1000 ಗ್ರಾಮ ಆಡಳಿತಾಧಿಕಾರಿ ನೇಮಕ; ಜಿಲ್ಲಾವಾರು ವಿವರ
ಬೆಂಗಳೂರು, ಜನವರಿ 29: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯಡಿ ಬರುವ ಗ್ರಾಮ ಆಡಳಿತ ಅಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ. ಒಟ್ಟು 1000 ಹುದ್ದೆ ಭರ್ತಿಯಾಗಲಿದ್ದು, ಯಾವ ಜಿಲ್ಲೆಗೆ ಎಷ್ಟು ಹುದ್ದೆ? ಎಂದು ಸಹ ನಿಗದಿ ಮಾಡಲಾಗಿದೆ.
ಈ ಕುರಿತು ಕಲಾವತಿ ಎಸ್. ಎನ್. ಸರ್ಕಾರದ ಉಪ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-2, ಪು&ಪು ನಿರ್ಮಾಣ ಹಾಗೂ ಸಮನ್ವಯ ಶಾಖೆ) ಆದೇಶ ಹೊರಡಿಸಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಪ್ರಸ್ತುತ ವಿವರಗಳನ್ನು ಸಲ್ಲಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಖಾಲಿಯಿರುವ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡುವ ಸಂಬಂಧ ಆರ್ಥಿಕ ಇಲಾಖೆಯು 2023-24, 2024-25 ಹಾಗೂ 2025-26ನೇ ಸಾಲಿಗೆ ವಾರ್ಷಿಕವಾಗಿ 500 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ ಎಂದು ಹೇಳಿದ್ದಾರೆ.
ಎಲ್ಲ ಜಿಲ್ಲೆಗಳಲ್ಲಿ ಮಂಜೂರಾದ ಹುದ್ದೆಗಳು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳಿಗನುಗುಣವಾಗಿ ಪ್ರಸಕ್ತ ಖಾಲಿಯಿರುವ 1820 ಹುದ್ದೆಗಳ 1000 ಹುದ್ದೆಗಳನ್ನು ನೇರನೇಮಕಾತಿಯಡಿ ಭರ್ತಿಮಾಡಿಕೊಳ್ಳಲು ಉದ್ದೇಶಿಸಲಾಗಿರುತ್ತದೆ ಎಂದು ಆದೇಶ ಹೇಳಿದೆ.
ಕಂದಾಯ ಇಲಾಖೆಯಲ್ಲಿ ಮಂಜೂರಾದ ಹುದ್ದೆಗಳು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳು ಹಾಗೂ ಖಾಲಿ ಹುದ್ದೆಯ ಸಂಖ್ಯೆಗಳ (ನೇರ ನೇಮಕಾತಿ ಹಾಗೂ ಮುಂಬಡ್ತಿ ಹುದ್ದೆಗಳನ್ನು ಒಳಗೊಂಡಂತೆ) ಆಯಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ನೀಡಿರುವಂತೆ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿರುವಂತೆ ನಿಯಮಾನುಸಾರ ಸ್ಥಳೀಯ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕವಾಗಿ ನೇರ ಮೀಸಲಾತಿ (Vertical Reservation) ಹಾಗೂ ಸಮತಳ ಮೀಸಲಾತಿಯನ್ನು (Horizontal Reservation) (ನೇರ ನೇಮಕಾತಿ ಹುದ್ದೆಗಳಿಗೆ) ತ:ಖ್ತೆಯನ್ನು ಕೂಡಲೇ ಸಲ್ಲಿಸುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ.
ಯಾವ ಜಿಲ್ಲೆಗೆ ಎಷ್ಟು ಹುದ್ದೆ?: ಆದೇಶದ ಪ್ರಕಾರ ಬೆಂಗಳೂರು ನಗರ 31, ಬೆಂಗಳೂರು ಗ್ರಾಮಾಂತರ 34, ಚಿತ್ರದುರ್ಗ 31, ಕೋಲಾರ 43, ತುಮಕೂರು71, ರಾಮನಗರ 51, ಚಿಕ್ಕಬಳ್ಳಾಪುರ 41, ಶಿವಮೊಗ್ಗ 30, ಮೈಸೂರು 62 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಚಾಮರಾಜನಗರ 54, ಮಂಡ್ಯ 59, ಹಾಸನ 53, ಚಿಕ್ಕಮಗಳೂರು 23, ಕೊಡಗು 6, ಉಡುಪಿ 23, ದಕ್ಷಿಣ ಕನ್ನಡ 49, ಬೆಳಗಾವಿ 62, ವಿಜಯಪುರ 7, ಬಾಗಲಕೋಟೆ 25, ಧಾರವಾಡ 16, ಗದಗ 30 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ.
ಹಾವೇರಿ 32, ಉತ್ತರ ಕನ್ನಡ 8, ಕಲಬುರಗಿ 66, ರಾಯಚೂರು 8, ಕೊಪ್ಪಳ 19, ಬಳ್ಳಾರಿ 19, ಬೀದರ್ 24, ಯಾದಗಿರಿ 10, ವಿಜಯನಗರ 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ರಾಜ್ಯದಲ್ಲಿ ಒಟ್ಟು ಮಂಜೂರಾದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು 9837, ಭರ್ತಿಯಾಗಿರುವ ಹುದ್ದೆಗಳು 8017, ಖಾಲಿ ಇರುವ ಹುದ್ದೆಗಳು 1820 ಮತ್ತು ಸದ್ಯ ಭರ್ತಿ ಮಾಡಲು ಒಪ್ಪಿಗೆ ನೀಡಿರುವ ಹುದ್ದೆಗಳು 1000.












Click it and Unblock the Notifications