ನಾಳೆ ಕಾರ್ತಿಕ ಮಾಸದ ಮೊದಲ ಸೋಮವಾರ: ಈ ದಿನದ ಮಹತ್ವವೇನು..? ಶಿವನ ಆರಾಧನೆ ಹೇಗಿರಬೇಕು..?
ಪೂಜೆ, ಉಪವಾಸ, ದೀಪಾರಾಧನೆ, ದೀಪಾರ್ಪಣೆ, ದೀಪೋತ್ಸವ ಹಾಗೂ ಸಾಲಗ್ರಾಮ ಪೂಜೆ ಸೇರಿದಂತೆ ಇತರ ವಿಶೇಷ ಪೂಜೆಗಳಿಗೆ ಸೂಕ್ತವಾದ ಮಾಸವೇ ಕಾರ್ತಿಕ ಮಾಸ. ಈ ಮಾಸದಲ್ಲಿ ದೀಪಗಳಿಗೆ ಶ್ರೇಷ್ಠ ಸ್ಥಾನ ಇರುತ್ತದೆ. ಭಗವಾನ್ ವಿಷ್ಣುವಿಗೆ ಸಮರ್ಪತವಾದ ಈ ಕಾರ್ತಿಕ ಮಾಸವು ಶಿವನಿಗೂ ಬಲು ಪ್ರಿಯ. ಹೀಗಾಗಿ ಭಕ್ತರು ಈ ಮಾಸದಲ್ಲಿ ಬರುವ ವಿಶೇಷ ದಿನಗಳನ್ನು ಬಹಳ ಶೃದ್ಧೆಯಿಂದ ಆಚರಿಸುತ್ತಾರೆ.
ಈ ವರ್ಷ ಅಂದರೆ 2023ರಲ್ಲಿ ಕಾರ್ತಿಕ ಮಾಸವು ನವೆಂಬರ್ 14 ರಿಂದ ಪ್ರಾರಂಭವಾಗಿ ಡಿಸೆಂಬರ್ 12 ರಂದು ಕೊನೆಗೊಳ್ಳುತ್ತದೆ. ಹೀಗಾಗಿ ಈ ಅವಧಿಯಲ್ಲಿಯೇ ಹಲವು ಶಿವನ ದೇವಾಲಯಗಳಲ್ಲಿ ದೀಪೋತ್ಸವ ನಡೆಸಲಾಗುತ್ತದೆ. ಇನ್ನು ಈ ಒಂದು ತಿಂಗಳಲ್ಲಿ ಬರುವ ಪ್ರತಿ ಸೋಮವಾರವೂ ಕೂಡ ವಿಶೇಷವಾಗಿದ್ದು, ಶಿವನ ಆರಾಧನೆಗೆ ಸೂಕ್ತವಾದ ದಿನವಾಗಿದೆ.

ಈ ವರ್ಷದ ಕಾರ್ತಿಕ ಮಾಸದ ಮೊದಲ ಸೋಮವಾರ ನವೆಂಬರ್ 20ರಂದು ಬಂದಿದ್ದು, ನಾಳೆ ಶಿವನನ್ನು ಆರಾಧಿಸುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಕಾರ್ತಿಕ ಮಾಸದಲ್ಲಿ ಮಾಡುವ ತೀರ್ಥ ಸ್ನಾನ ಮಾಡಿ ಪೂಜೆ ಸಲ್ಲಿಸಿ ದೀಪ ದಾನ ಮಾಡುವುದಿಂದ ಶಿವನಿಂದ ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಕಾರ್ತಿಕ ಮಾಸದಂದು ಶಿವನನ್ನು ಆರಾಧಿಸುವ ಪರಿಯನ್ನು ಇಲ್ಲಿ ವಿವರಿಸಲಾಗಿದೆ.
ನಾಳೆ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಿ.
ಸೂರ್ಯೋದಯಕ್ಕೆ ಮುನ್ನ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಅಭಿಷೇಕ ಮಾಡಿ.
ಕಾರ್ತಿಕ ಮಾಸದ ಮೊದಲ ಸೋಮವಾರದಂದು ಉಪವಾಸ ಆಚರಿಸಬಹುದು.
ಉಪವಾಸ ಮಾಡುವವರು ಶಿವನಿಗೆ ಅಭಿಷೇಕ ಮಾಡಿದ ಬಳಿಕ ಉಪವಾಸ ಆರಂಭಿಸಬಹುದು.
ಸಂಜೆ ಪ್ರದೋಷಕಾಲದಲ್ಲಿ ದೇವರ ಮನೆಯಲ್ಲಿ ದೀಪಗಳನ್ನು ಬೆಳಗಿಸಿ ಶಿವನನ್ನು ಆರಾಧಿಸಿ.
ರಾತ್ರಿ ಚಂದ್ರ ಉದಯಿಸದ ನಂತರ ಶಿವನ ದೇವಾಲಯಕ್ಕೆ ತೆರಳಿ ದೀಪ ಬೆಳಗಿಸಿ.
ಶಿವ ಪಂಚಾಕ್ಷರಿ ಮಂತ್ರವನ್ನು ಪಠಿಸಿ ಉಪವಾಸವನ್ನು ಮುಕ್ತಾಯಗೊಳಿಸಬಹುದು.
ಇನ್ನು ಉಪವಾಸ ಆಚರಿಸದ ಭಕ್ತರು ಮದ್ಯ-ಮಾಂಸ ಸೇವನೆಗಳನ್ನು ಮಾಡಬಾರದು.
ಕಾರ್ತಿಕ ಸೋಮವಾರದಂದು ಶಿವನನ್ನು ಆರಾಧಿಸುವುದು ಅಂತ್ಯಂತ ಮಂಗಳಕರ. ಹೀಗಾಗಿ ಈ ದಿನ ಜಪ-ತಪ ಪೂಜೆಗಳನ್ನು ಮಾಡುವುದರಿಂದ ಕೋಟಿ ಸೋಮವಾರದ ಪುಣ್ಯ ಸಿಗುತ್ತದೆ ಎನ್ನುವುದು ಹಲವರ ನಂಬಿಕೆ.

ಕಾರ್ತಿಕ ಮಾಸ ಎಂದರೇನು..?
ದೇವರ ಆರಾಧನೆ ಸೀಮಿತವಾದ ಶ್ರೇಷ್ಠವಾದ ಮಾಸವೇ ಕಾರ್ತಿಕ ಮಾಸ ತಪಸ್ಸು ಮತ್ತು ಉಪವಾಸಗಳಿಗೆ ಈ ತಿಂಗಳು ಸೀಮಿತ. ಈ ತಿಂಗಳಲ್ಲಿ ಭಗವಾನ್ ವಿಷ್ಣುವು ನಾರಾಯಣನ ರೂಪದಲ್ಲಿ ನೀರಿನಲ್ಲಿ ನೆಲೆಸುತ್ತಾನೆ. ಇದರಿಂದ ಈ ಒಂದು ಸಂಪೂರ್ಣ ತಿಂಗಳು ಸೂರ್ಯೋದಯಕ್ಕೆ ಮೊದಲು ನದಿ ಅಥವಾ ಕೊಳದಲ್ಲಿ ಸ್ನಾನ ಮಾಡುವುದರಿಂದ ಅಕ್ಷಯ ಪುಣ್ಯ ಬರುತ್ತದೆ ಎನ್ನುವ ನಂಬಿಕೆ ಇದೆ.
ಇನ್ನು ಈ ತಿಂಗಳಲ್ಲಿ ಕುಮಾರ ಕಾರ್ತಿಕೇಯನು ತಾರಕಾಸುರನನ್ನು ಸಂಹಾರ ಮಾಡಿದನು ಎಂದು ಹೇಳಲಾಗುತ್ತದೆ. ಹೀಗಾಗಿ ಕುಮಾರ ಕಾರ್ತಿಕೇಯನ ಧೈರ್ಯ ಸಾಹಸಗಳನ್ನು ಗೌರವಿಸಲು ಹಾಗೂ ಆತನ ಒಳ್ಳೆಯ ಕಾರ್ಯವನ್ನು ಸ್ಮರಿಸಲು ಈ ತಿಂಗಳಿಗೆ ಕಾರ್ತಿಕ ಎಂದು ಕರೆಯಲಾಗುತ್ತದೆ ಎನ್ನುವ ಉಲ್ಲೇಖವೂ ಇದೆ. ಹೀಗಾಗಿ ಈ ಮಾಸದಲ್ಲಿ ಭಕ್ತಯಿಂದ ದೇವರನ್ನು ಪ್ರಾರ್ಥಿಸಿದರೆ ಸರ್ವ ಇಷ್ಟಗಳು ಪ್ರಾಪ್ತಿಯಾಗುತ್ತದೆ.












Click it and Unblock the Notifications