ಯುಗಾದಿಗೆ ಕೊಡಗಿನ ರೈತರ ಚಿನ್ನದ ಉಳುಮೆ

ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳನ್ನು ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತಾವು ಹೊಸ ಉಡುಗೆ-ತೊಡಿಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸುತ್ತಾರೆ. ಮನೆಗಳಲ್ಲಿ ಉತ್ಸವದ ಅಂಗವಾಗಿ ಹೋಳಿಗೆ, ಪಾಯಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸುತ್ತಾರೆ.
ಅಂದು ಹೊಸ ಪಂಚಾಂಗದಂತೆ ಗ್ರಾಮದ ಹಿರಿಯ ವ್ಯಕ್ತಿ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡುತ್ತಾರೆ. ಬಳಿಕ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಹೊನ್ನಾರುಗಳು ಗ್ರಾಮದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ನಂತರ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಆ ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸುತ್ತಾರೆ.
ಉತ್ತರ ಕೊಡಗಿನ ಶಿರಂಗಾಲ, ತೊರೆನೂರು, ಮಣಜೂರು, ಕೂಡಿಗೆ, ಮದಾಲಪುರ, ಹುಲುಸೆ, ಭುವನಗಿರಿ, ಮೊದಲಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವವನ್ನು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಎತ್ತುಗಳ ಬದಲಿಗೆ ಯಂತ್ರವನ್ನು ಬಳಸುವ ಇಂದಿನ ಆಧುನಿಕ ಯುಗದಲ್ಲಿಯೂ ರೈತರು ಹಬ್ಬವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.












Click it and Unblock the Notifications