AI Impact Summit 2026: ಕ್ಲಿನಿಕ್ ನಿಭಾಯಿಸುವ ರೊಬೊ ಸೇರಿ ಭಾರತವೇ ಹೊರತಂದಿದೆ ಐದು ಸೂಪರ್ ಎಐ ತಂತ್ರಜ್ಞಾನ
AI Impact Summit 2026: ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕುರಿತಾದ ಚರ್ಚೆಗಳಿಗೆ ಪ್ರಮುಖ ವೇದಿಕೆಯಾಗುತ್ತಿದೆ. ಈ ಶೃಂಗಸಭೆಯು ರಾಜಕೀಯ ನಾಯಕರು, ತಂತ್ರಜ್ಞಾನ ದಿಗ್ಗಜ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸಂಶೋಧಕರನ್ನು ಈ ವೇದಿಕೆಯಲ್ಲಿ ಒಗ್ಗೂಡಿಸಿದೆ. ಈ ಶೃಂಗಸಭೆಯಲ್ಲಿ ಮೇಡ್ ಇನ್ ಇಂಡಿಯಾ ಹೆಮ್ಮೆ ಮೂಡಿಸುವ ಪ್ರಮುಖ ಎಐ ಉತ್ಪನ್ನಗಳು ನಿಜಕ್ಕೂ ಮನಸ್ಸನ್ನು ಗೆದ್ದಿವೆ.
1. EkaScribe
ಭಾರತದ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಲ್ಲಿ ವೈದ್ಯರು ಸಾಕಷ್ಟು ಸಮಯವನ್ನು ರೋಗಿಗಳೊಂದಿಗೆ ಮಾತನಾಡುವುದಕ್ಕಿಂತ ಹೆಚ್ಚು ದಾಖಲಾತಿ ಕೆಲಸಗಳಲ್ಲಿ ವ್ಯಯಿಸುತ್ತಾರೆ. ಕೈಯಾರೆ ಟೈಪಿಂಗ್ ಮಾಡುವುದು, ದಾಖಲಾತಿ ನಿರ್ವಹಣೆ, ಔಷಧ ಚೀಟಿ ಬರೆಯುವುದು ಮುಂತಾದ ಆಡಳಿತಾತ್ಮಕ ಹೊರೆಗಳಿಂದ ವೈದ್ಯರ ಮೇಲೆ ಒತ್ತಡವೂ ಹೆಚ್ಚುತ್ತದೆ. ಈ ಎಲ್ಲ ಸಮಸ್ಯೆಗೆ ಏಕಸ್ಕ್ರೈಬ್ ಪರಿಹಾರವಾಗಿ ಬಂದಿದೆ. ಇದು ವೈದ್ಯರ ಮಾತುಕತೆಯನ್ನು ಕೇಳಿ, ಸ್ವಯಂಚಾಲಿತವಾಗಿ ಎಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆ ಟಿಪ್ಪಣಿಗಳನ್ನು ಸೃಷ್ಟಿಸುತ್ತದೆ. ಇ ಪ್ರಿಸ್ಕ್ರಿಪ್ಷನ್ ತಯಾರಿಸುತ್ತದೆ. ರೋಗಿಯ ವೈದ್ಯಕೀಯ ಇತಿಹಾಸವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವುದು ಮಾತ್ರವಲ್ಲದೆ, ಇದರಿಂದ ವೈದ್ಯರು ಕೀಬೋರ್ಡ್ ಮುಟ್ಟದೇ ರೋಗಿಯತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.

ಭಾರತದ ಆರೋಗ್ಯ ಕ್ಷೇತ್ರದ ಸವಾಲುಗಳಲ್ಲಿ ಭಾಷಾ ವೈವಿಧ್ಯ ಕೂಡ ಒಂದು. ಹಲವಾರು ವೈದ್ಯರು ಮತ್ತು ರೋಗಿಗಳು ಹಿಂದಿ-ಇಂಗ್ಲಿಷ್ ಮಿಶ್ರ ಭಾಷೆಯಲ್ಲಿ ಮಾತನಾಡುತ್ತಾರೆ. ಕೆಲವರು ಪ್ರಾದೇಶಿಕ ಉಚ್ಚಾರಣೆ ಅಥವಾ ಸ್ಥಳೀಯ ಪದಪ್ರಯೋಗ ಬಳಸುತ್ತಾರೆ. EkaScribeಗೆ ವಿಶೇಷವಾಗಿ ಭಾರತೀಯ ಕ್ಲಿನಿಕಲ್ ವಲಯಕ್ಕೆ ತರಬೇತಿ ನೀಡಲಾಗಿದೆ. ಇದು ಹಿಂದಿ ಹಾಗೂ ಇಂಗ್ಲಿಷ್ ಮಿಶ್ರ ಸಂಭಾಷಣೆಗಳನ್ನು ಅರ್ಥಮಾಡಿಕೊಳ್ಳುತ್ತದೆ. ಬಹುಭಾಷಾ ದಾಖಲಾತಿಗಳನ್ನು ಸೃಷ್ಟಿಸುತ್ತದೆ. ಇದು ಗ್ರಾಮೀಣ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಸಮಾನವಾಗಿ ಉಪಯುಕ್ತವಾಗಿದೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ವಿಶೇಷ ಪದಸಂಪತ್ತಿಗೆ ಅನುಗುಣವಾಗಿ ತರಬೇತಿ ಪಡೆಯಲಾಗಿದೆ. ಹೀಗಾಗಿ ಸಾಮಾನ್ಯ ಎಐ ಮಾದರಿಗಳಿಗಿಂತ ಇದು ಹೆಚ್ಚು ನಿಖರ, ಸುರಕ್ಷಿತ ಮತ್ತು ಭಾರತೀಯ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಿದೆ.
ಬಳಕೆದಾರರ ಪ್ರಕಾರ ದಿನಕ್ಕೆ ಒಂದು ಗಂಟೆಗೂ ಅಧಿಕ ಆಡಳಿತಾತ್ಮಕ ಕೆಲಸದಲ್ಲಿ ಉಳಿತಾಯವಾಗುತ್ತದೆ. ರೋಗಿಗಳೊಂದಿಗೆ ಹೆಚ್ಚು ಗುಣಮಟ್ಟದ ಸಂವಹನ ನಡೆಸಬಹುದು. ದೋಷರಹಿತ ಡಿಜಿಟಲ್ ದಾಖಲೆ ಮಾಡಬಹುದು. ಇವು ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿವೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಇದು ಪ್ರಮುಖ ಹೆಜ್ಜೆಯಾಗಿ ಇದನ್ನು ಪರಿಗಣಿಸಲಾಗಿದೆ.ಸಮಯ ಉಳಿತಾಯ ಮಾಡುತ್ತದೆ. ಭಾರತದಲ್ಲಿ ಅಭಿವೃದ್ಧಿಯಾದ, ಭಾರತೀಯ ಸನ್ನಿವೇಶಕ್ಕೆ ತಕ್ಕಂತೆ ರೂಪುಗೊಂಡಿರುವ ಈ ಉತ್ಪನ್ನವು ಜಾಗತಿಕ ಮಟ್ಟದಲ್ಲಿಯೂ ಗಮನ ಸೆಳೆಯುವ ಸಾಮರ್ಥ್ಯ ಹೊಂದಿದೆ.
2. Ottobots
ಆರೋಗ್ಯ ಸೇವೆ, ಕೈಗಾರಿಕಾ ಕ್ಯಾಂಪಸ್‌ಗಳು ಹಾಗೂ ನಗರ ಪ್ರದೇಶಗಳಲ್ಲಿ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು 'ಮೇಡ್ ಇನ್ ಇಂಡಿಯಾ' ರೋಬೋಟಿಕ್ಸ್ ಮತ್ತು ಎಐ ತಂತ್ರಜ್ಞಾನಗಳ ಮೂಲಕ ಹೇಗೆ ಪರಿವರ್ತಿಸಬಹುದು ಎಂಬುದನ್ನು Ottonomy Inc ಸಂಸ್ಥೆ ಪ್ರದರ್ಶಿಸಿದೆ. ಈ ಇಕೊಸಿಸ್ಟಮ್‌ನಲ್ಲಿ ಲೆವೆಲ್-4 ಸ್ವಯಂಚಾಲಿತ ಡೆಲಿವರಿ ರೋಬೋಟ್‌ಗಳಾದ 'Ottobots' ಡ್ರೋನ್ ಲಾಜಿಸ್ಟಿಕ್ಸ್ ಸಾಮರ್ಥ್ಯಗಳನ್ನು ಒಗ್ಗೂಡಿಸಲಾಗಿದೆ. ಇದು ಒಳಾಂಗಣ ಮತ್ತು ಹೊರಾಂಗಣ ಪರಿಸರಗಳಲ್ಲಿ ಮಾನವ ಹಸ್ತಕ್ಷೇಪವಿಲ್ಲದೆ ಸರಕುಗಳ ನಿರಂತರ, ಸುಗಮ ಮತ್ತು ಸುರಕ್ಷಿತ ಸಾಗಣೆಯನ್ನು ಸಾಧ್ಯವಾಗಿಸುತ್ತದೆ ಎಂದು ಕಂಪನಿ ತಿಳಿಸಿದೆ.
'Ottobots'ಗಳು ಲೆವೆಲ್-4 ಸ್ವಯಂಚಾಲಿತ ರೋಬೋಟ್‌ಗಳಾಗಿದ್ದು, ಆಸ್ಪತ್ರೆಗಳ ಕಾರಿಡಾರ್‌ಗಳು, ಎಲಿವೇಟರ್‌ಗಳು, ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಸಹ ಸುಗಮವಾಗಿ ಸಂಚರಿಸಲು ಸಾಮರ್ಥ್ಯ ಹೊಂದಿವೆ. ಇವು ಎಐ ಆಧಾರಿತ ತಂತ್ರಾಂಶ ಬಳಸಿ ಸುತ್ತಮುತ್ತಲಿನ ಪರಿಸರವನ್ನು ಗುರುತಿಸಿ, ಬದಲಾವಣೆಗೆ ಹೊಂದಿಕೊಂಡು ನೈಜ ಸಮಯದಲ್ಲಿ ತೀರ್ಮಾನಗಳನ್ನು ಕೈಗೊಳ್ಳುತ್ತವೆ. ಭಾರತದ ಈ ರೋಬೋಟ್ಸ್ ಅಮೆರಿಕದ ಆಸ್ಪತ್ರೆಗಳು ಮತ್ತು ಜಾಗತಿಕ ಕೈಗಾರಿಕಾ ಘಟಕಗಳಲ್ಲಿ ವಿಶ್ವಮಟ್ಟದ ಆಟೋಮೇಶನ್ ಸಾಧಿಸಬಹುದು ಎಂಬುದನ್ನು ನಾವು ಸಾಬೀತುಪಡಿಸುತ್ತಿದ್ದೇವೆ," ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಸಿಇಒ ರಿತುಕರ್ ವಿಜಯ್ ಹೇಳಿದ್ದಾರೆ.
ಈ ತಂತ್ರಜ್ಞಾನದಿಂದ ಆಸ್ಪತ್ರೆಗಳಲ್ಲಿ ಔಷಧಿ ವಿತರಣೆ, ಕೈಗಾರಿಕಾ ಘಟಕಗಳಲ್ಲಿ ಸರಕು ಸಾಗಣೆ ಮತ್ತು ನಗರ ಪ್ರದೇಶಗಳಲ್ಲಿ ಕೊನೆಯ ಮೈಲಿ ಡೆಲಿವರಿ ಸೇವೆಗಳು ಹೆಚ್ಚು ವೇಗವಾಗಿ ಹಾಗೂ ದಕ್ಷವಾಗಿ ನಡೆಯುವ ನಿರೀಕ್ಷೆ ಇದೆ. ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನೀಡಿದ ಈ ಪ್ರದರ್ಶನ, ಭಾರತದಲ್ಲಿ ಅಭಿವೃದ್ಧಿಯಾದ ರೋಬೋಟಿಕ್ಸ್ ಮತ್ತು ಎಐ ತಂತ್ರಜ್ಞಾನಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲವು ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

3. Sarvam Kaze
ಎಐ ತಂತ್ರಜ್ಞಾನ ವೇಗವಾಗಿ ವಿಸ್ತರಿಸುತ್ತಿರುವ ಈ ಕಾಲದಲ್ಲಿ ಸ್ಮಾರ್ಟ್ ಗ್ಲಾಸ್‌ಗಳು ಹೊಸ ತಲೆಮಾರಿನ ಗ್ಯಾಜೆಟ್‌ಗಳಾಗಿ ಹೊರಹೊಮ್ಮಿವೆ. ಮೆಟಾ ರೇಬ್ಯಾನ್ ಗ್ಲಾಸ್‌ಗಳ ನಂತರ ಈಗ ಮೇಡ್ ಇನ್ ಇಂಡಿಯಾ ಪರಿಹಾರವಾಗಿ ಸರ್ವಂ ಕಜೆ (Sarvam Kaze) ಸ್ಮಾರ್ಟ್ ಗ್ಲಾಸ್‌ಗಳು ಗಮನ ಸೆಳೆಯುತ್ತಿವೆ. ಮೆಟಾ ಗ್ಲಾಸ್‌ಗಳಂತೆಯೇ Sarvam Kaze ಕೂಡ ಕೇಳಲು, ಅರ್ಥೈಸಲು, ಪ್ರತಿಕ್ರಿಯಿಸಲು ಹಾಗೂ ದೃಶ್ಯಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತದೆ. ಎಐ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯ ಇದಕ್ಕೆ ಇದೆ. ಬಳಕೆದಾರನು ನೋಡುವುದನ್ನು "ಕಂಡು" ಅದರ ವಿವರಣೆ ನೀಡುವ ಫೀಚರ್ ಇದರಲ್ಲಿದೆ. ಈ ಗ್ಲಾಸ್‌ಗಳಲ್ಲಿ ವಾಯ್ಸ್ ಕಂಟ್ರೋಲ್, ಕ್ಯಾಮೆರಾ ಮತ್ತು ಎಐ ಆಧಾರಿತ ವೈಶಿಷ್ಟ್ಯಗಳು ಕೂಡ ಲಭ್ಯ. ಸರ್ವಂ ಕಜೆ ಗ್ಲಾಸ್‌ಗಳ ಪೂರ್ಣ ವೈಶಿಷ್ಟ್ಯಗಳು ಮೇ ತಿಂಗಳಲ್ಲಿ ಅಧಿಕೃತ ಬಿಡುಗಡೆ ನಂತರ ಲಭ್ಯವಾಗಲಿವೆ. ಭಾರತೀಯ ಬಳಕೆದಾರರಿಗೆ ಸ್ಥಳೀಯ ಭಾಷಾ ಬೆಂಬಲ ಹಾಗೂ ರಿಯಲ್-ಟೈಮ್ ಎಐ ಸಹಾಯವೇ ಇದರ ಮುಖ್ಯ ಆಕರ್ಷಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಗ್ಲಾಸ್‌ಗಳ ಬೆಲೆ ಇನ್ನೂ ಪ್ರಕಟವಾಗಿಲ್ಲ.
ಸರ್ವಂ ತಂಡದ ಕುಮಾರ್ ಅವರ ಮಾತಿನಲ್ಲಿ ಈ ತಂತ್ರಜ್ಞಾನವು "ಬುದ್ಧಿಮತ್ತೆಯನ್ನು ಸ್ಕ್ರೀನ್‌ನಿಂದ ನೈಜ ಜಗತ್ತಿಗೆ ಸ್ಥಳಾಂತರಿಸುವ" ದೃಷ್ಟಿಕೋನ ಹೊಂದಿದೆ. ಅಂದರೆ, ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗಳಲ್ಲಿರುವ ಎಐ ಸಾಮರ್ಥ್ಯವನ್ನು ನೇರವಾಗಿ ಬಳಕೆದಾರನ ದೈನಂದಿನ ಜೀವನಕ್ಕೆ ತರಲು ಉದ್ದೇಶಿಸಿದೆ. ಇದು ಎಐ ವೇಯರೇಬಲ್ ಗ್ಯಾಜೆಟ್‌ಗಳ ಭವಿಷ್ಯವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುವ ಸಾಧ್ಯತೆ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾ ಎಐ ಗ್ಲಾಸ್‌ಗಳು ಹೇಗೆ ಪ್ರತಿಕ್ರಿಯೆ ಪಡೆಯುತ್ತವೆ ಎಂಬುದು ಕಾದು ನೋಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಈ ಗ್ಲಾಸ್ ಧರಿಸಿ ಅನುಭವ ಪಡೆದಿದ್ದಾರೆ.
4. Sarvam Edge
ಬೆಂಗಳೂರು ಮೂಲದ ಎಐ ಸ್ಟಾರ್ಟ್‌ಅಪ್ Sarvam AI ಸ್ವದೇಶಿ ಎಐ ಮೂಲಸೌಕರ್ಯದ ಪರಿಕಲ್ಪನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 'ಸರ್ವಂ ಎಡ್ಜ್' (Sarvam Edge) ಎಂಬ ಹೊಸ ಆನ್-ಡಿವೈಸ್ ಎಐ ವೇದಿಕೆಯನ್ನು ಪರಿಚಯಿಸಿದೆ. ಈ ಹೊಸ ಮಾದರಿ ಸಾಮಾನ್ಯ ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಸಂಪೂರ್ಣವಾಗಿ ಆಫ್‌ಲೈನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಧ್ವನಿ ಗುರುತಿಸುವಿಕೆ, ಅನುವಾದ ಹಾಗೂ ಟೆಕ್ಸ್ಟ್-ಟು-ಸ್ಪೀಚ್ ಸೇವೆಗಳು ಇಂಟರ್‌ನೆಟ್ ಸಂಪರ್ಕವಿಲ್ಲದೇ ಕಾರ್ಯನಿರ್ವಹಿಸಬಲ್ಲವು ಎಂಬುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ.
ಸಾಮಾನ್ಯವಾಗಿ ಎಐ ಸೇವೆಗಳು ಕ್ಲೌಡ್ ಸರ್ವರ್‌ಗಳ ಮೇಲೆ ಅವಲಂಬಿತವಾಗಿರುತ್ತವೆ. ಉದಾಹರಣೆಗೆ ಗೂಗಲ್ ಜೆಮಿನಿ ಹಾಗೂ ಓಪನ್‌ಎಐ ನಿರ್ಮಿಸಿದ ಚಾಟ್‌ಜಿಪಿಟಿ ಮಾದರಿಗಳು ಹೆಚ್ಚಿನ ಪ್ರಮಾಣದ ಡೇಟಾ ಸೆಂಟರ್‌ಗಳ ಮೇಲೆ ಅವಲಂಬಿತವಾಗಿವೆ. ಆದರೆ 'ಸರ್ವಂ ಎಡ್ಜ್' ಎಐ ನಿರ್ಣಯ ಪ್ರಕ್ರಿಯೆಯನ್ನು ಕ್ಲೌಡ್‌ನಿಂದ ಬಳಕೆದಾರರ ಸಾಧನಗಳಲ್ಲೇ ನಡೆಸುತ್ತದೆ. ಇದರಿಂದ ನಿರಂತರ ಇಂಟರ್‌ನೆಟ್ ಅಗತ್ಯವಿಲ್ಲ. ವೆಚ್ಚವೂ ಕಡಿಮೆ, ಡೇಟಾ ಗೌಪ್ಯತೆ ಹೆಚ್ಚಳ, ಡೇಟಾ ಸೆಂಟರ್‌ಗಳ ಒತ್ತಡ ಕಡಿತ ಸೇರಿದಂತೆ ಹಲವು ಲಾಭಗಳು ದೊರೆಯುತ್ತವೆ. ನೆಟ್ವರ್ಕ್ ಸೌಲಭ್ಯ ಕಡಿಮೆ ಇರುವ ಪ್ರದೇಶಗಳಲ್ಲೂ ಈ ಎಐ ಮಾದರಿ ಕಾರ್ಯನಿರ್ವಹಿಸುವುದರಿಂದ ಗ್ರಾಮೀಣ ಮತ್ತು ಅಲ್ಪ ಸಂಪರ್ಕ ಪ್ರದೇಶಗಳಲ್ಲಿ 'ಸ್ಮಾರ್ಟ್ ಸೇವೆಗಳು' ಒದಗಿಸಲು ಸಾಧ್ಯವಾಗಲಿದೆ. ಭಾರತದ ತಂತ್ರಜ್ಞಾನ ತಜ್ಞರು ಎಐ ಸ್ವಾವಲಂಬನೆ ಕುರಿತು ಒತ್ತಿ ಹೇಳುತ್ತಿರುವ ಸಮಯದಲ್ಲಿ ಈ ಮಾದರಿಯು ಮಹತ್ವದ ಹೆಜ್ಜೆ ಎನ್ನಲಾಗಿದೆ.
5. Chewie: 40 ಗಂಟೆಗಳಲ್ಲಿ ಮನೆ ತ್ಯಾಜ್ಯ ಮಣ್ಣಾಗಿ ಪರಿವರ್ತನೆ
ನಗರದ ಅಡುಗೆಮನೆಗಳಲ್ಲಿ ದಿನನಿತ್ಯ ಸೃಷ್ಟಿಯಾಗುವ ತ್ಯಾಜ್ಯ ನಿರ್ವಹಣೆ ದೊಡ್ಡ ಸವಾಲಾಗಿರುವಾಗ, ಬೆಂಗಳೂರು ಮೂಲದ ಡೀಪ್‌ಟೆಕ್ ಸ್ಟಾರ್ಟ್‌ಅಪ್ ಮ್ಯಾಂಕಾಂಬ್ ಟೆಕ್ನಾಲಜೀಸ್ (Mankomb Technologies) ಈ ಸಮಸ್ಯೆಗೆ ಎಐ ಆಧಾರಿತ ಸ್ಮಾರ್ಟ್ ಪರಿಹಾರವನ್ನು ಪರಿಚಯಿಸಿದೆ. ಚೆವಿ (Chewie) ಎಂಬ ಎಐ ಚಾಲಿತ ತ್ಯಾಜ್ಯ ನಿರ್ವಹಣಾ ಉಪಕರಣವನ್ನು ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪ್ರದರ್ಶಿಸಲಾಗಿದ್ದು, ಮನೆಗಳಲ್ಲಿನ ತ್ಯಾಜ್ಯವನ್ನು ಪೋಷಕ ಮಣ್ಣಾಗಿ ಪರಿವರ್ತಿಸುವ ಕ್ರಾಂತಿಕಾರಿ ಸಾಧನವೆಂದು ಕಂಪನಿ ಹೇಳಿಕೊಂಡಿದೆ. ಇದು ದಿನನಿತ್ಯದ ತರಕಾರಿ ಕಸ, ಆಹಾರ ಅವಶೇಷಗಳನ್ನು ಇದರೊಳಗೆ ಹಾಕಿದ ಬಳಿಕ ಎಐ ನಿಯಂತ್ರಿತ ವ್ಯವಸ್ಥೆ ತಾಪಮಾನ, ತೇವಾಂಶ ಹಾಗೂ ಗಾಳಿಯ ಹರಿವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸಿ, ಕೇವಲ 8ರಿಂದ 40 ಗಂಟೆಗಳ ಒಳಗೆ ಇದನ್ನು ಮಣ್ಣಿನ ರೂಪಕ್ಕೆ ಪರಿವರ್ತಿಸುತ್ತದೆ.

ಈ ಸಾಧನದಲ್ಲಿ ಕಂಪ್ಯೂಟರ್ ವಿಸನ್ ತಂತ್ರಜ್ಞಾನ ಬಳಸಿ ತ್ಯಾಜ್ಯದ ಪ್ರಕಾರವನ್ನು ಗುರುತಿಸಿ, ಬೇಡವಾದ ವಸ್ತುಗಳನ್ನು ಗುರುತಿಸುವ ವ್ಯವಸ್ಥೆಯೂ ಇದೆ. ತಿಂಗಳಿಗೆ ಸುಮಾರು 120 ಕೆ.ಜಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಈ ಯಂತ್ರ ಮಧ್ಯಮ ಗಾತ್ರದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ದುರ್ವಾಸನೆ ತಡೆಗಟ್ಟಲು ಸೀಲ್ಡ್ ವಿನ್ಯಾಸ, ಸಕ್ರಿಯ ಏರೇಶನ್ ಹಾಗೂ ಫಿಲ್ಟರ್ ವ್ಯವಸ್ಥೆಯೂ ಹೊಂದಿದೆ. ಸದ್ಯ Chewie Max ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿರುವ ಈ ಉಪಕರಣದ ಬೆಲೆ ₹37,999 ಆಗಿದ್ದು. ಸಾಮಾನ್ಯ ಜೀವನಶೈಲಿಯಲ್ಲಿ ಸುಸ್ಥಿರತೆಯನ್ನು ಅಳವಡಿಸಲು ಎಐ ಆಧಾರಿತ ಉಪಕರಣಗಳ ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆ, Chewie ನಗರ ಮನೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಹೊಸ ದಿಕ್ಕು ತೋರಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ












Click it and Unblock the Notifications