KPSC: ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆ, ಅಪ್‌ಡೇಟ್
ಬೆಂಗಳೂರು, ಆಗಸ್ಟ್ 03: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿ ಘೋಷಣೆ ಮಾಡಿದೆ. ಈ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಲಾಗಿತ್ತು. ಈ ಕುರಿತು ಅಭ್ಯರ್ಥಿಗಳಿಗೆ ಅಪ್‌ಡೇಟ್ ಒಂದಿದೆ.
ಕೆಪಿಎಸ್‌ಸಿಯ ಕಾರ್ಯದರ್ಶಿಗಳು ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಹಿಂದೆ ಘೋಷಣೆ ಮಾಡಿದಂತೆ 25/8/2024ರ ಭಾನುವಾರ ಪೂರ್ವಭಾವಿ ಪರೀಕ್ಷೆಗಳು ನಡೆಯಲಿವೆ ಎಂದು ಹೇಳಿದ್ದಾರೆ.

ಪ್ರಕಟಣೆಯ ವಿವರ: ಕರ್ನಾಟಕ ಲೋಕಸೇವಾ ಆಯೋಗ, ಲೋಕಸೇವಾ ಆಯೋಗದ ಕಛೇರಿ, ಉದ್ಯೋಗ ಸೌಧ, ಬೆಂಗಳೂರು ಈ ಪರೀಕ್ಷೆ ದಿನಾಂಕದ ಕುರಿತು ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ.
ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳಿಗೆ ಅಧಿಸೂಚನೆಯನ್ನು ದಿನಾಂಕ 26/02/2024ರಂದು ಹೊರಡಿಸಿದ್ದು, ದಿನಾಂಕ 30/07/2024ರ ಆಯೋಗದ ಸಭೆಯಲ್ಲಿ ಚರ್ಚಿಸಲಾಗಿ, ದಿನಾಂಕ 25/08/2024ರಂದು ನಿಗದಿಪಡಿಸಿರುವ ಪೂರ್ವಭಾವಿ ಪರೀಕ್ಷೆಗೆ ಈಗಾಗಲೇ ಎಲ್ಲಾ ರೀತಿಯ ಪರೀಕ್ಷಾ ಪೂರ್ವ ಸಿದ್ಧತೆ ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಪರೀಕ್ಷಾ ದಿನಾಂಕದಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲವೆಂದು ತೀರ್ಮಾನಿಸಲಾಗಿದೆ ಎಂದು ಈ ಮೂಲಕ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ದಿನಾಂಕ ಬದಲಾವಣೆ ಪ್ರಶ್ನೆ ಯಾಕೆ?: ಕೆಪಿಎಸ್‌ಸಿ ಮೊದಲು ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು 21/07/2024ರಂದು ನಡೆಸುವುದಾಗಿ ಹೇಳಿತ್ತು. ಬಳಿಕ ದಿನಾಂಕ 25/08/2024ರಂದು ಪರೀಕ್ಷೆ ಮರು ನಿಗದಿಪಡಿಸಿತ್ತು.
ಆದರೆ ಅಂದು ಬ್ಯಾಂಕಿಂಗ್ ನೇಮಕಾತಿಗಾಗಿ ಕ್ಲರ್ಕ್, ಪ್ರೊಹಿಬಿಟರಿ ಆಫೀಸರ್ಸ್, ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯೂ ನಡೆಯಲಿದೆ. ಒಂದೇ ದಿನ ಎರಡು ಪರೀಕ್ಷೆ ಇದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ದಿನಾಂಕ ಬದಲಾವಣೆ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು.
ಆದ್ದರಿಂದ ಕೆಪಿಎಸ್‌ಸಿ ಯಾವುದೇ ಕಾರಣಕ್ಕೂ ಪರೀಕ್ಷೆ ದಿನಾಂಕ ಬದಲಾವಣೆ ಮಾಡುವುದಿಲ್ಲ. ನಿಗದಿಯಂತೆ ಆಗಸ್ಟ್ 25ರಂದೇ ಪರೀಕ್ಷೆ ನಡೆಯಲಿದೆ ಎಂದು ಹೇಳಿದೆ. ಆದ್ದರಿಂದ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಬಹುದು.
ಈಗಾಗಲೇ ಕೆಪಿಎಸ್‌ಸಿ ಹೇಳಿರುವಂತೆ 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ಆಗಸ್ಟ್ 25ರಂದು ನಡೆಯಲಿದೆ. ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2 ಪರೀಕ್ಷೆಗಳು ಇರಲಿವೆ.
ಸರ್ಕಾರ ಅಭ್ಯರ್ಥಿಗಳ ಮನವಿಯಂತೆ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಿದೆ. ಆದ್ದರಿಂದ ಈ ಬಾರಿ ಕೆಎಎಸ್ ಪರೀಕ್ಷೆಗೆ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications