ಕಲಬುರಗಿಯಲ್ಲಿ ಕೆಲಸ ಖಾಲಿ ಇದೆ; ನೇರ ಸಂದರ್ಶನ
ಕಲಬುರಗಿ, ಜನವರಿ 02; ಕಲಬುರಗಿ ಜಿಲ್ಲೆಯ ಆರೋಗ್ಯ ವಿಸ್ತರಣಾ ಕೇಂದ್ರಗಳಲ್ಲಿ ಖಾಲಿಯಿರುವ 4 ಜನ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಕೆಲವು ಷರತ್ತಿಗೊಳಪಟ್ಟು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಪ್ರತಿ ಶುಕ್ರವಾರ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅಭ್ಯರ್ಥಿಗಳು ಎಂಬಿಬಿಎಸ್ ಪದವಿ ಪಡೆದಿದ್ದು, ನೇರ ಸಂದರ್ಶನಕ್ಕೆ ವ್ಯಾಸಂಗದ ಜೆರಾಕ್ಸ್ ಹಾಗೂ ಮೂಲ ಶೈಕ್ಷಣಿಕ ದಾಖಲಾತಿಗಳು ಹಾಗೂ ತಮ್ಮ ಬಯೋಡಾಟಾದೊಂದಿಗೆ ಹಾಜರಾಗಬೇಕು.

ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ರೋಸ್ಟರ್ ಕಮ್ ಮೇರಿಟ್ ಮೂಲಕ ಒಂದು ವರ್ಷದ ಅವಧಿಗಾಗಿ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಹಾಗೂ ಯಾವುದೇ ಕಾರಣಕ್ಕೂ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಳಿಸಲಾಗುವುದಿಲ್ಲ ಎಂಬ ಷರತ್ತಿಗೊಳಪಟ್ಟು ಭರ್ತಿ ಮಾಡಲಾಗುತ್ತದೆ.
ಮೀಸಲಾತಿ ಅಡಿಯಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಬಯಸುವ ಅಭ್ಯರ್ಥಿಗಳು ಸಂಬಂಧಪಟ್ಟ ತಹಸೀಲ್ದಾರರಿಂದ ಜಾತಿ ಪ್ರಮಾಣಪತ್ರವನ್ನು ಅರ್ಜಿಯ ಜೊತೆಗೆ ಕಡ್ಡಾಯವಾಗಿ ಲಗತ್ತಿಸಬೇಕು. ವಯೋಮಿತಿ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.
ಕಚೇರಿ ದೂರವಾಣಿ ಸಂಖ್ಯೆ 08472-278618.
ಜನವರಿ 3ರಂದು ನೇರ ಸಂದರ್ಶನ; ಧಾರವಾಡದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 10 ತಿಂಗಳ ಅಪ್ರೆಂಟಿಸ್ ತರಬೇತಿಗೆ ಪರಿಶಿಷ್ಟ ಜಾತಿಯ ಓರ್ವ ಅಭ್ಯರ್ಥಿಯ ಆಯ್ಕೆಗೆ ಜನವರಿ 3 ರಂದು ಮಧ್ಯಾಹ್ನ 12 ಗಂಟೆಗೆ ನೇರ ಸಂದರ್ಶನ ನಡೆಸಲಾಗುತ್ತದೆ.
ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಜಾತಿಯ ಆಸಕ್ತರು ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹಾಜರಾಗಬಹುದು. ಹೆಚ್ಚಿನ ವಿವರಗಳಿಗಾಗಿ 0836-2447469 ಸಂಖ್ಯೆಗೆ ಕರೆ ಮಾಡಿ.
ತರಬೇತಿಗೆ ಅರ್ಜಿ ಆಹ್ವಾನ; ಟೂಲ್ ಆ್ಯಂಡ್ ಡೈ ಮೇಕಿಂಗ್, ಪ್ರಿಸಿಷ್‍ನ್ ಮ್ಯಾನುಫ್ಯಾಕ್ಚರಿಂಗ್, ಮೆಕ್ಯಾನಿಕಲ್, ಆಟೊಮೋಬೈಲ್ ವಿಭಾಗಗಳಲ್ಲಿ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿಗೆ ರಾಯಾಪುರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಉಚಿತ ಪೋಸ್ಟ್ ಡಿಪ್ಲೋಮಾ ಇನ್ ಟೂಲ್ ಡಿಸೈನ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಕರೆಯಲಾಗಿದೆ.
ಕೋರ್ಸ್‍ನಲ್ಲಿ ಒಟ್ಟು 30 ಅಭ್ಯರ್ಥಿಗಳಿಗೆ ಅವಕಾಶವಿದೆ. 15 ಅಭ್ಯರ್ಥಿಗಳು ಪ್ರವೇಶ ಪಡೆದಿದ್ದಾರೆ. ಇನ್ನುಳಿದ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು. ಟೂಲ್ ಡಿಸೈನ್ ಮುಗಿಸಿರುವ ಅಭ್ಯರ್ಥಿಗಳಿಗೆ ಕೈಗಾರಿಕೆಗಳಲ್ಲಿ ಬಹು ಬೇಡಿಕೆ ಇದ್ದು ಕೋರ್ಸ್ ಮುಗಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಮೂಲಕ ಉದ್ಯೋಗಾವಕಾಶ ಕಲ್ಪಿಸಿ ಕೊಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮಾಸಿಕ 2 ಸಾವಿರ ರೂ. ಸ್ಟೈಫಂಡ್ ಕೊಡಲಾಗುತ್ತದೆ. ಇತರ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ಮರುಪಾವತಿ ವ್ಯವಸ್ಥೆ ಇದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ http://gttc.co.in/ ವೆಬ್‍ಸೈಟ್, ದೂರವಾಣಿ ಸಂಖ್ಯೆ 8050401115, 9035630312 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕೆ.ಐ.ಎ.ಡಿ.ಬಿ ಕೈಗಾರಿಕಾ ಪ್ರದೇಶ, ರಾಯಾಪುರ, ಧಾರವಾಡ 580009 ಈ ವಿಳಾಸಕ್ಕೆ ಭೇಟಿ ನೀಡಬಹುದು.
ಬೋಧಕ ಸಿಬ್ಬಂದಿ ನೇಮಕಾತಿ ಸಷ್ಪನೆ; ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶಿವಮೊಗ್ಗ ಇಲ್ಲಿ ಬೋಧಕ ಸಿಬ್ಬಂದಿಗಳ ನೇಮಕಾತಿಗಾಗಿ ಆಹ್ವಾನಿಸಿರುವ ಸಂದರ್ಶನಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 27 ರಂದು ಸ್ಥಳೀಯ ದಿನಪತ್ರಿಕೆಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಿರಿಸಿದ ಹುದ್ದೆಯನ್ನು ಯಾವುದೇ ಅರ್ಹ ಅಭ್ಯರ್ಥಿ ಅರ್ಜಿ ಸಲ್ಲಿಸದೇ ಇರುವುದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟವಾಗಿದೆ.
ಆದರೆ ಈ ಹುದ್ದೆಗೆ ಸಂಬಂಧಿಸಿದಂತೆ ಡಿಸೆಂಬರ್ 2 ಮತ್ತು 3 ರಂದು ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಪಡೆದ ಅಂಕವನ್ನು ಅದೇ ದಿನ ಪ್ರಕಟಿಸಲಾಗಿದೆ ಮತ್ತು ಇದುವರೆಗೆ ಯಾವುದೇ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿರುವುದಿಲ್ಲ. ಪತ್ರಿಕೆಯಲ್ಲಿ ಬಂದಿರುವ ವರದಿಯು ಸತ್ಯಕ್ಕೆ ದೂರವಾಗಿರುತ್ತದೆ ಎಂದು ಸ್ಪಷ್ಟನೆ ನೀಡಲಾಗಿದೆ.












Click it and Unblock the Notifications