ಹೆಚ್ಚಿನ ಪ್ಯಾಕೇಜ್ ಜೊತೆ ನೇಮಕಾತಿ, ಬೆಂಗಳೂರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ
ಬೆಂಗಳೂರು, ಫೆಬ್ರವರಿ 09: ಬೆಂಗಳೂರು ನಗರದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿಹಿಸುದ್ದಿಯೊಂದಿದೆ. ಸುಮಾರು ಎರಡು ವರ್ಷಗಳ ಬಳಿಕ ಕಂಪನಿಗಳು ನಗರದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬೃಹತ್ ಕ್ಯಾಂಪಸ್ ನೇಮಕಾತಿಗಳನ್ನು ಆರಂಭಿಸಿವೆ. ಆದ್ದರಿಂದ ಉದ್ಯೋಗ ಹುಡುಕುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ, ಕೋರ್ಸ್‌ಗಳು ಪೂರ್ಣಗೊಳ್ಳುತ್ತಿದ್ದಂತೆಯೇ ಉದ್ಯೋಗ ಸಿಗಲಿದೆ.
ಮಾಹಿತಿಗಳ ಪ್ರಕಾರ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶೇ 30ರಷ್ಟು ಹೆಚ್ಚಿನ ಪ್ಯಾಕೇಜ್‌ಗಳ ಜೊತೆ ಕ್ಯಾಂಪಸ್ ನೇಮಕಾತಿ ಪ್ರಾರಂಭವಾಗಿದೆ. 5 ರಿಂದ 15 ಲಕ್ಷದ ಪ್ಯಾಕೇಜ್‌ಗಳನ್ನು ನೀಡಿ ವಿದ್ಯಾರ್ಥಿಗಳನ್ನು ಕಂಪನಿಗಳು ಕ್ಯಾಂಪಸ್ ಸಂದರ್ಶನದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿವೆ.

ನೇಮಕಾತಿ ಅಧಿಕಾರಿಗಳ ಮಾಹಿತಿ ಪ್ರಕಾರ ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್‌ಗಳಿಗೆ ಕ್ಯಾಪ್ ಜೆಮಿನಿ, ಟಿಸಿಎಸ್, ಇನ್ಫೋಸಿಸ್, ಆಕ್ಸೆಂಚರ್ ಮುಂತಾದ ಕಂಪನಿಗಳು ಆಗಮಿಸುತ್ತಿವೆ. ಎರಡು ವರ್ಷಗಳ ಬಳಿಕ ಕ್ಯಾಂಪಸ್ ಮೂಲಕ ಹೆಚ್ಚಿನ ನೇಮಕಾತಿಗಳನ್ನು ನಡೆಸಲು ಕಂಪನಿಗಳು ಬಯಸಿವೆ.
ವಿವಿಧ ಕಂಪನಿಗಳು ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್‌ಗಳಿಗೆ ಭೇಟಿ ನೀಡಿ, ಸರಳವಾದ ನಿಯಮಗಳ ಮೂಲಕ ಎಲ್ಲಾ ವಿಭಾಗದ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿವೆ ಎಂದು ಪಿಇಎಸ್ ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ದಯಾನಂದ ಸಾಗರ್ ಕಾಲೇಜಿನ ಪ್ಲೇಸ್ಲೆಂಟ್ ಆಫೀಸರ್ ಪ್ರೊ. ಗುರು ವೆಂಕಟೇಶ್ ಎಂ. ಎನ್. ಮಾತನಾಡಿ, "ಎರಡು ವರ್ಷಗಳಿಂದ ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್‌ಗಳಿಂದ ನೇಮಕಾತಿ ಸ್ಥಗಿತವಾಗಿತ್ತು. ಆದರೆ ಈ ವರ್ಷ ಕ್ಯಾಂಪಸ್ ನೇಮಕಾತಿ ಶೇ 30ರಷ್ಟು ಹೆಚ್ಚಾಗಿದೆ" ಎಂದು ತಿಳಿಸಿದ್ದಾರೆ.
ಶೇ 30ರಷ್ಟು ಹೆಚ್ಚಿನ ಪ್ಯಾಕೇಜ್ ನೀಡಿ ಕಂಪನಿಗಳು ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ. ವಿವಿಧ ಕಂಪನಿಗಳು ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ವಿವಿಧ ಕಾಲೇಜುಗಳಿಗೆ ಭೇಟಿ ನೀಡುವ ಕುರಿತು ಮಾಹಿತಿಯನ್ನು ನೀಡಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗ ಅವಕಾಶ ಸಿಗಲಿದೆ.
ಕಳೆದ ಎರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಬೆಂಗಳೂರು ನಗರದ ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ನೇಮಕಾತಿ ಹೆಚ್ಚಾಗುತ್ತಿದೆ. ಇದರಿಂದಾಗಿ ಕಂಪನಿಗಳಿಗೆ ಸಹ ಅನುಕೂಲವಾಗುತ್ತಿದೆ ಎಂದು ಕಾಲೇಜುಗಳ ಸಿಬ್ಬಂದಿಗಳು ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಐಟಿ ಕಂಪನಿಗಳು ಮನೆಯಿಂದಲೇ ಕೆಲಸದ ನೀತಿ ಜಾರಿಗೊಳಿಸಿದವು. ಜನ ಜೀವನ ಸಹಜ ಸ್ಥಿತಿಗೆ ಬಂದ ಬಳಿಕವೂ ಇಂಜಿನಿಯರಿಂಗ್ ಕಾಲೇಜುಗಳ ಕ್ಯಾಂಪಸ್ ನೇಮಕಾತಿಗಳನ್ನು ಕಂಪನಿಗಳು ಪ್ರಾರಂಭಿಸಿಲ್ಲ. ಆದ್ದರಿಂದ ಎರಡು ವರ್ಷಗಳಿಂದ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಎಷ್ಟೋ ವಿದ್ಯಾರ್ಥಿಗಳು ಇನ್ನೂ ಸಹ ಕೆಲಸವನ್ನು ಹುಡುಕುತ್ತಿದ್ದಾರೆ.
ಬೆಂಗಳೂರು ನಗರದ ಹಲವು ಇಂಜಿನಿಯರಿಂಗ್ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ನಮ್ಮಲ್ಲಿ ಕ್ಯಾಂಪಸ್ ನೇಮಕಾತಿ ನಡೆಯುತ್ತದೆ ಎಂದು ಭರವಸೆ ನೀಡುತ್ತವೆ. ಆದರೆ ಕೆಲವು ವರ್ಷಗಳಿಂದ ಕ್ಯಾಂಪಸ್ ನೇಮಕಾತಿ ನಡೆಯದ ಕಾರಣ ಕಾಲೇಜುಗಳು ಸಹ ಇಕ್ಕಟ್ಟಿಗೆ ಸಿಲುಕಿದ್ದವು. ವಿದ್ಯಾರ್ಥಿಗಳ ಕೋರ್ಸ್ ಪೂರ್ಣಗೊಂಡರೂ ಸಹ ಯಾವುದೇ ಕಂಪನಿಗಳು ಆಗಮಿಸಿದ ಕಾರಣ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕೆಲಸ ಹುಡುಕಾಟಕ್ಕೆ ಕಂಪನಿಗಳಿಗೆ ತೆರಳಬೇಕಿತ್ತು.
ವರದಿಗಳ ಪ್ರಕಾರ ಐಟಿ ವಲಯದ ನೇಮಕಾತಿಯಲ್ಲಿ ಗಣನೀಯ ಕುಸಿತ ಕಂಡುಬಂದಿತ್ತು. ಆದರೆ 2024ರಲ್ಲಿ ನೇಮಕಾತಿಗಳು ಮತ್ತೆ ಪ್ರಾರಂಭವಾಗಿದ್ದು, ವಿವಿಧ ಕಂಪನಿಗಳು ಅಭ್ಯರ್ಥಿಗಳಿಗಾಗಿ ಹುಡುಕಾಟವನ್ನು ಆರಂಭಿಸಿವೆ. ಆದ್ದರಿಂದ ಉದ್ಯೋಗ ಹುಡುಕುತ್ತಿರುವ ಯುವಕ/ ಯುವತಿಯರಿಗೆ ಅನುಕೂಲವಾಗಿದೆ.












Click it and Unblock the Notifications