ಸಿವಿಲ್ ಸೇವೆಗಳ ನೇರ ನೇಮಕಾತಿ; ಮೀಸಲಾತಿ ಕುರಿತು ಆದೇಶ
ಬೆಂಗಳೂರು, ಜನವರಿ 28: ಕರ್ನಾಟಕ ಸರ್ಕಾರ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 16 (4)ರ ಅನ್ವಯ ಮೀಸಲಾತಿ ಕಲ್ಪಿಸುವ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ವೀರಭದ್ರ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು-1) ಆದೇಶ ಹೊರಡಿಸಿದ್ದಾರೆ. ದಿನಾಂಕ 31/01/1995ರ ಸರ್ಕಾರದ ಆದೇಶ, ದಿನಾಂಕ 20/06/1995ರ ಸರ್ಕಾರದ ಆದೇಶ, ದಿನಾಂಕ 23/10/2022ರ ಸರ್ಕಾರದ ಅಧಿಸೂಚನೆ ಮತ್ತು ದಿನಾಂಕ 31/10/2022ರ ಅಧಿಸೂಚನೆಯನ್ನು ಓದಲಾಗಿದೆ ಎಂದು ಹೇಳಿದ್ದಾರೆ.

ದಿನಾಂಕ 31/01/1995ರ ಸರ್ಕಾರದ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮತ್ತು ಸರ್ಕಾರದ ಅಧೀನದಲ್ಲಿ ಬರುವ ಅಂಗ ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಹಿಂದುಳಿದ ವರ್ಗದವರಿಗೆ ಮೀಸಲಿಡಬಹುದಾದ ಮೀಸಲಾತಿ ಪ್ರಮಾಣವನ್ನು ಶೇಕಡಾ 50ಕ್ಕೆ ನಿಗದಿಪಡಿಸಲಾಯಿತು.
ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 16(4) ರ ಪ್ರಕಾರ ಸದರಿ ಮೀಸಲಾತಿಯನ್ನು ಜಾರಿಗೊಳಿಸಲು ಅಳವಡಿಸಬೇಕಾದ ರೋಸ್ಟರ್ ಬಗ್ಗೆ ಪರಿಶೀಲಿಸಿ ದಿನಾಂಕ 20/06/1995ರ ಸರ್ಕಾರದ ಆದೇಶದಲ್ಲಿ ಒಂದು ರೋಸ್ಟರ್ ಅನ್ನು ನಿಗದಿಪಡಿಸಲಾಯಿತು.
ಸದರಿ ರೋಸ್ಟರ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗಾಗಿ ನಿಗದಿಪಡಿಸಿದ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ಭರ್ತಿ ಮಾಡಬೇಕಾದ ರಿಕ್ತ ಸ್ಥಾನಗಳಿಗೆ ಬಿಂದುಗಳನ್ನು ಗೊತ್ತುಪಡಿಸಲಾಗಿರುತ್ತದೆ. ದಿನಾಂಕ 23/10/2022ರ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ, ಮೀಸಲಾತಿ) ಅಧ್ಯಾದೇಶ, 2022ನ್ನು ಹೊರಡಿಸಲಾಗಿರುತ್ತದೆ.
ದಿನಾಂಕ 31/10/2022ರ ಅಧಿಸೂಚನೆಯಲ್ಲಿ ಸದರಿ ಅಧ್ಯಾದೇಶದ 1ನೇ ಪ್ರಕರಣದ (2)ನೇ ಉಪ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಧ್ಯಾದೇಶದಲ್ಲಿನ ಎಲ್ಲಾ ಉಪಬಂಧಗಳು ದಿನಾಂಕ 01/11/2022 ರಿಂದ ಜಾರಿಗೆ ಬರತಕ್ಕದ್ದೆಂದು ಗೊತ್ತುಪಡಿ ಸಲಾಗಿರುತ್ತದೆ.
ಸದರಿ ಅಧ್ಯಾದೇಶ 2022ರ 4ನೇ ಪ್ರಕರಣದಲ್ಲಿ, ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಗಮನದಲ್ಲಿರಿಸಿಕೊಂಡು ಅನುಸೂಚಿತ ಜಾತಿಗಳಿಗೆ ಮತ್ತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗಾಗಿ ರಾಜದೀನ ಜೀವಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಿಗೆ ಸಂಬಂಧಿಸಿದಂತೆ ಮೀಸಲಾತಿಯನ್ನು ಶೇಕಡ 15 ರಿಂದ ಶೇಕಡ 17ರಷ್ಟಕ್ಕೆ ಹಾಗೂ ಶೇಕಡ 3 ರಿಂದ ಶೇ 7ರಷ್ಟಕ್ಕೆ ಅನುಕ್ರಮವಾಗಿ ಹೆಚ್ಚಿಸಲಾಗಿರುತ್ತದೆ.
ಮೇಲೆ ವಿವರಿಸಿದ ಸಂದರ್ಭಗಳ ಹಿನ್ನೆಲೆಯಲ್ಲಿ, ದಿನಾಂಕ 20/06/1995ರ ಸರ್ಕಾರದ ಅದೇಶದಲ್ಲಿ ನಿಗದಿಪಡಿಸಿರುವ ರೋಸ್ಟರ್ ಅನ್ನು ಮಾರ್ಪಡಿಸುವ ಸಂದರ್ಭ ಒದಗಿ ಬಂದಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ ಎಂದು ಹೇಳಿದೆ.
ಆದೇಶದ ವಿವರ; ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ದಿನಾಂಕ 23/10/2022ರ ಅಧಿಸೂಚನೆಯಲ್ಲಿ ಹೊರಡಿಸಲಾದ ಅಧ್ಯಾದೇಶದಲ್ಲಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ನೇಮಕಾತಿಯಲ್ಲಿ ನಿಗದಿಪಡಿಸಲಾದ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿಮಾಡಬೇಕಾದ ರಿಕ್ತಸ್ಥಾನಗಳಿಗೆ ಬಿಂದುಗಳನ್ನು ಗುರುತಿಸಿ, ದಿನಾಂಕ 20/06/1995ರ ಸರ್ಕಾರದ ಆದೇಶದ 100 ಬಿಂದುಗಳ ರೋಸ್ಟರ್ ಅನ್ನು ಪರಿಷ್ಕೃತ ರೋಸ್ಟರ್‌ರಿಂದ ಪ್ರತಿಸ್ತಾಪಿಸಲಾಗಿದೆ.
ಉಳಿದಂತೆ ದಿನಾಂಕ 20/06/1995ರ ಸರ್ಕಾರದ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ. ಆದರೆ, ಯಾವುದೇ ವೃಂದದ ಹುದ್ದೆಗಳಿಗೆ ಈಗಾಗಲೇ ನೇರ ನೇಮಕಾತಿ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು, ಆ ನೇಮಕಾತಿ ಪ್ರಕ್ರಿಯೆಯು ಈ ಆದೇಶದ ದಿನಾಂಕದಂದು ಬಾಕಿ ಇದ್ದಲ್ಲಿ, ಅಂತಹ ನೇರ ನೇಮಕಾತಿ ಪ್ರಕ್ರಿಯೆಯನ್ನು ದಿನಾಂಕ 20/06/1995ರ ಸರ್ಕಾರದ ಆದೇಶದಲ್ಲಿ ಗೊತ್ತುಪಡಿಸಿದ ರೋಸ್ಟರ್ ಅನ್ನು ಅನುಸರಿಸಿ ಪೂರ್ಣಗೊಳಿಸತಕ್ಕದ್ದು ಎಂದು ಹೇಳಿದೆ.












Click it and Unblock the Notifications