ಡಿಸೆಂಬರ್ 1 ಏಡ್ಸ್ ದಿನಾಚರಣೆ : ಒಂದಿಷ್ಟು ಉಪಯುಕ್ತ ಮಾಹಿತಿ

By: ಚೈತ್ರಾ ಬಡಿಗೇರ್, ಬೆಂಗಳೂರು
Subscribe to Oneindia Kannada

1988 ಡಿಸೆಂಬರ್ 1ರಂದು ಪ್ರತಿವರ್ಷ ವಿಶ್ವಾದ್ಯಂತ ಎಚ್ಐವಿ ಪೀಡಿತರಿಗಾಗಿ, ಸೋಂಕಿನಿಂದ ಪ್ರಾಣ ತ್ಯಜಿಸಿಸಿದವರಿಗಾಗಿ ಆಚರಿಸಲ್ಪಡುವ ದಿನ "ಏಡ್ಸ್ ದಿನಾಚರಣೆ". ಇದೊಂದು ಮಾನಸಿಕ ಸ್ಥೈರ್ಯ ತುಂಬುವ ದಿನ, ಜಾಗೃತಿ ಮೂಡಿಸುವ ದಿನ, ಜನರ ಮೌಢ್ಯತೆಯನ್ನು ಮಟ್ಟ ಹಾಕುವ ದಿನ.

ಎಚ್ಐವಿ ಒಂದು ವೈರಸ್, ಇದರಿಂದ ಸೋಂಕಿತರಾದರೆ ದೇಹದ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಾ ಹೋಗುತ್ತದೆ. ಎಚ್ಐವಿಯ ಕೊನೆಯ ಹಂತವನ್ನು ಏಡ್ಸ್ (ಆಕ್ವೈರ್ಡ್ ಇಮ್ಯುನೊ ಡೆಫಿಸಿಯನ್ಸಿ ಸಿಂಡ್ರೋಮ್) ಎಂದು ಕರೆಯುತ್ತಾರೆ. ಈ ರೋಗದಿಂದಾಗಿ ವಿಶ್ವದಾದ್ಯಂತ ಕೋಟ್ಯಂತರ ಜನ ಸಾವಿಗೀಡಾಗಿದ್ದಾರೆ.

ಸೂಕ್ತವಾದ ಚಿಕಿತ್ಸೆ ಇಲ್ಲದಿರುವುದು ಮತ್ತು ಹೆಚ್ಚಾಗಿ ಈ ರೋಗ ಹರಡುವ ಬಗ್ಗೆ ಸೂಕ್ತವಾದ ಜ್ಞಾನ ಇಲ್ಲದಿರುವುದು ಸಾವಿನ ಸಂಖ್ಯೆ ಏರಲು ಕಾರಣವಾಗುತ್ತಿದೆ. ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಜನರು ಈ ರೋಗದಿಂದ ಅಸುನೀಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯಗಳಲ್ಲಿ ಪ್ರಮುಖವಾಗಿದೆ.

World AIDS Day on 1st December : Must know information

ಎಚ್ಐವಿ ಹೇಗೆ ಹರಡುತ್ತದೆ?

1. ಸೋಂಕಿತ ವ್ಯಕ್ತಿಯ ವಿರ್ಯಾಣು, ರಕ್ತ, ಯೋನಿ, ಗುದ ಭಾಗದ ಮತ್ತು ಎದೆ ಹಾಲಿನ ದ್ರವದಲ್ಲಿ ಎಚ್ಐವಿ ರೋಗಾಣು ಇರುತ್ತದೆ. ಇವುಗಳ ಮೂಲಕ ಎಚ್ಐವಿ ಹರಡುವ ಸಾಧ್ಯತೆ ಇದೆ
2. ಸೋಂಕಿತರಿಂದ ಸುರಕ್ಷತಾ ರಹಿತ ಲೈಂಗಿಕ ಕ್ರಿಯೆ.
3. ಸೋಂಕಿತರಿಗಾಗಿ ಬಳಸಾದ ಇಂಜೆಕ್ಷನ್, ಅಥವಾ ಆಪರೇಶನ್ ಪರಿಕರಗಳ ಮರು ಬಳಕೆ.
4. ಎಚ್ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಮತ್ತು ಪ್ರಸವದ ನಂತರ ಸ್ತನ ಪಾನದ ಮೂಲಕವೂ ಮಗುವಿಗೆ ಹರಡಬಹುದು.
5. ರಕ್ತ ದಾನ ಮತ್ತು ದೇಹದ ಇತರ ಭಾಗಗಳನ್ನು ದಾನ ಮಾಡುವವರು ಎಚ್ಐವಿ ಸೋಂಕಿತರಾಗಿದ್ದರೆ, ಅದನ್ನು ಪಡೆಯುವ ವ್ಯಕ್ತಿಗಳಿಗೆ ಹರಡುವ ಸಾದ್ಯತೆ ಇದೆ.

ಎಚ್ಐವಿ ಸೋಂಕಿನ ಬಗ್ಗೆ ಭ್ರಮೆಗಳು:

1. ಎಚ್ಐವಿ ಸೋಂಕಿತರನ್ನು ಮುಟ್ಟಿದ್ರೇನೆ ನಮಗೂ ಏಡ್ಸ್ ಬರತ್ತೆ ಅನ್ನೋ ಮನೋ ಭಾವ.
2. ಎಚ್ಐವಿ ಬೆವರು, ಮೂತ್ರ, ಎಂಜಲಿನ ಮೂಲಕ ಹರಡುವುದಿಲ್ಲಾ.
3. ಎಚ್ಐವಿ ಸೋಂಕು ಕೇವಲ ಲೈಂಗಿಕತೆಯಿಂದ ಮಾತ್ರ ಬರುವುದಿಲ್ಲ, ಮೇಲೆ ನಮೂದಿಸಿದ ಅನ್ಯ ಕಾರಣದಿಂದಲೂ ಬರಬಹುದು.

ಏಡ್ಸ್ ದಿನಾಚರಣೆಗೆ ನಾವೇನು ಮಾಡಬೇಕು?

1. ಬೇರೆ ರೋಗದಂತೆ ಏಡ್ಸ್ ಸಹ ಒಂದು ರೋಗ, ನಮ್ಮಂತೆ ಅವರೂ ಮನುಷ್ಯರು, ನಮ್ಮೊಂದಿಗೆ ಅವರಿಗೂ ಬದುಕುವ ಅರ್ಹತೆ ಇದೆ ಎಂಬುದನ್ನು ಮನಗಾಣಬೇಕು.

2. ಎಚ್ಐವಿ ಸೋಂಕಿತರನ್ನು ಅಸೃಶ್ಯರಂತೆ ಕಾಣದೆ, ಅವರಿಗೆ ಏಡ್ಸ್ ಬಗ್ಗೆ ವೈಜ್ಞಾನಿಕ, ವೈದ್ಯಕೀಯ ಮಾಹಿತಿ ನೀಡಬೇಕು. ಭಾರತದಲ್ಲಿ ಲೈಂಗಿಕ ಸೋಂಕಿಗಿಂತ ಹೆಚ್ಚಾಗಿ ಅಜ್ಞಾನದಿಂದ ಅಮಾಯಕರು ಏಡ್ಸ್ ಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಸಹ ಇದರಿಂದ ಹೊರತಾಗಿಲ್ಲ.

3. ಏಡ್ಸ್ ಬಂದರೆ ಸಾವೇ ಗತಿ ಎಂಬ ಪೂರ್ವಾಗ್ರಹ ತಲೆಯಿಂದ ತೆಗೆಯಬೇಕು. ಮೊದಲ ಹಂತದಲ್ಲಿಯೇ ಎಚ್ಐವಿ ನಿಯಂತ್ರಿಸಬಹುದು ಎಂಬುದನ್ನು ತಿಳಿಸಬೇಕು.

4. ಏಡ್ಸ್ ಅನ್ನೂ ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ವೈದ್ಯಲೋಕ ಯಶಸ್ವಿ ಆಗಿಲ್ಲ. ಇದರ ಬಗ್ಗೆ ಇನ್ನೂ ಅಧ್ಯಯನ ನಡೆಸಿ ಏಡ್ಸ್ ಮತ್ತು ಎಚ್ಐವಿ ನಿರ್ಮೂಲನೆ ಮಾಡಬೇಕು.

5. ಏಡ್ಸ್ ಪೀಡಿತರಿಗೆ ಮಾನಸಿಕ ಸ್ಥೈರ್ಯ ತುಂಬಿ. ಕೈಲಾದ ಆರ್ಥಿಕ ಸಹಾಯ ಮಾಡಬೇಕು.

6. ಏಡ್ಸ್ ಎಂದರೆ ಸಾವು ಎಂಬುದನ್ನು ಮರೆಸಿ, ಅವರಿನ್ನು ನಮ್ಮೊಂದಿಗೆ ಬೆರೆಸಿ ಅವರಿಗೆ ಸೂಕ್ತವಾದ ಕೆಲಸ, ಜವಾಬ್ದಾರಿಗಳನ್ನು ಕೊಡಬೇಕು.

7. ಏಡ್ಸ್ ಪೀಡಿತರಿಗೆ ಕೇವಲ ಅನುಕಂಪ, ಕಂಬನಿ ಮಿಡಿಯದೆ ಸಮಾಜದ ಭಾಗವಾಗಿ ಪರಿಗಣಿಸಿ, ಅವರೂ ಸಮಾಜಕ್ಕಾಗಿ ದುಡಿಯುವಂತೆ ಮಾಡಬೇಕು.

8. ಏಡ್ಸ್ ಸಂಬಂಧಿತ ಸರ್ಕಾರದ ಎಷ್ಟೋ ಯೋಜನೆಗಳು, ಉಚಿತ ಸೇವೆಗಳು ಜನರನ್ನು ತಲುಪುತ್ತಿಲ್ಲ, ಅವನ್ನು ತಲುಪಿಸುವಲ್ಲಿ ಕೈ ಜೋಡಿಸಬೇಕು.

9. ಗ್ರಾಮೀಣ ಭಾಗದಲ್ಲಿ ಏಡ್ಸ್ ಎಂದರೆ ಕೇಳಿರದ ಎಷ್ಟೋ ಕಿವಿಗಳಿವೆ. ಆ ಭಾಗಗಳನ್ನು ತಲುಪಿ ಜನರಿಗೆ ಜಾಗೃತಿ ಮೂಡಿಸಬೇಕು.

10. ವೇಶ್ಯೆಯರಿಗೆ, ಸೆಕ್ಸ್ ವರ್ಕರ್ಸ್ ಗೆ ಎಚ್ಐವಿ ಸೋಂಕು, ಮತ್ತು ಕಾಂಡಮ್ ಮಹತ್ವವನ್ನು ತಿಳಿಸಬೇಕು. ಅವರಿಗೆ ಮತ್ತು ಅವರ ಮಕ್ಕಳಿಗೆ ಎಚ್ಐವಿ ಇನ್ಸುರನ್ಸ್ ಥರ ಏನಾದ್ರೂ ಜೀವನಕ್ಕೆ ಸೆಕ್ಯುರಿಟಿ ಮಾಡಿಸಬೇಕು.

11. ಅಸುರಕ್ಷಿತ ಅನೈತಿಕ ಸಂಬಂಧವನ್ನು ದೂರವಿಡಬೇಕು. ಎಚ್ಐವಿಯ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಬಹಿರಂಗವಾಗಿ ಚರ್ಚಿಸಿ, ಉಪಯುಕ್ತ ಸಲಹೆ ಮತ್ತು ತಪಾಸಣೆ ಮಾಡಿಸಿಕೊಳ್ಳಬೇಕು.

12. ಎಚ್ಐವಿ ಪೀಡಿತರಿಗೆ ಲೈಂಗಿಕತೆಯ ಹಣೆ ಪಟ್ಟಿ ಕಟ್ಟಿ ಅವರನ್ನು ಸಮಾಜದಲ್ಲಿ ಮುಖಕ್ಕೆ ಪಟ್ಟಿ ಕಟ್ಟಿಕೊಂಡು ಓಡಾಡುವಂತೆ ಮಾಡಿದ್ದೇವೆ.ಅವರಿಗೆ ಮತ್ತು ಅವರ ಸಮಸ್ಯೆಗೆ. ಮುಕ್ತವಾದ ಚರ್ಚೆಗೆ ಸೂಕ್ತವಾದ ವೇದಿಕೆ ನಿರ್ಮಾಣವಾಗಬೇಕು. ಕೌನ್ಸಲಿಂಗ್ ಗಳು ಸಕ್ರೀಯವಾಗಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
World AIDS Day on 1st December : This day is dedicated to raising awareness of the AIDS pandemic caused by the spread of HIV infection, and mourning those who have died of the disease.
Please Wait while comments are loading...