KPCL: ಶಿಶಿಕ್ಷು ತರಬೇತಿಗೆ ಅರ್ಜಿ ಹಾಕಿ, 10,000 ರೂ. ಮಾಸಿಕ ಶಿಷ್ಯವೇತನ
ಬಳ್ಳಾರಿ, ಸೆಪ್ಟೆಂಬರ್ 19: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) 10,000 ರೂ. ಮಾಸಿಕ ಶಿಷ್ಯವೇತನದ ಮೂಲಕ ಅಪ್ರೆಂಟಿಸ್ ತರಬೇತಿ ನೀಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕುಡತಿನಿಯಲ್ಲಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ನಿಗದಿತ ಮಾಸಿಕ ವೇತನದೊಂದಿಗೆ ಒಂದು ವರ್ಷದ ಅವಧಿಯ ಶಿಶಿಕ್ಷು ತರಬೇತಿಯನ್ನು ನೀಡಲಾಗುತ್ತದೆ. ಆಸಕ್ತರು ಅಕ್ಟೋಬರ್ 7ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಕೆ ಮಾಡುವವರು ಐಟಿಐ ಮತ್ತು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ವೃತ್ತಿಗನುಗುಣವಾಗಿ www.apprenticeshipindia.org ಮೂಲಕ ಅಕ್ಟೋಬರ್ 7ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.

ವೃತ್ತಿ ಸಂಖ್ಯೆ ಮತ್ತು ಶಿಷ್ಯ ವೇತನ ವಿವರ: ಐಟಿಐ ಕೋರ್ಸ್ ಪೂರ್ಣಗೊಳಿಸಿದ ಎಲೆಕ್ಟ್ರಿಷಿಯನ್ 5, ಫಿಟ್ಟರ್ 5, ಟರ್ನರ್ 2, ವೆಲ್ಡರ್ 3, ಕೊಪಾ-ಪಾಸಾ 7 ಹುದ್ದೆಗಳಿವೆ. ಶೈಕ್ಷಣಿಕ ಅರ್ಹತೆ ಪಡೆದವರಿಗೆ ನಿಗಮದ ವತಿಯಿಂದ 10,000 ರೂ. ಮಾಸಿಕ ಶಿಷ್ಯವೇತನ ನೀಡಲಾಗುತ್ತದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣಗೊಂಡ ಎಫ್‌ಓಎ-4 (ಎಸ್‌ಎಸ್‌ಎಲ್‌ಸಿ ಮತ್ತು ಕಂಪ್ಯೂಟರ್) ಹೌಸ್ ಕೀಪರ್ 15 ಹುದ್ದೆಗಳಿವೆ. ಈ ಶೈಕ್ಷಣಿಕ ಅರ್ಹತೆ ಪಡೆದವರಿಗೆ ನಿಗಮದ ವತಿಯಿಂದ 7,000 ರೂ. ಮಾಸಿಕ ಶಿಷ್ಯವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವವರು ಅಭ್ಯರ್ಥಿಯ ಹೆಸರು, ಆಧಾರ್ ಕಾರ್ಡ್ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೈಹಿಕಾ ಕ್ಷಮತಾ ಪತ್ರ, ಇತ್ತೀಚಿನ 4 ಭಾವಚಿತ್ರ, ಈ ಮೊದಲು ಶಿಶಿಕ್ಷು ತರಬೇತಿ ಪಡೆದಿದ್ದಲ್ಲಿ ದಾಖಲೆಯ ವಿವರದ ಪ್ರತಿ ಒದಗಿಸಬೇಕು. ಅಭ್ಯರ್ಥಿಯು ಚಾಲ್ತಿಯಲ್ಲಿರುವ ಇ-ಮೇಲ್ ಐಡಿಯನ್ನು ಕಡ್ಡಾಯವಾಗಿ ನೀಡಬೇಕು. ವಯೋಮಿತಿ 18 ವರ್ಷಗಳು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಶಿಕ್ಷು ಕಾಯ್ದೆ ಪ್ರಕಾರ ಮೀಸಲಾತಿ ಇದ್ದು, ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25 ರಷ್ಟು ಮೀಸಲಾತಿ ಇರುತ್ತದೆ. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಜೊತೆಗೆ ಲಕೋಟೆ ಮೇಲೆ ಶಿಶಿಕ್ಷು ತರಬೇತಿಗಾಗಿ ಅರ್ಜಿ ಎಂದು ನಮೂದಿಸಿ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕುಡತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಛೇರಿಗೆ ಸಂಪರ್ಕಿಸಬಹುದು.
ಕೊಪ್ಪಳದಲ್ಲಿ ಸೆ.21ರಂದು ನೇರ ಸಂದರ್ಶನ: ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸೆಪ್ಟೆಂಬರ್ 21ರಂದು ಕೊಪ್ಪಳದಲ್ಲಿ ನೇರ ಸಂದರ್ಶನ ಆಯೋಜನೆ ಮಾಡಿದೆ. ಉಚಿತ ಪ್ರವೇಶವಿದ್ದು, ಆಸಕ್ತರು ಅಗತ್ಯ ದಾಖಲೆಗಳ ಜೊತೆ ಪಾಲ್ಗೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ.
ಸೆಪ್ಟೆಂಬರ್ 21ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರ ತನಕ ನೇರ ಸಂದರ್ಶನ ನಡೆಯಲಿದೆ. ವಿವಿಧ ಖಾಸಗಿ ಸಂಸ್ಥೆಗಳು ಭಾಗವಹಿಸಲಿದ್ದು, ತಮ್ಮಲ್ಲಿರುವ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿವೆ.
18 ರಿಂದ 32 ವರ್ಷ ವಯೋಮಿತಿಯ ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ, ಐಟಿಐ, ಡಿಪ್ಲೊಮಾ ಮೆಕ್ಯಾನಿಕಲ್, ಡಿಪ್ಲೊಮಾ ಟೂಲ್ & ಡೈ ಮೇಕಿಂಗ್, ಬಿಇ ಇಲೆಕ್ಟ್ರಿಕಲ್ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ಮತ್ತು ಯುವತಿಯರು, ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್ ಪ್ರತಿ, ಬಯೋಡಾಟಾ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08539-220859.












Click it and Unblock the Notifications