ಗ್ರಾಮ ಲೆಕ್ಕಿಗರ ನೇಮಕಾತಿಗೆ ಒಪ್ಪಿಗೆ; ಯಾವ ಜಿಲ್ಲೆಗೆ ಎಷ್ಟು ಹುದ್ದೆ?
ಬೆಂಗಳೂರು, ಅಕ್ಟೋಬರ್ 27; ಕರ್ನಾಟಕ ಸರ್ಕಾರ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಒಪ್ಪಿಗೆ ನೀಡಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದಲ್ಲಿ 1,789 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರ ಮಾಹಿತಿ ನೀಡಿತ್ತು.
ಗ್ರಾಮ ಲೆಕ್ಕಿಗರ ನೇಮಕಾತಿ ಕುರಿತು ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ, ನೇರ ನೇಮಕಾತಿ ಮೂಲಕ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಯದು ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಸರ್ಕಾರ ವಿಧಾನ ಪರಿಷತ್ತಿನಲ್ಲಿ ನೀಡಿದ ಮಾಹಿತಿ ಅನ್ವಯ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಮಂಜೂರಾದ ಒಟ್ಟು ಗ್ರಾಮ ಲೆಕ್ಕಿಗರ ಹುದ್ದೆ 9,839 ಆಗಿದೆ. ಇವುಗಳಲ್ಲಿ ಪ್ರಸ್ತುತ 1,789 ಹುದ್ದೆಗಳು ಖಾಲಿ ಇವೆ. ಗ್ರಾಮ ಲೆಕ್ಕಿಗರ ಹುದ್ದೆ ನೇಮಕಾತಿ ಸಂದರ್ಭದಲ್ಲಿ ಅನುಸರಿಸಬೇಕಾದ ಮಾನದಂಡಗಳನ್ನು ಸಹ ಕಂದಾಯ ಇಲಾಖೆ ಸ್ಪಷ್ಟಪಡಿಸಿದೆ.
ಈಗ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನಿಯಮಾನುಸಾರ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಆರ್.ಯದು ಕುಮಾರ್ ಹೇಳಿದ್ದಾರೆ. ಮುಂದೆ ಗ್ರಾಮ ಲೆಕ್ಕಿಗರ ನೇಮಕಾತಿ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಸಹ ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?
ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್.ಯದು ಕುಮಾರ್ ಈ ಕೆಳಕಂಡ ಜಿಲ್ಲೆಗಳಲ್ಲಿ ಗ್ರಾಮ ಲೆಕ್ಕಿಗರ ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡು ನೇಮಕಾತಿ ಆದೇಶ ಹೊರಡಿಸುವ ಹಂತದಲ್ಲಿರುವ, ನೇರ ನೇಮಕಾತಿಗಾಗಿ ದಾಖಲೆ ಪರಿಶೀಲನೆ ಹಂತದಲ್ಲಿರುವ ಹಾಗೂ ಅಧಿಸೂಚನೆ ಹೊರಡಿಸಿರುವ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಸ್ತಾವನೆಗೆ ಸರ್ಕಾರದ ಅನುಮತಿ ನೀಡಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಯಾವ ಜಿಲ್ಲೆಗೆ ಎಷ್ಟು ಹುದ್ದೆ?
ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾದ ಪ್ರಸ್ತಾವನೆಗಳ ಚಿಕ್ಕಬಳ್ಳಾಪುರ 40, ಬೆಂಗಳೂರು ಗ್ರಾಮಾಂತರ 11, ಉಡುಪಿ 18, ರಾಮನಗರ 1, ಚಿತ್ರದುರ್ಗ 59, ಶಿವಮೊಗ್ಗ 69, ಹಾಸನ 34, ಮಂಡ್ಯ 54, ರಾಯಚೂರು 51, ದಾವಣಗೆರೆ 18 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನಿಯಮಾನುಸಾರ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.

ನೇಮಕಾತಿ ಪ್ರಕ್ರಿಯೆ
ಆರ್.ಯದು ಕುಮಾರ್ ತಮ್ಮ ಆದೇಶದಲ್ಲಿ ಇನ್ನು ಮುಂದೆ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಯಾವುದೇ ಪ್ರಸ್ತಾವನೆ ಇದ್ದಲ್ಲಿ ಮೊದಲು ಸರ್ಕಾರದ ಅನುಮತಿಯೊಂದಿಗೆ ಅಯವ್ಯಯದಲ್ಲಿ ಅನುದಾನ ಒದಗಿಸಿಕೊಂಡ ನಂತರದಲ್ಲಿಯೇ ನೇಮಕಾತಿ ಪ್ರಕ್ರಿಯೆಯಲ್ಲಿ ಮುಂದುವರಿಯಲು ಕ್ರಮವಹಿಸತಕ್ಕದ್ದು ಎಂದು ಸ್ಪಷ್ಟಪಡಿಸಲಾಗಿದೆ.
ಗ್ರಾಮ ಲೆಕ್ಕಿಗರ ಹುದ್ದೆಯು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಸಮಾನಾಂತರ ಹುದ್ದೆಯಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ. ಪ್ರಸ್ತುತ ಗ್ರಾಮ ಲೆಕ್ಕಿಗ ಹುದ್ದೆಗಳನ್ನು ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳುವ ಯಾವುದೇ ಪ್ರಸ್ತಾವನೆ ಇರುವುದಿಲ್ಲ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿ ಮೂಲಕ ನೇಮಕಾತಿ ನಡೆಯುತ್ತದೆ.

ಗ್ರಾಮ ಲೆಕ್ಕಿಗರ ಹುದ್ದೆ ಜವಾಬ್ದಾರಿ
ಕಂದಾಯ ಇಲಾಖೆ ಕೆಲಸ ಕಾರ್ಯಗಳನ್ನು ತಳಮಟ್ಟದಲ್ಲಿ ಗ್ರಾಮ ಲೆಕ್ಕಿಗರ ಮೂಲಕ ಕಾರ್ಯಗತಗೊಳಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಗ್ರಾಮ ಲೆಕ್ಕಿಗರ ನೇಮಕಾತಿ ಸಕ್ಷಮ ಪ್ರಾಧಿಕಾರ ಆಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿಯೇ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಅಧಿನಿಯಮ 1978 (1990ರ ಕರ್ನಾಟಕ ಅಧಿನಿಯಮ 14)ಕ್ಕೆ ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯು ಸಬಾರ್ಡಿನೇಟ್ ಬ್ರಾಂಚ್) (ವೃಂದ ಮತ್ತು ನೇಮಕಾತಿ) (ತಿದ್ದುಪಡಿ) ನಿಯಮಗಳು 2008ರ ಅನ್ವಯ ದ್ವಿತೀಯ ಪಿಯುಸಿಯಲ್ಲಿಗಳಿಸಿದ ಗರಿಷ್ಠ ಅಂಕಗಳನ್ನು ಪರಿಗಣಿಸಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ನಿಯಮಾನುಸಾರ ತುಂಬಲಾಗುತ್ತದೆ.












Click it and Unblock the Notifications