ಧಾರವಾಡ, ಕೊಡಗು, ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜೂನ್ 05; ನಿರುದ್ಯೋಗಿಗಳಿಗೆ ಸಿಹಿಸುದ್ದಿ. ಶಿವಮೊಗ್ಗ, ಧಾರವಾಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಧಾರವಾಡದಲ್ಲಿ ಜಿಲ್ಲಾ ಯೋಜನಾ ಸಹಾಯಕ ಮತ್ತು ಕೊಡಗು ಜಿಲ್ಲೆಯಲ್ಲಿ 11 ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿದೆ.
ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಛೇರಿಯಲ್ಲಿ ಪೋಷಣ ಅಭಿಯಾನ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಯೋಜನಾ ಸಹಾಯಕರ ಒಂದು ಹುದ್ದೆ ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಯ ನೇಮಕಾತಿ ತಾತ್ಕಾಲಿಕ.

ಅರ್ಜಿ ಸಲ್ಲಿಕೆ ಮಾಡುವ ಸ್ಥಳೀಯ ಅಭ್ಯರ್ಥಿಗಳು ಪದವಿ, ಸಮಾಜ ವಿಜ್ಞಾನದಲ್ಲಿ ಪಿಜಿ ಡಿಪ್ಲೋಮಾ, ಪೌಷ್ಠಿಕತೆಯಲ್ಲಿ ಪಿಜಿ ಡಿಪ್ಲೋಮಾ ವ್ಯಾಸಂಗ ಮಾಡಿರಬೇಕು. 2 ವರ್ಷ ಅನುಭವ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಗಳು ಜೂನ್ 5ರಿಂದ ಅರ್ಜಿ ಸಲ್ಲಿಸಬಹುದು.
ಆಸಕ್ತರು ಅರ್ಜಿ ನಮೂನೆಯನ್ನು ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಕಟ್ಟಡ, ಡಿ.ಸಿ. ಕಂಪೌಂಡ್, ಧಾರವಾಡ ಇಲ್ಲಿಗೆ ಖುದ್ದಾಗಿ ಭೇಟಿ ನೀಡಿ ಪಡೆದು, ಜೂನ್ 19ರ ಸಂಜೆ 5.30 ಗಂಟೆವರೆಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ 0836-2447850 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ; ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಕ್ಯಾಥ್ ಲ್ಯಾಬ್ ಟೆಕ್ನೀಷಿಯನ್ ಮತ್ತು ಎಕೊ ಕಾರ್ಡಿಯೋಗ್ರಾಫರ್ ಹುದ್ದೆಗಳನ್ನು ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.
ಅಭ್ಯರ್ಥಿಗಳು ಬಿ.ಎಸ್ಸಿ ಸಿವಿಟಿ/ ಸಿಟಿಟಿ ಆಂಡ್ ಎಂ.ಎಸ್ಸಿ ಸಿವಿಟಿ/ ಸಿಟಿಟಿ ವಿದ್ಯಾರ್ಹತೆ ಹೊಂದಿರಬೇಕು. ಅರ್ಹತೆ ಆಧಾರದ ಮೇಲೆ ಆಕರ್ಷಕ ವೇತನ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನಿರ್ದೇಶಕರು, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ, ಶಿವಮೊಗ್ಗ ಇವರಿಗೆ ಅರ್ಜಿ ಸಲ್ಲಿಸಬಹುದು.
ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಹಾಕಿ; ಕೊಡಗು ಜಿಲ್ಲೆಯಲ್ಲಿರುವ ಪರಿಶಿಷ್ಟ ಪಂಗಡದ ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆಗಾಗಿ ಗೌರವಧನದ ಆಧಾರದ ಮೇಲೆ 11 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.
ಅರ್ಜಿ ಸಲ್ಲಿಸಲು ಜೂನ್ 8 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿರುವಂತೆ ಗೌರವಧನ ಮಾಸಿಕ 10 ಸಾವಿರ ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಇಂಗ್ಲೀಷ್ ಐಚ್ಚಿಕ ವಿಷಯದಲ್ಲಿ ಡಿ.ಎಡ್ ಅಥವಾ ಬಿ.ಎಡ್ ಪೂರ್ಣಗೊಳಿಸಿರಬೇಕು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಮಂಡಿಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಜಿಯನ್ನು ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ ಕಚೇರಿ, ಜಿಲ್ಲಾ ಪಂಚಾಯತ್ ಕಟ್ಟಡ ಇಲ್ಲಿಗೆ ಸಲ್ಲಿಸುವುದು.
ಆಸಕ್ತರು ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ 08272-200500 ಅನ್ನು ಸಂಪರ್ಕಿಸಬಹುದು.












Click it and Unblock the Notifications