Infosys Layoffs: 400 ಟ್ರೈನಿಗಳನ್ನು ಕೆಲಸದಿಂದ ವಜಾ ಮಾಡಿದ ಇನ್ಫೋಸಿಸ್
ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಅದರಲ್ಲೂ ಹೊಸದಾಗಿ ಸೇರ್ಪಡೆಯಾಗಿರುವ ತರಬೇತಿ ಅವಧಿಯಲ್ಲಿರುವ ಉದ್ಯೋಗಿಗಳಿಗೆ ಆಘಾತ ನೀಡಿದ್ದು ಪಿಂಕ್ ಸ್ಲಿಪ್ ನೀಡಿದೆ. ಇನ್ಫೊಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ತರಬೇತಿಯಲ್ಲಿದ್ದ 400 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಸತತ ಮೂರು ಪ್ರಯತ್ನಗಳಲ್ಲಿ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಅನುತ್ತೀರ್ಣವಾಗಿರುವ 400 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ವರದಿಯ ಪ್ರಕಾರ 400 ಉದ್ಯೋಗಿಗಳಲ್ಲಿ 2024ರ ಅಕ್ಟೋಬರ್ ತಿಂಗಳಿನಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಅಕ್ಟೋಬರ್ 2024ರಲ್ಲಿ ಕೆಲಸ ಪಡೆದ ಅರ್ಧದಷ್ಟು ಜನ ಈಗ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಸಂಸ್ಥೆಯಲ್ಲಿ ಕಠಿಣ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದು, ಮೈಸೂರು ಕ್ಯಾಂಪಸ್‌ನಲ್ಲಿ ಪ್ರಾಥಮಿಕ ತರಬೇತಿ ಪಡೆದ ನಂತರ ಎಲ್ಲಾ ಟ್ರೈನಿಗಳು ಆಂತರಿಕ ಮೌಲ್ಯಮಾಪನದಲ್ಲಿ ಉತ್ತೀರ್ಣರಾಗಬೇಕು. ಎಲ್ಲಾ ಟ್ರೈನಿಗಳಿಗೆ ಉತ್ತೀರ್ಣರಾಗಲು ಮೂರು ಬಾರಿ ಅವಕಾಶ ನೀಡಲಾಗುತ್ತದೆ. ಮೂರು ಪ್ರಯತ್ನಗಳಲ್ಲಿ ಟ್ರೈನಿಗಳು ಉತ್ತೀರ್ಣವಾಗಲು ವಿಫಲವಾದರೆ ಸಹಿ ಮಾಡಿರುವ ಒಪ್ಪಂದದ ಪ್ರಕಾರ ಕಂಪನಿಯಲ್ಲಿ ಮುಂದುವರಿಯಲು ಅವಕಾಶ ಇರುವುದಿಲ್ಲ ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದೇನೂ ಈ ವರ್ಷ ಮಾಡಿರುವ ನಿಯಮವಲ್ಲ ಎರಡು ದಶಕಗಳಿಂದಲೂ ಇದೇ ಪ್ರಕ್ರಿಯೆ ಅಸ್ತಿತ್ವದಲ್ಲಿದೆ. ಕಂಪನಿಯು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪ್ರತಿಭೆಗಳು ಲಭ್ಯವಾಗುವಂತೆ ಮಾಡಬೇಕು ಎಂದು ಇನ್ಫೋಸಿಸ್ ತಿಳಿಸಿದೆ.
ಬೇಕೆಂದೇ ಕಠಿಣ ಪರೀಕ್ಷೆ ಕೊಟ್ಟ ಆರೋಪ?
ಇನ್ಫೋಸಿಸ್ ಸಂಸ್ಥೆಯ ಈ ನಡೆ ಟ್ರೈನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿಯು ಬೇಕಂತಲೇ ಪರೀಕ್ಷೆಯನ್ನು ತುಂಬಾ ಕಠಿಣವಾಗಿ ನಡೆಸಿತು ಎಂದು ಟ್ರೈನಿಯೊಬ್ಬ ಆರೋಪಿಸಿರುವುದಾಗಿ ಮನಿ ಕಂಟ್ರೋಲ್ ತಿಳಿಸಿದೆ.
ಕೆಲಸದಿಂದ ತೆಗೆದಿರುವುದು ನ್ಯಾಯವಲ್ಲ, ಪರೀಕ್ಷೆಗಳು ತುಂಬಾ ಕಠಿಣವಾಗಿದ್ದವು. ನಮ್ಮನ್ನು ಬೇಕೆಂದೇ ಪಾಸಾಗದಂತೆ ನೋಡಿಕೊಳ್ಳಲಾಗಿದೆ. ಹಲವರಿಗೆ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದ್ದು, ಹಲವು ಟ್ರೈನಿಗಳು ಕಚೇರಿಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ ಎಂದು ಟ್ರೈನಿಯೊಬ್ಬ ತಿಳಿಸಿರುವುದಾಗಿ ವರದಿಯಾಗಿದೆ. ಇನ್ಫೋಸಿಸ್ 50 ಜನರ ಬ್ಯಾಚ್‌ಗಳಲ್ಲಿ ತರಬೇತಿ ಪಡೆಯುವರರನ್ನು ಕಂಪನಿಯಿಂದ ಬೇರ್ಪಡಿಕೆ ಪತ್ರಗಳಿಗೆ ಸಹಿ ಹಾಕುವಂತೆ ಕರೆಯುತ್ತಿದೆ ಎಂದು ವರದಿ ತಿಳಿಸಿದೆ.
400 ಟ್ರೈನಿಗಳು ಅಲ್ಲ ಕ್ಯಾಂಪಸ್ ಇಂಟರ್ ವ್ಯೂನಲ್ಲಿ ಆಯ್ಕೆಯಾಗಿದ್ದ ಸುಮಾರು 700 ಟ್ರೈನಿಗಳನ್ನು ಇನ್ಫೊಸಿಸ್ ವಜಾಗೊಳಿಸಲು ಪ್ರಾರಂಭಿಸಿದೆ ಎಂದು ನಾಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಎಂಪ್ಲಾಯೀಸ್ ಸೆನೆಟ್ (NITES) ಹೇಳಿಕೆಯನ್ನು ಉಲ್ಲೇಖಿಸಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.












Click it and Unblock the Notifications