ಆ. 30ರಂದು ರಾಮನಗರ ಜಿಲ್ಲಾ ಮಟ್ಟದ ಉದ್ಯೋಗ ಮೇಳ, 40 ಸಾವಿರಕ್ಕೂ ಅಧಿಕ ಉದ್ಯೋಗವಕಾಶ
ರಾಮನಗರ, ಆಗಸ್ಟ್ 27: ರಾಮನಗರ ಜಿಲ್ಲಾ ಮಟ್ಟದ ಉದ್ಯೋಗ ಮೇಳ-2024 ಚನ್ನಪಟ್ಟಣದಲ್ಲಿ ಆಗಸ್ಟ್ 30ರಂದು ನಡೆಯಲಿದೆ. 40 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ವಿವಿಧ ಜಿಲ್ಲೆಗಳ, ವಿವಿಧ ವಯೋಮಾನದ, ವಿವಿಧ ವಿದ್ಯಾರ್ಹತೆಯ ಅಭ್ಯರ್ಥಿಗಳು ಈಗಾಗಲೇ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. 'ಯುವನಿಧಿ'ಗೆ ನೋಂದಣಿಯಾದ ಅಭ್ಯರ್ಥಿಗಳಲ್ಲಿ ಕನಿಷ್ಠ 5,000 ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯಾಧಾರಿತ ತರಬೇತಿಯೊಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ದಿನಾಂಕ 30/08/2024ರಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಹಾಗೂ ರಾಮನಗರ ಜಿಲ್ಲಾಡಳಿತ ವತಿಯಿಂದ 'ಜಿಲ್ಲಾ ಮಟ್ಟದ ಉದ್ಯೋಗ ಮೇಳ'ವನ್ನು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಚನ್ನಪಟ್ಟಣ ಇಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದ ಮೂಲಕ ಜಿಲ್ಲೆಯ ಯುವ ಸಮುದಾಯಕ್ಕೆ ಪ್ರಸ್ತುತ ಔದ್ಯೋಗಿಕ ಬೇಡಿಕೆಗೆ ಅನುಸಾರ ಉದ್ಯೋಗಾವಕಾಶವನ್ನು ಕಲ್ಪಿಸಲು ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ.

ಜಿಲ್ಲೆಯಲ್ಲಿನ ನಿರುದ್ಯೋಗಿ ಯುವ ಜನತೆಗೆ ಸೂಕ್ತ ಕೌಶಲ್ಯಾಧಾರಿತ ತರಬೇತಿ ನೀಡಿ, ಉದ್ಯೋಗಾವಕಾಶ ಕಲ್ಪಿಸಿಕೊಡುವ ಮೂಲಕ ಇಂದಿನ ಯುವ ಜನತೆಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡುವುದು ಉದ್ಯೋಗ ಮೇಳದ ಉದ್ದೇಶವಾಗಿದೆ. Industry Connect ಕಾರ್ಯಕ್ರಮದ ಮೂಲಕ Industry Linkage Cell ಸ್ಥಾಪಿಸಲಾಗಿದ್ದು, ಕೈಗಾರಿಕೆಗಳನ್ನು ತರಬೇತಿ ಪಾಲುದಾರರನ್ನಾಗಿ ಮಾಡಿ ಅವರದೇ ತರಬೇತಿ ಕೇಂದ್ರಗಳ ಮೂಲಕ ಔದ್ಯೋಗಿಕ ಬೇಡಿಕೆಗಳ ಅನುಸಾರವಾಗಿ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಒದಗಿಸಲಾಗುತ್ತಿದೆ.
ಉದ್ಯೋಗ ಮೇಳದ ವಿವರಗಳು: ಒಂದೇ ಸೂರಿನಡಿ ವೃತ್ತಿಪರ ಕೌಶಲ್ಯಗಳಿಗೆ ಅನುಗುಣವಾಗಿ ಉದ್ಯೋಗವಕಾಶಗಳನ್ನು ಕಲ್ಪಿಸುವುದು ಮುಖ್ಯ ಉದ್ದೇಶವಾಗಿದ್ದು, ನಿರುದ್ಯೋಗಿ ಯುವಕ-ಯುವತಿಯರಿಗೆ ಪ್ರಸ್ತುತ ಕೈಗಾರಿಕಾ ಆದ್ಯತೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಿ ಮಾನವ ಸಂಪನ್ಮೂಲವನ್ನು ದೊರಕಿಸುವುದಾಗಿದೆ. ಉದ್ಯೋಗ ಮೇಳವನ್ನು ಇನ್ನು ಮುಂದೆ ಪ್ರತಿ ವರ್ಷವೂ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಈ ಉದ್ಯೋಗ ಮೇಳದಲ್ಲಿ 43,000ಕ್ಕೂ ಅಧಿಕ ಉದ್ಯೋಗವಕಾಶಗಳು ಲಭ್ಯವಿದ್ದು, 120ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ. ಮೇಳದಲ್ಲಿ IndiGo, Kosha Techno hub Pvt Ltd, Lumax Industries Limited, Toyota Kirloskar Auto Parts Pvt Ltd, Hel Tech, Von Roll India Pvt Ltd, Lyros Technologies Private Limited, Accord, Kaynes
Technology India Limited ಸೇರಿದಂತೆ ಇತರೆ ಸಂಸ್ಥೆಗಳು ಭಾಗವಹಿಸಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲಾಗುತ್ತದೆ.
ಈ ಉದ್ಯೋಗ ಮೇಳಕ್ಕಾಗಿಯೇ https://udyogamela.skillconnect.kaushalkar.com ಎಂಬ ಪ್ರತ್ಯೇಕ ಪೋರ್ಟಲ್ ಸಿದ್ಧಪಡಿಸಲಾಗಿದೆ. ಮೇಳದಲ್ಲಿ ಭಾಗವಹಿಸುವ ಉದ್ಯೋಗದಾತ ಸಂಸ್ಥೆಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ತರಗತಿ ಕೊಠಡಿಗಳು ಮತ್ತು ಇತರೆ ಸೇವೆಯನ್ನು ನೀಡಲಾಗುತ್ತದೆ. ಮೇಳದ ಮೂಲಕ ಎಲ್ಲಾ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೂ ಸಹ ಉದ್ಯೋಗಾವಕಾಶವನ್ನು ಕಲ್ಪಿಸಲಾಗುತ್ತದೆ. ವಿಶೇಷ ಚೇತನರಿಗೂ ವಿಶೇಷವಾಗಿ ಉದ್ಯೋಗವಕಾಶವನ್ನು ಕಲ್ಪಿಸಿಕೊಡುವ ಮೂಲಕ ಯುವಜನತೆಗೆ ಪ್ರೋತ್ಸಾಹ ನೀಡಲಾಗುತ್ತದೆ.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹಾಗೂ ಭಾಗಿಯಾಗಲು ಯಾವುದೇ ರೀತಿಯ ದರ ಆಥವಾ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿ ಮೇಳವನ್ನು ನಡೆಸಲಾಗುತ್ತಿದ್ದು, ಅಭ್ಯರ್ಥಿಗಳಿಗೆ ಯಾವುದೇ ರೀತಿಯ ನೋಂದಣಿ ಶುಲ್ಕವು ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಉದ್ಯೋಗ ಮೇಳದಲ್ಲಿ ನೇರವಾಗಿ ಉದ್ಯಮಿಗಳಿಂದಲೇ ನೇಮಕಾತಿ ಪ್ರಕ್ರಿಯೆ ನಡೆಯುವುದರಿಂದ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಉದ್ಯೋಗದಾತರಿಗೆ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿರುತ್ತದೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಉದ್ಯೋಗಾಕಾಂಕ್ಷಿಗಳು ಅಧಿಕೃತ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 18005999918ರ ವಿಸ್ತರಣಾ ಸಂಖ್ಯೆ 4ಕ್ಕೆ ಸಂಪರ್ಕಿಸುವುದು. ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಂಡು ಜಿಲ್ಲೆಯಲ್ಲಿ ನಿರುದ್ಯೋಗ ಪ್ರಮಾಣವನ್ನು ಕಡಿತಗೊಳಿಸಲು ಕ್ರಮವಹಿಸಲಾಗಿದೆ.
ಉದ್ಯೋಗದಾತರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ದೊರಕುವ ಮೂಲ ಸೌಕರ್ಯಗಳು
* ವಿಶೇಷವಾಗಿ ವಿಶೇಷ ಚೇತನರಿಗೆ ಪ್ರತ್ಯೇಕ ಪ್ರವೇಶ ದ್ವಾರ, ಪ್ರತ್ಯೇಕ ದಾರಿ, ಶೌಚಾಲಯದ ವ್ಯವಸ್ಥೆ ಹಾಗೂ ವಿಶೇಷವಾದ ಸಾರಿಗೆ ವ್ಯವಸ್ಥೆ ಮತ್ತು ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.
* ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಉದ್ಯೋಗದಾತ ಸಂಸ್ಥೆಗಳಿಗೆ ಭಾಗವಹಿಸಲು ತರಗತಿ ಕೊಠಡಿಗಳಲ್ಲಿ ಸ್ಥಳಾವಕಾಶ ಹಾಗೂ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
* ವೈದ್ಯಕೀಯ ಸೌಲಭ್ಯವುಳ್ಳ ತುರ್ತು ವಾಹನ ಹಾಗೂ ತುರ್ತು ಸೇವಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಿರ್ದಿಷ್ಟ ಕೌಂಟರ್ ಸೇವಾ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಉದ್ಯೋಗದಾತರಿಗೆ ಸಹ ಯಾವುದೇ ಶುಲ್ಕ ಇರುವುದಿಲ್ಲ.
* ಉದ್ಯೋಗ ಮೇಳವನ್ನು ಸಂಪೂರ್ಣ ಉಚಿತವಾಗಿ ನಡೆಸಲಾಗುತ್ತಿದ್ದು, ಅಭ್ಯರ್ಥಿಗಳಿಗೆ ಯಾವುದೇ ನೋಂದಣಿ ಶುಲ್ಕವು ಸಹ ಇರುವುದಿಲ್ಲ. ಉದ್ಯೋಗ ಮೇಳದಲ್ಲಿ ಒಟ್ಟು 25 ನೋಂದಣಿ ಕೇಂದ್ರಗಳನ್ನು ಅಭ್ಯರ್ಥಿಗಳ ನೋಂದಣಿಗಾಗಿ ಸ್ಥಾಪಿಸಲಾಗಿದ್ದು, ಇದರಲ್ಲಿ 2 ಕೇಂದ್ರಗಳನ್ನು ವಿಶೇಷ ಚೇತನರಿಗೆ ಪ್ರತ್ಯೇಕವಾಗಿ ಸ್ಥಾಪಿಸಲಾಗಿರುತ್ತದೆ ಹಾಗೂ 1 ಕೇಂದ್ರವನ್ನು ಉದ್ಯೋಗಾಕಾಂಕ್ಷಿಗಳ ಹಾಜರಾತಿಗಾಗಿ ಮತ್ತು 10 ಕೇಂದ್ರಗಳನ್ನು ಉದ್ಯೋಗದಾತರ ನೋಂದಣಿಗಾಗಿ ಸ್ಥಾಪಿಸಿದೆ.












Click it and Unblock the Notifications