Karnataka Bank Recruitment: ಕರ್ನಾಟಕ ಬ್ಯಾಂಕ್ ನೇಮಕಾತಿ, ವೇತನ ವಿವರಗಳು
ಬೆಂಗಳೂರು, ನವೆಂಬರ್ 24: ಕರ್ನಾಟಕ ಬ್ಯಾಂಕ್ ದೇಶಾದ್ಯಂತ ಇರುವ ತನ್ನ ಶಾಖೆಗಳಿಗೆ ಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು 30/11/2024 ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ ಪರೀಕ್ಷೆಗಳು ನಡೆಯುವ ತಾತ್ಕಾಲಿಕ ದಿನಾಂಕ 15/12/2024.
ಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಭಾರತ ಸರ್ಕಾರ/ ಯುಜಿಸಿ/ ಸರ್ಕಾರದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಮಾನ್ಯತೆಯನ್ನು ಪಡೆದ ವಿಶ್ವವಿದ್ಯಾಲಯ/ ಸಂಸ್ಥೆ/ ಬೋರ್ಡ್ ಮೂಲಕ ಪದವಿಯನ್ನು ಪಡೆದಿರಬೇಕು. 1/11/2024ರಂತೆ ಪದವಿ ಪೂರ್ಣಗೊಳಿಸಿರಬೇಕು. ಪದವಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ 1/11/2024ರಂತೆ ಗರಿಷ್ಠ ವಯೋಮಿತಿ 26 ವರ್ಷಗಳು. ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು. ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ/ ಒಬಿಸಿ/ ಇತರ ವರ್ಗದ ಅಭ್ಯರ್ಥಿಗಳು 700 ರೂ. ಮತ್ತು ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳು 600 ರೂ. ಶುಲ್ಕ ಮತ್ತು ತೆರಿಗೆಯನ್ನು ಪಾವತಿಸಬೇಕು.
ವೇತನದ ಮಾಹಿತಿ: ಕಸ್ಟಮರ್ ಸರ್ವೀಸ್ ಅಸೋಸಿಯೇಟ್ಸ್ ಹುದ್ದೆಗೆ ಅಖಿಲ ಭಾರತ ಮಟ್ಟದಲ್ಲಿ ಮೂಲ ವೇತನ 24,050 ರೂ.ಗಳು. ವೇತನ ಶ್ರೇಣಿ 24,050-64,480 ರೂ. ತನಕ ಇರುತ್ತದೆ. ಅಭ್ಯರ್ಥಿಗಳು ಡಿಎ, ಹೆಚ್‌ಆರ್‌ಎ ಮತ್ತು ಇತರ ಭತ್ಯೆಗಳಿಗೆ ಅರ್ಹರು. ಮೆಟ್ರೋ ನಗರಗಳಲ್ಲಿ ಸದ್ಯದ ಸಿಟಿಸಿ 59,000 ರೂ.ಗಳು.
ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳನ್ನು ಆನ್‌ಲೈನ್ ಮೂಲಕ ಪರೀಕ್ಷೆಗಳನ್ನು ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕ 15/12/2024. ಆನ್‌ಲೈನ್ ಪರೀಕ್ಷೆಗಳು ಬೆಂಗಳೂರು, ಚೆನ್ನೈ, ಮುಂಬೈ, ನವದೆಹಲಿ, ಹೈದರಾಬಾದ್, ಕೋಲ್ಕತ್ತಾ, ಪುಣೆ, ಮಂಗಳೂರು, ಧಾರವಾರ/ ಹುಬ್ಬಳ್ಳಿ, ಮೈಸೂರು, ಶಿವಮೊಗ್ಗ ಮತ್ತು ಕಲಬುರಗಿಯಲ್ಲಿ ನಡೆಯಲಿದೆ.
ಆನ್‌ಲೈನ್ ಪರೀಕ್ಷೆಗಳ ಸ್ಥಳಗಳನ್ನು ಬದಲಾವಣೆ ಮಾಡುವ ಹಕ್ಕನ್ನು ಹೊಂದಿದೆ. ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಈ ಸಂದರ್ಶನ ಮಂಗಳೂರಿನಲ್ಲಿರುವ ಬ್ಯಾಂಕ್‌ನ ಪ್ರಧಾನ ಕಛೇರಿ/ ಬ್ಯಾಂಕ್ ನಿಗದಿ ಮಾಡುವ ಇತರ ಸ್ಥಳಗಳಲ್ಲಿ ನಡೆಯಲಿದೆ. ಲಿಖಿತ ಪರೀಕ್ಷೆ/ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯ ಇರುವುದಿಲ್ಲ.
ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರಿನಲ್ಲಿ ನಡೆಯುವ ಇಂಡಕ್ಷನ್ ಟ್ರೈನಿಂಗ್ ಪ್ರೋಗ್ರಾಮ್‌ನಲ್ಲಿ ಪಾಲ್ಗೊಳ್ಳಬೇಕು. ಈ ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಬ್ಯಾಂಕ್/ ಕಛೇರಿಯ ಶಾಖೆಗಳಿಗೆ ನಿಯೋಜನೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಆರು ತಿಂಗಳು ಪ್ರೊಬೆಷನರಿ ಅವಧಿ ಇರುತ್ತದೆ. ಕಾರ್ಯ ವೈಖರಿಯನ್ನು ನೋಡಿಕೊಂಡು ಸೇವೆಯನ್ನು ಕಾಯಂಗೊಳಿಸಲಾಗುತ್ತದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡುವ ಮೊದಲು ಇತ್ತೀಚಿನ ಕಲರ್ ಪಾಸ್‌ಪೋರ್ಟ್ ಸೈಜ್ ಪೋಟೋ, ಕಪ್ಪು ಇಂಕ್‌ನಲ್ಲಿ ಮಾಡಿದ ಸಹಿಯ ಸ್ಕ್ಯಾನ್ ಸಿದ್ಧವಾಗಿಟ್ಟುಕೊಳ್ಳಿ. ಅಲ್‌ಲೋಡ್ ಮಾಡುವ ಎಲ್ಲಾ ಸ್ಕ್ಯಾನ್ ಕಾಪಿಗಳು ಉತ್ತಮ ಗುಣಮಟ್ಟದ್ದಾಗಿರಬೇಕು. ಅರ್ಜಿ ಸಲ್ಲಿಕೆ ಮಾಡುವಾಗ ಬಳಕೆ ಮಾಡುವ ಇ-ಮೇಲ್ ಐಡಿ, ಮೊಬೈಲ್ ಸಂಖ್ಯೆಯನ್ನು ಸಂಪೂರ್ಣ ನೇಮಕಾತಿ ಪ್ರಕ್ರಿಯೆಗೆ ಬಳಕೆ ಮಾಡಲಾಗುತ್ತದೆ. ಆದ್ದರಿಂದ ಸರಿಯಾದ ಮಾಹಿತಿ ನೀಡಬೇಕು.
ಆಸಕ್ತ ಮತ್ತು ಅರ್ಹರು https://www.karnatakabank.com/careers ವಿಳಾಸಕ್ಕೆ ಭೇಟಿ ನೀಡಿ ಅಪ್ಲೆ ಆನ್‌ಲೈನ್ ಕ್ಲಿಕ್ ಮಾಡಿ, ಹೊಸದಾಗಿ ಓಪನ್ ಆಗುವ ಪೇಜ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿ.
ಆನ್‌ಲೈನ್ ಲಿಖಿತ ಪರೀಕ್ಷೆ 40 ಅಂಕದ 5 ಪ್ರಶ್ನೆಗಳನ್ನು ಹೊಂದಿರುತ್ತದೆ. ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು 25-30 ನಿಮಿಷದ ಅವಧಿ ಲಭ್ಯವಿರುತ್ತದೆ. ಒಟ್ಟು ಅಂಕಗಳು 200, ಎಲ್ಲಾ ಪ್ರಶ್ನೆಗಳು ಇಂಗ್ಲಿಷ್‌ನಲ್ಲಿರುತ್ತದೆ. ಪ್ರತಿ ಪ್ರಶ್ನೆಗೆ 5 ಆಯ್ಕೆಗಳು ಇರುತ್ತವೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ.












Click it and Unblock the Notifications