ಹಿಜಾಬ್ ಹೆಸರಿನಲ್ಲಿ ರಾಜಕೀಯ ಮಾತಾಡುವವರಿಗೆ ನಾಚಿಕೆಯಾಗಬೇಕು!
ಸಂತೆ, ಮಾರುಕಟ್ಟೆ, ಬಸ್ ನಿಲ್ದಾಣಗಳಲ್ಲಿ ಇಲ್ಲ ಹಿಜಾಬ್ ವಿವಾದ. ಗುಡಿ- ದೇಗುಲಕ್ಕೆ ಕಾಲಿಡಲಿಲ್ಲ ಹಿಜಾಬ್ ವಿವಾದ. ಭವಿಷ್ಯದ ಕನಸು ಕಾಣುವ ಮುಗ್ಧ ಮಕ್ಕಳ ಬದುಕು ರೂಪಿಸುವ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ. ಅದೆಂತ ವಿಪರ್ಯಾಸ. ದ್ವೇಷ, ಅಸೂಯೆ ಗಂಧ ಗಾಳಿಯಿಲ್ಲದ ಮುಗ್ಧ ಮನಸಿನಲ್ಲಿ ಕೋಮು ದ್ವೇಷ ಬೆಳೆಸಿ, ಹೊಗೆ ಹರಡುವ ರೀತಿ 'ಹಿಜಾಬ್' ಶಾಲೆಗಳ ಆವರಣಗಳಿಗೆ ಲಗ್ಗೆಯಿಟ್ಟಿದೆ. ಅರೇ ಇಷ್ಟು ವರ್ಷ ಇಲ್ಲದ ಈ ಹಿಜಾಬ್ ವಿವಾದ ಹುಟ್ಟಿ ಹಾಕಿದವರು ಯಾರು? ಹಿಜಾಬ್ ಸುತ್ತ ಸರಿ ತಪ್ಪಿನ ಸ್ಟೇಟ್ ಮೆಂಟ್ ನೀಡಿ 'ಹಿಜಾಬ್ ವೋಟ್ ಬ್ಯಾಂಕ್ ರಾಜಕಾರಣ' ಮಾಡುತ್ತಿರುವ ಮೂರ್ಖ ರಾಜಕಾರಣಿಗಳಿಗೆ ಏನನ್ನಬೇಕು?
ವಿವಾದ ರೂಪ ಪಡೆಯುವ ಮೊದಲೇ ಆರಿಸಬಹುದಾಗಿದ್ದ ಕಿಡಿಯಂತಿದ್ದ ಹಿಜಾಬ್ ವಿವಾದ ಇದೀಗ ಕೈ ಮೀರಿದೆ. ರಾಜ್ಯದ ಉದ್ದಗಲಕ್ಕೂ ಹಬ್ಬಿದೆ. ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಹುಟ್ಟಿದ ವಿವಾದವೀಗ ಬೆಳಗಾವಿ, ಬೀದರ್, ಕಲಬುರಗಿ, ಮಂಗಳೂರು ಸೇರಿದಂತೆ ಅರ್ಧ ಕರ್ನಾಟಕ ವ್ಯಾಪಿಸಿದೆ. ಕುಂದಾಪುರ, ಉಡುಪಿಯಲ್ಲಿ ಹಿಜಾಬ್‌ಗೆ ಅವಕಾಶ ಕೊಡಿ ಎಂದು ಬೀದಿಗೆ ಇಳಿದಿದ್ದಾರೆ. ಮತ್ತೊಂದೆಡೆ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಶಾಲೆಗಳಿಗೆ ಪ್ರವೇಶಿಸುತ್ತಿದ್ದಾರೆ.
ಕಲಬುರಗಿಯಲ್ಲಿ ಶಾಸಕಿಯೊಬ್ಬರು ವಿದ್ಯಾರ್ಥಿಗಳ ನೇತೃತ್ವದಲ್ಲಿ ಹಿಜಾಬ್‌ಗೆ ಅವಕಾಶ ಮಾಡಿಕೊಡಿ ಬೀದಿಗೆ ಇಳಿದು ಹೋರಾಟಕ್ಕೆ ಇಳಿದಿದ್ದಾರೆ. ಇಷ್ಟು ವರ್ಷಗಳ ಕಾಲ ಇದೊಂದು ವಿವಾದ ಅನ್ನಿಸದಂತಹ ವಿಚಾರ ದೊಡ್ಡ ವಿವಾದದ ಸ್ವರೂಪ ಪಡೆದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ರಾಜ್ಯದಲ್ಲಿ ಶಾಲಾ ಕಾಲೇಜುಗಳಿಗೆ ಸಮವಸ್ತ್ರ ನೀತಿ ಪ್ರಕಟಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುತ್ತೋಲೆ ಹೊರಡಿಸಿದ್ದಾರೆ. ಇದರಿಂದ ಸಮಸ್ಯೆ ಪರಿಹರಿಸುವ ಬದಲಿಗೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ರಾಜ್ಯದ ಶೈಕ್ಷಣಿಕ ಪರಿಸ್ಥಿತಿ
ರಾಜ್ಯದಲ್ಲಿ ಶಾಲಾ ಕಾಲೇಜುಗಳ ವಿಚಾರಕ್ಕೆ ಬಂದರೆ ಕೊರೊನಾದಿಂದ ವಿದ್ಯಾರ್ಥಿಗಳ ಕಲಿಕೆಯಿಂದ ದೂರ ಉಳಿದಿದ್ದಾರೆ. ಶಾಲಾ ಕಾಲೇಜು ಬಂದ್ ಆಗಿದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳ ಓದಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಗಿರುವ ನಷ್ಟ ಅಷ್ಟಿಷ್ಟಲ್ಲ. ಭವಿಷ್ಯ ಮುಂದಿನ ಮೂರ್ನಾಲ್ಕು ವರ್ಷ ಅವರಿಗೆ ಹೆಚ್ಚು ಆದ್ಯತೆ ಕೊಟ್ಟು ಕಲಿಕೆಯಲ್ಲಿ ತೊಡಗಿಸಬೇಕು. ಇಲ್ಲದಿದ್ದರೆ, ಸಮಾಜಕ್ಕೆ ನಿರುಪಯುಕ್ತ ಮಾನವ ಶಕ್ತಿಯೇ ರೂಪಗೊಳ್ಳುವ ಸಾಧ್ಯತೆಯಿದೆ. ಕೊರೊನಾ ದಿಂದ ಮಕ್ಕಳ ಓದಿನ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರಿದೆ ಎಂಬ ಸತ್ಯವನ್ನು ಅದೆಷ್ಟೋ ಅಧ್ಯಯನ ವರದಿಗಳೇ ಬಹಿರಂಗಪಡಿಸಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅವಕಾಶ ಕೊಡುವ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕಿತ್ತು. ಇದನ್ನು ಸರಿ ಪಡಿಸುವಂತೆ ವಿರೋಧ ಪಕ್ಷದ ನಾಯಕರು ಸರ್ಕಾರವನ್ನು ಜಾಗೃತಗೊಳಿಸಬೇಕಿತ್ತು. ಆದರೆ ಇದು ಸಮಸ್ಯೆಯಾಗಿ ಯಾವ ಜನ ಪ್ರತಿನಿಧಿಗೂ ಕಾಣುತ್ತಿಲ್ಲ. ಆದೆ ಹಿಜಾಬ್ ವಿಚಾರವಾಗಿ ನೋಡಿ ಕಾಳಗಕ್ಕೆ ಧುಮುಕಿದ ರೀತಿಯಲ್ಲಿ ಎಂಟ್ರಿಕೊಟ್ಟು ನಮ್ಮ ಜನ ಪ್ರತಿನಿಧಿಗಳು ಎಳೆ ಮನಸುಗಳಲ್ಲಿ ಕೇಸರಿ ಶಾಲು- ಹಿಜಾಬ್ ವಿಷ ಬೀಜ ಬಿತ್ತಿ ಅವರ ಮಾನಸಿಕ ಸ್ಥಿತಿಯನ್ನು ಹಾಳು ಮಾಡುತ್ತಿದ್ದಾರೆ.

ಮೂಲ ಸೌಕರ್ಯವಿಲ್ಲ
ರಾಜ್ಯದಲ್ಲಿ ಎಷ್ಟೋ ಹಳ್ಳಿಗಳಲ್ಲಿ ಸರಿಯಾದ ಶಾಲೆಗಳು ಇಲ್ಲ. ಶಿಕ್ಷಕರು ಇಲ್ಲ. ಮಕ್ಕಳು ಕಲಿಕೆಯಿಂದ ದೂರ ಇದ್ದಾರೆ. ಇನ್ನು ಮಕ್ಕಳು ಇರುವ ಊರುಗಳಲ್ಲಿ ಗುಣಮಟ್ಟದ ಶಾಲೆಗಳು ಇಲ್ಲ. ಶಾಲೆ ಇದ್ದರೂ ಮೂಲ ಸೌಕರ್ಯಗಳು ಇಲ್ಲದೇ ಸೊರಗುತ್ತಿವೆ. ಹಿಜಾಬ್ ವಿಚಾರ ಇಟ್ಟುಕೊಂಡು ಧಾರ್ಮಿಕ ಹಕ್ಕಿನ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜಕಾರಣಿಗಳು ಶಿಕ್ಷಣ ಕೂಡ ಮೂಲಭೂತ ಹಕ್ಕು ಎಂದು ಕಣ್ಣಿಗೆ ಕಾಣಲಿಲ್ಲವೇ? ಯಾಕೆ ಪುಟ್ಟ ಕಂದಮ್ಮಗಳ ಮನಸಲ್ಲಿ ದ್ವೇಷ ಬಿತ್ತುವ ಬದಲಿಗೆ ರಾಜ್ಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಕಣ್ಣಿಗೆ ಬೀಳಲಿಲ್ಲವೇ? ಸರ್ಕಾರಿ ಶಾಲೆಗಳು ಮೂಲ ಸೌಕರ್ಯ ವಿಲ್ಲದೇ ಸೊರಗುತ್ತಿವೆ. ಒಬ್ಬ ಶಾಸಕ ತನ್ನ ಶಾಸಕರ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ವೆಚ್ಚ ಮಾಡಿದ ಉದಾಹರಣೆ ಉಂಟೇ? ಕನಿಷ್ಠ ಒಂದು ಸರ್ಕಾರಿ ಶಾಲೆ ದತ್ತು ತೆಗೆದು ಮಾದರಿ ಶಾಲೆಯನ್ನಾಗಿ ರೂಪಿಸುವ ಬದ್ಧತೆ ತೋರಿದಿದ್ದರೆ, ಕರ್ನಾಟಕದಲ್ಲಿ ವರ್ಷಕ್ಕೆ 225 ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗುತ್ತಿದ್ದವು. ಹತ್ತು ವರ್ಷಕ್ಕೆ 2250 ಶಾಲೆಗಳು ಮಾದರಿಯಾಗುತ್ತಿದ್ದವು. ಇದರ ಬಗ್ಗೆ ಮಾತನಾಡುವ ಒಬ್ಬ ನಾಯಕನಿದ್ದಾನೆಯೇ?

ಶಾಲೆ ಕಾಲೇಜು ಪುಟ್ಟ ದೇಶ
ಸ್ವಾತಂತ್ರ್ಯ ಬಂದು ಅರ್ಧ ಶತಮಾನ ಕಳೆದರೂ ಜಾತಿ ವ್ಯವಸ್ಥೆ, ಅಸಮಾನತೆ, ತಾರತಮ್ಯ ಹೋಗಿಲ್ಲ. ಇನ್ನೂ ದೇಶದಲ್ಲಿ ಜಾತಿ ವ್ಯವಸ್ಥೆಯ ಬೇರುಗಳು ಗಟ್ಟಿಯಾಗುತ್ತಿವೆ. ಜಾತಿಯಾಧಾರಿತ ರಾಜಕೀಯ ಪಕ್ಷಗಳು ಹುಟ್ಟಿಕೊಳ್ಳುತ್ತಿವೆ. ಆದರೆ, ಜಾತಿ, ಮತ, ಧರ್ಮ, ಆರ್ಥಿಕ ಅಸಮಾನತೆ, ಇದ್ಯಾವುದರ ಪ್ರವೇಶವೇ ಇಲ್ಲದ ಜಾಗ ಶಾಲಾ ಕಾಲೇಜು. ಶಾಲೆಗಳಲ್ಲಿರುವ ಈ ವ್ಯವಸ್ಥೆ ನಮ್ಮ ದೇಶದ ಸಮುದಾಯದಲ್ಲಿ ಹರಡಬೇಕು. ಇನ್ನೂ ಒಂದು ಶಾಲೆ ಎಂದರೆ ಆ ಶಾಲೆಗೆ ಸಂಬಂಧಪಟ್ಟ ಸಮವಸ್ತ್ರ ಇರುತ್ತದೆ. ಅದನ್ನು ಎಲ್ಲಾ ಮಕ್ಕಳು ಕಡ್ಡಾಯವಾಗಿ ಧರಿಸುವುದು ನಿಯಮ. ಯಾರು ಯಾರನ್ನೂ ಅಸಮಾನತೆಯಿಂದ ನೋಡಬಾರದು ಎಂಬುದರ ಪ್ರತೀಕವಾಗಿಯೇ ಸಮವಸ್ತ್ರ ಧರಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾನತೆ, ಏಕತೆಯ ಮನೋಭಾವ ವಾತಾವರಣ ಶಾಲಾ ಕಾಲೇಜುಗಳಲ್ಲಿ ಇರುತ್ತದೆ. ಅದಕ್ಕೆ ವಿದ್ಯಾರ್ಥಿಗಳು ಆಗಲೀ, ಪೋಷಕರು ಆಗಲೀ ಧಕ್ಕೆ ಬರುವಂತೆ ನಡೆದುಕೊಳ್ಳಬಾರದು.

ಹಿಜಾಬ್ ವಿವಾದದ ಮುನ್ನ
ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಆರು ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ಮಾಡಿಕೊಡಲಿಲ್ಲ ಎಂದು ತರಗತಿ ಬಹಿಷ್ಕರಿಸಿ ಗೇಟಿನ ಮುಂದೆ ಹೋರಾಟಕ್ಕೆ ಕೂತಿರುವ ಪ್ರಕರಣ ದೊಡ್ಡ ಅನುಮಾನ ಮೂಡಿಸುವಂತಿದೆ. ಮುಸ್ಲಿಂ ಸಮುದಾಯದ ಶಾಲೆಗಳಲ್ಲಿ ಹಿಜಾಬ್ ರಹಿತ ಸಮವಸ್ತ್ರ ನೀಡಲಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಮಕ್ಕಳು ಹಿಜಾಬ್ ಧರಿಸಿದ ಪ್ರಸಂಗಗಳೂ ಇವೆ. ಇಲ್ಲಿಯವರೆಗೂ ಅದೊಂದು ವಿವಾದವಾಗಿ ಎಲ್ಲೂ ಕಾಣಿಸಲಿಲ್ಲ. ಹಿಜಾಬ್ ಧರಿಸುವುದರಿಂದ ಯಾರಿಗೂ ಲಾಭವೂ ಇಲ್ಲ. ಧರಿಸದಿದ್ದರೆ ಆಗುವ ನಷ್ಟವೂ ಇಲ್ಲ. ಆದರೆ, ಶಾಲಾ ಕಾಲೇಜುಗಳಿಗೆ ಸೀಮಿತಗೊಳಿಸಿ ಹಿಜಾಬ್ ವಿಷ ಬಿತ್ತಿದ್ದು ಮಹಾ ಅಪಾಯಕಾರಿ ಬೆಳವಣಿಗೆ. ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕು ಕೆಲವು ನಾಯಕರು ಪ್ರತಿಪಾದನೆಗೆ ಹೊರಟಿದ್ದಾರೆ. ಇನ್ನೂ ಕೆಲವರು ಕೇಸರಿ ನಮ್ಮ ಸಂಸ್ಕೃತಿ ಎಂದು ಬಿಂಬಿಸುತ್ತಿದ್ದಾರೆ.

ಸಂತೆ, ಬಸ್ ನಿಲ್ದಾಣಗಳಲ್ಲಿ ಹುಟ್ಟುಕೊಳ್ಳಲಿಲ್ಲ
ಕೇಸರಿ ಶಾಲುಗಳು, ಹಿಜಾಬ್‌ಗಳು ಯಾರೂ ಎಂಬಿಬಿಎಸ್ ಪದವಿ ವ್ಯಾಸಂಗ ಮಾಡುವುದಿಲ್ಲವೇ? ಎಂಬಿಬಿಎಸ್ ಪದವಿ ಮಾಡುವಾಗ, ದೇಹಗಳನ್ನು ಕೊಯ್ಯುವುದಿಲ್ಲವೇ? ದೇಹದ ಬಿಡಿ ಭಾಗಗಳನ್ನು ನೋಡಿ, ಸರ್ಜರಿ ಮಾಡುವುದಿಲ್ಲವೇ. ಯಾವುದೋ ಸಮುದಾಯದ ವೈದ್ಯ, ಇನ್ನಾವುದೋ ಸಮುದಾಯದ ವ್ಯಕ್ತಿಯ ದೇಹ, ಮೈ ಮುಟ್ಟಿ ತಪಾಸಣೆ ಮಾಡುತ್ತಾರೆ. ಅವಾಗಲೂ ಹಿಜಾಬ್, ಕೇಸರಿ ಶಾಲೂ ಹಾಕಿಕೊಂಡು ಇವು ನಮ್ಮ ಧಾರ್ಮಿಕ ಹಕ್ಕು ಎಂದು ಪ್ರತಿಪಾದನೆ ಮಾಡುತ್ತೀರಾ? ಒಬ್ಬರ ದೇಹ ಕೊಯ್ಯವುದು ಧರ್ಮ ಗ್ರಂಥಗಳ ಪ್ರಕಾರ ಪಾಪ ಅಲ್ಲವೇ? ಹಾಗಿದ್ದರೆ ದೇಶದಲ್ಲಿ ಎಂಬಿಬಿಎಸ್ ಪದವಿಯೇ ಈ ದೇಶದ ಧರ್ಮ ಗ್ರಂಥಗಳ ನೀತಿಗಳಿಗೆ ವಿರೋಧ ಅಲ್ಲವೇ? ಯಾಕೆ ಮೆಡಿಕಲ್ ಕಾಲೇಜುಗಳು ಬೇಕು, ವೈದ್ಯರು ಬೇಕು? ಬಂದ್ ಮಾಡಿ ಎಂದು ವಿವಾದ ಹುಟ್ಟಿ ಹಾಕಿ ನೋಡೋಣ? ಶಾಲೆಗಳಲ್ಲಿ ಹುಟ್ಟಿರುವ ಹಿಜಾಬ್ ವಿವಾದ, ಯಾಕೆ ಸಿನಿಮಾ ಹಾಲ್, ದೇಗುಲ ಮಸೀದಿ, ಸಂತೆ, ಬಸ್ ನಿಲ್ದಾಣಗಳಲ್ಲಿ ಹುಟ್ಟುಕೊಳ್ಳಲಿಲ್ಲ. ಅಕ್ಷರ ಕಲಿಸಿ ಸುಂದರ ಬದುಕು ಕಟ್ಟಿಕೊಡುವ ಶಾಲಾ ಕಾಲೇಜುಗಳಿಗೆ ಹಿಜಾಬ್ ವಿವಾದ ಸ್ವರೂಪ ಪಡೆದಿದ್ದೇ ದೊಡ್ಡ ದುರಂತ.

ವಿವಾದ ಹುಟ್ಟು ಹಾಕಿದ್ದು ಮೂರ್ಖರು
ಉಚ್ಚೆಯಲ್ಲಿ ಮೀನು ಹಿಡಿಯುವ ಕೆಲಸವಿದು ಎಂಬ ಗಾದೆ ಮಾತು ಇದೆ. ಈ ಹಿಜಾಬ್ ವಿವಾದ ಕೂಡ ಅದೇ ಸಾಲಿಗೆ ಸೇರುವಂತದ್ದು. ಹಿಜಾಬ್ ವಿಚಾರ ಇಟ್ಟುಕೊಂಡು ವಿವಾದ ಹುಟ್ಟು ಹಾಕಿದ್ದು ಮೂರ್ಖರು. ಅದರ ವಿಚಾರವಾಗಿ ಕೇಸರಿ ಶಾಲು ಪ್ರತಿಪಾದನೆಗೆ ಹೊರಟಿರುವುದು ಶತ ಮೂರ್ಖತನವೇ. ಈ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡಲು ಹೊರಟಿರುವ ಜನ ನಾಯಕರು ವಿವಾದವನ್ನೇ ವೋಟ್ ಬ್ಯಾಂಕ್ ಅನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ಕೆಲಸಕ್ಕೆ ಇಳಿದಿದ್ದಾರೆ. ಧರ್ಮದ ವಿಚಾರವಾಗಿ ಸಂವಿಧಾನ ಧಾರ್ಮಿಕ ಹಕ್ಕು ಕೊಟ್ಟಿರಬಹುದು, ಆ ಹಕ್ಕಿಗಿಂತಲೂ ಮೀರಿದ್ದು ಶೈಕ್ಷಣಿಕ ಹಕ್ಕು. ಭಾರತದ ಬದುಕು, ಭವಿಷ್ಯ ಅಡಗಿರುವುದು ಶಿಕ್ಷಣದ ಹಕ್ಕಿನಲ್ಲಿ ವಿನಃ ಧಾರ್ಮಿಕ ಹಕ್ಕಿನಲ್ಲಿ ಅಲ್ಲ. ಒಂದು ವೇಳೆ ಧಾರ್ಮಿಕ ಹಕ್ಕು ನಿರ್ಬಂಧಿಸುವ ಅವಕಾಶಗಳು ಎದುರಾಗಬಹುದು, ಶೈಕ್ಷಣಿಕ ಹಕ್ಕನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಧಾರ್ಮಿಕ ಹಕ್ಕು, ಸಂಸ್ಕಾರ ಕೇವಲ ಅವರವರ ಕಟ್ಟುಪಾಡು ಮನೆ ಕಾಂಪೌಂಡ್‌ಗೆ ಸೀಮಿತ. ಶೈಕ್ಷಣಿಕ ಹಕ್ಕಿನ ವ್ಯಾಪ್ತಿಗೆ ಒಳಪಡುವ ಶಿಕ್ಷಣ ಕೇಂದ್ರಗಳ ವ್ಯಾಪ್ತಿಯೊಳಗೆ ಧಾರ್ಮಿಕ ಹಕ್ಕು ಪ್ರತಿಪಾದನೆ ಮಾಡುವ ಅರ್ಹತೆ ಯಾವ ನಾಯಕನಿಗೂ ಇಲ್ಲ. ಇದನ್ನು ಅರಿತು ಶಾಲಾ ಕಾಲೇಜುಗಳಿಗೆ ಹಿಜಾಬ್ ವಿವಾದ ವಿಸ್ತರಿಸುವ ದುಷ್ಟ ಆಲೋಚನೆಗಳನ್ನು ಬಿಟ್ಟು ಶಿಕ್ಷಣ ಕ್ಷೇತ್ರ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವುದತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಪ್ರಜ್ಞಾವಂತರು ಪ್ರಯತ್ನಿಸಿ ಹಿಜಾಬ್ ವಿವಾದ ಇಲ್ಲಿಗೆ ಪರಿಸಮಾಪ್ತಿ ಮಾಡುವುದು ಸೂಕ್ತ.












Click it and Unblock the Notifications