ಚಿತ್ರದುರ್ಗ: ಮಾರ್ಚ್ 1 ರಂದು ಬೃಹತ್ ಉದ್ಯೋಗ ಮೇಳ
ಚಿತ್ರದುರ್ಗ, ಫೆಬ್ರವರಿ 25: ಚಿತ್ರದುರ್ಗ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಮಾರ್ಚ್ 1ರಂದು ಚಿತ್ರದುರ್ಗ ನಗರದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಲಿಂಕ್ ಅನ್ನು ಸಹ ನೀಡಲಾಗಿದೆ.
ಚಿತ್ರದುರ್ಗ ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳು ಭಾಗವಹಿಸಲಿವೆ. ಉದ್ಯೋಗ ಮೇಳದಲ್ಲಿ ಪಾಲ್ಗೊಂಡು, ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಈಗಾಗಲೇ 35ಕ್ಕೂ ಹೆಚ್ಚು ಕಂಪನಿಗಳು ನೋಂದಣಿ ಮಾಡಿಕೊಂಡಿವೆ.

ಉದ್ಯೋಗ ಮೇಳದ ಕುರಿತು ಜಿಲ್ಲಾ ಪಂಚಾಯತ್ ಸಿಇಒ ಎಸ್. ಜೆ. ಸೋಮಶೇಖರ್ ಪೂರ್ವಭಾವಿ ಸಭೆಯನ್ನು ನಡೆಸಿದರು. ಜಿಲ್ಲೆಯ ಬಹಳಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉದ್ಯೋಗ ಮೇಳವನ್ನು ಯಶಸ್ವಿಯಾಗಿ ಆಯೋಜಿಸಲು ಒಟ್ಟು 7 ಉಪ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಹೆಚ್ಚು ಪ್ರಚಾರ ಮಾಡಬೇಕು: ಎಸ್. ಜೆ. ಸೋಮಶೇಖರ್ ಮಾತನಾಡಿ, "ಚಿತ್ರದುರ್ಗ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗ ಮಾಡಿದವರ ಸಂಖ್ಯೆ ಬಹಳಷ್ಟಿದ್ದು, ಇಂತಹವರಿಗೆ ಉದ್ಯೋಗ ದೊರಕಿಸಿಕೊಟ್ಟಲ್ಲಿ, ಅವರು ತಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಂಡು, ಸಮಾಜಕ್ಕೆ ಹಾಗೂ ದೇಶಕ್ಕೆ ತಮ್ಮ ಕೊಡುಗೆ ನೀಡುತ್ತಾರೆ. ಹೀಗಾಗಿ ಉದ್ಯೋಗ ಮೇಳ ಆಯೋಜನೆ ಬಗ್ಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಆಸಕ್ತಿ ವಹಿಸಿ, ಉದ್ಯೋಗ ಮೇಳವನ್ನು ಯಶಸ್ವಿಯಾಗಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರಕಿಸುವ ಕಾರ್ಯ ಮಾಡಬೇಕು" ಎಂದರು.
"ಉದ್ಯೋಗ ಮೇಳ ಆಯೋಜನೆ ಕುರಿತಂತೆ ಹೆಚ್ಚು ಪ್ರಚಾರ ನೀಡಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಆಯೋಜನೆ ಕುರಿತಂತೆ ಫ್ಲೆಕ್ಸ್, ಬೋರ್ಡ್ ಅಳವಡಿಸಿ ಪ್ರಚಾರ ಮಾಡಬೇಕು. ಗ್ರಾಮ ಪಂಚಾಯತಿಗಳು, ನಗರ, ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ವಾಹನದಲ್ಲಿನ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಬೇಕು. ಕಾಲೇಜುಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳೊಂದಿಗಿನ ವಾಟ್ಸಾಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೆ ಮಾಡಬೇಕು" ಎಂದು ಸೂಚನೆ ಕೊಟ್ಟರು.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಈಗಾಗಲೇ 35ಕ್ಕೂ ಹೆಚ್ಚು ಕಂಪನಿಗಳು ಆಸಕ್ತಿ ವಹಿಸಿವೆ. ಕೈಗಾರಿಕಾ ಇಲಾಖೆ, ಜಿಟಿಟಿಸಿ, ಕೌಶಲ್ಯಾಭಿವೃದ್ದಿ ಇಲಾಖೆಗಳು ಹೆಚ್ಚು ಹೆಚ್ಚು ಕಂಪನಿಗಳನ್ನು ಸಂಪರ್ಕಿಸಿ, ಅವರನ್ನು ಮೇಳಕ್ಕೆ ಆಹ್ವಾನಿಸಲು ನಿರ್ದೇಶನ ನೀಡಲಾಗಿದೆ.
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಪದವೀಧರರು, ಡಿಪ್ಲೋಮಾ ವ್ಯಾಸಂಗ ಮಾಡಿರುವ ಸುಮಾರು 4,300 ಅಭ್ಯರ್ಥಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದು, ಈ ಎಲ್ಲ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಉದ್ಯೋಗಾಧಿಕಾರಿಗಳು ಹಾಗೂ ಕೌಶಲ್ಯಾಭಿವೃದ್ದಿ ಅಧಿಕಾರಿಗಳು, ಅಭ್ಯರ್ಥಿಗಳಿಗೆ ಸಂದೇಶ ತಲುಪಿಸಬೇಕು ಎಂದು ಸೂಚಿಸಲಾಗಿದೆ.
ಪದವಿ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಕಾಲೇಜುಗಳ ಮುಖ್ಯಸ್ಥರು, ಪ್ಲೇಸ್‍ಮೆಂಟ್ ಆಫೀಸರ್‌ಗಳ ಮೂಲಕ ಎಲ್ಲ ಅರ್ಹ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು. ಉದ್ಯೋಗದಾತರಾಗಿ ಆಗಮಿಸುವ ಕಂಪನಿಗಳಿಗೆ ಹಾಗೂ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು.
ಸೂಕ್ತ ರೀತಿಯಲ್ಲಿ ಮಳಿಗೆ, ನೆರಳಿನ ವ್ಯವಸ್ಥೆ ಮಾಡಬೇಕು. ವೇದಿಕೆ ನಿರ್ಮಿಸಿಕೊಡಬೇಕು. ಕುಡಿಯುವ ನೀರಿನ ಪೂರೈಕೆ ಸೂಕ್ತ ರೀತಿ ಇರಬೇಕು. ಸಾಕಷ್ಟು ನೋಂದಣಿ ಕೌಂಟರ್‌ಗಳನ್ನು ಸ್ಥಾಪಿಸಿ, ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಗೊಂದಲಕ್ಕೆ ಅವಕಾಶ ಇಲ್ಲದಂತೆ, ಮಾಹಿತಿ ನೀಡಲು ಸೂಕ್ತ ಸಹಾಯಕೇಂದ್ರ ಸ್ಥಾಪಿಸಬೇಕು ಎಂದು ಸೂಚಿಸಲಾಗಿದೆ.
ಆನ್‌ಲೈನ್ ಮೂಲಕ ನೋಂದಣಿ: ಈ ಉದ್ಯೋಗ ಮೇಳವನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗ ಜಂಟಿಯಾಗಿ ಆಯೋಜಿಸಿವೆ.
ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು https://forms.gle/7pTxbGPVKAFCSYaX7 ಮೂಲಕ ನೋಂದಣಿ ಮಾಡಿಕೊಳ್ಳಬಹುದು.












Click it and Unblock the Notifications