುಖದ ಮೇಲೆ ಒಂದು ರೀತಿಯ ಮುಗುಳ್ನಗೆ ಮೂಡಿತು.
"ಡಾಕ್ಟ್ರೇ, ನನ್ನ ನಾಲಿಗೆಯ ರುಚಿಯನ್ನು ಕಳೆದುಕೊಂಡುಬಿಟ್ಟಿದ್ದೇನೆ. ಯಾವುದೂ ರುಚಿಸುತ್ತಲೇ ಇಲ್ಲ. ದಯಮಾಡಿ ಬಾಯಿರುಚಿ ಮರಳಿ ಬರುವಂತೆ ಮಾಡಿ" ಎಂದು ಮಾರುವೇಷದಲ್ಲಿದ್ದ ಡಿಬ್ಬಿ ವೈದ್ಯರನ್ನು ಕೇಳಿದ.
"ನೋ ಪ್ರಾಬ್ಲಂ. ಈಗ್ಲೇ ನಿಮ್ಮನ್ನು ಟೆಸ್ಟ್ ಮಾಡಿಬಿಡುತ್ತೇನೆ. ಈ ಮಾತ್ರೆಯನ್ನು ಈಗ ತೆಗೆದುಕೊಳ್ಳಿ" ಎಂದು ಕರ್ರಗಿನ ಮಾತ್ರೆಯನ್ನು ಡಾ. ಸುಬ್ಬು ಡಿಬ್ಬಿಗೆ ನೀಡಿದ.
ಅದನ್ನು ಹಿಂದೆಮುಂದೆ ನೋಡದೆ ಬಾಯಿಗೆ ಹಾಕಿಕೊಂಡ ಡಿಬ್ಬಿ, 'ಥೂ' ಅಂತ ಅಲ್ಲಿಯೇ ಉಗಿದುಬಿಟ್ಟ. ಡಿಬ್ಬಿಗೆ ವಾಂತಿ ಆಗುವುದೊಂದು ಬಾಕಿಯಿತ್ತು.
"ಏನ್ ಡಾಕ್ಟ್ರೆ ಹೀಗಿದೆ ಮಾತ್ರೆ, ವ್ಯಾಕ್" ಎಂದು ಕಿವುಚಿದ ಮುಖ ಮಾಡಿದ ಡಿಬ್ಬಿ ಹೇಳಿದ.
"ನೋಡಿದ್ರಾ, ನಾಲಿಗೆ ರುಚಿ ಮರಳುವಂತೆ ಮಾಡಿದೆ. ಆ ಮಾತ್ರೆಯ ಬೆಲೆ ಒಂದಕ್ಕೆ ಸಾವಿರ ರು. ತಗೀರಿ" ಎಂದು ಹೇಳಿ ಡಾ. ಡಿಬ್ಬಿಯಿಂದ ಸುಬ್ಬು ಸಾವಿರ ರು. ಕಿತ್ತುಕೊಂಡ.
ಅವಮಾನವಾದಂತಾದ ಡಿಬ್ಬಿ, ತಿಂಗಳ ನಂತರ ಸುಬ್ಬುವನ್ನು ಮತ್ತೆ ಪರೀಕ್ಷೆ ಮಾಡೋಣವೆಂದು ಮತ್ತೊಂದು ವೇಷ ಹಾಕಿಕೊಂಡು ಸುಬ್ಬು ಆಸ್ಪತ್ರೆಗೆ ಬಂದ. ಈ ಬಾರಿ ಹೇಗಾದ್ರೂ ಮಾಡಿ ಸುಬ್ಬುವನ್ನು ಸೋಲಿಸಲೇಬೇಕೆಂದು ಛಲ ತೊಟ್ಟಿದ್ದ.
"ಡಾಕ್ಟ್ರೇ, ನಾನು ಮರುಗುಳಿಯಂತಾಗಿಬಿಟ್ಟಿದ್ದೇನೆ. ಏನೂ ನೆನಪಿಗೇ ಬರುವುದಿಲ್ಲ" ಎಂದು ವಿಷಣ್ಣ ಮುಖ ಹೊತ್ತು ಡಿಬ್ಬಿ ಹೇಳಿದ.
"ನೋ ಪ್ರಾಬ್ಲಂ. ನಿಮ್ಮ ರೋಗ ವಾಸಿ ಮಾಡಲು ಈ ಮಾತ್ರೆಯೇ ಸರಿ" ಎಂದು ಡಾ. ಸುಬ್ಬು ಅದೇ ಕರ್ರಗೆ ಇರುವ ಮಾತ್ರ ಹೊರತೆಗೆದ. ಆ ಮಾತ್ರೆಯನ್ನು ಡಿಬ್ಬಿಗೆ ನೀಡುವ ಮೊದಲೇ 'ಯಪ್ಪೋ ಸತ್ತೆ' ಎಂದು ಅಲ್ಲಿಂದ ಪರಾರಿಯಾಗಿದ್ದ.












Click it and Unblock the Notifications