ಚಿತ್ರದುರ್ಗ: ಗ್ರಾಮ ಸಹಾಯಕರ ಹುದ್ದೆ ಅರ್ಜಿ ಆಹ್ವಾನ, ಇಲ್ಲಿದೆ ವಿವರ
ಚಿತ್ರದುರ್ಗ, ಆಗಸ್ಟ್, 28: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚವ್ವನಹಳ್ಳಿ, ಹಿರಿಯೂರು ಹಾಗೂ ಜೆ.ಜಿ.ಹಳ್ಳಿ ಹೋಬಳಿಯ ಕಾಟನಾಯಕನಹಳ್ಳಿ ಕಂದಾಯ ವೃತ್ತಗಳ ಗ್ರಾಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹಾಗಾದರೆ ಅರ್ಜಿಸಲ್ಲಿಹಬಯಸುವವರು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎಂದು ಇಲ್ಲಿ ತಿಳಿಯಿರಿ.
ಗ್ರಾಮ ಸಹಾಯಕ ಹುದ್ದೆಯು ತಾತ್ಕಾಲಿಕ ಹುದ್ದೆ ಆಗಿದ್ದು, ಸರ್ಕಾರದಿಂದ ಕಾಲಕಾಲಕ್ಕೆ ನಿಗದಿ ಆಗುವಂತಹ ಗೌರವಧನ ಪಾವತಿಸಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ನೇಮಕಾತಿಗೆ ಕ್ರಮವಹಿಸಲಾಗುವುದು.

ಏನೆಲ್ಲ ಅರ್ಹತೆಗಳಿರಬೇಕು?: ನಿಗದಿತ ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗೆ ಅರ್ಜಿ ಸಲ್ಲಿಸುವ ದಿನಾಂಕಕ್ಕೆ 25 ವರ್ಷಗಳು ಪೂರ್ಣಗೊಂಡಿರಬೇಕು. ಅಕ್ಷರಸ್ಥರಾಗಿರುವ ಬಗ್ಗೆ ಸೂಕ್ತ ದಾಖಲಾತಿಗಳನ್ನು ಲಗತ್ತಿಸಬೇಕಾಗುತ್ತದೆ. ಸಾಮಾನ್ಯ ಕಂಪ್ಯೂಟರ್ ಸಾಕ್ಷರತೆಯ ತರಬೇತಿ ಪಡೆದಿರುವ ಕುರಿತು ಪ್ರಮಾಣ ಪತ್ರ ಲಗತ್ತಿಸಬೇಕು.
ಈ ಹಿಂದೆ ಈ ಕಂದಾಯ ವೃತ್ತಕ್ಕೆ ಸೇರಿದ ಗ್ರಾಮಗಳಲ್ಲಿ ಕರ್ತವ್ಯ ನಿರ್ವಹಿಸಿದ ಕೆಳಮಟ್ಟದ ಗ್ರಾಮ ನೌಕರರ ವಂಶಸ್ಥರಿಗೆ ಆದ್ಯತೆ ನೀಡಲಾಗುವುದು. ಕೆಳಮಟ್ಟದ ನೌಕರರ ವಂಶಸ್ಥರೆಂಬುವ ಬಗ್ಗೆ ದಾಖಲೆ ಲಗತ್ತಿಸುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೊದಲನೇ ಆದ್ಯತೆ ನೀಡಲಾಗುವುದು. ಕ್ರಿಮಿನಲ್ ಮೊಕದ್ದಮೆ ಹಿನ್ನಲೆಯುಳ್ಳವರಾಗಿರಬಾರದು. ಕಂದಾಯ ವೃತ್ತಕ್ಕೆ ಸೇರಿದ ಗ್ರಾಮಗಳ ನಿವಾಸಿಯಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯೂರು ತಹಶೀಲ್ದಾರ್ ಕಾರ್ಯಾಲಯ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ನೇರ ನೇಮಕಾತಿ ಸಂದರ್ಶನ: ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇದೇ ಆಗಸ್ಟ್ 31ರಂದು ಬೆಳಗ್ಗೆ 10 ರಿಂದ 2ರ ವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ನಡೆಯಲಿದೆ. ಹಾಗಾದರೆ ಅರ್ಜಿಸಲ್ಲಿಸಬಯಸುವವರು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಆಸಕ್ತ ನಿರುದ್ಯೋಗ ಯುವಕ ಮತ್ತು ಯುವತಿಯರು ಪಾಲ್ಗೊಳ್ಳಬಹುದು. ಈ ಸಂದರ್ಶನದಲ್ಲಿ ವಿವಿಧ ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಎಸ್ಎಸ್ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಹೊಂದಿರುವ 18ರಿಂದ 30 ವರ್ಷದೊಳಗಿನ ಪುರುಷ ಅಥವಾ ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು ಅಗತ್ಯ ದಾಖಲೆಗಳಾದ 3 ಬಯೋಡಾಟಾ ಪ್ರತಿಗಳು, ವಿದ್ಯಾರ್ಹತೆಯ ಜೆರಾಕ್ಸ್ ಪ್ರತಿಗಳು ಹಾಗೂ ಆಧಾರ್ ನಂಬರ್‌ನೊಂದಿಗೆ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಗರದ ಹಳೇ ವೈಶಾಲಿ ಗೇಟ್ ಹತ್ತಿರ, ಸ್ಟೇಡಿಯಂ ತಿರುವು, ಉದ್ಯೋಗ ವಿನಿಮಯ ಕೇಂದ್ರ ಕಚೇರಿ, ಚಿತ್ರದುರ್ಗ ದೂರವಾಣಿ ಸಂಖ್ಯೆ 7022459064, 9945587060, 8105619020ಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.












Click it and Unblock the Notifications