Police Recruitment: 14,000 ಖಾಲಿ ಹುದ್ದೆಗಳಿವೆ: ನೇಮಕಾತಿ, ಸಿಬ್ಬಂದಿ ಬಡ್ತಿ ಬಗ್ಗೆ ಜಿ.ಪರಮೇಶ್ವರ ಹೇಳಿದ್ದಿಷ್ಟು
ಬೆಂಗಳೂರು, ಡಿಸೆಂಬರ್ 11: ಪೊಲೀಸ್ ಇಲಾಖೆಯಲ್ಲಿ ಬಡ್ತಿ ಅವಕಾಶ ಇದೆ. ಕಳೆದ ಬಾರಿ ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ 10 ಸಾವಿರ ಸಿಬ್ಬಂದಿಗಳಿಗೆ ಬಡ್ತಿ ನೀಡಲಾಯಿತು. ಬಹಳ ವರ್ಷಗಳಿಂದ ಬಡ್ತಿ ನೀಡಿರಲಿಲ್ಲ. ಇನ್ನೂ ಕರ್ನಾಟಕ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ 14,000 ಖಾಲಿ ಹುದ್ದೆಗಳು ಇವೆ ಎಂದು ಬಡ್ತಿ, ವೇತನ ಸಹಿತ ರಜೆ, ನೇಮಕಾತಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಅಪ್ಡೇಟ್ ನೀಡಿದ್ದಾರೆ.
ಇಂದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಡಿ.ಟಿ.ಶ್ರೀನಿವಾಸ್ ಅವರು ಸಂಬಳ ಸಹಿತ 30 ದಿನ ರಜೆ ಮತ್ತು ಸಿಬ್ಬಂದಿಗಳ ಬಡ್ತಿ ಕುರಿತ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಿದರು. ಈಗ ಹೊಸದಾಗಿ ಬಡ್ತಿ ನೀಡಲು ಕೆಲವು ನಿಯಮಗಳನ್ನು ಮಾಡಿದ್ದಾರೆ. ಕಾನ್‌ಸ್ಟೇಬಲ್ ನೇಮಕಾತಿಗೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಶಿಕ್ಷಣ ಅರ್ಹತೆ ಇದೆ. ಸುಮಾರು 29 ವರ್ಷದ ಸೇವೆಯ ನಂತರ ಎಎಸ್‌ಐಗೆ ಬಡ್ತಿ ಆಗುತ್ತಾರೆ. ಎಎಸ್‌ಐಗೆ 5 ವರ್ಷ 10 ತಿಂಗಳು ನಂತರ ಪಿಎಸ್‌ಐಗೆ ಬಡ್ತಿ ನೀಡಲಾಗುತ್ತದೆ ಎಂದರು.

ಪೊಲೀಸ್ ನೇಮಕಾತಿ ಹೇಗಾಗುತ್ತಿದೆ?
ಬೇರೆ ಇಲಾಖೆಗಳಲ್ಲಿ 50:50 ಅನುಪಾತದಲ್ಲಿ ಬಡ್ತಿ ನೀಡಲಾಗುತ್ತದೆ. ಶೇಕಡಾ 50ರಷ್ಟು ನೇರ ನೇಮಕಾತಿ ಮುಖಾಂತರ, ಶೇಕಡಾ 50ರಷ್ಟು ಬಡ್ತಿ ಮುಖಾಂತರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ 70:30 ಅನುಪಾತ ಮಾಡಲಾಗಿದೆ. ಯುವಕರು ಬರಬೇಕು, ಹೊಸ ಆವಿಷ್ಕಾರಗಳು ಗೊತ್ತಿರಬೇಕು ಮತ್ತು ದೈಹಿಕವಾಗಿ ಸದೃಢವಾಗಿರಬೇಕು ಎಂಬ ಕಾರಣದಿಂದ ಈ ಎಲ್ಲ ನಿಯಮಗಳನ್ನು ಬೇರೆ ಇಲಾಖೆಗಳಿಗಿಂತ ವಿಭಿನ್ನವಾಗಿ ಮಾಡಲಾಗಿದೆ ಎಂದು ಹೇಳಿದರು.
ಬೇರೆ ಇಲಾಖೆಗಳಂತೆ 50:50 ಅನುಪಾತದಂತೆ ನೇಮಕಾತಿ ಮಾಡಿದರೆ, ಪಿಎಸ್ಐಗಳ ಸಂಖ್ಯೆ ಕಡಿಮೆಯಾಗುತ್ತದೆ. 29 ವರ್ಷಗಳ ನಂತರ ಪಿಎಸ್ಐ ಆದರೆ, 70ರಲ್ಲಿ ನೇರ ನೇಮಕಾತಿಯಲ್ಲಿ ಶೇ.10ರಷ್ಟನ್ನು ಇಲಾಖೆಯ ಪದವಿದರ ಸಿಬ್ಬಂದಿಗಳಿಗೆ 7 ವರ್ಷದೊಳಗೆ ನೇಮಕಾತಿಗೆ ಅರ್ಜಿ ಹಾಕಬಹುದು. 37ರಷ್ಟು ಮೀಸಲಾತಿ ಸಿಗುತ್ತದೆ ಎಂದು ವಿವರಿಸಿದರು.
3000 ಹುದ್ದೆಗಳ ನೇಮಕಾತಿಗೆ ಕ್ರಮ: ಗೃಹ ಸಚಿವ
ರಾಜ್ಯ ಪೊಲೀಸ್ ಇಲಾಖೆಯಲ್ಲಿ 14,000 ಖಾಲಿ ಹುದ್ದೆಗಳು ಇವೆ. ಅವುಗಳ ಪೈಕಿ 3000 ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ ನಡೆದ ದರೋಡೆ ಪ್ರಕರಣ ಕುರಿತು ಬಿಜೆಪಿ ಸದಸ್ಯ ಕಿಶೋರ್ ಅವರು ಪ್ರಶೋತ್ತರ ವೇಳೆ ತೆಗೆ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು. ಕಾನೂನು ಪಾಲನೆ ಆಗಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ತರಬೇತಿ ಪಡೆದ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ನಾಲ್ಕು ವರ್ಷದಿಂದ ನೇಮಕಾತಿ ಆಗಿಲ್ಲ. ಹೀಗಾಗಿ ಸಮಸ್ಯೆ ಆಗಿತ್ತು. ಶೀಘ್ರವೇ ನೇಮಕಾತಿ ಮಾಡಿಕೊಳ್ಳಲಾಗುವುದು ಎನ್ನುವ ಮೂಲಕ ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದರು.
ಸಿಬ್ಬಂದಿಗೆ 30 ದಿವಸ ರಜೆ
ಅಗ್ನಿಶಾಮಕ ಇಲಾಖೆ ಹಾಗೂ ಕಾರಾಗೃಹ ಇಲಾಖೆಗಳಲ್ಲಿ ವಾರ್ಷಿಕ ಗೆಜೆಟೆಡ್ ರಜೆ 30 ದಿವಸ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆಯಲ್ಲಿ 15 ದಿನ ಕೊಟ್ಟಿದ್ದಾರೆ. ಇಲಾಖೆ ಒಂದೇ ಅಗಿರುವುದರಿಂದ ಒಂದೇ ರೀತಿ ಯಾಕೆ ಮಾಡಬಾರದು ಎಂದು ಕೇಳಿದ್ದಾರೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆರ್ಥಿಕ ಇಲಾಖೆಯು ಹೆಚ್ಚುವರಿ ಖರ್ಚುಗಳು ಎಷ್ಟು ಬರುತ್ತದೆ ಎಂಬುದನ್ನು ನೋಡಿಕೊಂಡು ಅವರು ನೀಡುತ್ತಾರೆ. ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಮುಂದಿನ ದಿನಗಳಲ್ಲಿ ಅವರಿಗೂ ನ್ಯಾಯ ಒದಗಿಸುತ್ತೇವೆ ಎಂದರು.
ಶೇಕಡಾ10ರಷ್ಟು ಮೀಸಲಾತಿ ಹೆಚ್ಚಿಸಬೇಕು. ವೃಂದ ಮತ್ತು ನೇಮಕಾತಿ ನಿಯಮದಲ್ಲಿ ತಿದ್ದುಪಡಿ ಬದಲಾವಣೆ ತರಬೇಕು. ವೈಜ್ಞಾನಿಕವಾಗಿ ಮತ್ತು ತಾಂತ್ರಿಕವಾಗಿ ಡ್ರಗ್ಸ್‌ಮುಕ್ತ ಸಮಾಜ ನಿರ್ಮಿಸಲು ಹಾಗೂ ಸೈಬರ್ ಕ್ರೈಂ ಪ್ರತ್ಯೇಕ ವಿಭಾಗ ಸ್ಥಾಪಿಸಿರುವುದು ಶ್ಲಾಘನೀಯ. ಈಗಿನ ಕಾಲಘಟ್ಟದಲ್ಲಿ ಆಗುತ್ತಿರುವ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಇಲಾಖೆಯಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗುತ್ತಿವೆ.
ಅಪರಾಧ ತಡೆಗೆ ಸೈಬರ್ ಲ್ಯಾಬ್ ಸ್ಥಾಪನೆ..
ಡಿ.ಟಿ.ಶ್ರೀನಿವಾಸ್ ಅವರು ಅಧಿಕಾರಿಯಾಗಿ ಇಲಾಖೆಯಲ್ಲಿ ಕೆಲಸ ಮಾಡಿರುವುದರಿಂದ ಸಾಕಷ್ಟು ವಿಚಾರಗಳು ಗೊತ್ತಿದೆ. ನೇಮಕಾತಿಯಲ್ಲಿ ಬಹಳಷ್ಟು ಸುಧಾರಣೆ ತರಲಾಗಿದೆ. ಪೊಲೀಸ್ ಇಲಾಖೆಯಲ್ಲಿ 1 ಲಕ್ಷಕ್ಕು ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದಾರೆ. ಎಲ್ಲರಿಗೂ ಸೈಬರ್ ಕ್ರೈಂ ಕುರಿತು ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸೈಬರ್ ಲ್ಯಾಬ್ ಮಾಡಲಾಗುತ್ತಿದೆ.
ವೇತನ ಸಹಿತ ರಜೆ ಬಗ್ಗೆ ಹೇಳಿದ್ದೇನು?
ನೇಮಕಾತಿಯಲ್ಲಿ ಎಂಎಸ್ಸಿ, ಎಂಬಿಎ ಪದವಿದರರು ಇದ್ದಾರೆ. ನೇಮಕಾತಿಯ ಶೈಕ್ಷಣಿಕ ಅರ್ಹತೆಯಲ್ಲಿ ಮುಂದಿನ ಬದಲಾವಣೆ ತರಲಾಗುವುದು. ಶೇಕಡಾ 3ರಷ್ಟು ಕ್ರೀಡಾಪಟುಗಳಿಗೆ ಮೀಸಲಾತಿ ಇಟ್ಟಿದ್ದೇವೆ. ವೇತನ ಸಹಿತ 30 ದಿನ ರಜೆಯ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications