• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಗಯುಗಾದಿ ಕಳೆದರೂ ಯುಗಾದಿ ಕವಿತೆ ಮೆರೆದಿದೆ

By * ಎಚ್. ಆನಂದರಾಮ ಶಾಸ್ತ್ರೀ
|
ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ, ಬೇಂದ್ರೆಯವರ ಹಳೆಯ ಕವನ 'ಯುಗಾದಿ' ತರುವುದು ಹೊಸ ಹರುಷ.
ಯುಗಾದಿಯೊಡನೆ ಎಪ್ಪತ್ತೆಂಟು ವಸಂತಗಳ ಅವಿನಾಭಾವ ಸಂಬಂಧ ಹೊಂದಿದೆ ದ.ರಾ. ಬೇಂದ್ರೆಯವರ ಕವನ 'ಯುಗಾದಿ'.
ಯುಗಾದಿಗೆ 'ಯುಗಾದಿ'ಯೇ ಸಾಟಿ; 'ಯುಗಾದಿ'ಗೆ ಯುಗಾದಿಯೇ ಸಾಟಿ.

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಎಂದು ಹರ್ಷಘೋಷದೊಂದಿಗೆ ಆರಂಭವಾಗುತ್ತದೆ 'ಯುಗಾದಿ' ಕವಿತೆ. ಯುಗಗಳು ಕಳೆದರೂ ಮರಳಿ ಬರುತ್ತಲೇ ಇರುವ ಯುಗಾದಿಯು ಪ್ರತಿ ವರ್ಷವೂ ಹೊಸ ವರ್ಷಕ್ಕಾಗಿ ಹೊಸೆದು ಹೊಸೆದು ತರುವ ಹೊಸತು ಹೊಸತಾದ ಹರ್ಷವನ್ನು ಕವಿಯಿಲ್ಲಿ ಸಾರುವಾಗ ಕವಿಯಲ್ಲದ ಕೇವಲ ಭವಿಯ ಮನಸ್ಸೂ ಹರ್ಷದಿಂದ ಹೊಂಗತೊಡಗುತ್ತದೆ.

ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಬರುತಿದೆ.
ಬೇವಿನ ಕಹಿಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಎಂಬ ಸಾಲುಗಳು ವಸಂತದಾಗಮನ, ತತ್ಫಲವಾಗಿ ಹೊಂಗೆಮರದ (ತಮಾಲವೃಕ್ಷದ) ಕುಚ್ಚಿನಲ್ಲಿ ಪ್ರತಿ ವರ್ಷದಂತೆ ಈ ಸಲವೂ ಕೇಳಿಬರುವ ಭೃಂಗದ ಸಂಗೀತಕೇಳಿ ಅರ್ಥಾತ್ ಮರದಲ್ಲಿ ಭ್ರಮರದ ನಾದವಿನೋದ (ಗುಂಗಿಯ ಗುಂಗಾಟದ ಮಾಟ), ಮಾನವಜೀವಿಯ ಬೇವಿನಂಥ ಕಹಿಬಾಳಿನಲ್ಲಿ ವಸಂತದ ಚಿಗುರುಹೂವಿನ ನಸುಸುಗಂಧ ತರುವ ಆಹ್ಲಾದ ಮತ್ತು ಅದರಿಂದಾಗಿ ಮನುಷ್ಯಜೀವಿಯಲ್ಲಿ ಮತ್ತೆ ಚಿಗುರುವ ಜೀವಕಳೆ ಇವುಗಳ ಉರವಣಿಯೆಬ್ಬಿಸಿ ಓದುಗನ ಮನದಲ್ಲಿ ಸಂಭ್ರಮದ ಮೆರವಣಿಗೆ ಮಾಡುತ್ತವೆ.

ಕಮ್ಮನೆ ಬಾಣಕ್ಕೆ ಸೋತು
ಜುಮ್ಮೆನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ಎಂದು ಬೇಂದ್ರೆಯವರು ವೃಕ್ಷದ ಜೀವಸೆಲೆಯನ್ನೂ ಪಕ್ಷಿಯ ಜೀವನೆಲೆಯನ್ನೂ ವಸಂತದ ಕೊಂಡಿಯಿಂದ ಬೆಸೆದು ಕಾವ್ಯರಸಿಕನ ಕಣ್ಣೆದುರಿಡುತ್ತಾರೆ. ಪರಿಸರದ ಸುಗಂಧಮಯ ವಾತಾವರಣಕ್ಕೆ ಮನಸೋತೋ ಎಂಬಂತೆ ಹೂಬಿಟ್ಟ ಮಾವಿನ ಮರವು ಹಣ್ಣನ್ನು ಹುಟ್ಟಿಸುವ ಕಾಮನೆಯಲ್ಲಿದ್ದಾಗ 'ಸುಗ್ಗಿ ಸುಗ್ಗಿ' ಎಂದು ಹಿಗ್ಗಿ ನುಗ್ಗಿಬರುವ ಫಲಾಕಾಂಕ್ಷಿ ಗಿಳಿಗಳ ಸಾಲುಗಳು ಗಗನದಲ್ಲೂ ಮರದಮೇಲೂ ಪೋಣಿಸಿದ ತೋರಣಗಳಂತೆ ತೋರುವುದನ್ನು ನೋಡಲು ಓಹ್, ಎಷ್ಟು ಚಂದ!

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ಇಲ್ಲಿ ಕವಿ ಅಂಬಿಕಾತನಯದತ್ತರ ಒಳಗಣ್ಣು ತೆರೆಯುತ್ತದೆ. ರವಿ ಕಾಣದ್ದನ್ನಿಲ್ಲಿ ಕವಿ ಕಾಣುತ್ತಾನೆ. ಕವಿಯ ಒಳಗಣ್ಣಿನ ಕಾಣ್ಕೆಯು ಕವಿತೆಯನ್ನು ಹೊಸ ಮಜಲು ತಲುಪಿಸುತ್ತದೆ. ಅದು ಹೀಗೆ. ಗಿಡ-ಮರ, ಪ್ರಾಣಿ-ಪಕ್ಷಿ ಈ ಎಲ್ಲ ಜೀವಸಂಕುಲಕ್ಕೂ ಪ್ರತಿ ವರ್ಷವೂ ಹೊಸ ಜನ್ಮ(ದ ಅನುಭವ). ಬೋಳಾದ ವೃಕ್ಷ ಪ್ರತಿ ವಸಂತದಲ್ಲು ಚಿಗುರಿ ಹೂಬಿಡುತ್ತದೆ. ಗತದ ಚಿಂತೆಯಿಲ್ಲದ ಪ್ರಾಣಿ-ಪಕ್ಷಿಗಳು ಪ್ರತಿ ವಸಂತದಲ್ಲು ಸುಗ್ಗಿಯ ಹಿಗ್ಗಿನಲ್ಲಿ ಹೊಸ ಬಾಳು ಆರಂಭಿಸುತ್ತವೆ. ಆದರೆ ಮನುಷ್ಯನಿಗೆ ಮಾತ್ರ ಅದೇ ಜನ್ಮ, ಆ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ. ಮನುಷ್ಯರಾದ ನಮಗಷ್ಟೇ ಈ ವಂಚನೆ ಏಕೆ ಎಂಬ ಪ್ರಶ್ನೆಯನ್ನು ಒಡ್ಡುವ ಮೂಲಕ ಬೇಂದ್ರೆಯವರಿಲ್ಲಿ ಸೃಷ್ಟಿಯ ಆಂತರ್ಯವನ್ನೇ ಕೆದಕುತ್ತಾರೆ!

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ನಿದ್ದೆಗೊಮ್ಮೆ 'ನಿತ್ಯಮರಣ' ಬಂದು, ನಿದ್ದೆಯಿಂದೆದ್ದಾಗ ನಿನ್ನೆಯ ನೆನಪಿಲ್ಲವಾಗುವಂಥ, ತತ್ಫಲವಾಗಿ ಪ್ರತಿ ಮುಂಜಾನೆಯೂ ಹೊಸ ಹುಟ್ಟಿನ ಅನುಭವ ಪಡೆವಂಥ, ಪ್ರತಿ ದಿನವೂ ಹೊಸ ಜೀವನದ ಸಂತಸ ಹೊಂದುವಂಥ ಸುಯೋಗವನ್ನು - ಪ್ರತಿ ವಸಂತದಲ್ಲು ಗಿಡ-ಮರ, ಪ್ರಾಣಿ-ಪಕ್ಷಿಗಳಿಗೆ ಕರುಣಿಸಿರುವಂತೆ - ಮಾನವರಾದ ನಮಗೇಕೆ ಕರುಣಿಸಿಲ್ಲ ಎಂದು ಕವಿಯಿಲ್ಲಿ, ಸೃಷ್ಟಿಕರ್ತ ಬ್ರಹ್ಮನ ಮಾನಸಪುತ್ರನೂ ಚಿರಂಜೀವಿಯೂ ಸದಾ ಕುಮಾರಾವಸ್ಥೆಯಲ್ಲೇ ಇರುವವನೂ ಸಕಲ ಲೋಕ ಸಂಚಾರಿಯೂ ಉತ್ತಮ ಸಾಹಸಿಯೂ ಆದ ಸನತ್ಕುಮಾರನನ್ನು ಪ್ರಶ್ನಿಸುತ್ತಾರೆ. 'ನಿನಗೆ ಲೀಲೆ ರುಚಿಸದೋ?' ಎಂದು ಆತನನ್ನು ಕೆಣಕುತ್ತಾರೆ ಕೂಡ.

('ಹೊಸ ವರುಷ
ಹೊಸತೇನು?
ಒಂದು ಅಂಕಿ.
ಅದೇ ಬದುಕು
ಅದೇ ಬೇಗೆ
ಅದೇ ಬೆಂಕಿ.'
-?-
'ಹೊಸ ವರ್ಷ ನನಗೆ ಹೊಸತು ಎನಿಸುವುದಿಲ್ಲ.
ಏಕೆಂದರದು ಹಳೆ ನೋವನ್ನು ಮರೆಸುವುದಿಲ್ಲ.'
-?-
'ಹೊಸ ವರ್ಷ ನನಗೆ ಏನೂ ಅಲ್ಲ.
ಕಾರಣ? ನನಗೆ ನಾನೇ ಎಲ್ಲ.'

ನನ್ನ ಕೆಲ ಕವನಗಳ ಈ ಸಾಲುಗಳಿಲ್ಲಿ ಉಲ್ಲೇಖಾರ್ಹವೆಂದುಕೊಳ್ಳುತ್ತೇನೆ.)

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಎಂದು ಕವನದ ಕೊನೆಯಲ್ಲಿ ಹೇಳುವ ಮೂಲಕ ಬೇಂದ್ರೆಯವರು ಮನುಷ್ಯಜೀವನದ ಮಿತಿಯನ್ನು ಓದುಗನ ಅರಿವಿಗೆ ತರುವಲ್ಲಿ ಸಫಲರಾಗುತ್ತಾರೆ. ಹೀಗೆ, ಯುಗಾದಿಯ ಹಿನ್ನೆಲೆಯಲ್ಲಿ ಸೃಷ್ಟಿಯ ಆಂತರ್ಯವನ್ನು ಅರಿಯಲೆತ್ನಿಸುವ ಮತ್ತು ಜೀವ-ಜೀವನದ ಸ್ವರೂಪಗಳನ್ನು ತೆರೆದಿಡುವ 'ಯುಗಾದಿ' ಕವಿತೆಯು ಪ್ರಾಸಬದ್ಧ-ಲಯಬದ್ಧ-ಛಂದೋಬದ್ಧವೂ ಆಗಿದ್ದು, ಪದಲಾಲಿತ್ಯ, ಗೇಯ ಗುಣ ಇವುಗಳನ್ನೂ ಹೊಂದಿ ಶೋಭಿಸುತ್ತಿರುವಾಗ ಪ್ರತಿ ಯುಗಾದಿಯಲ್ಲೂ ನಮ್ಮೆಲ್ಲರ ಮನದಲ್ಲೂ ಧ್ವನಿಸದಿದ್ದೀತೆ? ಪ್ರತಿ ವರ್ಷ ಜಗದ ಜೀವಜಾತಕೆ ನಮ್ಮ ಹೃದಯವನ್ನು ತೆರೆದು, ಸೃಷ್ಟಿನಿಯಮದ ಬಗ್ಗೆ ನಮ್ಮನ್ನು ಎಚ್ಚರಿಸಿ, ನಮ್ಮ ಮಸ್ತಿಷ್ಕಕ್ಕೆ ಅರಿವಿನ ಬೆಳಕನ್ನು ಬೀರಿ ನಮ್ಮನ್ನು ಮುದಗೊಳಿಸದಿದ್ದೀತೆ? ನಲವತ್ತೇಳು ವರ್ಷಗಳ ಹಿಂದೆಯೇ 'ಕುಲವಧು' ಚಲನಚಿತ್ರದ ಮೂಲಕ ಮನೆಮಾತಾದ ಈ ಹಾಡು ಪ್ರತಿ ಯುಗಾದಿಯಂದೂ ನಮ್ಮ ಮನೆಯ ರೇಡಿಯೊ, ಟಿವಿಗಳಲ್ಲಿ ಪ್ರಸಾರವಾಗದಿದ್ದೀತೆ?

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more