ಬಳ್ಳಾರಿ: ಆಗಸ್ಟ್ 13ರಂದು ಮಿನಿ ಉದ್ಯೋಗ ಮೇಳ, ವಿವರ
ಬಳ್ಳಾರಿ, ಆಗಸ್ಟ್ 12: ಬಳ್ಳಾರಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಗಸ್ಟ್ 13ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ನೇರ ಸಂದರ್ಶನದ ಮೂಲಕ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವ-ವಿವರಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಲಾಗಿದೆ.
ಆಗಸ್ಟ್ 13ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಬಳ್ಳಾರಿ ನಗರದ ಹಳೆ ತಾಲೂಕು ಕಛೇರಿ ಆವರಣದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಉದ್ಯೋಗಾಧಿಕಾರಿ ಪಿ. ಎಸ್. ಹಟ್ಟಪ್ಪ ಈ ಕುರಿತು ಮಾಹಿತಿ ನೀಡಿದ್ದಾರೆ. ಮೇಳದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸುತ್ತಿದ್ದು, ಇವರು ತಮ್ಮಲ್ಲಿರುವ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳಲಿದ್ದಾರೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯನ್ನು ಸಂಪರ್ಕಿಸಬಹುದು ಅಥವಾ ಮೊಬೈಲ್ ಸಂಖ್ಯೆ 9742718891, 8277000619, 9900827768, 6360408094ಕ್ಕೆ ಕರೆ ಮಾಡಬಹುದು.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ನೇಮಕಾತಿ: ಬಳ್ಳಾರಿ ಜಿಲ್ಲೆಯ ನಗರ ಶಿಶು ಅಭಿವೃದ್ದಿ ಯೋಜನೆಯಡಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಬಳ್ಳಾರಿ (ಗ್ರಾಮಾಂತರ) ಶಿಶು ಅಭಿವೃದ್ಧಿ ಯೋಜನೆಯ ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಖಾಲಿ ಇರುವ 22 ಅಂಗನವಾಡಿ ಕಾರ್ಯಕರ್ತೆ ಹಾಗೂ 55 ಅಂಗನವಾಡಿ ಸಹಾಯಕಿ ಸೇರಿ ಒಟ್ಟು 63 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅರ್ಹರು. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವಾಗ ಜನನ ಪ್ರಮಾಣ ಪತ್ರ/ ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿ, ತಹಶೀಲ್ದಾದಾರ್ ಅಥವಾ ಉಪ ತಹಶೀಲ್ದಾದಾರ್ ಅವರಿಂದ ಪಡೆದ ಮೂರು (3) ವರ್ಷದೊಳಗಿನ ವಾಸಸ್ಥಳ ದೃಢೀಕರಣ ಪತ್ರ, ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ, ಪತಿಯ ಮರಣ ಪ್ರಮಾಣ ಪತ್ರ ಹಾಗೂ ವಿಧವಾ ಪ್ರಮಾಣ ಪತ್ರ (ವಿಧವಾ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ) ವನ್ನು ಸಲ್ಲಿಸಬೇಕು.
ಅಂಗವಿಕಲತೆ ಪ್ರಮಾಣಪತ್ರ (ಅಂಗವಿಕಲ ವೇತನದ ದೃಢೀಕರಣವನ್ನು ಪರಿಗಣಿಸುವಂತಿಲ್ಲ), ವಿಚ್ಛೇದನ ಪ್ರಮಾಣ ಪತ್ರ (ನ್ಯಾಯಾಲಯದಿಂದ ಪಡೆದಿರಬೇಕು), ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ನಡೆಸಲ್ಪಟ್ಟ ಮಾಜಿ ದೇವದಾಸಿಯರ ಸಮೀಕ್ಷೆಯ ಪಟ್ಟಿಯಲ್ಲಿರುವ ಮಾಜಿ ದೇವದಾಸಿಯರ ಮಕ್ಕಳು ಎಂಬುದರ ಬಗ್ಗೆ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ, ಇಲಾಖೆಯ ಸುಧಾರಣಾ ಸಂಸ್ಥೆ, ರಾಜ್ಯ ಮಹಿಳಾ ನಿಲಯಗಳ ನಿವಾಸಿಗಳು ಕನಿಷ್ಟ 03 ವರ್ಷ ಸಂಸ್ಥೆಯಲ್ಲಿರಬೇಕು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಪಡೆದ ನಿವಾಸಿ ಪ್ರಮಾಣ ಪತ್ರ, ಯೋಜನಾ ನಿರಾಶ್ರಿತರ ಬಗ್ಗೆ ತಹಶೀಲ್ದಾರರಿಂದ ಪಡೆದ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರ, ಎಲ್ಲಾ ದಾಖಲಾತಿಗಳನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿ ಸಲ್ಲಿಸಬೇಕು.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಓದಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿದ್ದು, ತತ್ಸಮಾನ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಅರ್ಜಿಗಳನ್ನು ಅನ್‌ಲೈನ್ ಮೂಲಕವೇ ಮಾತ್ರ ಸಲ್ಲಿಸತಕ್ಕದ್ದು, ಇತರೇ ಯಾವುದೇ ಮೂಲದಿಂದ ಸಲ್ಲಿಸಲು ಅವಕಾಶವಿರುವುದಿಲ್ಲ, ಅವುಗಳನ್ನು ಪರಿಗಣಿಸಲಾಗುವುದಿಲ್ಲ.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ, ಕಡ್ಡಾಯವಾಗಿ ಅವಶ್ಯ ಇರುವ ಮೂಲ ದಾಖಲೆಗಳನ್ನು ಸ್ಪಷ್ಟವಾಗಿ ಸ್ಕ್ಯಾನ್ ಮಾಡಿ, ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಮೂಲಕವೇ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸಲ್ಲಿಸುವುದು, ತದನಂತರ ಸಲ್ಲಿಸುವ ದಾಖಲಾತಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08392-268609, 08392-266080.












Click it and Unblock the Notifications