ವಿಶೇಷ ರಿಸರ್ವ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ
ಬೆಂಗಳೂರು, ನವೆಂಬರ್ 17; ಕರ್ನಾಟಕದ ಪೊಲೀಸ್ ಇಲಾಖೆ ವಿಶೇಷ ರಿಸರ್ವ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಲಿಖಿತ ಪರೀಕ್ಷೆ ದಿನಾಂಕ ಪ್ರಕಟಿಸಿದೆ. ಲಿಖಿತ ಪರೀಕ್ಷೆಯ ಸ್ಥಳದ ವ್ಯವಸ್ಥೆ ಮಾಡಲು ಸುತ್ತೋಲೆ ಹೊರಡಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪರವಾಗಿ ಉಪ ಪೊಲೀಸ್ ಆಯುಕ್ತ (ಆಡಳಿತ) ಬಿ. ಎಂ. ಲಕ್ಷ್ಮೀಪ್ರಸಾದ್ ಐಪಿಎಸ್ ಈ ಸುತ್ತೋಲೆ ಹೊರಡಿಸಿದ್ದಾರೆ. ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತ ಕಚೇರಿಗಳಿಗೆ ಇದನ್ನು ಕಳಿಸಲಾಗಿದೆ.
ಬೆಂಗಳೂರು ನಗರದ ಉಪ ಪೊಲೀಸ್ ಆಯುಕ್ತರಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ, ಆಗ್ನೇಯ ಈಶಾನ್ಯ, ಮತ್ತು ವೈಟ್‌ಫೀಲ್ಡ್ ವಿಭಾಗಕ್ಕೆ ಇವುಗಳನ್ನು ಕಳಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ವಿಶೇಷ ರಿಸರ್ವ್ ಸಬ್‌ಇನ್ಸ್‌ಪೆಕ್ಟರ್ (ಕೆಎಸ್‌ಆರ್‌ಪಿ & ಎಆರ್‌ಬಿ) ಹುದ್ದೆಗಳ ನೇಮಕಾತಿಗಾಗಿ ದಿನಾಂಕ 18/12/2022 ಭಾನುವಾರದಂದು ಪರೀಕ್ಷೆ ನಡೆಸಲಾಗುತ್ತದೆ.
ಪತ್ರಿಕೆ-1 ಬೆಳಗ್ಗೆ 11 ರಿಂದ 12ರವರೆಗೆ ಹಾಗೂ ಪತ್ರಿಕೆ-2 ಮಧ್ಯಾಹ್ನ 2 ರಿಂದ 3.30ರವರೆಗೆ ಲಿಖಿತ ಪರೀಕ್ಷೆಯನ್ನು ನಡೆಸಲು ಡಿಜಿಪಿ, ನೇಮಕಾತಿ ಅವರು ದಿನಾಂಕವನ್ನು ನಿಗದಿ ಮಾಡಿದ್ದಾರೆ.

ಅಭ್ಯರ್ಥಿಗಳ ಲಿಖಿತ ಪರೀಕ್ಷೆ; ತಮ್ಮ ವಿಭಾಗಗಳಲ್ಲಿ 5,000 ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳ/ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರ ಅನುಮತಿ ಪಡೆದು ವಿವರಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಅವಶ್ಯಕವೆನಿಸಿದಲ್ಲಿ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ/ ಕ್ಷೇತ್ರ ಶಿಕ್ಷಕಾಧಿಕಾರಿಗಳ ಹತ್ತಿರ ಖುದ್ದು ಚರ್ಚಿಸಿ, ಪರೀಕ್ಷಾ ಕೇಂದ್ರಗಳ ಅವಶ್ಯಕತೆಯ ಗಂಭೀರತೆಯನ್ನು ಮನದಟ್ಟು ಮಾಡಿಕೊಡಬೇಕು. 1000ಕ್ಕಿಂತ ಹೆಚ್ಚು ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸ್ಥಳಾವಕಾಶ ಇರುವ ಪರೀಕ್ಷಾ ಕೇಂದ್ರಗಳಿಗೆ ಆದ್ಯತೆಯನ್ನು ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕಡ್ಡಾಯವಾಗಿ ಎಲ್ಲಾ ವಿಭಾಗಗಳೆಂದ 5000 ಅಭ್ಯರ್ಥಿಗಳ ಸಾಮರ್ಥ್ಯವುಳ್ಳ ಪರೀಕ್ಷಾ ಕೇಂದ್ರಗಳ ವಿವರವನ್ನು ಸಲ್ಲಿಸಬೇಕಿದೆ. ಪರೀಕ್ಷಾ ಕೇಂದ್ರಗಳ ಪೂರ್ಣ ವಿಳಾಸವನ್ನು ತಪ್ಪಿಲ್ಲದಂತೆ ಆಂಗ್ಲಭಾಷೆಯಲ್ಲಿಯೇ ಕಡ್ಡಾಯವಾಗಿ ಸಲ್ಲಿಸಬೇಕು.
ಪತಿ ಕೊಠಡಿಯಲ್ಲಿ 20, 40 ಅಥವಾ 60 ಸಂಖ್ಯೆಯಂತೆ ಮಾತ್ರ ಅಭ್ಯರ್ಥಿಗಳು ಕುಳಿತುಕೊಳ್ಳಬಹುದಾದ ವಿವರಗಳನ್ನು ನೀಡಬೇಕು. ಪರೀಕ್ಷೆ ಕೇಂದ್ರಗಳಿಗೆ ಆಯಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ತಲಾ 20 ಅಭ್ಯರ್ಥಿಗಳಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸುವಂತೆ ನೋಡಿಕೊಳ್ಳಬೇಕಿದೆ.
ವಿವರಗಳನ್ನು ಸಲ್ಲಿಸುವಾಗ ಪರೀಕ್ಷಾ ಕೇಂದ್ರದ ಹೆಸರು & ವಿಳಾಸ (ಅಂಗ್ಲ ಭಾಷೆಯಲ್ಲಿ), ಕೊಠಡಿಗಳ ಸಂಖ್ಯೆ, ಕೊಠಡಿ ಸಾಮರ್ಥ್ಯ, ಒಟ್ಟು ಅಭ್ಯರ್ಥಿಗಳ ಸಂಖ್ಯೆ, ಲಭ್ಯವಿರುವ ಇನ್‌ವಿಜಿಲೇಟರ್ಸ್, ಲಭ್ಯವಿರುವ ಅಟೆಂಡರ್ಸ್ ವಿವರಗಳನ್ನು ನೀಡಲಾಗಿದೆ.












Click it and Unblock the Notifications