India Post Office Recruitment: ಭಾರತೀಯ ಅಂಚೆ ಇಲಾಖೆಯಿಂದ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನ
India Post Office Recruitment 2025: ಇತ್ತೀಚಿನ ದಿನಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತಲೇ ಇವೆ. ಹಾಗೆಯೇ ಇದೀಗ ಭಾರತೀಯ ಅಂಚೆ ಇಲಾಖೆಯು ಖಾಲಿ ಇರುವ 21,413 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ, ಅರ್ಜಿ ಸಲ್ಲಿಸಬಯಸುವವರು ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಭಾರತದ್ಯಾಂತ ಇರುವ 23 ಕ್ಷೇತ್ರಗಳಲ್ಲಿನ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆ ಮಾನದಂಡ ಆಧರಿಸಿ 23 ಕ್ಷೇತ್ರಗಳಿಗೆ ಮೆರಿಟ್ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಹೆಸರನ್ನು ನಿರ್ಧರಿಸಲಾಗುತ್ತದೆ. ಅರ್ಜಿಗಳ ನೋಂದಣಿ ಪ್ರಕ್ರಿಯೆಯು ಮುಗಿದ ನಂತರ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ.

ಉದ್ಯೋಗಗಳ ವಿವರ: ಗ್ರಾಮೀಣ ಡಾಕ್ ಸೇವಕರು (GDS), ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಸಹಾಯಕ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ (ABPM) ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವವರು ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕಾಗುತ್ತದೆ.
ಯಾವ್ಯಾವ ಹುದ್ದೆಗೆ ಮಾಸಿಕ ವೇತನ ಎಷ್ಟು?: ಗ್ರಾಮೀಣ ಡಾಕ್ ಸೇವಕ ಹುದ್ದೆಗೆ 10,000 ದಿಂದ 24,470 ರೂಪಾಯಿ, ಬ್ರಾಂಚ್ ಪೋಸ್ಟ್ ಮಾಸ್ಟರ್ 12,000ರಿಂದ 29,380 ರೂಪಾಯಿ, ಸಹಾಯಕ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗೆ ಮಾಸಿಕ ವೇತನ 10,000ರಿಂದ 24,470 ರೂಪಾಯಿ ಇರಲಿದೆ.
18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಈಗಾಗಲೇ ಅರ್ಜಿ ಸಲ್ಲಿಕೆ ಫೆಬ್ರವರಿ 10, 2025ರಿಂದ ಆರಂಭವಾಗಿದ್ದು, ಕೊನೇ ದಿನಾಂಕ ಮಾರ್ಚ್ 03 ಆಗಿದೆ. ಮಾರ್ಚ್ 06ರಿಂದ 8 ರವರೆಗೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಶುಲ್ಕದ ವಿಚಾರಕ್ಕೆ ಬಂದರೆ, ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ, ಎಸ್ಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರು, ಮಂಗಳಮುಖಿಯರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ https://indiapostgdsonline.cept.gov.in/Notifications1/Model_Notification.pdf ಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ https://indiapostgdsonline.gov.in/ ಭೇಟಿ ನೀಡಬಹುದಾಗಿದೆ.
158 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕರ್ನಾಟಕ ಹೈಕೋರ್ಟ್ ಖಾಲಿ ಇರುವ 158 ಹುದ್ದೆಗಳಿಗೆ ಆಹ್ವಾನಿಸಿದೆ. ಹಾಗಾದರೆ, ಅರ್ಜಿ ಸಲ್ಲಿಸುವವರು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಹಾಗೂ ಆಯ್ಕ ಆದವರಿಗೆ ಮಾಸಿಕ ವೇತನ ಎಷ್ಟಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕರ್ನಾಟಕ ಹೈಕೋರ್ಟ್ ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆಗೊಳಿಸಿದೆ. ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ ಒಟ್ಟು 158 ಸಿವಿಲ್ ಜಡ್ಜ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆಯಾದವರಿಗೆ ಮಾಸಿಕ ವೇತನ 77,840-1,36,520 ರೂಪಾಯಿ ಇರಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ದಿನಾಂಕ ಫೆಬ್ರವರಿ 10, 2025ರಂದು ಆರಂಭವಾಗಿದ್ದು, ಕೊನೇ ದಿನಾಂಕ ಮಾರ್ಚ್ 03 ಕೊನೇ ಆಗಿದೆ.
ಭಾರತದಲ್ಲಿನ ಕಾನೂನಿನ ಮೂಲಕ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು ಮತ್ತು ಕಡ್ಡಾಯವಾಗಿ ವಕೀಲರಾಗಿ ನೋಂದಣಿಯಾಗಿರಬೇಕು. ಅರ್ಜಿಗಳನ್ನು ಸಲ್ಲಿಸುವುದಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳ ವಯಸ್ಸು 40 ಮೀರಿರಬಾರದು. ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-2ಎ ಅಥವಾ 2ಬಿ ಅಥವಾ 3ಎ ಅಥವಾ 3ಬಿಗೆ ಸೇರಿದ ಅಭ್ಯರ್ಥಿಗಳ ವಯಸ್ಸು 38 ಮೀರಿರಬಾರದು. ಯಾವುದೇ ಇತರ ಅಭ್ಯರ್ಥಿಗಳ ವಯಸ್ಸು 35 ವರ್ಷ ಮೀರಿರಬಾರದು.
ಮಾಜಿ-ಸೈನಿಕ ಅಭ್ಯರ್ಥಿಗಳಿಗಾಗಿ, ಗರಿಷ್ಠ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಲಾಗಿದೆ.ಸೇವಾ ನಿರತ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಭಾರತದ ಕಾನೂನಿನ ಮೇರೆಗೆ ಸ್ಥಾಪಿತವಾದ ವಿಶ್ವವಿದ್ಯಾಲಯವು ನೀಡಿದ ಕಾನೂನು ಪದವಿಯನ್ನು ಹೊಂದಿರಬೇಕು. ಅಲ್ಲದೆ, ಕರ್ನಾಟಕ ಹೈಕೋರ್ಟ್ ವ್ಯಾಪ್ತಿಗೆ ಒಳಪಡುವ ಜಿಲ್ಲಾ ನ್ಯಾಯಿಕ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು. ಪ್ರಾಸಿಕ್ಯೂಷನ್ಸ್ ಮತ್ತು ಸರ್ಕಾರಿ ವ್ಯಾಜ್ಯ ನಿರ್ವಹಣೆ ಇಲಾಖೆಯಲ್ಲಿ ಸಹಾಯಕ ಸರ್ಕಾರಿ ಪ್ರಾಸಿಕ್ಯೂಟರ್/ಹೆಚ್ಚುವರಿ ಸರ್ಕಾರಿ ನ್ಯಾಯವಾದಿಗಳಾಗಿ ಕಾರ್ಯ ನಿರ್ವಹಿಸುತ್ತಿರಬೇಕಾಗುತ್ತದೆ.











Click it and Unblock the Notifications