ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶಿಯಾತ್ರೆ ಎಂಬ ಸುಸಂಬದ್ಧ ಮದುವೆ ಸಂಪ್ರದಾಯ

By ಪ್ರಸಾದ ನಾಯಿಕ
|
Google Oneindia Kannada News

ಇಡೀ ದೇಶದ ಕಣ್ಣು ಉತ್ತರಪ್ರದೇಶದ ವಾರಣಾಸಿ ಮೇಲೆ ನೆಟ್ಟಿದೆ. ಮೇ 12ರಂದು ನಡೆಯುತ್ತಿರುವ ಚುನಾವಣೆಯಲ್ಲಿ ವಾರಣಾಸಿಯಿಂದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ನಡುವೆ ನಿರ್ಣಾಯಕ ಕದನ ನಡೆಯುತ್ತಿದೆ. ವಾರಣಾಸಿಯನ್ನು ಕಾಶಿ ಅಂತಲೂ ಕರೆಯುತ್ತಾರೆ ಎಂಬುದು ನಿಮಗೆ ತಿಳಿದಿರಲಿ. ಹಿಂದೂಗಳ ಪವಿತ್ರಕ್ಷೇತ್ರವಾದ ಕಾಶಿ ನಮ್ಮ ಹಿಂದೂ ಮದುವೆ ಸಂಪ್ರದಾಯದಲ್ಲಿ ಕೂಡ ಮಹತ್ವದ ಸ್ಥಾನ ಪಡೆದಿದೆ. ಅದೇ ಮದುವೆಯಲ್ಲಿ ಆಚರಿಸಲಾಗುವ ಕಾಶಿಯಾತ್ರೆ. ಈ ವಿಶಿಷ್ಟ ಪದ್ಧತಿಯ ಕುರಿತಾದ ಬರಹವೇ ಇದು.

***

"ಏ ಬ್ಯಾಡ್ ಬ್ಯಾಡ್ ಬ್ಯಾಡ್, ತಿನ್ನಂಗಿಲ್ರಿ ಬ್ಯಾಡ್ ಬ್ಯಾಡ್ ಹಾಕಬ್ಯಾಡ್ರಿ...." ಬಾಳೆಎಲೆಯ ಮೇಲೆ ಊಟಕ್ಕೆ ಕುಳಿತವರೊಬ್ಬರು ಜಿಲೇಬಿಯಾಗಲಿ, ಮೋತಿಚೂರ ಲಡ್ಡುವನ್ನಾಗಲಿ ಬಡಿಸಲು ಬಂದಾಗ ಎರಡೂ ಕೈಗಳನ್ನು ಎಲೆಯ ಮೇಲೆ ಕ್ರಾಸ್ ಆಗಿ ಹಿಡಿದುಕೊಂಡು, ಮುಖ ಬಗ್ಗಿಸಿ "ಬ್ಯಾಡ್ ಬ್ಯಾಡ್ ಬ್ಯಾಡ್" ಅನ್ನುವುದನ್ನು ನೀವು ನೋಡಿರಬಹುದು. ಇವರು ಹಾಕಿಸಿಕೊಳ್ಳುವುದಿಲ್ಲ, ಅವರು ಬಿಡುವುದಿಲ್ಲ. 'ಹಾಕ್ರಿ ಹಾಕ್ರಿ' ಅಂತ ಅಕ್ಕಪಕ್ಕದವರ ಬಲವಂತ ಬೇರೆ! ಬಲವಂತವಾಗಿ ಹಾಕಿದರೂ, ತಿನ್ನಲು ಇಷ್ಟವಿದ್ದರೂ ಎತ್ತಿ ಪಕ್ಕಕ್ಕೆ ಇಟ್ಟುಬಿಡುತ್ತಾರೆ.

Kashi Yatra : A marriage ritual in Hindus

ಇಂಥ ಸ್ವಾದಿಷ್ಟ ಸಿಹಿತಿನಿಸು, ಮಧುಮೇಹದಿಂದ ಬಳಲುತ್ತಿರುವವರನ್ನು ಹೊರತುಪಡಿಸಿ ಯಾರಿಗಿಷ್ಟವಿರುವುದಿಲ್ಲ ಹೇಳಿ? ಆ ತಿನಿಸು 'ಬ್ಯಾಡ್' ಆಗಿದೆ ಅಥವಾ ತಿನ್ನಲು ಯೋಗ್ಯವಲ್ಲ ಅಂತ ಅರ್ಥನೂ ಅಲ್ಲ. ಅಸಲಿಗೆ, ಆ ಮಹಾಶಯರು ಆ 'ಅತೀ ಇಷ್ಟವಾದ' ಖಾದ್ಯವನ್ನು ತಿನ್ನುವುದನ್ನು ತ್ಯಜಿಸಿರುತ್ತಾರೆ. ಇಷ್ಟವಾಗಿದ್ದರೂ ತಿನ್ನಬಾರದೆಂದು ತಮ್ಮ ಮೇಲೆಯೇ ನಿಷೇಧ ಹೇರಿಕೊಂಡಿರುತ್ತಾರೆ. ಅರ್ಥಾತ್ ಆ ತಿನಿಸನ್ನು ಬಿಟ್ಟುಬಂದಿರುತ್ತಾರೆ. ಅದೂ ಎಲ್ಲಿ? ಹಿಂದೂಗಳ ಪವಿತ್ರಕ್ಷೇತ್ರ ಕಾಶಿಯಲ್ಲಿ!

ಕ್ಯಾಶ್ ಇದ್ದಾಗ ಅಥವಾ ಹೊಂದಿಸಿಕೊಂಡು ಹಾಗೂಹೀಗೂ ಕಾಶಿಗೆ ತೀರ್ಥಯಾತ್ರೆ ಕೈಗೊಳ್ಳುವವರು, ಅಲ್ಲಿ ತಮಗಿಷ್ಟವಾದ ಒಂದು ಸಿಹಿತಿನಿಸು, ಪಲ್ಯವನ್ನು ತ್ಯಜಿಸಿಬರುವ ಸಂಪ್ರದಾಯ ಇನ್ನೂ ಚಾಲ್ತಿಯಲ್ಲಿದೆ. ಹಾಗಾಗಿಯೇ ಊಟಕ್ಕೆ ಕುಳಿತಾಗ 'ಬ್ಯಾಡ್ ಬ್ಯಾಡ್' ಎನ್ನುವಂಥ ನಾಟಕೀಯ ದೃಶ್ಯ ನೋಡಿರುತ್ತೀರಿ. ಕಾಶಿಯಲ್ಲಿ ತ್ಯಜಿಸಿ ಬಂದಿದ್ದೇನೆ ಎಂದು ಬಾಯಿಬಿಟ್ಟು ಹೇಳುವ ಹಾಗೂ ಇಲ್ಲ, ತಿನ್ನುವ ಹಾಗೂ ಇಲ್ಲ. ಎಂಥಾ ಸಂಕಟ? ಅಕ್ಕಪಕ್ಕದಲ್ಲಿ ಕುಳಿತು ನೋಡುವವರಿಗೆ ಮಾತ್ರ ಸಖತ್ ತಮಾಷೆ.

ಕಾಶಿ ಅಂದ್ರೆ ನೆನಪುಗಳ ಬುಗ್ಗೆ. ಪವಿತ್ರ ಕ್ಷೇತ್ರ ಕಾಶಿ ಅಂದ್ರೆ ಜಗದೊಡೆಯ ವಿಶ್ವನಾಥ, ಕಾಶಿ ಅಂದ್ರೆ ಉಸಿರಾಡಲು ಒದ್ದಾಡುತ್ತಿರುವ ಕೊಳಕು ಗಂಗೆ, ಕಾಶಿ ಅಂದ್ರೆ ಪುರಾತನ ವಿದ್ಯಾಪೀಠ, ಕಾಶಿ ಅಂದ್ರೆ ಅಸ್ತಿ ವಿಸರ್ಜನೆ, ಕಾಶಿ ಅಂದ್ರೆ ಮುಕ್ತಿ, ಕಾಶಿ ಅಂದ್ರೆ ಸಾಧು ಸನ್ಯಾಸಿಗಳು, ಕಾಶಿ ಅಂದ್ರೆ 'ಮಹಾ ಸ್ಮಶಾನ'... ಕಾಶಿ ಅಂದ್ರೆ ಬೂದುಗುಂಬಳ ಕಾಯಿಯಿಂದ ತಯಾರಿಸುವ ಕಾಶಿ ಹಲ್ವಾ ಕೂಡ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಮದುವೆಯಲ್ಲಿ ಶಾಸ್ತ್ರೋಕ್ತವಾಗಿ ಮಾಡುವ 'ಕಾಶಿಯಾತ್ರೆ'. [ವಾರಣಾಸಿಯಲ್ಲಿ ಸತ್ತರೆ ಮೋಕ್ಷ!]

ಹಿಂದೂಗಳ ಮದುವೆ ಪದ್ಧತಿಯಲ್ಲಿ ಬರುವ ಕಾಶಿಯಾತ್ರೆ ಘಟ್ಟ ಭಾರೀ ಮಹತ್ವದ್ದು. ಕನ್ಯೆಯನ್ನು ಧಾರೆಯೆರೆಯುವ ಮುನ್ನ ಕಾಶಿಗೆ ಹೊರಟ ವರಮಹಾಶಯನನ್ನು ಕನ್ಯಾಪಿತೃ ತಡೆದು, ದಯವಿಟ್ಟು ಕಾಶಿಗೆ ತೆರಳದೆ ತಮ್ಮ ಸುಸಂಸ್ಕೃತ ಮಗಳನ್ನು ಕೈಹಿಡಿದು ಬ್ರಹ್ಮಚರ್ಚ ತೊರೆದು ಗೃಹಸ್ಥಾಶ್ರಮಕ್ಕೆ ಕಾಲಿರಿಸಬೇಕೆಂದು ಮನವೊಲಿಸಿ ಮದುವೆ ಮಂಟಪಕ್ಕೆ ಕರೆತರುವ ಪದ್ಧತಿ, ಸಂಪ್ರದಾಯ. ಈ ಸಂಪ್ರದಾಯ ಒತ್ತಟ್ಟಿಗಿರಲಿ. ಅಲ್ಲಿ ಸಂಪ್ರದಾಯಕ್ಕಿಂತ ಭರ್ತಿ ತಮಾಷೆ ಮನೆಮಾಡಿರುತ್ತದೆ, ವರನನ್ನು ಕಿಚಾಯಿಸಲೆಂದು ನೆರೆದವರೆಲ್ಲ ಈ ಸನ್ನಿವೇಷಕ್ಕಾಗಿ ಕಾದು ಕುಳಿತಿರುತ್ತಾರೆ. ಇದಕ್ಕೆ ಕಾರಣ ವರನ ವೇಷಭೂಷಣ. [ವಾರಣಾಸಿಯಲ್ಲಿ ನಾ ಬಿಟ್ಟ ನನಗಿಷ್ಟವಾದ ಜಹಾಂಗೀರ್]

ತಲೆ ಮೇಲೆ ಮೈಸೂರು ಪೇಟ, ಹಣೆಗೆ ಕಟ್ಟಿದ ಮಂಡೋಳಿ (ವಧುವರರಿಗೆ ಕಟ್ಟುವ ಮುತ್ತಿನ ತೋರಣ), ಕೈಯಲ್ಲಿ ವಧುವಿನವರ ಕಡೆಯಿಂದ ಕೊಟ್ಟ ಅಲಂಕೃತ ತೆಂಗಿನಕಾಯಿ, ಥರ್ಮೋಕಾಲ್ ನಿಂದ ತಯಾರಿಸಿದ ದೇವರ ಮೂರ್ತಿ, ಅಲಂಕೃತ ಚಾಮರ, ಕೈಯಲ್ಲಿ ವಯಸ್ಕರು ಉಪಯೋಗಿಸುವ ಕೋಲು, ಕಾಲಲ್ಲಿ ಹೊಸ ಚಪ್ಪಲಿ, ಹಲ್ಲುಬಿರಿದುಕೊಂಡು ಶುದ್ಧಮಡಿಯನ್ನುಟ್ಟ ವರನ ಕಿವಿಗಳಿಂದ ಜೋತಾಡುತ್ತಿರುವ ಅರಿಷಿಣ ಹಿಟ್ಟಿನಿಂದ ತಯಾರಿಸಿದ ಲೋಲಾಕುಗಳು! ನೋಡೋದಕ್ಕೆ ಏನ್ ಮಜಾ ಗೊತ್ತಾ? ನೆರೆದವರಿಗೆ ಚೆಲ್ಲಾಟ ವರನಿಗೆ ಪ್ರಾಣಸಂಕಟ!

ಮಂತ್ರಪಠಣದ ನಡುವೆ ಕನ್ಯೆಯನ್ನು ಹೆತ್ತವರು ವರನ ಕಾಲುಗಳನ್ನು ತೊಳೆದು, ಕೊಡಬೇಕಾದ ವಸ್ತುಗಳನ್ನು ಕೊಟ್ಟು, ಚೆನ್ನಾಗಿ ಉಪಚಸಿರಿ, ಕಾಶಿಗೆ ಹೋಗದೆ ಮಗಳ ಕೈಹಿಡಿದು ಗೃಹಸ್ಥಾಶ್ರಮಕ್ಕೆ ಕಾಲಿಡಬೇಕೆಂದು ಕೈಮುಗಿದು ಕೋರುವ ಸನ್ನಿವೇಶ. ವರ ಕಾಶಿಗೆ ಹೋಗ್ತೀನನ್ನೋದು, ಕನ್ಯಾಪಿತೃ ಬೇಡ ಅನ್ನೋದು... ಹೋಗು ಹೋಗು ಅಂತ ವರನ ಕಡೆಯವರು ಎದ್ದುಬಿದ್ದು ನಗುತ್ತಿರುತ್ತಾರೆ. ಕೊನೆಗೆ ವರ ಒಪ್ಕೊಂಡ ನಂತರ ಮದುವೆ ಶಾಸ್ತ್ರ ಮುಂದುವರಿಯುತ್ತದೆ. ಮಗಳ ಕೈಹಿಡಿಯಲ್ಲ ಅಂತ ಕಾಶಿಗೆ ಪರ್ಮನೆಂಟಾಗಿ ಹೋಗೋಕಾಗುತ್ತಾ? ಇದು ಸಂಪ್ರದಾಯ ಅಷ್ಟೇ.

ಅಸಲಿಗೆ ಕಾರಣ ಸ್ವಲ್ಪ ವಿಭಿನ್ನವಾಗಿದೆ. ಕ್ರಿಸ್ತಪೂರ್ವ ಕಾಲದಿಂದಲೂ ಕಾಶಿ ವಿದ್ಯಾಭ್ಯಾಸಕ್ಕಾಗಿ ಪ್ರಸಿದ್ಧ. ದೇಶದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಕಾಶಿಗೆ ಹೋಗುತ್ತಿದ್ದರು. ಹಿಂದಿನ ಕಾಲದಲ್ಲಿ ಕಾಶಿ ವಿದ್ಯಾಪೀಠಕ್ಕೆ ಬಾಲ್ಯಾವಸ್ಥೆಯಲ್ಲಿಯೇ ವಿದ್ಯಾರ್ಜನೆಗೆಂದು ಸೇರಿಸುತ್ತಿದ್ದರು. ಒಂದು ಹಂತದ ಪದವಿಯನ್ನು ಗಳಿಸಿದ ನಂತರ ಸ್ನಾತಕೋತ್ತರ ಅಧ್ಯಯನಕ್ಕೆಂದು ಮತ್ತೆ ಕಾಶಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿಯೇ ವಯಸ್ಸಿಗೆ ಬಂದ ಮಗನನ್ನು ತಡೆದು ನಿಲ್ಲಿಸಿ, ಅಪ್ಪಾ ಓದಿದ್ದು ಸಾಕು ಇನ್ನು ಮದುವೆಯಾಗಿ ಗೃಹಸ್ಥಾಶ್ರಮ ಸೇರಿ ಸಂಸಾರದ ಜವಾಬ್ದಾರಿ ಹೊತ್ತುಕೋ ಎಂದು ಹೇಳಲಾಗುತ್ತಿತ್ತು.

ಕಾಲಘಟ್ಟ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಕಾಶಿ ಇನ್ನಷ್ಟು ಅಧ್ವಾನವಾಗಿದೆ, ಪವಿತ್ರ ಗಂಗೆಯಲ್ಲಿ ಸಹಿಸಲಸಾಧ್ಯವಾದಷ್ಟು ಹೊಸಲು ಹರಿಯುತ್ತಿದೆ, ಮುಕ್ತಿಗಾಗಿ ಮೀಸಲಿದ್ದ ಕಾಶಿ ಕ್ಷೇತ್ರ ಇಂದು ಸ್ಮಶಾನವಾಗಿ ಮಾರ್ಪಟ್ಟಿದೆ, ಕಾಶಿ ನಗರದಲ್ಲಿ ವ್ಯಾಪಾರೀಕರಣ ಮಿತಿಮೀರಿದೆ, ಆದರೆ ಅನಾದಿಕಾಲದಿಂದ ನಡೆದುಕೊಂಡು ಬಂದಿರುವ ಮದುವೆಯಲ್ಲಿನ 'ಕಾಶಿಯಾತ್ರೆ' ಸಂಪ್ರದಾಯ ಇನ್ನೂ ಹಾಗೆಯೇ ಚಾಲ್ತಿಯಲ್ಲಿದೆ.

English summary
Kashi Yatra : A marriage ceremony that symbolizes transition from brahmacharya to grihasthashrama, has been followed by hindus, where father of bride requests, convinces bridegroom not to go to Kashi and enter into wedlock with his daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X