ಅವ್ವನ ನೆನೆದರೆ ಮಾಸಿದ ತಲೆಯು ಮಡಿಯಾಯ್ತು
ಯಾರ ಇದ್ದರು ನನ್ನ ತಾಯವ್ವನ್ಹೋಲರ ।
ಸಾವಿರ ಕೊಳ್ಳಿ ಒಲಿಯಾಗ । ಇದ್ದರ ।
ಜೋತಿ ನಿನ್ನ್ಯಾರು ಹೋಲರ ।।
ತಂದೀಯ ನೆನೆದರ ತಂಗಳ ಬಿಸಿಯಾಯ್ತ ।
ಗಂಗಾ-ದೇವಿ ನನ್ನ ಹಡೆದವ್ನ । ನೆನೆದರ ।
ಮಾಸೀದ ತಲೆಯು ಮಡಿಯಾಯ್ತ ।।
ಉಂಗೂರ ಉಡದಾರ ಮುರಿದರ ಮಾಡಿಸಬಹುದು ।
ಮಡದಿ ಸತ್ತರ ತರಬಹುದು । ಹಡೆದಂಥ ।
ತಂದೆ ತಾಯೆಲ್ಲಿ ಸಿಕ್ಕಾರ ।।
ಆಕಳ ಕರು ಬಂದು ಅಂಬ ಅಂಬಾ ಎಂದು ।
ತಮ್ಮವ್ವನ ಮೊಲಿಯ ನಲಿನಲಿದು । ಉಂಬಾಗ ।
ನಮ್ಮವ್ವನ ಧ್ಯಾನ ನನಗಾಗಿ ।।
ಕಾಸೀಗಿ ಹೋಗಲಕ ಏಸೊಂದು ದಿನ ಬೇಕ ।
ತಾಸ್ಹೊತ್ತಿನಾದಿ ತವರೂರ । ಮನಿಯಾಗ ।
ಕಾಸಿ ಕುಂತಾಳ ಹಡೆದವ್ವ ।।
ಬ್ಯಾಸಗಿ ದಿವಸಕ ಬೇವಿನ ಮರ ತಂಪ ।
ಭೀಮರತಿಯೆಂಬ ಹೊಳಿ ತಂಪ । ಹಡದಮ್ಮ ।
ನೀ ತಂಪ ನನ್ನ ತವರೀಗಿ ।।












Click it and Unblock the Notifications