PSI Recruitment: 402 ಹುದ್ದೆಗಳ ನೇಮಕಾತಿ, ಸೆ. 22ರಂದು ಲಿಖಿತ ಪರೀಕ್ಷೆ
ಬೆಂಗಳೂರು, ಸೆಪ್ಟೆಂಬರ್ 03: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಐಎ) 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಲಿಖಿತ ಪರೀಕ್ಷೆಯನ್ನು ಸೆಪ್ಟೆಂಬರ್ 22ರಂದು ನಡೆಸಲಿದೆ. ಕೆಪಿಎಸ್‌ಸಿ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ನೇಮಕಾತಿ ಪೂರ್ವಭಾವಿ ಪರೀಕ್ಷೆ ನಡೆಸಿ, ಅದು ವಿವಾದಕ್ಕೆ ಕಾರಣವಾದ ಬಳಿಕ ಈಗ ಕೆಐಎ ಪರೀಕ್ಷೆಯನ್ನು ನಡೆಸುತ್ತಿದೆ.
ಕೆಐಎ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ. 402 ಪಿಎಸ್‌ಐ ಹುದ್ದೆಗಳಿಗೆ ಸೆಪ್ಟೆಂಬರ್ 22ರಂದು ಲಿಖಿತ ಪರೀಕ್ಷೆ ನಡೆಯಲಿದ್ದು ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ನಡೆಸಿದೆ ಎಂದು ತಿಳಿಸಿದೆ.

ಈ ನೇಮಕಾತಿಗೆ 66,000 ಮಂದಿ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಒಂದು ವಾರ ಮೊದಲು ಪ್ರವೇಶ ಪತ್ರ ಬಿಡುಗಡೆ ಮಾಡಲಾಗುವುದು. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಸೆಪ್ಟೆಂಬರ್ 22ರಂದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸಹ ನಿಗದಿಯಾಗಿದೆ. ಆದ್ದರಿಂದ ಪಿಎಸ್‌ಐ ನೇಮಕಾತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿಗದಿಯಂತೆಯೇ ಪರೀಕ್ಷೆಗಳು ನಡೆಯಲಿವೆ ಎಂದು ಕೆಇಎ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ಕೆಲವು ದಿನಗಳ ಹಿಂದೆ ಮಾತನಾಡಿ, "ಯುಪಿಎಸ್‌ಸಿಗಿಂತ ಮೊದಲು ನಾವು ಪಿಎಸ್‌ಐ ನೇಮಕಾತಿ ಪರೀಕ್ಷೆಯ ದಿನಾಂಕವನ್ನು ನಿಗದಿ ಮಾಡಿದ್ದೆವು. ಪರೀಕ್ಷೆ ಮುಂದೂಡಿಕೆ ಮಾಡುವ ಬಗ್ಗೆ ಸಾಧ್ಯತೆ ಇದ್ದರೆ, ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಬಹುದು, ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ" ಎಂದು ಹೇಳಿದ್ದರು.
ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 402 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಲಿಖಿತ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ಘೋಷಣೆ ಮಾಡಿದೆ. 2023ರ ಅಕ್ಟೋಬರ್‌ನಲ್ಲಿ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆದ್ದರಿಂದ ಈ ಬಾರಿ ಪರೀಕ್ಷೆಗೆ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಕೆಇಎ ಮಾಹಿತಿ ಪ್ರಕಾರ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕುರ್ತಾ, ಪೈಜಾಮಾ ಮತ್ತು ಜೀನ್ಸ್ ಪ್ಯಾಂಟ್ ಧರಿಸುವುದು ನಿಷೇಧಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸರಳವಾದ ಪ್ಯಾಂಟ್, ಶರ್ಟ್ ಧರಿಸಬೇಕಿದೆ.
ಅಭ್ಯರ್ಥಿಗಳು ಪೂರ್ಣ ತೋಳಿನ ಶರ್ಟ್, ಶೂ ಧರಿಸುವಂತಿಲ್ಲ. ಪುರುಷ ಅಭ್ಯರ್ಥಿಗಳು ಕಾಲರ್ ರಹಿತ ಶರ್ಟ್ ಧರಿಸಲು ಆದ್ಯತೆಯನ್ನು ನೀಡಬೇಕು. ಜೇಬುಗಳಿಲ್ಲದ ಅಥವ ಕಡಿಮೆ ಜೇಬುಗಳಿರುವ ಬಟ್ಟೆಗಳನ್ನು ಧರಿಸಬೇಕು. ಅಭ್ಯರ್ಥಿಗಳು ಸ್ಯಾಂಡಲ್ ಅಥವ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸಬೇಕು.
ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳನ್ನು ಅಭ್ಯರ್ಥಿಗಳು ಪರೀಕ್ಷೆಯ ದಿನ ಧರಿಸುವಂತಿಲ್ಲ. ಮಹಿಳಾ ಅಭ್ಯರ್ಥಿಗಳು ಯಾವುದೇ ಬಗೆಯ ಆಭರಣ ಧರಿಸುವಂತಿಲ್ಲ (ಕಾಲುಂಗುರು, ಮಾಂಗಲ್ಯ ಸರ ಹೊರತುಪಡಿಸಿ).
ಮಹಿಳಾ ಅಭ್ಯರ್ಥಿಗಳು ಕಸೂತಿ, ಬ್ರೂಚ್ ಇರುವ ವಸ್ತ್ರಗಳನ್ನು ಧರಿಸುವಂತಿಲ್ಲ. ಎತ್ತರವಾದ ಹಿಮ್ಮಡಿ ಇರುವ ಶೂ, ಚಪ್ಪಲಿಗಳನ್ನು ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿಗಳನ್ನು ಧರಿಸಬೇಕು.












Click it and Unblock the Notifications