Varamahalakshmi festival 2023: ಮಾರುಕಟ್ಟೆಗಳಲ್ಲಿ ಹೂ, ಹಣ್ಣು ಬಲು ದುಬಾರಿ, ಬೆಣ್ಣೆನಗರಿಯಲ್ಲಿ ದರ ಹೀಗಿದೆ
ದಾವಣಗೆರೆ, ಆಗಸ್ಟ್, 25: ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮತ್ತೊಂದೆಡೆ ಮಾರುಕಟ್ಟೆಗಳಲ್ಲಿ ಹೂ, ಹಣ್ಣುಗಳು ಸೇರಿದಂತೆ ಪೂಜಾ ಸಾಮಾಗ್ರಿಗಳ ದರಗಳು ಗಗನಕ್ಕೇರಿವೆ. ಹಾಗೆಯೇ ಬೆಣ್ಣೆನಗರಿ ದಾವಣಗೆರೆ ಮಾರುಕಟ್ಟೆಯಲ್ಲಿ ಹೂ, ಹಣ್ಣುಗಳ ದರ ಎಷ್ಟಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ವರಮಹಾಲಕ್ಷ್ಮೀ ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ಹೂವು, ಹಣ್ಣು ಬೇಕೇ ಬೇಕು. ತರೇಹವಾರಿ ಹೂವುಗಳಿಂದ ಲಕ್ಷ್ಮೀ ಸಿಂಗರಿಸಲು ಹೂವು, ಹಣ್ಣು ತರಲು ಮಾರುಕಟ್ಟೆಗೆ ಬರುತ್ತಿರುವ ಗ್ರಾಹಕರು ದರ ಕೇಳಿ ಶಾಕ್ ಆಗುತ್ತಿದ್ದಾರೆ.

ಪ್ರತಿ ಹೂವಿನ ದರವೂ ದುಪ್ಪಟ್ಟಾಗಿದೆ. ದರ ಕೇಳಿ ಲಕ್ಷ್ಮೀಗೆ ಈ ಬಾರಿ ದುಬಾರಿ ಪೂಜೆ ಎಂದು ಗೊಣಗುತ್ತಲೇ ಹೂವು, ಹಣ್ಣು ಖರೀದಿಸುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ದಾವಣಗೆರೆಯಲ್ಲಿ ವರಮಹಾಲಕ್ಷ್ಮೀ ಪೂಜೆಯನ್ನು ಸಡಗರ, ಸಂಭ್ರಮದಿಂದ ನೆರವೇರಿಸಲಾಗುತ್ತದೆ. ಹಬ್ಬಕ್ಕೆ ಬೇರೆ ಬೇರೆ ಹೂವುಗಳನ್ನು ತಂದು ಲಕ್ಷ್ಮೀ ದೇವಿ ಅಲಂಕರಿಸಿ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಆದರೆ ಈ ವರ್ಷ ಹೂವಿನ ದರ ಗಗನಕ್ಕೇರಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ವರಮಹಾಲಕ್ಷ್ಮೀ ಶ್ರಾವಣ ಮಾಸದಲ್ಲಿ ಬರುವ ಹಬ್ಬವಾಗಿದೆ. ಈ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಹೂವು- ಹಣ್ಣುಗಳ ಖರೀದಿ ಭರಾಟೆ ಜೋರಾಗಿದೆ. ದರ ಹೆಚ್ಚಳವಾದರೂ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.
ವರಮಹಾಲಕ್ಷ್ಮಿ ಹಬ್ಬದ ಆಚರಣೆ ಅದ್ಧೂರಿಯಾಗಿ ನಡೆಯಲಿದ್ದು, ನಗರದ ತಹಶೀಲ್ದಾರ್ ಕಚೇರಿ ಬಳಿಯ ಹೂ ಮಾರುಕಟ್ಟೆ, ಗಡಿಯಾರ ಕಂಬ, ಜಯದೇವ ವೃತ್ತ, ವಿದ್ಯಾರ್ಥಿ ಭವನ, ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ, ವಿದ್ಯಾನಗರ ಸೇರಿದಂತೆ ಹಲವೆಡೆ ಹೂ, ಹಣ್ಣು, ಬಾಳೆಕಂಬದ ಮಾರಾಟ ಇಂದು ಬೆಳಗ್ಗೆಯಿಂದಲೇ ಶುರುವಾಗಿದೆ.
ವರ್ತಕರು ಹೂ-ಹಣ್ಣಿನ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವುಗಳೇ ಪ್ರಮುಖ ಆಕರ್ಷಣೆ. ಮನೆ-ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳು ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ವಾರದಿಂದಲೇ ಹೂವಿನ ಬೆಲೆ ಏರಿಕೆ ಆಗುತ್ತಿದೆ.
750 ರೂಪಾಯಿ ಇದ್ದ ಕೆಜಿಗೆ ಗುಲಾಬಿ ಹೂವು 1,500 ರೂಪಾಯಿಯವರೆಗೆ ಏರಿಕೆಯಾಗಿದೆ. ಇನ್ನು ಬಹುತೇಕ ಎಲ್ಲಾ ಹೂವುಗಳ ದರ ಎರಡು ಪಟ್ಟು ಹೆಚ್ಚಾಗಿದೆ. ಕೆ.ಜಿ. ಲೆಕ್ಕದಲ್ಲಿ ಖರೀದಿಗೆ ಬಂದಂಥವರು ಗ್ರಾಂ ಲೆಕ್ಕದಲ್ಲಿ ತೂಕ ಮಾಡಿಸಿಕೊಂಡು ತೆಗೆದುಕೊಂಡು ಹೋಗಿದ್ದು ಕಂಡುಬಂತು.
ಬೆಲೆ ಏರಿಕೆಯ ಬಿಸಿ
ಅತ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡುವ ಹಬ್ಬಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ದೊಡ್ಡ ತಡೆಯಾಗಿ ಪರಿಣಮಿಸಿದೆ. ಬೆಲೆ ಹೆಚ್ಚಳದ ಹೊರತಾಗಿಯೂ ಜನರು ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೇರಿದೆ.
ಕೆ.ಜಿ. ಟೊಮೊಟೊ ಬೆಲೆ 40 ರಿಂದ 50 ರೂ., ಬೀನ್ಸ್ 80 ರೂ., ಕ್ಯಾರೆಟ್ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಕೊತಂಬರಿ ಮತ್ತಿತರ ಸೊಪ್ಪುಗಳ ಬೆಲೆಯೂ ಹೆಚ್ಚಾಗಿದೆ. ಉಳಿದಂತೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಮಾರಾಟ ಜೋರಾಗಿದೆ. ಮಾವಿನ ಸೊಪ್ಪು, ಹೂವು, ಬಾಳೆಕಂದು, ಬಾಳೆ ಎಲೆ, ಹಣ್ಣುಹಂಪಲು, ಪೂಜೆಗೆ ಸಂಬಂಧಿಸಿದ ವಸ್ತುಗಳ ಮಾರಾಟವೂ ಹೆಚ್ಚಾಗಿ ಕಂಡುಬರುತ್ತಿದೆ.
ನಾಲ್ಕೈದು ದಿನಗಳ ಹಿಂದೆ ಪ್ರತಿ ಕೆ.ಜಿ. ಬಿಡಿ ಹೂವು 800 ರೂಪಾಯಿಗೆ ಸಿಗುತಿತ್ತು. ಈಗ 1600 ರೂಪಾಯಿ ದಾಟಿದೆ. ಲಕ್ಷ್ಮೀ ದೇವಿಯ ಬಹು ಇಷ್ಟದ ಕಮಲದ ಹೂ ಜೋಡಿಗೆ 200 ರೂಪಾಯಿ ಇತ್ತು. ಚೆಂಡು ಹೂ ಮಾರಿಗೆ 60 ರೂ, ಬಿಡಿ ಗುಲಾಬಿ ಕಾಲು ಕೆ.ಜಿ.ಗೆ 200 ರಿಂದ 250 ರೂಪಾಯಿ ಇತ್ತು. ಆದರೆ ಇದೀಗ ಎಲ್ಲಾ ಹೂವುಗಳ ದರವೂ ಹೆಚ್ಚಾಗಿದೆ. ಸೇವಂತಿಗೆ ಸೇರಿದಂತೆ ಎಲ್ಲಾ ಹೂವುಗಳು ಒಂದು ಮಾರು ನೂರು ರೂಪಾಯಿ ದಾಟಿದೆ.
ಹಣ್ಣುಗಳ ಬೆಲೆ ವಿವರ
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಅದರಲ್ಲೂ ಏಲಕ್ಕಿ ಬಾಳೆ ಹಣ್ಣು ಪ್ರತಿ ಕೆ.ಜಿ.ಗೆ 100 ರೂಪಾಯಿಯಿಂದ 130 ರವರೆಗೆ ಏರಿದೆ. ಸೇಬು, ದಾಳಿಂಬೆ, ಸೀಬೆ ಮೊದಲಾದ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಪ್ರತಿ ಕೆ. ಜಿ. ಸೇಬಿಗೆ 140 ರೂಪಾಯಿಯಿಂದ 170 ರೂಪಾಯಿ, ದಾಳಿಂಬೆ 80 ರಿಂದ 120 ರೂಪಾಯಿ, ಸೀಬೆ ಹಣ್ಣು 120 ರಿಂದ 150ರವರೆಗೆ ದರ ಏರಿದೆ.












Click it and Unblock the Notifications