ಪೋಲಿಸ್ ಇಲಾಖೆಯಲ್ಲಿನ ಖಾಲಿ ಹುದ್ದೆಗಳು, ನೇಮಕಾತಿ ವಿವರ
ಬೆಂಗಳೂರು, ಡಿಸೆಂಬರ್ 07; ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು ಎಷ್ಟು?, ಖಾಲಿ ಇರುವ ಹುದ್ದೆಗಳು ಎಷ್ಟು? ಎಂದು ವಿಧಾನಸಭೆ ಅಧಿವೇಶನದಲ್ಲಿಯೂ ಚರ್ಚೆಗಳು ನಡೆದಿವೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿ. ಎನ್. ಪೊಲೀಸ್ ಇಲಾಖೆ ನೇಮಕಾತಿ ಕುರಿತು ಪ್ರಶ್ನೆ ಮಾಡಿದ್ದಾರೆ. ಗೃಹ ಸಚಿವರು ಈ ಕುರಿತು ಉತ್ತರ ನೀಡಿದ್ದಾರೆ.

ಶಾಸಕರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಜೂರಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ ಎಷ್ಟು?. ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು? ವೃಂದವಾರು ಮಾಹಿತಿಯನ್ನು ನೀಡುವುದು ಎಂದು ಕೇಳಿದ್ದರು. ಖಾಲಿ ಇರುವ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ? ಎಂದು ವಿವರ ಕೇಳಿದ್ದರು.
ಗೃಹ ಸಚಿವರ ಉತ್ತರ; ಗೃಹ ಸಚಿವರು ಉತ್ತರದಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ವೃಂದಗಳ ಒಟ್ಟು 1,13,502 ಒಟ್ಟು ಹುದ್ದೆಗಳು ಮಂಜೂರಾಗಿದ್ದು, ಅದರಲ್ಲಿ 95,674 ಅಧಿಕಾರಿ/ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಪ್ರಸ್ತುತ 17,828 ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆಯಲ್ಲಿರುವ ರಿಕ್ತ ಸ್ಥಾನಗಳನ್ನು ನೇರ ನೇಮಕಾತಿ ಹಾಗೂ ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಗ್ರೂಪ್ 'ಎ' ಮತ್ತು 'ಬಿ' ವೃಂದಕ್ಕೆ ಸಂಬಂಧಿಸಿದಂತೆ ನೇಮಕಾತಿ ಮತ್ತು ಅರ್ಹ ಅಭ್ಯರ್ಥಿಗಳು ಲಭ್ಯವಾದಂತೆಲ್ಲ ಮುಂಬಡ್ತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯು ಚಾಲ್ತಿಯಲ್ಲಿರುತ್ತದೆ.
ಪ್ರಸ್ತುತ ಲಭ್ಯವಿರುವ ವೃಂದ ಬಲದ ಅಧಿಕಾರಿಗಳಿಗೆ ರಿಕ್ತವಿರುವ ಸ್ಥಳಗಳಿಗೆ ಹೆಚ್ಚುವರಿ ಪ್ರಭಾರದಲ್ಲಿರಿಸುವ ಮುಖಾಂತರ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿ, ಆಡಳಿತ ಸುಗಮವಾಗಿ ನಡೆಯಲು ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ಗ್ರೂಪ್ 'ಸಿ' ಹುದ್ದೆಗಳಲ್ಲಿ ಹಾಲಿ ರಿಕ್ತ ಸ್ಥಾನಗಳು ಸೇರಿ (ಕಳೆದ ಮೂರು ವರ್ಷಗಳ ರಿಕ್ತ ಸ್ಥಾನಗಳನ್ನೊಳಗೊಂಡಂತೆ) ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಪಿಎಸ್‌ಐ (ಸಿವಿಲ್) 545+402 ಹುದ್ದೆಗಳಿಗೆ ಈಗಾಗಲೇ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ನ್ಯಾಯಾಲಯದ ತೀರ್ಪಿನ ಅನ್ವಯ ಸರ್ಕಾರದ ಆದೇಶ ದಿನಾಂಕ 13/11/2023ರಲ್ಲಿ 545 ಪಿಎಸ್‌ಐ ಹುದ್ದೆಯ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲು ಆದೇಶಿಸಿದ್ದು, ಪ್ರಾಧಿಕಾರವು ಲಿಖಿತ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಿರುತ್ತದೆ.
ಪಿಎಸ್‌ಐ (ಸಿವಿಲ್) 402 ಹುದ್ದೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯಿಂದ ದೈಹಿಕ ಪರೀಕ್ಷೆಯನ್ನು ನಡೆಸಲಾಗಿದ್ದು ಮರು ಲಿಖಿತ ಪರೀಕ್ಷೆಯನ್ನು ನಡೆಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ವಿವರಣೆ ನೀಡಲಾಗಿದೆ.
ಆರ್‌ಎಸ್‌ಐ (ಸಿಎಆರ್/ ಡಿಎಆರ್) ಹುದ್ದೆಗಳಲ್ಲಿ ಈಗಾಗಲೇ 71 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಸ್ಪೆಆರ್‌ಎಸ್‌ಐ (ಕೆಎಸ್‌ಆರ್‌ಪಿ) ಹುದ್ದೆಗಳಲ್ಲಿ 70 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಪಿಎಸ್‌ಐ (ಕೆಎಸ್‌ಐಎಸ್‌ಎಫ್) ಹುದ್ದೆಗಳಲ್ಲಿ 63 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
1591 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹಾಗೂ 3484 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಪ್ರಸ್ತುತ 420 ಕಲ್ಯಾಣ ಕರ್ನಾಟಕ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗಿರುತ್ತದೆ ಹಾಗೂ 454 ಕಲ್ಯಾಣ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು 10/12/2023ರಂದು ನಿಗದಿಪಡಿಸಲಾಗಿರುತ್ತದೆ ಎಂದು ಉತ್ತರದಲ್ಲಿ ವಿವರಣೆ ನೀಡಲಾಗಿದೆ.












Click it and Unblock the Notifications