ಸೌದಿ ಅರೇಬಿಯಾ ವೀಸಾ ಸಿಗೋದು ಕಷ್ಟ ಕಷ್ಟ
ದುಬೈ, ಸೆ.11: ಉದ್ಯೋಗ ಅರಸಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಹಾರುತ್ತಿದ್ದವರಿಗೆ ಕಹಿ ಸುದ್ದಿ ಸಿಕ್ಕಿದೆ. ಸೌದಿ ಅರೇಬಿಯಾ ಸರ್ಕಾರ ಇದ್ದಕ್ಕಿದ್ದಂತೆ ತಾತ್ಕಾಲಿಕ ನೌಕರರಿಗೆ ನೀಡುವ ಸೀಸನಲ್ ವೀಸಾಗಳ ಮೇಲೆ ಭಾರಿ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ.
ಮುಸ್ಲಿಮರ ಪವಿತ್ರ ಸ್ಥಳಗಳಾದ ಮೆಕ್ಕಾ ಹಾಗೂ ಮದೀನಾದಲ್ಲಿ ತಾತ್ಕಾಲಿಕ ಉದ್ಯೋಗ ಬಯಸಿ ಬರುತ್ತಿದ್ದ ಉದ್ಯೋಗಾರ್ಥಿಗಳಿಗೆ ಸೌದಿ ಸರ್ಕಾರದ ಅದೇಶದಿಂದ ಭಾರಿ ಹೊಡೆತ ಬಿದ್ದಿದೆ.
ಪ್ರತಿ ವರ್ಷ ಸುಮಾರು 70,000 ಉದ್ಯೋಗಾರ್ಥಿಗಳು ಸೀಸನಲ್ ಉದ್ಯೋಗಿ ವೀಸಾ ಗೆ ಅರ್ಜಿ ಹಾಕುತ್ತಾರೆ. ಇವರಲ್ಲಿ ಶೇ 99 ರಷ್ಟು ಭಾಗದ ಉದ್ಯೋಗಾರ್ಥಿಗಳಿಗೆ ಮೆಕ್ಕಾ ಹಾಗೂ ಮದೀನಾದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಲು ಅನುಮತಿ ನೀಡಲಾಗುತ್ತಿತ್ತು.ಪವಿತ್ರ ತಾಣಗಳಿಗೆ ಬರುವ ಯಾತ್ರಿಗಳ ಯೋಗಕ್ಷೇಮ ನೋಡಿಕೊಳ್ಳುವ ಮೂಲಕ ನಾಲ್ಕು ಕಾಸು ಸಂಪಾದಿಸುತ್ತಿದ್ದರು.
ಆದರೆ, ಸೌದಿ ಆಡಳಿತ ಈ ಬಾರಿ ಕಠಿಣ ಕ್ರಮ ಕೈಗೊಂಡಿದ್ದು, ವೀಸಾ ನೀಡಿಕೆ ಮೇಲೆ ನಿರ್ಬಂಧ ಹೇರಿದೆ. ಕಳೆದ ವರ್ಷ ಬಾಂಗ್ಲಾದೇಶದ ಏಜೆಂಟ್ ಗಳಿಗೆ ಸುಮಾರು 2,200 'ಸೀಸನಲ್ ವರ್ಕ್ ವೀಸಾ' ಗಳನ್ನು ನೀಡಲಾಗಿತ್ತು.
ಆದರೆ, ಸರ್ಕಾರದ ಈ ಆದೇಶದಿಂದ ಉದ್ಯಮಿಗಳಿಗೆ ಭಾರಿ ನಷ್ಟ ಉಂಟಾಗಲಿದೆ. ಸುಮಾರು 600 ಮಿಲಿಯನ್ ಸೌದಿ ರಿಯಾಲ್(ಸುಮಾರು 160 ಮಿಲಿಯನ್ ಡಾಲರ್) ನಷ್ಟವಾಗಲಿದೆ ಎಂದು ಹೇಳಲಾಗಿದೆ.

ಉದ್ಯೋಗಿಗಳಿಗೆ ವೀಸಾ ನೀಡಿಕೆ ವಿಳಂಬದಿಂದಲೇ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಇನ್ನು ವೀಸಾ ಮೇಲೆ ನಿರ್ಬಂಧ ಹೇರಿದರೆ ತುಂಬಾ ಕಷ್ಟವಾಗುತ್ತದೆ ಎಂದು ಮೆಕ್ಕಾ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಸಾದ್ ಜಮೀಲ್ ಖುರೇಶಿ ಹೇಳಿದ್ದಾರೆ.
ವೀಸಾ ಗೊಂದಲದಿಂದಾಗಿ ಮೆಕ್ಕಾಗೆ ಬರುವ ಯಾತ್ರಿಗಳಿಗೆ ಆಹಾರ ಹಾಗೂ ವಸತಿ ಸಮಸ್ಯೆ ತಲೆ ದೋರಲಿದೆ. ಸ್ಥಳೀಯ ನೌಕರರು ಸಿಗದ ಕಾರಣ ಬಾಂಗ್ಲಾದೇಶ, ಭಾರತ ಸೇರಿದಂತೆ ಇತರೆಡೆಗಳಿಂದ ಉದ್ಯೋಗಿಗಳನ್ನು ಇಲ್ಲಿಗೆ ಕರೆಸಿಕೊಳ್ಳಲಾಗುತ್ತದೆ. ಹಜ್ ಯಾತ್ರೆ ಸಂದರ್ಭದಲ್ಲಿ ಇವರ ನೆರವು ಅಗತ್ಯವಿದೆ.
ಆದರೆ, ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ಸಲುವಾಗಿ ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.ಪ್ರಮುಖವಾಗಿ ಅಡುಗೆ, ಸ್ವಚ್ಛತೆ ಹಾಗೂ ಸಾರಿಗೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಲು ಸೌದಿಯ ನಿರುದ್ಯೋಗಿಗಳು ತಯಾರಿಲ್ಲ. ಒಂದು ವೇಳೆ ಕೆಲಸಕ್ಕೆ ಸೇರಿಸಿಕೊಂಡರೂ ತಾತ್ಕಾಲಿಕ ಉದ್ಯೋಗದಲ್ಲಿ ಇರಲು ಬಯಸುವುದಿಲ್ಲ. ಹೀಗಾಗಿ ವಲಸೆ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿದೆ. (IANS)












Click it and Unblock the Notifications