ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಹುತ್ತರಿ ಹಬ್ಬ, ಮನೆಗೆ ಬಂದಳು ಧಾನ್ಯಲಕ್ಷ್ಮಿ!

By ಬಿ.ಎಂ.ಲವಕುಮಾರ್
|
Google Oneindia Kannada News

ಒಂದೆಡೆ ಗುಂಪು ಗಲಭೆ, ಮತ್ತೊಂದೆಡೆ ಚಂಡಮಾರುತದ ಪರಿಣಾಮದಿಂದ ಮುಸುಕು ಹೊದ್ದಿದ್ದ ಕೊಡಗು ತಿಳಿಯಾಗುತ್ತಿದೆ. ನ.26ರ ಬುಧವಾರದಂದು ಆಚರಿಸಲಾಗುವ ಕೊಡಗಿನ ಸುಗ್ಗಿಯ ಹಬ್ಬವಾದ ಹುತ್ತರಿ ಹಬ್ಬಕ್ಕೆ ಜನ ತಯಾರಾಗುತ್ತಿದ್ದಾರೆ. ಇದು ಈ ವರ್ಷದ ಕೊನೆಯ ಹಬ್ಬ. ಅಷ್ಟೇ ಅಲ್ಲ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಹಬ್ಬವೂ ಹೌದು. ಹೀಗಾಗಿ ಎಲ್ಲೆಡೆ ಸಡಗರ, ಸಂಭ್ರಮ ಮನೆ ಮಾಡುತ್ತಿದೆ.

ಮೊದಲೆಲ್ಲ ಗದ್ದೆಯೇ ಕೊಡಗಿನವರ ಜೀವಾಳವಾಗಿತ್ತು. ಭತ್ತದ ಕೃಷಿಗೆ ಪ್ರಾಧಾನ್ಯತೆ ನೀಡಲಾಗುತ್ತಿತ್ತು. ಭತ್ತವನ್ನು ಧಾನ್ಯ ಲಕ್ಷ್ಮಿ ಎಂದು ನಂಬಿದ್ದ ಜನ ಮನೆಯಲ್ಲಿ ಭತ್ತವಿದ್ದರೆ ಸಕಲ ಐಶ್ವರ್ಯವಿದ್ದಂತೆ ಎಂದು ನಂಬಿದ್ದರು. ಹೀಗಾಗಿ ಭತ್ತದ ಕೃಷಿ ಆಧರಿಸಿ ಹುತ್ತರಿ ಹಬ್ಬವನ್ನು ಆಚರಿಸುತ್ತಿದ್ದರು.

ಈಗ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯತೊಡಗಿದೆ. ಆರ್ಥಿಕ ದೃಷ್ಠಿಯಿಂದ ನೋಡುವುದಾದರೆ ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿ ಕೊಡಗಿನವರ ಪಾಲಿಗೆ ನಷ್ಟವಾಗುತ್ತಿದೆ. ಆದ್ದರಿಂದ ತಮಗೆ ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಕೃಷಿ ಮಾಡುತ್ತಿದ್ದಾರೆ. ಉಳಿದಂತೆ ಕೆಲವರು ತೋಟವನ್ನಾಗಿ ಮಾರ್ಪಡಿಸಿದರೆ, ಇನ್ನು ಕೆಲವರು ಪಾಳು ಬಿಟ್ಟಿದ್ದಾರೆ. ಆದರೂ ಹುತ್ತರಿ ಹಬ್ಬದ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ.['ಕರ್ನಾಟಕದ ಕಾಶ್ಮೀರ' ಕೊಡಗು ಪ್ರವಾಸಿಗರಿಲ್ಲದೆ ಖಾಲಿ..ಖಾಲಿ]

ಹಬ್ಬದ ಆಚರಣೆಯನ್ನು ಮಾಡಿ ತೀರಲೇ ಬೇಕೆಂದು ಸಾಂಪ್ರದಾಯವಾಗಿ ಕದಿರು ತೆಗೆಯಲು ಅನುಕೂಲವಾಗುವಂತೆ ಕೆಲವರು ಮನೆ ಬಳಿಯೇ ಚಿಕ್ಕ ಗದ್ದೆಮಾಡಿ ಅದರಲ್ಲಿ ಭತ್ತ ನೆಟ್ಟಿದ್ದರೆ, ಮತ್ತೆ ಕೆಲವರು ಮನೆಯ ಕಾಂಪೌಂಡ್ ನಲ್ಲಿ ಭತ್ತದ ಸಸಿನೆಟ್ಟು ಆರೈಕೆ ಮಾಡಿ ಹಬ್ಬದ ದಿನ ಕದಿರು ತೆಗೆದು ಸಂಭ್ರಮಿಸುತ್ತಾರೆ. ಬನ್ನಿ ಹುತ್ತರಿ ಹಬ್ಬಕ್ಕೆ ತಯಾರಿ ನಡೆಸುತ್ತಿರುವ ಸೊಬಗನ್ನು ನೋಡೋಣ.

ಹುತ್ತರಿ ಹಬ್ಬದ ಆಚರಣೆ ಹೇಗೆ?

ಹುತ್ತರಿ ಹಬ್ಬದ ಆಚರಣೆ ಹೇಗೆ?

ಹುತ್ತರಿ ಹಬ್ಬದ ಆಚರಣೆಯ ಬಗ್ಗೆ ಹೇಳುವುದಾದರೆ ಹುತ್ತರಿಗೆ ತನ್ನದೇ ಆದ ಸಂಪ್ರದಾಯವಿದೆ. ಹಬ್ಬದ ದಿನದಂದು ಕುಟುಂಬದ ಸದಸ್ಯರೆಲ್ಲರೂ "ಐನ್ ಮನೆ"(ಕುಟುಂಬದ ಹಿರಿಮನೆ)ಯಲ್ಲಿ ಸೇರಿ ಮನೆಯ 'ನೆಲ್ಲಕ್ಕಿ' ನಡುಬಾಡೆ (ಮನೆಯ ನಡುವಿನ ಕೋಣೆ)ಯಲ್ಲಿ ತೂಗು ದೀಪದ ಕೆಳಗೆ ಚಾಪೆ ಹಾಸಿ ಹುತ್ತರಿ ಕುಕ್ಕೆಯಲ್ಲಿ ಮಾವಿನ ಎಲೆ, ಅರಳಿ ಎಲೆ, ಹಲಸಿನ ಎಲೆ, ಕುಂಬಳಿ ಎಲೆ, ಕಾಡು ಗೇರು ಎಲೆ ಹೀಗೆ ಐದು ತರಹದ ಎಲೆಯನ್ನು ಹಾಗೂ ಕಾಡಿನಲ್ಲಿ ಸಿಗುವ ಅಚ್ಚುನಾರನ್ನು ಇರಿಸಲಾಗುತ್ತದೆ. ಮತ್ತೊಂದು ಕುಕ್ಕೆಯ ತುಂಬ ಭತ್ತ ತುಂಬಿ ಅದರ ಮೇಲೆ ಅರ್ಧ ಸೇರಿನಲ್ಲಿ ಅಕ್ಕಿ ತುಂಬಿಡಲಾಗುತ್ತದೆ.

ಹುತ್ತರಿ ಕುಡಿಕೆಯಲ್ಲಿ ಏನಿರುತ್ತದೆ?

ಹುತ್ತರಿ ಕುಡಿಕೆಯಲ್ಲಿ ಏನಿರುತ್ತದೆ?

ನಿಜ ಹೇಳಬೇಕೆಂದರೆ ಹುತ್ತರಿ ಕೇವಲ ಒಂದು ಹಬ್ಬವಲ್ಲ, ಅದು ಕೊಡಗಿನ ಸಂಸ್ಕøತಿ, ಸಂಪ್ರದಾಯದ ಲೇಪನ, ಜಾನಪದದ ಹಿನ್ನಲೆ ಮಿಳಿತಗೊಂಡ ಉತ್ಸವ. ಹುತ್ತರಿ ಕುಡಿಕೆಯಲ್ಲಿ ತಂಬಿಟ್ಟು ಹಾಕಿ ಅದರ ಜೊತೆ ಹಾಲು, ತುಪ್ಪ, ಜೇನು, ಎಳ್ಳು, ಶುಂಠಿ, ತೆಂಗಿನಕಾಯಿ, ಹಾಗಲಕಾಯಿ, ಮುಳ್ಳು ಇಡಲಾಗುತ್ತದೆ. ಇದರ ಪಕ್ಕದಲ್ಲಿ ಕುಡುಗೋಲು, ಮುಕ್ಕಾಲಿಯ ಮೇಲೆ 'ತಳಿಯಕ್ಕಿ ಬೊಳ್ಚ', ಮೂರು ವೀಳ್ಯದೆಲೆ ಹಾಗೂ ಮೂರು ಅಡಿಕೆಯನ್ನು ಇಡಲಾಗುತ್ತದೆ.

ಹುತ್ತರಿ ಹಬ್ಬದಲ್ಲಿ ನೆರೆ ಕಟ್ಟುವುದು ಎಂದರೇನು?

ಹುತ್ತರಿ ಹಬ್ಬದಲ್ಲಿ ನೆರೆ ಕಟ್ಟುವುದು ಎಂದರೇನು?

ಮುತೈದೆಯರು ಅಕ್ಕಿ ಹಿಟ್ಟಿನಿಂದ ಹಬ್ಬಾಚರಣೆಗೆ ಇರಿಸಲಾದ ವಸ್ತುಗಳ ಮುಂದೆ ರಂಗೋಲಿ ಇಡುತ್ತಾರೆ. ಬಳಿಕ ದೇವರನ್ನು ಪ್ರಾರ್ಥಿಸುತ್ತಾ ಎಲೆಗಳನ್ನು ಸಂಪ್ರದಾಯದಂತೆ ಒಂದರ ಮೇಲೊಂದು ಇಟ್ಟು ನಾರಿನಿಂದ ಕಟ್ಟಲಾಗುತ್ತದೆ. ಇದನ್ನು ನೆರೆ ಕಟ್ಟುವುದು ಎಂದು ಕರೆಯುತ್ತಾರೆ. ಬಳಿಕ ಬೇಯಿಸಿದ ಹುತ್ತರಿ ಗೆಣಸನ್ನು ಜೇನುತುಪ್ಪ, ಬೆಲ್ಲ ಹಾಗೂ ತುಪ್ಪದೊಂದಿಗೆ ಸೇವಿಸುತ್ತಾರೆ. ಜೊತೆಗೆ ಇತರೆ ತಿಂಡಿ ತೀರ್ಥಗಳೂ ಇರುತ್ತವೆ. ಇದನ್ನು ಫಲಹಾರ ಎನ್ನುತ್ತಾರೆ.

ಫಲಹಾರ ಸೇವಿಸಿದ ಬಳಿಕ ಏನು ಮಾಡ್ತಾರೆ?

ಫಲಹಾರ ಸೇವಿಸಿದ ಬಳಿಕ ಏನು ಮಾಡ್ತಾರೆ?

ಫಲಹಾರದ ಬಳಿಕ ಸಿದ್ದಪಡಿಸಲಾದ 'ಕುತ್ತಿ'ಯನ್ನು ಕುಟುಂಬದ ಹಿರಿಯರೊಬ್ಬರು ಹೊತ್ತು ಊರಿನಲ್ಲಿರುವ ಅಂಬಲ(ಮೈದಾನ)ಕ್ಕೆ ತೆರಳುತ್ತಾರೆ. ಅಲ್ಲಿಗೆ ಸುತ್ತಮುತ್ತಲಿನ ಕುಟುಂಬದವರು, ಸಂಬಂಧಿಕರು ಬರುತ್ತಾರೆ. ಅಲ್ಲಿಂದ ಮನೆಯ ಹಿರಿಯ ವ್ಯಕ್ತಿ ಕದಿರು ತೆಗೆಯಲು ಕುಡುಗೋಲನ್ನು ಕದಿರು ತೆಗೆಯುವವನ ಕೈಗೆ ನೀಡುತ್ತಾರೆ. ಈ ಸಂದರ್ಭ ಮುತೈದೆಯೊಬ್ಬರು 'ತಳಿಯಕ್ಕಿ ಬೊಳ್ಚ'ವನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ಮನೆಯವರೆಲ್ಲರೂ ಒಡ್ಡೋಲಗದೊಂದಿಗೆ ಕದಿರು ಕೊಯ್ಯುವ ಗದ್ದೆಯತ್ತ ತೆರಳುತ್ತಾರೆ.

ಗದ್ದೆ ತಲುಪಿದ ಬಳಿಕ ಏನೆಲ್ಲಾ ಆಚರಣೆ ಮಾಡ್ತಾರೆ?

ಗದ್ದೆ ತಲುಪಿದ ಬಳಿಕ ಏನೆಲ್ಲಾ ಆಚರಣೆ ಮಾಡ್ತಾರೆ?

ಗದ್ದೆ ತಲುಪಿದ ಬಳಿಕ ಹಾಲುಜೇನು ಮೊದಲಾದುವುಗಳನ್ನು ಕದಿರಿನ ಬುಡಕ್ಕೆ ಸುರಿಯಲಾಗುತ್ತದೆ. ಹುತ್ತರಿ ಕುಕ್ಕೆಯಲ್ಲಿ ಕೊಂಡೊಯ್ದ ಅಚ್ಚುನಾರಿನಿಂದ ಕಟ್ಟಿದ ಎಲೆಗಳನ್ನೊಳಗೊಂಡ ನೆರೆಯನ್ನು ಕದಿರಿನ ಬುಡಕ್ಕೆ ಕಟ್ಟಲಾಗುತ್ತದೆ. ಆ ನಂತರ ಹುತ್ತರಿ ಮೂಹೂರ್ತಕ್ಕೆ ಸುಸೂತ್ರ ಎನಿಸುವಂತೆ ಗುಂಡೊಂದನ್ನು ಹಾರಿಸಲಾಗುತ್ತದೆ. ಕುತ್ತಿ ಹೊತ್ತ ಕುಟುಂಬದ ಹಿರಿಯ ವ್ಯಕ್ತಿ ದೇವರನ್ನು ಪ್ರಾರ್ಥಿಸಿ, ಕದಿರನ್ನು ಬೆಸ ಸಂಖ್ಯೆಯಲ್ಲಿ ಕೊಯ್ದು ಹುತ್ತರಿ ಕುಕ್ಕೆಯಲ್ಲಿ ಇಡಲಾಗುತ್ತದೆ. ಈ ಸಂದರ್ಭ ನೆರೆದವರು 'ಪೊಲಿ ಪೊಲಿ ದೇವಾ' ಎಂದು ಘೋಷಣೆ ಕೂಗುತ್ತಾರೆ. ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.

ಕದಿರು ಕುಯ್ದ ಬಳಿಕ ಕದಿರನ್ನು ಏನು ಮಾಡ್ತಾರೆ?

ಕದಿರು ಕುಯ್ದ ಬಳಿಕ ಕದಿರನ್ನು ಏನು ಮಾಡ್ತಾರೆ?

ಕದಿರು ತುಂಬಿದ ಕುಕ್ಕೆಯನ್ನು ತಲೆಯಲ್ಲಿ ಹೊತ್ತು 'ಪೊಲಿ ಪೊಲಿ ದೇವಾ' ಎಂದು ಘೋಷಣೆ ಕೂಗುತ್ತಾ ಬರಲಾಗುತ್ತದೆ. ಅಲ್ಲದೆ ಕದಿರನ್ನು ಕೆಲವು ಕುಟುಂಬದವರು ದೇವಸ್ಥಾನಕ್ಕೆ ಅರ್ಪಿಸಿ ಬಳಿಕ ಮನೆಗೆ ತೆರಳಿದರೆ ಇನ್ನು ಕೆಲವರು ನೇರವಾಗಿ ಒಕ್ಕಲು ಕಣಕ್ಕೆ ತೆರಳಿ ಮನೆಗೆ ತೆರಳುತ್ತಾರೆ.

ಮನೆಗೆ ತಂದ ಹೊಸ ಅಕ್ಕಿಯಿಂದ ಮಾಡುವ ಭಕ್ಷ್ಯ ಏನು?

ಮನೆಗೆ ತಂದ ಹೊಸ ಅಕ್ಕಿಯಿಂದ ಮಾಡುವ ಭಕ್ಷ್ಯ ಏನು?

ಮನೆಯಲ್ಲಿದ್ದ ಮುತೈದೆ ಕದಿರು ಕೊಯ್ದವನ ಕಾಲು ತೊಳೆದು ಹಾಲು ನೀಡಿ ಧಾನ್ಯ ಲಕ್ಷ್ಮಿಯನ್ನು ಮನೆತುಂಬಿಸಿಕೊಳ್ಳುತ್ತಾರೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಂಡ ನಂತರ ಕದಿರನ್ನು ಆಯುಧ, ವಾಹನ ಮುಂತಾದವುಗಳಿಗೆ ಕಟ್ಟಲಾಗುತ್ತದೆ. ಬಳಿಕ ಮನೆಯಲ್ಲಿ ಹೊಸ ಅಕ್ಕಿ ಪಾಯಸ ಮಾಡಿ ಸದಸ್ಯರೆಲ್ಲಾ ಒಂದೆಡೆ ಕುಳಿತು ಊಟ ಮಾಡುತ್ತಾರೆ.

ಹಬ್ಬದ ಸಂದರ್ಭದಲ್ಲಿ ಮೇಳೈಸುವ ಜನಪದ ಕಲೆಗಳು

ಹಬ್ಬದ ಸಂದರ್ಭದಲ್ಲಿ ಮೇಳೈಸುವ ಜನಪದ ಕಲೆಗಳು

ಹುತ್ತರಿ ಹಬ್ಬ ಕಳೆದ ಬಳಿಕ ನಾಡ್ ಮಂದ್ ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಹುತ್ತರಿ ಕೋಲಾಟ ನಡೆಸುತ್ತಾರೆ. ಹುತ್ತರಿ ಹಬ್ಬ ಇತರೆ ಎಲ್ಲಾ ಹಬ್ಬಗಳಿಗಿಂತ ವಿಭಿನ್ನ. ಈ ಹಬ್ಬ ಕಳೆದರೂ ಅದರ ಸಂಭ್ರಮ ಕೆಲವು ದಿನಗಳವರೆಗೆ ಕೊಡಗಿನಲ್ಲಿ ಕಾಣುತ್ತಿರುತ್ತದೆ. ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಇದರೊಂದಿಗೆ ಸಾಂಪ್ರದಾಯಿಕ ಕೋಲಾಟ, ಪರೆಯಕಳಿಯಂತಹ ನೃತ್ಯಗಳು ಮೇಳೈಸಿ ಹಬ್ಬಕ್ಕೆ ಮೆರಗು ನೀಡುತ್ತವೆ.

English summary
Huttari is the annual rice harvest festival of Kodagu. Its usually celebrated in late November or December first week. That day lady of the house fills the Huttari basket with paddy, some rice and rice flour with milk, honey, ghee. This is carried by an unmarried women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X