ಕರ್ನಾಟಕ ಹೈಕೋರ್ಟ್ ನೇಮಕಾತಿ; ವೇತನ 25,500 ರೂ.ಗಳು
ಕರ್ನಾಟಕ ಹೈಕೋರ್ಟ್ 37 ಆಯ್ಕೆಯಾದ ಅಭ್ಯರ್ಥಿಗಳಿಗೆ ಪರಿಷ್ಕೃತ ವೇತನ ಶ್ರೇಣಿ ನಿಯಮ 2018ರ ಅನುಸಾರ 25,500 ರಿಂದ 81,100 ವೇತನ ನಿಗದಿ ಮಾಡಲಾಗಿದೆ.
ಬೆಂಗಳೂರು, ಮಾರ್ಚ್ 09; ಕರ್ನಾಟಕ ಹೈಕೋರ್ಟ್ ಉಳಿದ ಮೂಲ ವೃಂದದಲ್ಲಿನ 37 ವಾಹನ ಚಾಲಕರ ಹುದ್ದೆಗಳಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆ ಮಾಡಲು 6 ಏಪ್ರಿಲ್ ರಾತ್ರಿ 11.59ರ ತನಕ ಅವಕಾಶವಿದೆ. ಕೊನೆಯ ದಿನಾಂಕದವರೆಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಹಾಕಬಹುದಾಗಿದೆ.
ಅಭ್ಯರ್ಥಿಗಳನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯ ಸೇವಾ (ಸೇವಾ ಮತ್ತು ನೇಮಕಾತಿ ಷರತ್ತುಗಳು) ನಿಯಮಗಳು, 1973 ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದ ಕರ್ನಾಟಕ ಉಚ್ಚ ನ್ಯಾಯಾಲಯ ಸೇವಾ (ಆಯ್ಕೆಯ ಮೂಲಕ ನೇರ ನೇಮಕಾತಿ) ನಿಯಮಗಳು, 1984 ಇವುಗಳ ಅನುಸಾರವಾಗಿ ಮಾಡಲಾಗುವುದು ಎಂದು ನೇಮಕಾತಿ ಅಧಿಸೂಚನೆ ತಿಳಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಹಾಕಬಹುದಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಿರಬೇಕು ಹಾಗೂ ಭಾರೀ ಪ್ರಯಾಣಿಕ ಮೋಟಾರು ವಾಹನ ಅಥವಾ ಸರಕು ಸಾಗಣೆ ಮಾಡುವ ಭಾರೀ ಪ್ರಮಾಣ ವಾಹನವನ್ನು ಚಾಲನೆ ಮಾಡುವ ಚಾಲನಾ ಪರವಾನಗಿಯನ್ನು ಹೊಂದಿರಬೇಕು ಹಾಗೂ ಚಾಲನೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಅಭ್ಯರ್ಥಿಯು ಆಂಗ್ಲ ಮತ್ತು ಕನ್ನಡ ಭಾಷೆಯನ್ನು ಬಲ್ಲವರಾಗಿರಬೇಕು.
ವಾಹನ ಚಾಲನಾ ಪರೀಕ್ಷೆಗೆ ಆಯ್ಕೆಗೊಂಡ ಅಭ್ಯರ್ಥಿಗಳು ವಾಹನ ಚಾಲನಾ ನೈಪುಣ್ಯ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಾದೇಶಿಕ ಸಾರಿಗೆ ಕಛೇರಿಯವರು ನಿಗದಿಪಡಿಸುವ ಶುಲ್ಕವನ್ನು ಕಟ್ಟಬೇಕು. ಅಂಚೆ ಮೂಲಕ ಯಾವುದೇ ಮಾಹಿತಿಯನ್ನು ರವಾನಿಸಲಾಗುವುದಿಲ್ಲ. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಿದ್ದಲ್ಲಿ, ಅವನು/ ಅವಳು ಕಡೆಯದಾಗಿ ಸಲ್ಲಿಸಿದ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ವಾಹನ ಚಾಲನಾ ಪರೀಕ್ಷೆ/ ಮೌಖಿಕ ಪರೀಕ್ಷೆಗೆ ಕರೆಯಲಾಗುವ ಅಭ್ಯರ್ಥಿಗಳು ಕರ್ನಾಟಕ ಉಚ್ಚ ನ್ಯಾಯಾಲಯವು ನಿಗದಿಪಡಿಸುವ ಸ್ಥಳ ಹಾಗೂ ಸಮಯಕ್ಕೆ ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗತಕ್ಕದ್ದು.

ಅರ್ಜಿಗಳನ್ನು ಸಲ್ಲಿಕೆ ಮಾಡುವ (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳನ್ನು ಹೊರತುಪಡಿಸಿ) ಹುದ್ದೆಗೆ ಸಂಬಂಧಿಸಿದಂತೆ ನಿಗದಿ ಪಡಿಸಿದ ರೂ. 500. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಪ್ರವರ್ಗ-1ಕ್ಕೆ ಸೇರಿದ ಮತ್ತು ದೈಹಿಕ ಅಂಗವಿಕಲತೆ ಹೊಂದಿರುವ ಅಭ್ಯರ್ಥಿಗಳು ರೂ. 250 ಅರ್ಜಿ ಶುಲ್ಕವನ್ನು ಪಾವತಿ ಮಾಡತಕ್ಕದ್ದು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ತರುವಾಯ, ಅರ್ಜಿಯಲ್ಲಿ ಸೂಚಿಸಿದಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪೇಮೆಂಟ್ ಗೇಟ್‌ವೇ ಮೂಲಕ ಚಲನ್ ಅನ್ನು ಪಿಡಿಎಫ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಪಾವತಿಸತಕ್ಕದ್ದು. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಅರ್ಜಿ ಸಲ್ಲಿಕೆ ಮಾಡಲು ಏಪ್ರಿಲ್ 12 ಕೊನೆಯ ದಿನವಾಗಿದೆ.
ಅರ್ಜಿಯನ್ನು ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಯು ನೀಡಿದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗೆ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅರ್ಜಿಯ ಪ್ರತಿ ಹಾಗೂ ಅರ್ಜಿ ಸಂಖ್ಯೆಯನ್ನು ಜಾಗರೂಕವಾಗಿ ಇಟ್ಟುಕೊಳ್ಳಬೇಕು. ಕೊನೆಯ ಕ್ಷಣದಲ್ಲಿ ಉಂಟಾಗುವ ಒತ್ತಡ ತಪ್ಪಿಸಲು ಕೊನೆಯ ದಿನಾಂಕದ ಮುಂಚಿತವಾಗಿಯೇ ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಮೀಸಲಾತಿಗಳನ್ನು ಕೋರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ.
ವಯೋಮಿತಿಯ ವಿವರಗಳು; ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕದಂದು ಎಲ್ಲಾ ಪ್ರವರ್ಗದವರು ಕನಿಷ್ಠ 18 ವರ್ಷದವರಾಗಿರಬೇಕು ಮತ್ತು ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಅಥವಾ ಇತರೆ ಹಿಂದುಳಿದ ಜಾತಿಗಳ ಪ್ರವರ್ಗ 1ಕ್ಕೆ ಸೇರಿದ ಪಕ್ಷದಲ್ಲಿ 40 ವರ್ಷ ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಪ್ರವರ್ಗ 2ಎ, 2ಬಿ ಅಥವ 3ಎ, 3ಬಿಗೆ ಸೇರಿದ್ದಲ್ಲಿ 38 ವರ್ಷಗಳು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.
ಅರ್ಭ್ಯಥಿಗಳು ಚಾಲಕರ ಹುದ್ದೆಗೆ ನೇಮಕಗೊಂಡಲ್ಲಿ ಮತ್ತು ಅಂತಹ ಅಭ್ಯರ್ಥಿಗಳು ಧಾರವಾಡ/ ಕಲಬುರಗಿ ಪೀಠಕ್ಕೆ ನಿಯೋಜನೆಗೊಂಡರೆ ಅಥವಾ ಪ್ರಧಾನ ಪೀಠದಲ್ಲಿ ಕರ್ತವ್ಯದ ಬಿಡುವಿನ ವೇಳೆಯಲ್ಲಿ ಇತರೆ ಕಛೇರಿ ಕರ್ತವ್ಯಗಳನ್ನು ಸಹ ನಿರ್ವಹಿಸಬೇಕಾಗಿರುತ್ತದೆ. ಆಯ್ಕೆಯಾದವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ (ಅಧಿಕಾರಿ ಮತ್ತು ನೌಕರರ) ಪರಿಷ್ಕೃತ ವೇತನ ಶ್ರೇಣಿ ನಿಯಮ 2018ರ ಅನುಸಾರ 25,500 ರಿಂದ 81,100 (Level-4) ಮತ್ತು ಇತರೆ ಭತ್ಯೆಗಳು ಸಿಗಲಿವೆ. ಅಭ್ಯರ್ಥಿಯು ನೇಮಕಗೊಂಡ ಪಕ್ಷದಲ್ಲಿ ಪ್ರಾರಂಭಿಕವಾಗಿ ಎರಡು ವರ್ಷಗಳ ಅವಧಿಗೆ ಅಥವಾ ಅಗತ್ಯವಿದ್ದರೆ ವಿಸ್ತರಿಸಬಹುದಾದ ಅವಧಿಗೆ ಪರಿವೀಕ್ಷಣಾರ್ಥಿಗಳಾಗಿರುತ್ತಾರೆ.
ಆಸಕ್ತರು ಹೆಚ್ಚಿನ ಮಾಹಿತಿ, ಅರ್ಜಿ ಸಲ್ಲಿಕೆ ಮಾಡಲು http://karnatakajudiciary.kar.nic.in/recruitment.php ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications