Krishna Janmashtami 2026: ಜನ್ಮಾಷ್ಟಮಿ ಸಮಯದಲ್ಲಿ ಮೊಸರು ಕುಡಿಕೆ ಆಚರಿಸುವುದೇಕೆ? ಏನಿದರ ಮಹತ್ವ ?
ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಡಗರ ಮನೆ ಮಾಡಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯೆಂದರೆ ಪೂಜೆ, ಉಪವಾಸಕ್ಕೆ ಎಷ್ಟು ಮಹತ್ವ ಇದೆಯೋ ಈ ದಿನ ಆಚರಿಸುವ ಮೊಸರು ಕುಡಿಕೆಗೂ ಅಷ್ಟೇ ಪ್ರಾಮುಖ್ಯತೆ ಇದೆ. ಅನೇಕ ಕಡೆಗಳಲ್ಲಿ ಮೊಸರು ಕುಡಿಕೆ ಸ್ಪರ್ಧೆ ನಡೆಯುತ್ತದೆ. ಇಲ್ಲಿ ಮಡಕೆ ಒಡೆಯುವಾಗ ಅದರಲ್ಲಿರುವ ವಸ್ತುಗಳೆಲ್ಲಾ ಒಡೆಯುವವಿಗೆ ಸೇರುತ್ತದೆ. ಜೊತೆಗೆ ಒಂದಷ್ಟು ಹಣ. ಕೆಲವು ಕಡೆ ಕೃಷ್ಣ ಜನ್ಮಾಷ್ಟಮಿಯ ದಿನವೇ ಮೊಸರು ಕುಡಿಕೆ ಆಚರಿಸಿದರೆ ಇನ್ನು ಕೆಲವು ಕಡೆ ದ್ವಾದಶಿ ಅಂದರೆ ಮಾರನೇ ದಿನ ಆಚರಿಸಲಾಗುತ್ತದೆ. ಅಂದ ಹಾಗೆ ಈ ದಿನ ಮೊಸರು ಕುಡಿಕೆ ಒಡೆಯುವ ಪದ್ದತಿ ಆಚರಣೆಗೆ ಬಂದಿದ್ದಾದರೂ ಹೇಗೆ?
ಮೊಸರು ಕುಡಿಕೆಯ ಹಿನ್ನೆಲೆ
ಪುರಾಣ ಕಥೆಗಳ ಪ್ರಕಾರ, ಪುಟ್ಟ ಕೃಷ್ಣನಿಗೆ ತಾಜಾ ಬೆಣ್ಣೆ ಅಂದರೆ ಬಲು ಇಷ್ಟ.. ಹಾಲು ಮತ್ತು ಮೊಸರಿಗಾಗಿ ಕೃಷ್ಣ ಏನು ಬೇಕಾದರೂ ಮಾಡಲು ಸಿದ್ದನಿದ್ದ. ಕೃಷ್ಣನಿಗೆ ಮೊಸರು ಸಿಕ್ಕರೆ ಸಾಕು ಅದು ಕ್ಷಣ ಮಾತ್ರದಲ್ಲಿ ಮಾಯವಾಗಿ ಬಿಡುತ್ತಿತ್ತು. ತನ್ನ ಸ್ನೇಹಿತರನ್ನು ಗುಂಪು ಹಾಕಿಕೊಂಡು ಅಕ್ಕ ಪಕ್ಕದ ಮನೆಯ ಅಡುಗೆ ಮನೆಗ ನುಗ್ಗುತ್ತಿದ್ದ ಮುದ್ದು ಕೃಷ್ಣ ಇದ್ದ ಬದ್ದ ಬೆಣ್ಣೆಯನ್ನೆಲ್ಲಾ ಖಾಲಿ ಮಾಡಿ ಬಿಡುತ್ತಿದ್ದ.

ಕೃಷ್ಣನಿಂದ ಮೊಸರು ಮುಚ್ಚಿಡುವುದೇ ಒಂದು ಸಾಹಸ
ಮನೆಯಲ್ಲಿ ಕಷ್ಟಪಟ್ಟು ತೆಗೆದಿಡುತ್ತಿದ್ದ ಬೆಣ್ಣೆ ಕಳವಾಗುತ್ತಿದ್ದುದರಿಂದ ಮಹಿಳೆಯರಿಗೆ ಸ್ವಾಭಾವಿಕವಾಗಿಯೇ ಇದು ಇಷ್ಟವಾಗುತ್ತಿರಲಿಲ್ಲ. ಬೆಣ್ಣೆ ಕೃಷ್ಣನ ಕೈಗೆ ಎಟಕದಂತೆ ಇಡುವುದು ಹೇಗೆ ಎನ್ನುವ ಬಗ್ಗೆ ಅವರು ಯೋಚಿಸುವಾಗ ಅವರ ತಲೆಗೆ ಒಂದು ಯೋಚನೆ ಹೊಳೆಯುತ್ತದೆ. ಅದುವೇ ಮಡಕೆಯಲ್ಲಿ ಹಾಕಿ ಬೆಣ್ಣೆಯನ್ನು ಎತ್ತರದಲ್ಲಿ ಕಟ್ಟಿ ಇಡುವುದು. ಎತ್ತರದಲ್ಲಿ ಹೀಗೆ ಬೆಣ್ಣೆಯನ್ನು ಕಟ್ಟಿಟ್ಟರೆ ಅಲ್ಲಿವರೆಗೆ ತಲುಪುವುದು ಪುಟ್ಟ ಕೃಷ್ಣನಿಗೆ ಸಾಧ್ಯವಾಗುವುದಿಲ್ಲ ಎನ್ನುವ ಲೆಕ್ಕಾಚಾರ ಅವರದ್ದಾಗಿತ್ತು.
ಸ್ನೇಹಿತರೊಂದಿಗೆ ಸೇರಿ ಬೆಣ್ಣೆ ಕದಿಯುತ್ತಿದ್ದ ಕೃಷ್ಣ
ಆದರೆ ಕೃಷ್ಣನಿಗೆ ಇದೊಂದು ಸಮಸ್ಯೆ ಅನ್ನಿಸಲೇ ಇಲ್ಲ. ಆತ ತನ್ನ ಸ್ನೇಹಿತರನ್ನು ಕರೆದುಕೊಂಡು ಒಬ್ಬರ ಹೆಗಲ ಮೇಲೆ ಒಬ್ಬರನ್ನು ನಿಲ್ಲಿಸಿಕೊಂಡು ಮಾನವ ಏಣಿಯನ್ನು ನಿರ್ಮಿಸಿ ನೇರವಾಗಿ ಮೇಲಕ್ಕೆ ಹತ್ತುತ್ತಿದ್ದ. ಹೀಗೆ ಮಡಕೆಯವರೆಗೆ ತಲುಪಿದ ನಂತರ, ಅದನ್ನು ಒಡೆದು, ಹೊಟ್ಟೆ ತುಂಬಾ ಬೆಣ್ಣೆ ತಿಂದು, ಉಳಿದದ್ದನ್ನು ತನ್ನ ಸ್ನೇಹಿತರಿಗೆ ಕೊಡುತ್ತಿದ್ದ. ಕೃಷ್ಣನ ಬಾಲ್ಯದ ಈ ನೆನಪನ್ನು ಹಾಗೆಯೇ ಹಸಿರಾಗಿಡುವ ನೆಪದಲ್ಲಿ ಆತನ ಜನ್ಮದಿನದಂದು ಮೊಸರು ಕುಡಿಕೆ ಹಬ್ಬವನ್ನು ಆಚರಿಸಲಾಗುತ್ತದೆ.
ಹೇಗೆ ನಡೆಯುತ್ತದೆ ಮೊಸರು ಕುಡಿಕೆ
ಮೊಸರು, ಬೆಣ್ಣೆ, ಹಣ್ಣುಗಳು ಮತ್ತು ಸ್ವಲ್ಪ ಹಣವನ್ನು ತುಂಬಿದ ಮಣ್ಣಿನ ಮಡಕೆಯನ್ನು ರಸ್ತೆಯ ಮಧ್ಯೆ ಎತ್ತರದಲ್ಲಿ ನೇತುಹಾಕಲಾಗುತ್ತದೆ. ಈ ಮಡಕೆಯನ್ನು ಎರಡು ಕಟ್ಟಡಗಳ ನಡುವೆ ಕಟ್ಟಿದ ಹಗ್ಗದಲ್ಲಿ ನೇತುಹಾಕಲಾಗುತ್ತದೆ. ನಂತರ ಇದನ್ನು ಯಾರು ಒಡೆಯುತ್ತಾರೆಯೋ ಅವರು ಜಯ ಗಳಿಸುತ್ತಾರೆ. ಇಲ್ಲಿ ಮಡಕೆ ಒಡೆಯುವವರು ಮಾನವ ಪಿರಮಿಡ್ಗಳನ್ನು ನಿರ್ಮಿಸುವ ಮೂಲಕ ಮೇಲಕ್ಕೆ ಹತ್ತಿ ಮಡಕೆ ಒಡೆಯುತ್ತಾರೆ.
ಅನೇಕ ಕಡೆಗಳಲ್ಲಿ ಮಡಕೆ ಒಡೆಯುವ ಸ್ಪರ್ಧೆಗಳೇ ನಡೆಯುತ್ತದೆ. ಇಲ್ಲಿ ಯಾರು ಹೆಚ್ಚು ಮಡಕೆಗಳನ್ನು ಒಡೆಯುತ್ತಾರೆ ಅವರು ಜಯ ಗಳಿಸುತ್ತಾರೆ.
ಮಾನವ ಪಿರಮಿಡ್ ನಿರ್ಮಿಸುವುದು ಹೇಗೆ ?
ಹಿರಿಯರು ಮತ್ತು ದೇಹದಲ್ಲಿ ಸ್ವಲ್ಪ ದಷ್ಟ ಪುಷ್ಟವಾಗಿರುವವರು ಕೆಳಭಾಗದಲ್ಲಿ ಸರ್ಕಲ್ ಮಾಡುತ್ತಾರೆ. ಇವರು ಮೇಲಕ್ಕೇರುವ ಎಲ್ಲರ ಭಾರವನ್ನು ಹೊರಲು ಸಿದ್ದರಿರಬೇಕು. ಮೇಲಿನವರು ಬೀಳುವಾಗ ಎದುರಾಗುವ ಪರಿಣಾಮಕ್ಕೂ ಅವರು ರೆಡಿಯಾಗಿರಬೇಕು.
ನಂತರ ಸ್ವಲ್ಪ ಹಗುರವಿರುವವರು ಕೆಳಗೆ ನಿಂತಿರುವವರ ಬೆನ್ನ ಮೇಲೆ ಹತ್ತುತ್ತಾರೆ. ಪರಸ್ಪರರ ಕಾಲುಗಳನ್ನು ಲಾಕ್ ಮಾಡಿಕೊಳ್ಳುತ್ತಾರೆ, ತೋಳುಗಳನ್ನು ಹಿಡಿದಿರುತ್ತಾರೆ.
ಆ ಗುಂಪಿನಲ್ಲಿರುವ ಸಣ್ಣವರು ಎತ್ತರಕ್ಕೆ ಏರುತ್ತಾರೆ. ಅವರು ಒಂದೇ ಭುಜಗಳ ಮೇಲೆ ಸಮತೋಲನ ಕಾಯ್ದುಕೊಳ್ಳಬೇಕು. ನಂತರ ಹಿಡಿತವನ್ನು ಕಾಯ್ದುಕೊಂಡು ತೆಂಗಿನಕಾಯಿ ಅಥವಾ ಮರದ ಕೋಲಿನಿಂದ ಮಣ್ಣಿನ ಮಡಕೆಯನ್ನು ಒಡೆಯುತ್ತಾರೆ.
ಮಡಕೆಯ ಜೇಡಿಮಣ್ಣು ಬಿರುಕು ಬಿಟ್ಟು ಮೊಸರು ಸುರಿಯುವ ಕ್ಷಣ, ಇಡೀ ಬೀದಿಯೇ ಕುಣಿದಾಡುತ್ತದೆ. ಮಡಕೆಯಲ್ಲಿರುವ ಮೊಸರು ಬೆಣ್ಣೆ ಎಲ್ಲೆಡೆ ಚಿಮ್ಮುತ್ತದೆ. ಇಡೀ ಪಿರಮಿಡ್ ಕುಸಿಯುತ್ತದೆ.
ನಂಬಿಕೆ ಬಹಳ ಮುಖ್ಯ
ಇಲ್ಲಿ ಬಹಳ ಮುಖ್ಯವಾಗಿರುವುದು ಒಬ್ಬರ ಮೇಲೆ ಇನ್ನೊಬ್ಬರು ಇಟ್ಟಿರುವ ನಂಬಿಕೆ. ಇಲ್ಲಿ ಪರಸ್ಪರರ ಮೇಲೆ ನಂಬಿಕೆ ಇರದಿದ್ದರೆ ಪಿರಮಿಡ್ ನಿರ್ಸುವುದು ಸಾಧ್ಯವಾಗುವುದಿಲ್ಲ. ಕೆಳಗೆ ನಿಂತಿರುವವರು ಒಂದು ಇಂಚು ಸಹ ಚಲಿಸದೆ ನೂರಾರು ಕೆ ಜಿ ತೂಕವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕು.ಮೇಲಕ್ಕೆ ಹತ್ತುವವರು ತಮ್ಮ ಸುರಕ್ಷತೆಯನ್ನು ಕೆಳಗೆ ಸರ್ಕಲ್ ಮಾಡಿ ನಿಂತಿರುವವರಿಗೆ ಕೊಟ್ಟಿರುತ್ತಾರೆ. ಇಲ್ಲಿ ಒಬ್ಬ ಎಡವಿದರೂ, ಇಡೀ ತಂಡವೇ ಕೆಳಕ್ಕೆ ಉರುಳುವುದು.
ಬೀದಿ ಮೂಲೆಯಲ್ಲಿ ನಡೆಯುತ್ತಿದ್ದ ಸಣ್ಣ ಕಾರ್ಯಕ್ರಮಗಳು ಈಗ ಸ್ಥಳೀಯ ರಾಜಕಾರಣಿಗಳು ಮತ್ತು ದೊಡ್ಡ ಬ್ರ್ಯಾಂಡ್ಗಳಿಂದ ಪ್ರಾಯೋಜಿತವಾದ ದೊಡ್ಡ ಶೋವಾಗಿ ಬದಲಾಗಿ ಬಿಟ್ಟಿದೆ. ಲಕ್ಷಾಂತರ ರೂಪಾಯಿಗಳ ನಗದು ಬಹುಮಾನಗಳೊಂದಿಗೆ ಪೂರ್ಣಗೊಂಡಿವೆ. ಎತ್ತರಗಳು ಹೆಚ್ಚುತ್ತಲೇ ಇರುವುದರಿಂದ, ಸುರಕ್ಷತೆಯು ಅಂತಿಮವಾಗಿ ಆದ್ಯತೆಯಾಗಿದೆ. ಮಹಿಳೆಯರೇ ಇರುವ ತಂಡಗಳೂ ಇವೆ.
ಅಪಾರ ಜನಸಂದಣಿ, ಟೆಲಿವಿಷನ್ ಕ್ಯಾಮೆರಾಗಳು ಮತ್ತು ಕಾರ್ಪೊರೇಟ್ ಬ್ಯಾನರ್ಗಲೇನೆ ಇರಲಿ ಅದರ ಮೂಲ ಆಶಯ ಒಂದೇ. ಇಡೀ ಜಗತ್ತೇ ನಂಬುವ ಶ್ರೀ ಕೃಷ್ಣನ ಬಾಲ ಲೀಲೆಯನ್ನು ನೆನೆಯುವುದು. ಅವರ ಕಕೃಪೆಗೆ ಪಾತ್ರರಾಗುವುದು.


Click it and Unblock the Notifications
