Job Cut: ಉದ್ಯೋಗಿಗಳಿಗೆ ಆಘಾತ ಕೊಟ್ಟ ಪ್ರಮುಖ ಕಂಪನಿಗಳು; ಸಾವಿರಾರು ಜನರ ಉದ್ಯೋಗಕ್ಕೆ ಕತ್ತರಿ
ಜಾಗತಿಕವಾಗಿ ಆರ್ಥಿಕ ಹಿಂಜರಿತದ ಭಯ ಆವರಿಸಿದ್ದು, ಅನೇಕ ಕಂಪನಿಗಳು ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಿದ್ದು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿವೆ. ಜಗತ್ತಿನ ಪ್ರಮುಖ ಟೆಕ್ ಕಂಪನಿಗಳ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. ಮೈಕ್ರೋಸಾಫ್ಟ್, ಮೆಟಾ, ಅಮೆಜಾನ್ ಮತ್ತು ಗೂಗಲ್ ಸೇರಿದಂತೆ ಅನೇಕ ದೈತ್ಯ ಕಂಪನಿಗಳು ಕೂಡ ಉದ್ಯೋಗ ಕಡಿತಕ್ಕೆ ಮುಂದಾಗಿವೆ.
layoff.fyi ವರದಿಯ ಪ್ರಕಾರ 71ಕ್ಕೂ ಅಧಿಕ ಟೆಕ್ ಕಂಪನಿಗಳು ಸುಮಾರು 7,000 ಉದ್ಯೋಗಿಗಳನ್ನು ಮನೆಗೆ ಕಳಿಸಿವೆ. ಇದು 2024ರಲ್ಲಿ ಮಾಡಿರುವ ಉದ್ಯೋಗ ಕಡಿತವಾಗಿದ್ದು 2025ರಲ್ಲಿ ಮತ್ತಷ್ಟು ಉದ್ಯೋಗ ಕಡಿತಕ್ಕೆ ಕಂಪನಿಗಳು ಯೋಚನೆ ಮಾಡುತ್ತಿವೆ ಎಂದು ವರದಿ ತಿಳಿಸಿದೆ.

ಈ ಉದ್ಯೋಗ ಕಡಿತಗಳು ಕಂಪನಿಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ ಎಂದು ಕಂಪನಿಗಳು ನಿರೀಕ್ಷೆ ಮಾಡಿವೆ. ಕಾರ್ಯಕ್ಷಮತೆ ಮೇಲೆ ಉದ್ಯೋಗಗಳ ವಜಾ ಮಾಡಿದ್ದರೆ, ಇನ್ನೂ ಕೆಲವು ಕಂಪನಿಗಳು ಬದಲಾವಣೆಗೆ ತೆರೆದುಕೊಳ್ಳುತ್ತಿವೆ. ಉನ್ನತ ತಂತ್ರಜ್ಞಾನ ಸಂಸ್ಥೆಗಳು ಬದಲಾವಣೆಯತ್ತ ಮುಖ ಮಾಡಿದ್ದು, ಕೌಶಲ್ಯ ಅಪ್‌ಸ್ಕಿಲ್ ಮಾಡದ ಉದ್ಯೋಗಿಗಳಿಗೆ ಮನೆ ದಾರಿ ತೋರಿಸಿದೆ ಎಂದು ವರದಿಯಾಗಿದೆ.
ಮೆಟಾದಲ್ಲಿ 3000 ಉದ್ಯೋಗ ಕಡಿತ
ಪ್ರಮುಖ ಟೆಕ್ ದೈತ್ಯ ಮೆಟಾ 3,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಕಡಿಮೆ ಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಕಂಪನಿಯು ವಹಾ ಮಾಡುತ್ತಿದ್ದು, ಸಿಇಒ ಮಾರ್ಕ್ ಜುಕರ್‌ಬರ್ಗ್ ಇದನ್ನು ದೃಢಪಡಿಸಿದ್ದಾರೆ. ಸಂಸ್ಥೆಯು ಕಾರ್ಯಕ್ಷಮತೆಯನ್ನು ಹೆಚ್ಚಸಲು ಕಳಪೆ ಪ್ರದರ್ಶನ ನೀಡಿರುವ ಉದ್ಯೋಗಿಗಳನ್ನು ತೆಗೆದುಹಾಕುತ್ತಿದೆ ಎಂದು ಹೇಳಿದರು.
2024ರ ಸೆಪ್ಟೆಂಬರ್ ವೇಳೆಗೆ 72,400 ಉದ್ಯೋಗಿಗಳನ್ನು ಹೊಂದಿದ್ದ ಮೆಟಾದ 5% ಉದ್ಯೋಗಿಗಳು ಕೆಲಸ ಕಳೆದುಕೊಳ್ಳಿದ್ದಾರೆ. 2024 ಮತ್ತು 2025 ಕಂಪನಿಗೆ ಸವಾಲಿನ ವರ್ಷಗಳು ಎಂದು ಜುಕರ್‌ಬರ್ಗ್ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಮೆಟಾ ಇನ್ನೂ ಎಐ ಮತ್ತು ಮೆಟಾವರ್ಸ್ ಯೋಜನೆಗಳ ಮೇಲೆ ಕೆಲಸ ಮಾಡುತ್ತಿದ್ದು, ಉದ್ಯೋಗ ಕಡಿತದಿಂದ ಕಂಪನಿಯ ಲಾಭದ ಪ್ರಮಾಣ ಹೆಚ್ಚಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಅಮೆಜಾನ್ ಕಳೆದ ಮೂರು ವರ್ಷಗಳಿಂದ ಸತತವಾಗಿ ಉದ್ಯೋಗ ಕಡಿತ ಮಾಡುತ್ತಿದೆ. 2025ರ ಜನವರಿಯಲ್ಲಿ ಕೂಡ ಉದ್ಯೋಗ ಕಡಿತ ಮಾಡಿದೆ. ಆದರೆ ಎಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಿದೆ ಎನ್ನುವುದರ ಬಗ್ಗೆ ಅಂಕಿ ಅಂಶಗಳನ್ನು ನೀಡಿಲ್ಲ. ಮೂರು ವರ್ಷಗಳಲ್ಲಿ ಅಮೆಜಾನ್ 27,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಮೈಕ್ರೋಸಾಫ್ಟ್ ಕೂಡ ಉದ್ಯೋಗ ಕಡಿತಗೊಳಿಸುತ್ತಿದ್ದು, ನಿರೀಕ್ಷಿತ ಕಾರ್ಯಕ್ಷಮತೆ ಪೂರೈಸದ ತಂಡಗಳಲ್ಲಿರುವ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕಂಪನಿಯ ಸೆಕ್ಯುರಿಟಿ ವಿಭಾಗದಲ್ಲಿ ಹೆಚ್ಚಿನ ಜನ ಕೆಲಸ ಕಳೆದುಕೊಳ್ಳುತ್ತಿರುವುದಾಗಿ ವರದಿಯಾಗಿದೆ. ಆದರೆ ಎಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ ಎನ್ನುವ ಬಗ್ಗೆ ಕಂಪನಿ ನಿಖರ ಮಾಹಿತಿ ನೀಡಿಲ್ಲ. ಆದರೆ ಮೈಕ್ರೋಸಾಫ್ಟ್‌ನ ಭಾರತ ಮತ್ತು ದಕ್ಷಿಣ ಏಷ್ಯಾ ಮುಖ್ಯಸ್ಥ ಪುನೀತ್ ಚಾಂದೋಕ್, ಭಾರತದಲ್ಲಿ ಯಾವುದೇ ಉದ್ಯೋಗ ಕಡಿತ ಮಾಡಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications