ಸಹಾಯಕ ಲೋಕೋ ಪೈಲಟ್ ನೇಮಕಾತಿ: ನೈಋತ್ಯ ರೈಲ್ವೆ ವಲಯಕ್ಕೆ ಎಷ್ಟು ಹುದ್ದೆಗಳು?
ಹುಬ್ಬಳ್ಳಿ, ಜೂನ್ 20: ಭಾರತೀಯ ರೈಲ್ವೆ ಇಲಾಖೆ ಸಹಾಯಕ ಲೋಕೋ ಪೈಲಟ್ ನೇಮಕಾತಿಗೆ ಹೆಚ್ಚಿನ ಆದ್ಯತೆ ನೀಡಿದೆ. ರೈಲು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಹಾಯಕ ಲೋಕೋ ಪೈಲಟ್ ನೇಮಕಾತಿಯ ಸಂಖ್ಯೆಯನ್ನು ಏರಿಕೆ ಮಾಡಿ ಆದೇಶಿಸಿದೆ. ಶೀಘ್ರದಲ್ಲೇ ನೇಮಕಾತಿ ಆರಂಭವಾಗಲಿದೆ.
ಮುಂದಿನ 6-8 ತಿಂಗಳಿನಲ್ಲಿ ಭಾರತೀಯ ರೈಲ್ವೆ 18,799 ಸಹಾಯಕ ಲೋಕೋ ಪೈಲಟ್‌ಗಳ ನೇಮಕಾತಿ ಮಾಡಿಕೊಳ್ಳಲಿದೆ. ಯಾವ ರೈಲು ವಿಭಾಗಕ್ಕೆ ಎಷ್ಟು ಹುದ್ದೆಗಳು? ಎಂದು ಈಗಾಗಲೇ ಸೂಚನೆ ನೀಡಲಾಗಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅನುಮತಿಸಲಾಗಿದೆ.

ಈ ಹಿಂದೆ ರೈಲ್ವೆ ಇಲಾಖೆ 5,696 ಸಹಾಯಕ ಲೋಕೋ ಪೈಲಟ್ ನೇಮಕಾತಿಗೆ ಅನುಮತಿ ನೀಡಿತ್ತು. ಆದರೆ ಜೂನ್ 18ರಂದು ಈ ಆದೇಶವನ್ನು ಪರಿಷ್ಕರಣೆ ಮಾಡಲಾಗಿದೆ. ಹುದ್ದೆಗಳ ಸಂಖ್ಯೆಯನ್ನು 18,799ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದಾಗಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.
ನೈಋತ್ಯ ರೈಲ್ವೆ ವಲಯಕ್ಕೆ ಎಷ್ಟು?; ಕರ್ನಾಟಕದ ಬಹುತೇಕ ಜಿಲ್ಲೆಗಳು ನೈಋತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಒಳಪಡುತ್ತವೆ. ವಲಯದ ಪ್ರಧಾನ ಕಛೇರಿ ಹುಬ್ಬಳ್ಳಿಯಲ್ಲಿದೆ. ಮೊದಲು ವಲಯಕ್ಕೆ 473 ಹುದ್ದೆಗಳನ್ನು ಹಂಚಿಕೆ ಮಾಡಲಾಗಿತ್ತು. ಆದರೆ ಈಗ ಪರಿಷ್ಕೃತ ಆದೇಶದಂತೆ 1,576 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸೋಮವಾರ ಪಶ್ಚಿಮ ಬಂಗಾಳದ ರಂಗಪಾಣಿ ರೈಲು ನಿಲ್ದಾಣದ ಬಳಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಸುಮಾರು 10 ಜನರು ಮೃತಪಟ್ಟಿದ್ದರು. ಈ ಘಟನೆಯ ಬಳಿಕ ಇಲಾಖೆ ರೈಲು ಪ್ರಯಾಣಿಕರ ಸುರಕ್ಷತೆಗೆ ಮತ್ತಷ್ಟು ಒತ್ತು ನೀಡಿದ್ದು, ಸಹಾಯಕ ಲೋಕೋ ಪೈಲಟ್ ನೇಮಕಾತಿಯ ಸಂಖ್ಯೆಯನ್ನು ಹೆಚ್ಚಳ ಮಾಡಿ ಆದೇಶಿಸಿದೆ.
ಪರಿಷ್ಕೃತ ಆದೇಶದ ಪ್ರಕಾರ ಕೇಂದ್ರಿಯ ರೈಲ್ವೆಯಲ್ಲಿ 1783, ದಕ್ಷಿಣ ರೈಲ್ವೆಯಲ್ಲಿ 726, ಪಶ್ಚಿಮ ಕೇಂದ್ರ ರೈಲ್ವೆಯಲ್ಲಿ 729, ಪಶ್ಚಿಮ ರೈಲ್ವೆಯಲ್ಲಿ 1376 ಸಹಾಯಕ ಲೋಕೋ ಪೈಲಟ್ ನೇಮಕಾತಿ ನಡೆಯಲಿದೆ.
ಆಗ್ನೇಯ ರೈಲ್ವೆ ವಲಯದಲ್ಲಿ 1001, ಆಗ್ನೇಯ ಮಧ್ಯ ರೈಲ್ವೆಯಲ್ಲಿ 3973, ದಕ್ಷಿಣ ಮಧ್ಯ ರೈಲ್ವೆಯಲ್ಲಿ 1949, ವಾಯುವ್ಯ ರೈಲ್ವೆಯಲ್ಲಿ 761 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಸಿಕ್ಕಿದೆ.
ಸಹಾಯಕ ಲೋಕೋ ಪೈಲಟ್ ಆದವರಿಗೆ ಸುಮಾರು 35,000 ರೂ. ವೇತನ ಸಿಗಲಿದೆ. ಹುದ್ದೆಗೆ ಸಿಗಲಿರುವ ವಿವಿಧ ಭತ್ಯೆಗಳು ಪ್ರತ್ಯೇಕ. 18 ರಿಂದ 33 ವರ್ಷದ ವಯೋಮಿತಿಯ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ನೇಮಕಾತಿ ಆದೇಶ ಪ್ರಕಟವಾದ ಬಳಿಕ ಈ ಕುರಿತು ವಿವರವಾದ ಮಾಹಿತಿ ಸಿಗಲಿದೆ.
ಈ ಹಿಂದಿನ ನಿಯಮಗಳ ಪ್ರಕಾರ ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ 10ನೇ ತರಗತಿ ಪಾಸ್ ಆಗಿರಬೇಕು. ಐಟಿಐ ಕೋರ್ಸ್ ಪೂರ್ಣಗೊಳಿಸಿದವರು ಸಹ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿತ್ತು. ಈಗ ಯಾವ ವಿದ್ಯಾರ್ಹತೆ ನಿಗದಿ ಮಾಡಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ರೈಲ್ವೆ ಇಲಾಖೆ ನೇಮಕಾತಿ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳಬಹುದು. ಕೆಲವೇ ದಿನಗಳಲ್ಲಿ ಸಹಾಯಕ ಲೋಕೋ ಪೈಲಟ್ ನೇಮಕಾತಿ ಆದೇಶವನ್ನು ಆಯಾ ರೈಲು ವಿಭಾಗಗಳು ಹೊರಡಿಸಲಿವೆ.












Click it and Unblock the Notifications