AI Opportunity: ಕೀಬೋರ್ಡ್ ಕುಟ್ಟುವ ಕೈಗಳಿಗೆ ಆಲೋಚಿಸುವ ತಲೆ ಬೇಕು; ಎಐ ಆತಂಕವಲ್ಲ ಅವಕಾಶ -ಪ್ರವೀಣ್ ಕುಮಾರ್ ಶೆಟ್ಟಿ ಬರಹ
AI opportunity in IT industry: ಟೆಕಿಗಳ ಉದ್ಯೋಗಕ್ಕೆ ಎಐ ಕನ್ನ ಹಾಕಲಿದೆ. ಇದರ ಪರಿಣಾಮ ಬೆಂಗಳೂರಿನ ಮೇಲಾಗಲಿದೆ ಎನ್ನುವ ಆತಂಕದ ಬಗ್ಗೆ ಸ್ವತಃ ತಂತ್ರಜ್ಞರಾಗಿರುವ ಪ್ರವೀಣ್ ಕುಮಾರ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಂಥ ಸಿಲಿಕಾನ್ ಸಿಟಿಗಳು ಮಲಗುವುದಿಲ್ಲ; ರೂಪಾಂತರಗೊಳ್ಳುತ್ತವೆ ಎನ್ನುವುದು ಅವರ ಮನದ ಮಾತು. ಪ್ರಸ್ತುತ ಓಮನ್ ದೇಶದಲ್ಲಿರುವ ಅವರು 'ಒನ್ ಇಂಡಿಯಾ ಕನ್ನಡ' ಜಾಲತಾಣಕ್ಕಾಗಿ ಬರೆದಿರುವ ವಿಶೇಷ ಬರಹ ಇಲ್ಲಿದೆ.
AI ಬಂತು. ಇನ್ನು ಮಾಹಿತಿ ತಂತ್ರಜ್ಞಾನ ವಲಯದ ಕೆಲಸಗಳೆಲ್ಲಾ ಮಾಯವಾಗಿ, ಬೆಂಗಳೂರಿನಂತಹ ಸಿಲಿಕಾನ್ ಸಿಟಿಕಾನ್ ಸಿಟಿಗಳು ಅಂಗಾತ ಮಲಗುತ್ತವೆ ಎಂಬ ಅಭಿಪ್ರಾಯಗಳು ಮೇಲಿಂದ ಮೇಲೆ ಬರುತ್ತಿವೆ. ಈ ಅಭಿಪ್ರಾಯಗಳು ಹೊಸದಾಗಿ ಈ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಆಯ್ದುಕೊಂಡವರಿಗೆ, ಮಕ್ಕಳನ್ನು ಈ ಕ್ಷೇತ್ರದಲ್ಲಿ ಓದಿಸುತ್ತಿರುವ ಹೆತ್ತವರಿಗೆ ಮತ್ತು ಈ ಕ್ಷೇತ್ರವನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷ ವಲಯಕ್ಕೆ ಆತಂಕಕಾರಿ ಆಗಿರುವುದಂತೂ ಹೌದು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೇ ಕೀಬೋರ್ಡ್ ಕುಟ್ಟುತ್ತಿರುವ ನನ್ನ ಅಭಿಪ್ರಾಯದ ಪ್ರಕಾರ, ಈ ವರ್ಷವು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒಂಥರಾ ಸಂಕ್ರಮಣದಂತಹ ವಾತಾವರಣ. ಬದಲಾವಣೆಯು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮಗ್ಗಲು ಮಗುಚಲೇ ಬೇಕಾದಂತಹ ಅನಿವಾರ್ಯತೆಯಿದೆ.

1994ರಲ್ಲಿ ಜಪಾನಿನ ಮಸಿಹಿರೋ ಹರಾ ಎನ್ನುವವರು ತಮ್ಮ ಕಂಪೆನಿಯ ಗೋದಾಮಿನಲ್ಲಿ ವಸ್ತುಗಳನ್ನು ಸ್ಕ್ಯಾನ್ ಮಾಡಲು ಬಳಸುತ್ತಿದ್ದ ಬಾರ್ ಕೋಡಿನಲ್ಲಿ ನ್ಯೂನ್ಯತೆಯನ್ನು ಬಗೆಹರಿಸಲು QR code (ಕ್ಯೂ ಆರ್ ) ಕೋಡನ್ನು ಕಂಡು ಹಿಡಿದಿದ್ದರು. ಆದರೆ ಅದನ್ನು ೨೦೧೬ರಲ್ಲಿ ಭಾರತೀಯರು ಯುಪಿಐ(UPI) ಹಣ ವರ್ಗಾವಣೆಯಲ್ಲಿ ಬಳಸಿಕೊಂಡಂತಹ ಪರಿಯಿದೆಯಲ್ಲ ಅದು ಅಮೋಘವಾದದ್ದು. ಹಣ ವರ್ಗಾವಣೆಗೆ ಕಾರ್ಡು, ಮಷಿನ್ನು ಅಗತ್ಯವೆಂದೆ ಭಾವಿಸಿರುವ ಆ ಕಾಲದಲ್ಲಿ ೨೦ ವರ್ಷದ ಹಳೆಯದೊಂದು ತಾಂತ್ರಿಕತೆಯನ್ನು ಮೈಗೂಡಿಸಿಕೊಂಡ ಭಾರತವು ಜಗತ್ತೇ ನಿಬ್ಬೇರಗಾಗುವಂತೆ ಮಾಡಿರುವುದು ಭಾರತೀಯರ ಹೆಮ್ಮೆಯ ಸಂಗತಿ.
ಇದನ್ನೂ ಓದಿ: ಕ್ಲಿನಿಕ್ ನಿಭಾಯಿಸುವ ರೊಬೊ ಸೇರಿ ಭಾರತವೇ ಹೊರತಂದಿದೆ ಐದು ಸೂಪರ್ ಎಐ ತಂತ್ರಜ್ಞಾನ
ಭಾರತೀಯರು ಹೊಸ ಅನ್ವೇಷಣೆಗೆ ಮುನ್ನುಗ್ಗದಂತೆ ತಡೆಯುತ್ತಿರುವುದು ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ. ಹತ್ತು ರೂಪಾಯಿ ಹಾಕಿದರೆ ಹನ್ನೊಂದು ರೂಪಾಯಿ ಗಳಿಸಲೇಬೇಕು. ಇಲ್ಲವಾದರೆ, ನೀನು ಅಪ್ರಯೋಜಕ, ಅನುತ್ತೀರ್ಣನೆಂದು ತೀರ್ಮಾನಿಸಿ ಬಿಡುತ್ತೇವೆ. ರಿಸ್ಕ್ ತೆಗೆದುಕೊಂಡು ಮುನ್ನುಗ್ಗುವುದನ್ನು ಹೇಳಿಕೊಡದೇ ಇದ್ದರೂ, ಕನಿಷ್ಠದಲ್ಲೇ ಬಲಿಷ್ಠವಾದುದನ್ನು ನಿರ್ಮಿಸುವ ಕಲೆ ಮಾತ್ರ ಭಾರತೀಯರಿಗೇ ಮಾತ್ರ ಸಿದ್ಧಿಸಿರುವುದು. ಮುಗಿದು ಹೋದ ಬೋರ್ನವಿಟಾ ಬಾಟಲಿಯನ್ನೇ ಮಸಾಲೆ ಡಬ್ಬವನ್ನಾಗಿಸುವ ನಮಗೆ, ಯಾವುದೇ ತಂತ್ರಜ್ಞಾನ ಒಮ್ಮೆ ಕೈಗೆ ಸಿಕ್ಕಿದರೆ ಅದರ ಪೂರ್ತಿ ಲಾಭವನ್ನು ಗಳಿಸದೇ ಬಿಡುವುದಿಲ್ಲ.
AI ಅನ್ನು ಯಾರೋ ಹುಟ್ಟಿಸಿರಬಹುದು, ಆದರೆ ಅದನ್ನು ಬೆಳೆಸಿಕೊಂಡು ಹೋಗಲಿರುವವರು ಭಾರತೀಯರೇ. AI ಆಧರಿತ ಸಾವಿರಾರು ಹೊಸ ಐಡಿಯಾಗಳು ಭಾರತದಲ್ಲೇ ರೂಪುಗೊಳ್ಳಲಿವೆ ಮತ್ತು ಅದಕ್ಕೆ ಬೇಕಾದಂತಹ ಬಳಕೆದಾರರೂ ನಾವೇ. ಉದಾಹರಣೆಗೆ, ಸಾವಿರಾರು ಭಾಷೆಗಳಿರುವ ಭಾರತದಲ್ಲಿ ನಿರಂತರ ಸಂವಹನದ ಕೊರತೆಯನ್ನು ಯಾವುದಾದರೂ ತಂತ್ರಜ್ಞಾನ ನಿವಾರಿಸಬಲ್ಲುದಾದರೆ ಅದು AI ತಂತ್ರಜ್ಞಾನ. ಅದನ್ನು ಸಂಪೂರ್ಣ ಭಾರತೀಕರಣ ಮಾಡಲಿರುವವರೂ ನಾವೇ.
ಹಾಗಾಗಿ AI ತಂತ್ರಜ್ಞಾನದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಈಗ ಮೂರು ರಸ್ತೆಗಳು ಸಂಧಿಸುವ ಜಾಗದಲ್ಲಿ ನಿಂತಿದೆ. ಅದು ಯಾವುದಾದರೂ ಒಂದು ದಾರಿಯನ್ನು ಆಯ್ದುಕೊಳ್ಳಲೇ ಬೇಕು. ಹಾಗಾದರೆ ಅದು ಯಾವ ರೀತಿಯಲ್ಲಿ ಯಾರು ಯಾರಿಗೆ ಬದಲಾಗಬಹುದು ಅನ್ನುವುದನ್ನು ಊಹಿಸೋಣ.
ನನಗೆ ಜಾಸ್ತಿ ಮಾತನಾಡಲು, ತಂಡದಲ್ಲಿ ಕುಳಿತು ಹೊಸ ಐಡಿಯಾಗಳನ್ನು ವಿವರಿಸಲು ಕಷ್ಟವಾಗುತ್ತದೆ. ಆದರೆ ಯಾವುದೇ ಟೆಕ್ನಿಕಲ್ ಕೆಲಸ ಕೊಡಿ, ಮಾಡಿ ಬಿಸಾಕುತ್ತೇನೆ ಎಂಬ ಮನಸ್ಥಿತಿಯವರಿಗೆ ಉದ್ಯೋಗ ಪ್ರಾಪ್ತಿ ಸ್ವಲ್ಪ ಕಠಿಣವಾಗುತ್ತದೆ. ಈಗ AI ಬಂದಿರುವುದರಿಂದ ನಾವು ಮೂಲೆಯಲ್ಲಿ ಕೂತು ಕುಟ್ಟಿ ಬಿಸಾಡುವ ಕೋಡಿಂಗ್ಗಳನ್ನು AI ಸುಲಭವಾಗಿ ಮಾಡಬಲ್ಲದು. ಆದರೆ ಭಾವನೆಗಳೊಂದಿಗಿನ ಆಲೋಚನೆಗಳು, ದೃಷ್ಟಿಕೋನಗಳನ್ನು ಮತ್ತು ವಿಚಾರಗಳನ್ನು ಅಭಿವ್ಯಕ್ತಿಸುವವರು ಬೇಕಾಗುತ್ತದೆ. ಮಾತು ಬಲ್ಲವನಿಗೆ ಉದ್ಯೋಗಕ್ಕೆ ಬರವಿಲ್ಲ!
ಇದನ್ನೂ ಓದಿ: ಚೀನಾದ ರೋಬೋಟ್ ನಾಯಿ ವಿವಾದ: ಗಲ್ಗೋಟಿಯಾ ದಿಗ್ವಿಜಯ ಸಂಭ್ರಮವು
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮದಲ್ಲಿರುವ ಹಳೆಯ ಕೆಲಸಗಳು ಒಮ್ಮೆಲೆ ಮಾಯವಾಗಲಾರದು ಆದರೆ ಹೊಸತನಕ್ಕೆ ಒಗ್ಗಿಕೊಳ್ಳಲೇಬೇಕು. ತಿಂಗಳುಗಳ ಕೆಲಸಗಳು ದಿನಗಳಲ್ಲಿ ಬದಲಾಗಬಹುದು. ನಿನ್ನೆ ಮಾಡಿದ್ದನ್ನೇ ಇವತ್ತು ಮಾಡುವಂತಹ ಕೆಲಸಗಳು ನಿಧಾನಕ್ಕೆ AI ಪಾಲಾಗುತ್ತದೆ. ಆದರೆ AI ಇಂದ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರಲಿರುವುದರಿಂದ ಅವುಗಳನ್ನು ಮಾನವನ ನೆಲೆಯಲ್ಲಿ ಪರಿಶೀಲನೆ ಮಾಡುವ ಕ್ಷೇತ್ರ ಪರಿಣಿತರ ಅಗತ್ಯವಿರುತ್ತದೆ.
ಒಟ್ಟಿನಲ್ಲಿ AI ಬಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ನಾಶಮಾಡುತ್ತದೆ ಎಂಬ ಭಯಕ್ಕಿಂತ, ಅದನ್ನು ಹೊಸ ಹಂತಕ್ಕೆ ಎತ್ತಿಕೊಂಡು ಹೋಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಹೆಚ್ಚಾಗಬೇಕು. ಇತಿಹಾಸ ಹೇಳುವುದೇನಂದರೆ-ಹೊಸ ತಂತ್ರಜ್ಞಾನ ಬಂದಾಗ ಹಳೆಯ ಪದ್ಧತಿಗಳು ಬದಲಾಗುತ್ತವೆ; ಆದರೆ ಮನುಷ್ಯನ ಅವಶ್ಯಕತೆ ಎಂದಿಗೂ ಕಡಿಮೆಯಾಗುವುದಿಲ್ಲ. ಬದಲಾವಣೆಗೆ ಸಿದ್ಧರಿರುವವರೇ ಮುಂದಿನ ದಶಕವನ್ನು ರೂಪಿಸುತ್ತಾರೆ.
ಬೆಂಗಳೂರಿನಂತಹ ಸಿಲಿಕಾನ್ ಸಿಟಿಗಳು ಮಲಗುವುದಿಲ್ಲ; ಅವು ರೂಪಾಂತರಗೊಳ್ಳುತ್ತವೆ. ಕೀಬೋರ್ಡ್ ಕುಟ್ಟುವ ಕೈಗಳಿಗೆ ಈಗ ಆಲೋಚಿಸುವ ತಲೆ, ಪ್ರಶ್ನಿಸುವ ಮನಸ್ಸು, ವಿವರಿಸುವ ಕೌಶಲ್ಯ, ಮತ್ತು ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕೂಡ ಸೇರ್ಪಡೆಯಾಗಬೇಕು. ಕೋಡ್ ಬರೆಯುವವರಿಗಿಂತ, ಸಮಸ್ಯೆ ಗುರುತಿಸಿ ಅದರ ಪರಿಹಾರವನ್ನು ರೂಪಿಸುವವರಿಗೇ ಹೆಚ್ಚಿನ ಬೆಲೆ ಸಿಗಲಿದೆ.
AI ಒಂದು ಸಾಧನ ಮಾತ್ರ-ದಿಕ್ಕು ನೀಡುವುದು ಮನುಷ್ಯ. ಅದನ್ನು ಬಳಸಿಕೊಂಡು ಹೊಸ ಉತ್ಪನ್ನಗಳು, ಹೊಸ ಸೇವೆಗಳು, ಹೊಸ ಉದ್ಯೋಗಗಳು ಹುಟ್ಟಲಿವೆ. ವಿಶೇಷವಾಗಿ ಭಾರತದಂತಹ ಬಹುಭಾಷಾ, ಬಹುಸಂಸ್ಕೃತಿಯ ದೇಶದಲ್ಲಿ AI ತಂತ್ರಜ್ಞಾನವನ್ನು ಭಾರತೀಕರಣ ಮಾಡುವ ಅವಕಾಶ ಅಪಾರವಾಗಿದೆ. ಭಾಷಾ ಅಂತರವನ್ನು ನೀಗಿಸುವುದು, ಶಿಕ್ಷಣವನ್ನು ಸುಲಭಗೊಳಿಸುವುದು, ಆರೋಗ್ಯ ಸೇವೆಗಳನ್ನು ವ್ಯಾಪಕಗೊಳಿಸುವುದು-ಇವೆಲ್ಲವೂ AI ಮೂಲಕ ಸಾಧ್ಯ.
ಇದನ್ನೂ ಓದಿ: ಎಐ ಬೆಳವಣಿಗೆ ಕಾರಣಕ್ಕೆ ಅಮೆರಿಕದಲ್ಲಿ ವಿದ್ಯುತ್ ವ್ಯತ್ಯಯ, ಗೂಗಲ್ ಮಾಜಿ ಸಿಇಒ ಎರಿಕ್ ಸ್ಮಿತ್ ಎಚ್ಚರಿಕೆ
ಹೀಗಾಗಿ, ಈ ಸಂಕ್ರಮಣದ ಹಂತದಲ್ಲಿ ನಾವು ಭಯದಿಂದ ಹಿಂದೆ ಸರಿಯಬಾರದು; ಬದಲಿಗೆ ಕಲಿಯಬೇಕು, ಹೊಂದಿಕೊಳ್ಳಬೇಕು, ಮತ್ತು ನಾಯಕತ್ವ ವಹಿಸಬೇಕು. ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು, ಸಂವಹನ ಸಾಮರ್ಥ್ಯವನ್ನು ವೃದ್ಧಿಸಿ, ಸೃಜನಶೀಲತೆಯನ್ನು ಬೆಳೆಸಿಕೊಂಡರೆ-AI ಯುಗದಲ್ಲಿ ಭಾರತೀಯರು ಕೇವಲ ಬಳಕೆದಾರರಲ್ಲ, ಮಾರ್ಗದರ್ಶಕರಾಗಬಹುದು.
ಬದಲಾವಣೆ ಅನಿವಾರ್ಯ. ಆದರೆ ಅದನ್ನು ಅವಕಾಶವಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.

(ಲೇಖಕರು: ಪ್ರವೀಣ್ ಕುಮಾರ್ ಶೆಟ್ಟಿ, ಶಾನ್ಕಟ್. ಇವರು ಡಿಪ್ಲೊಮಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿತು, ಐಟಿ ಪದವಿ ಪಡೆದು, ಕಳೆದ ಹಲವಾರು ವರ್ಷಗಳಿಂದ ತೈಲೋತ್ಪನ್ನ ಸಂಬಂಧಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆನಿವಾಸಿ ಕನ್ನಡ ಕೂಟದಲ್ಲಿ ನಿರಂತರ ಭಾಗವಹಿಸುವಿಕೆ ಮತ್ತು ಕನ್ನಡ ಸಾಹಿತ್ಯಗಳಲ್ಲಿ ಆಸಕ್ತಿ. ಏಷಿಯನ್ ಕ್ರಿಕೆಟ್ ಕೌನ್ಸಿಲಿನ ಮಾನ್ಯತೆ ಪಡೆದ ಲೆವೆಲ್ ಒನ್ ತೀರ್ಪುಗಾರ).
ಗಮನಿಸಿ: ಕೃತಕ ಬುದ್ಧಿಮತ್ತೆ ಕುರಿತು ಮತ್ತಷ್ಟು ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications