ಟೆಕ್ ಕ್ಷೇತ್ರದಲ್ಲಿ ನಡುಕ ಹುಟ್ಟಿಸಿದ ಮೆಟಾ ನಿರ್ಧಾರ: 8,000 ಮಂದಿಗೆ ಗೇಟ್ ಪಾಸ್, ಮತ್ತೊಮ್ಮೆ ಉದ್ಯೋಗ ಕಡಿತಕ್ಕೆ ಪ್ಲ್ಯಾನ್
Meta Layoffs 2026: ಇತ್ತೀಚಿನ ದಿನಗಳಲ್ಲಿ ಎಐ ಮೇಲೆ ಹೂಡಿಕೆ ಜಾಸ್ತಿಯಾಗುತ್ತಿರುಗ ಕಾರಣ ಹಲವು ಐಟಿ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳ ವಜಾ ಮಾಡುತ್ತಲಿವೆ. ಇದೀಗ ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾ ಕಂಪನಿಯು ತನ್ನ ಜಾಗತಿಕ ಕಾರ್ಯಪಡೆಯ ಶೇಕಡಾ 10 ರಷ್ಟು ಅಂದರೆ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಖಚಿತಪಡಿಸಿದೆ.
ಒಂದು ಕಡೆ ಕಂಪನಿಯು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದರ ಬೆನ್ನಲ್ಲೇ ಈ ಉದ್ಯೋಗ ಕಡಿತದ ನಿರ್ಧಾರ ಹೊರಬಿದ್ದಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಆಂತರಿಕ ಜ್ಞಾಪನಾ ಪತ್ರದ ಮೂಲಕ ಈ ವಿಷಯವನ್ನು ತಿಳಿಸಿದೆ. ಕೆಲಸದ ಪ್ರಮಾಣ ಹೆಚ್ಚಿಸಲು ಮತ್ತು ಭವಿಷ್ಯದ ತಂತ್ರಜ್ಞಾನಗಳಿಗೆ ಹಣಕಾಸಿನ ಸಂಪನ್ಮೂಲಗಳನ್ನು ಮರುಹೊಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದು ಮೆಟಾ ಕಂಪನಿಯು ತನ್ನ ಕಾರ್ಯನಿರ್ವಹಣಾ ಶೈಲಿಯನ್ನು ಬದಲಾಯಿಸಿಕೊಳ್ಳುತ್ತಿರುವ ಮತ್ತು ಎಐ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸೂಚನೆಯಾಗಿದೆ.

ಬ್ಲೂಮ್‌ಬರ್ಗ್ ವರದಿ ಪ್ರಕಾರ, ಮೆಟಾ ಕಂಪನಿಯ ಈ ಸಂದೇಶವನ್ನ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಾನೆಲ್ ಗೇಲ್ ಅವರು ಕಳುಹಿಸಿದ್ದಾರೆ. ಈ ಸಂದೇಶದಲ್ಲಿ ಜಾನೆಲ್ ಅವರು, "ಕಂಪನಿಯು ಆಂತರಿಕ ಬದಲಾವಣೆಗಳ ಮೇಲೆ ಕೆಲಸ ಮಾಡುತ್ತಿದೆ. ಇದರ ಪರಿಣಾಮವಾಗಿ ನಾವು ಮೇ 20ರಂದು ಕಂಪನಿಯ ಸುಮಾರು ಶೇಕಡಾ 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಿದ್ದೇವೆ," ಎಂದು ತಿಳಿಸಿದ್ದಾರೆ.
ಹೊಸ ಹುದ್ದೆಗಳ ಭರ್ತಿಗೂ ಬಂತು ಕುತ್ತು
ಇದರೊಂದಿಗೆ ಕೃತಕ ಬುದ್ಧಿಮತ್ತೆಯ (ಎಐ) ಕಡೆಗೆ ಗಮನ ಹರಿಸುವ ಉದ್ದೇಶದಿಂದ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ (Oracle), ಅಮೆಜಾನ್ (Amazon) ಮತ್ತು ಮೈಕ್ರೋಸಾಫ್ಟ್ (Microsoft)ನಂತಹ ಪ್ರಮುಖ ಕಂಪನಿಗಳ ಸಾಲಿಗೆ ಈಗ ಮೆಟಾ ಕೂಡ ಸೇರಿದೆ. ಕೇವಲ ಹಾಲಿ ಉದ್ಯೋಗಿಗಳ ವಜಾ ಮಾತ್ರವಲ್ಲದೆ, ಭರ್ತಿ ಮಾಡಲು ಉದ್ದೇಶಿಸಿದ್ದ ಸುಮಾರು 6,000 ಹೊಸ ಹುದ್ದೆಗಳನ್ನು ಸಹ ಮೆಟಾ ರದ್ದುಗೊಳಿಸಿದೆ.
ಉದ್ಯೋಗ ಕಡಿತದ ಹಿಂದಿದೆ ಬಿಗ್ ಪ್ಲ್ಯಾನ್
ಕಂಪನಿಗಳು ಎಐ ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಹಣವನ್ನು ವ್ಯಯಿಸುತ್ತಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಬದಲಾವಣೆಯು ಉದ್ಯೋಗ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತವನ್ನು ಸೂಚಿಸುತ್ತಿದೆ. ಮಾರ್ಕ್ ಜುಕರ್‌ಬರ್ಗ್ ಅವರ ಪ್ರಕಾರ, 2026ನೇ ವರ್ಷವು ಕೆಲಸದ ಶೈಲಿಯಲ್ಲಿ ಎಐ ಕ್ರಾಂತಿಕಾರಿ ಬದಲಾವಣೆ ತರುವ ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ದಕ್ಷತೆಯನ್ನು ಹೆಚ್ಚಿಸಲು ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಮಾರ್ಕ್ ಜುಕರ್‌ಬರ್ಗ್ ಅವರು ಈ ಹಿಂದೆ ತಿಳಿಸಿದಂತೆ, ಕಂಪನಿಯು ಈಗ "ಕಡಿಮೆ ಜನರಲ್ಲಿ ಹೆಚ್ಚು ಕೆಲಸ" ಎಂಬ ತತ್ವಕ್ಕೆ ಒತ್ತು ನೀಡುತ್ತಿದೆ. ಇದು ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಹಿನ್ನಡೆಯಾಗಿದ್ದು, ತಾಂತ್ರಿಕ ವಲಯದಲ್ಲಿ ನೇಮಕಾತಿ ಪ್ರಕ್ರಿಯೆಯು ಎಷ್ಟು ಸವಾಲಿನಿಂದ ಕೂಡಿದೆ ಎಂಬುದನ್ನು ಈ ಬೆಳವಣಿಗೆ ತೋರಿಸುತ್ತದೆ.
ಮತ್ತೊಂದು ಹಂತದಲ್ಲಿ ಉದ್ಯೋಗ ವಜಾಕ್ಕೆ ಸಿದ್ಧತೆ
ಈಗಾಗಲೇ ಘೋಷಿಸಲಾದ 8,000 ಉದ್ಯೋಗಗಳ ಕಡಿತದ ಹೊರತಾಗಿ, ಮೆಟಾ ಕಂಪನಿಯು ನಂತರದ ದಿನಗಳಲ್ಲಿ ಇನ್ನೊಂದು ಹಂತದಲ್ಲಿ 8,000 ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ ಎನ್ನುವ ಮಾಹಿತಿಯಿದೆ. ಈ ಎರಡು ಹಂತದ ಉದ್ಯೋಗ ಕಡಿತ ಪ್ರಕ್ರಿಯೆಯು ಕಂಪನಿಯ ಒಟ್ಟು 79,000 ಉದ್ಯೋಗಿಗಳಲ್ಲಿ ಶೇಕಡಾ 20ರಷ್ಟು ಮಂದಿಯ ಮೇಲೆ ಪರಿಣಾಮ ಬೀರಲಿದೆ.
ಎರಡು ಹಂತಗಳು ಪೂರ್ಣಗೊಂಡಾಗ ಒಟ್ಟು 16,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. ಕಂಪನಿಯು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕಾರ್ಯನಿರ್ವಹಣೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಮಾನವ ಸಂಪನ್ಮೂಲವನ್ನು ಮರುಸಂಘಟಿಸುತ್ತಿದೆ. ಮೊದಲ ಹಂತವು ಮೇ 20ರಂದು ನಡೆದರೆ, ಎರಡನೇ ಹಂತವು ವರ್ಷದ ಮಧ್ಯದಲ್ಲಿ ನಡೆಯಬಹುದು ಎಂದು ವರದಿಯಾಗಿದೆ. ಇದು ಮೆಟಾ ಕಂಪನಿಯ ಇತಿಹಾಸದಲ್ಲಿಯೇ ಅತಿ ದೊಡ್ಡ ಮಟ್ಟದ ಪುನರ್ರಚನೆಯಾಗಿದೆ. ಮಾರ್ಕ್ ಜುಕರ್‌ಬರ್ಗ್ ಅವರು 2026 ಅನ್ನು "ಎಐ ಮೂಲಕ ಕೆಲಸದ ಶೈಲಿ ಬದಲಾಗುವ ವರ್ಷ" ಎಂದು ಕರೆದಿರುವುದು ಇಲ್ಲಿ ಗಮನಾರ್ಹವಾಗಿದೆ.












Click it and Unblock the Notifications