ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿ; 2618 ಹುದ್ದೆ, ವಿವರಗಳು
ಬೆಂಗಳೂರು, ಸೆಪ್ಟೆಂಬರ್ 07; ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದೆ. ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆ, ಅಪರ ಆಯುಕ್ತರ ಕಛೇರಿ ಈ ಕುರಿತು ಆದೇಶವನ್ನು ಹೊರಡಿಸಿದೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಎಂದು ಸಹ ಮಾಹಿತಿ ನೀಡಿದೆ.
2023-24ನೇ ಸಾಲಿನ ಕಲ್ಯಾಣ ಕರ್ನಾಟಕ ವಿಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವರ್ಗಾವಣೆ ನಂತರ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರ ನೇಮಕಾತಿ ಕುರಿತು ಎಂಬ ವಿಷಯವನ್ನು ಈ ಆದೇಶ ಒಳಗೊಂಡಿದೆ.

ಶಾಲೆಗಳಲ್ಲಿ ವರ್ಗಾವಣೆ ನಂತರ ಉಂಟಾದ ಶಿಕ್ಷಕರ ಕೊರತೆಯನ್ನು ನೀಗಿಸಲು ಸರ್ಕಾರಿ ಪ್ರಾಥಮಿಕ/ ಪ್ರೌಢ ಶಾಲೆಗಳಲ್ಲಿ ಖಾಲಿ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 'ಅಕ್ಷರ ಆವಿಷ್ಕಾರ' ಯೋಜನೆಯಡಿ 'ಅಕ್ಷರ ಮಿತ್ರ' ಎನ್ನುವ ಪದನಾಮದಡಿ ಅತಿಥಿ ಶಿಕ್ಷಕರನ್ನು ಮಂಜೂರು ಮಾಡಲಾಗಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ; ಬಳ್ಳಾರಿಯಲ್ಲಿ ಖಾಲಿ ಇರುವ ಹುದ್ದೆಗಳು 1644. ಅಕ್ಷರ ಮಿತ್ರ ಅಡಿ ಮಂಜೂರಾದ ಅತಿಥಿ ಶಿಕ್ಷಕರ ಹುದ್ದೆ 323. ಬೀದರ್ 921 ಖಾಲಿ ಹುದ್ದೆ, ಮಂಜೂರು 160. ಕಲಬುರಗಿ 2409 ಖಾಲಿ, ಮಂಜೂರು 380. ಕೊಪ್ಪಳ ಖಾಲಿ ಹುದ್ದೆ 2294, ಮಂಜೂರು 537. ರಾಯಚೂರು ಖಾಲಿ ಹುದ್ದೆ 4036, ಮಂಜೂರು 689. ವಿಜಯನಗರ ಖಾಲಿ ಹುದ್ದೆ 1158, ಮಂಜೂರು 0. ಯಾದಗಿರಿ ಖಾಲಿ ಹುದ್ದೆ 2967, ಮಂಜೂರು 477.
ಪ್ರೌಢಶಾಲಾ ಶಿಕ್ಷಕರು; ಬಳ್ಳಾರಿಯಲ್ಲಿ ಖಾಲಿ ಇರುವ ಹುದ್ದೆಗಳು 349. ಅಕ್ಷರ ಮಿತ್ರ ಅಡಿ ಮಂಜೂರಾದ ಅತಿಥಿ ಶಿಕ್ಷಕರ ಹುದ್ದೆ 4. ಬೀದರ್ 269 ಖಾಲಿ ಹುದ್ದೆ, ಮಂಜೂರು 4. ಕಲಬುರಗಿ 354 ಖಾಲಿ, ಮಂಜೂರು 16. ಕೊಪ್ಪಳ ಖಾಲಿ ಹುದ್ದೆ 402, ಮಂಜೂರು 5. ರಾಯಚೂರು ಖಾಲಿ ಹುದ್ದೆ 691, ಮಂಜೂರು 12. ವಿಜಯನಗರ ಖಾಲಿ ಹುದ್ದೆ 226, ಮಂಜೂರು 2. ಯಾದಗಿರಿ ಖಾಲಿ ಹುದ್ದೆ 562, ಮಂಜೂರು 9.
ನೇಮಕಾತಿಗೆ ಷರತ್ತುಗಳು
* 2566 ಪ್ರಾಥಮಿಕ ಶಾಲೆಗಳ 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರಿಗೆ ತಲಾ ರೂ. 10,000ದಂತೆ ನೇಮಕಗೊಂಡ ದಿನಾಂಕದಿಂದ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ, ಅಂದರೆ ಮಾರ್ಚ 31, 2024ರವರೆಗೆ ಹಾಗೂ ಪ್ರೌಢ ಶಾಲೆಗಳ 52 ಅತಿಥಿ ಶಿಕ್ಷಕರಿಗೆ ತಲಾ ರೂ. 10,500ದಂತೆ ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು.
* ಖಾಲಿಯಿರುವ ಎಲ್ಲಾ ಶಿಕ್ಷಕ ಹುದ್ದೆಗಳಿಗೆ 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರನ್ನು ತ್ವರಿತವಾಗಿ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಉಪನಿರ್ದೇಶಕರು ತಾಲೂಕುವಾರು ಖಾಲಿ ಹುದ್ದೆಗಳ ಮಾಹಿತಿಯನ್ವಯ ಕ್ರಮವಹಿಸುವುದು.
* ಪ್ರಾಥಮಿಕ/ ಪ್ರೌಢ ಶಾಲೆಗಳಿಗೆ ಸಂಬಂಧಿಸಿದಂತೆ 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರಾಥಮಿಕ/ ಪ್ರೌಢ ಶಾಲಾ ಮುಖ್ಯ ಶಿಕ್ಷಕರುಗಳೇ ವಹಿಸಿಕೊಳ್ಳತಕ್ಕದ್ದು.
* 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರ ಹುದ್ದೆ ಆಯ್ಕೆಗೆ ಶಿಕ್ಷಕರಿಗಾಗಿ ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ, ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡತಕ್ಕದ್ದು.
* 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರ ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸುವುದು.
* ಪ್ರಾಥಮಿಕ ಶಾಲಾ 'ಅಕ್ಷರ ಮಿತ್ರ' ಅತಿಥಿ ಶಿಕ್ಷಕರಿಗೆ ಮಾಸಿಕ ರೂ. 10,000, ಪ್ರೌಢಶಾಲಾ ಅಕ್ಷರ ಮಿತ್ರ ಅತಿಥಿ ಶಿಕ್ಷಕರಿಗೆ ರೂ. 10,500 ಗೌರವ ಸಂಭಾವನೆ ನಿಗದಿಪಡಿಸಲಾಗಿದೆ.
* ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಪಾಲಿಸುವ ಸರ್ಕಾರದ ನಿರ್ದೇಶನಗಳು ಹಾಗೂ ಷರತ್ತುಗಳನ್ನು ಸದರಿ ಅಕ್ಷರ ಮಿತ್ರ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿಯೂ ಸಹ ಪಾಲನೆ ಮಾಡುವುದು ಕಡ್ಡಾಯವಾಗಿರುತ್ತದೆ.
* ಈಗಾಗಲೇ ಶಾಲಾ ಶೈಕ್ಷಣಿಕ ಅವಧಿ ಪ್ರಾರಂಭಗೊಂಡು 3 ತಿಂಗಳ ಅವಧಿ ಗತಿಸಿರುವುದರಿಂದ, ಆದ್ಯತೆ ಮೇರೆಗೆ ತ್ವರಿತ ಗತಿಯಲ್ಲಿ ಕ್ರಮ ವಹಿಸುವುದು.












Click it and Unblock the Notifications