Power Crisis: ಎಐ ಬೆಳವಣಿಗೆ ಕಾರಣಕ್ಕೆ ಅಮೆರಿಕದಲ್ಲಿ ವಿದ್ಯುತ್ ವ್ಯತ್ಯಯ, ಗೂಗಲ್ ಮಾಜಿ ಸಿಇಒ ಎರಿಕ್ ಸ್ಮಿತ್ ಎಚ್ಚರಿಕೆ
ಎಐ ಕಾರಣದಿಂದ ಅಮೆರಿಕದಲ್ಲಿ ವಿದ್ಯುತ್ ಕೊರತೆ ಎದುರಾಗುವ ಬಗ್ಗೆ ಗೂಗಲ್ ಮಾಜಿ ಸಿಇಒ ಎರಿಕ್ ಸ್ಮಿತ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಇಡೀ ಜಗತ್ತಿನಲ್ಲೇ ಅಮೆರಿಕ ಅತ್ಯಂತ ವೇಗವಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಳವಡಿಸಿಕೊಂಡು ಹೋಗುತ್ತಿದೆ. ಹೀಗಾಗಿ ಅಮೆರಿಕದಲ್ಲಿ ಇದೀಗ ವಿದ್ಯುತ್ ಬೇಡಿಕೆ ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಈ ಬೇಡಿಕೆಯನ್ನು ಅಮೆರಿಕ ಸರ್ಕಾರ ನಿಭಾಯಿಸಲು ಮುಂದಿನ ದಿನಗಳಲ್ಲಿ ಮತ್ತಷ್ಟು ಒದ್ದಾಡುವ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ದಟ್ಟವಾಗಿದೆ. ಇದೇ ವಿಚಾರವಾಗಿ ಮಾತನಾಡಿರುವ ಗೂಗಲ್ ಮಾಜಿ ಸಿಇಒ ಎರಿಕ್ ಸ್ಮಿತ್, ಎಐ ಕಾರಣದಿಂದ ವಿದ್ಯುತ್ ಕೊರತೆ ಎದುರಾಗುವ ಮುನ್ನೆಚ್ಚರಿಕೆ ನೀಡಿದ್ದಾರೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆಯ ವೇಗದ ಬೆಳವಣಿಗೆಗೆ ತಕ್ಕಂತೆ, ಅಮೆರಿಕ ಈಗ ಸುಮಾರು 92 ಗಿಗಾವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ ಎರಿಕ್ ಸ್ಮಿತ್ ಅವರು. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಒಂದನ್ನ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಭವಿಷ್ಯದ ಬಗ್ಗೆ ಕಳವಳ ಹಂಚಿಕೊಂಡಿರುವ ಎರಿಕ್ ಸ್ಮಿತ್ ವಿದ್ಯುತ್ ಕೊರತೆ ಆದಷ್ಟು ಬೇಗ ನಿಭಾಯಿಸಬೇಕು ಎಂದಿದ್ದಾರೆ. ಎಐ ನಿಭಾಯಿಸಲು ಡೇಟಾ ಕೇಂದ್ರಗಳು ಹಗಲು & ರಾತ್ರಿ ಕೆಲಸ ಮಾಡಬೇಕಿದೆ ಮತ್ತು ಹೀಗಿದ್ದಾಗ ಕಂಪ್ಯೂಟೇಶನ್, ಕೂಲಿಂಗ್ ವ್ಯವಸ್ಥೆಯು 24/7 ಕೆಲಸ ಮಾಡಬೇಕಾದ ಹಿನ್ನೆಲೆ ಭಾರಿ ಪ್ರಮಾಣದಲ್ಲಿ ವಿದ್ಯುತ್ ಅಗತ್ಯತೆ ಇದೆ. ಅದರಲ್ಲೂ, ಭವಿಷ್ಯದಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಹಿನ್ನೆಲೆ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ ಕೈಗೊಳ್ಳಲು ಎರಿಕ್ ಸ್ಮಿತ್ ಸಲಹೆ ನೀಡಿದ್ದಾರೆ.

ವಿದ್ಯುತ್ ಉತ್ಪಾದನೆ ವೆಚ್ಚದಲ್ಲೂ ಏರಿಕೆ
ಈಗ ಲಭ್ಯ ಇರುವ ಅಂಕಿ-ಅಂಶ ಕೂಡ ಇದೇ ಆತಂಕ ಎತ್ತಿ ತೋರಿಸುತ್ತಿವೆ. ಲಾರೆನ್ಸ್ ಬರ್ಕ್ಲಿ ನ್ಯಾಷನಲ್ ಲ್ಯಾಬೊರೇಟರಿ ವರದಿಯ ಪ್ರಕಾರ, 2024ರಲ್ಲಿ ಅಮೆರಿಕದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇಕಡಾ 4.4 ರಷ್ಟು ಡೇಟಾ ಸೆಂಟರ್ ಪಾಲಾಗಿದೆ. ಮತ್ತು ಈ ಪ್ರಮಾಣ 2028ರ ಒಳಗೆ ಶೇಕಡಾ 12ಕ್ಕೆ ಏರಿಕೆ ಕಂಡು ಮುಂದೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಹಾಗೇ ಇನ್ನೊಂದು ಕಡೆ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಸಂಶೋಧಕರು ಅಂದಾಜು ಮಾಡಿರುವಂತೆ, ಡೇಟಾ ಸೆಂಟರ್ಸ್ ಹೆಚ್ಚಾಗಿ ಇರುವ ಮಾರುಕಟ್ಟೆಗಳಲ್ಲಿ ವಿದ್ಯುತ್ ಉತ್ಪಾದನಾ ವೆಚ್ಚ 2030ರ ಒಳಗೆ ಶೇ. 25 ತನಕ ಹೆಚ್ಚಬಹುದು.
ಅಂತರಿಕ್ಷ ಸೌರ ವಿದ್ಯುತ್ ಕಡೆ ಮುಖ
ಟೆಕ್ ಕ್ಷೇತ್ರದ ನಾಯಕರು ಎಚ್ಚರಿಕೆ ಜೊತೆಗೆ ಭವಿಷ್ಯದಲ್ಲಿ ಮನುಷ್ಯರು ಮಾಡಬಹುದಾದ ವಿನೂತನ ಕಾರ್ಯಗಳ ಬಗ್ಗೆ ಕೂಡ ಸಲಹೆ ನೀಡುತ್ತಾರೆ. ಅದೇ ರೀತಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು, ಅಂತರಿಕ್ಷದಲ್ಲಿ ನಿರಂತರ ಸೌರಶಕ್ತಿಯಿಂದ ನಡೆಯುವ, ಆರ್ಬಿಟ್ ಎಂದರೆ ಭೂಮಿ ಕಕ್ಷೆಯಲ್ಲಿ ಆಧರಿತವಾಗಿ ಸುತ್ತುವ ಡೇಟಾ ಸೆಂಟರ್‌ಗಳ ಪರಿಕಲ್ಪನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮುಂದಿನ 20 ವರ್ಷದಲ್ಲಿ ಕಕ್ಷೆಯಲ್ಲಿ ಆಧರಿತವಾಗಿ ಸುತ್ತುವ ಡೇಟಾ ಸೆಂಟರ್‌ಗಳ ಪರಿಕಲ್ಪನೆ ಯಶಸ್ಸು ಕೂಡ ಕಾಣುವ ನಿರೀಕ್ಷೆ ಇದೆ.
ವಿದ್ಯುತ್ ಸಮಸ್ಯೆಯಿಂದ ಭಾರಿ ಹಿನ್ನಡೆ
ಒಟ್ನಲ್ಲಿ ಅಮೆರಿಕ ಈಗ ವಿದ್ಯುತ್ ಕೊರತೆ ಸಮಸ್ಯೆ ಎದುರಿಸುತ್ತಿದ್ದು, ಅದನ್ನ ಸರಿ ಮಾಡಲು ಎಲ್ಲ ರೀತಿಯ ಪ್ರಯತ್ನ ಶುರು ಮಾಡಬೇಕಿದೆ. ಟೆಕ್ ಕ್ಷೇತ್ರದ ತಜ್ಞರು ಕೂಡ ಹಲವು ಸಲಹೆ ನೀಡುತ್ತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಇಡೀ ಜಗತ್ತಿನಾದ್ಯಂತ ಎಲ್ಲಾ ಕೆಲಸವನ್ನು ಮಾಡುವಷ್ಟು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂದ್ರೆ ಎಐ ತಂತ್ರಜ್ಞಾನ ಅಭಿವೃದ್ಧಿ ಹೊಂದಲಿದೆ ಎನ್ನುತ್ತಿದ್ದಾರೆ ತಜ್ಞರು. ಹೀಗಿದ್ದಾಗ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇಲ್ಲದೆ ಜಗತ್ತು ಮುಂದೆ ಸಾಗುವುದೇ ಇಲ್ಲ ಎನ್ನುವ ವಾತಾವರಣವೂ ನಿರ್ಮಾಣ ಆಗಿದ್ದು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಜೊತೆ ಬದುಕಲು ಮನುಷ್ಯರು ಕಲಿಯುತ್ತಿದ್ದಾರೆ. ಅದರಲ್ಲೂ ಶ್ರೀಮಂತ ದೇಶ ಅಮೆರಿಕ ಪ್ರತಿಯೊಂದು ವಿಚಾರದಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಲು ಶುರು ಮಾಡಿದೆ. ಇಂತಹ ಸಮಯದಲ್ಲೇ ವಿದ್ಯುತ್ ಕೊರತೆ ಹಿನ್ನಡೆ ತರುವ ಮುನ್ಸೂಚನೆ ಕೊಡುತ್ತಿದ್ದು, ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications