ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಂತಿ ಪ್ರೀತಿ ಸಹನೆ, ಮಾನವೀಯತೆಯ ಗುಡ್ ಫ್ರೈಡೆ

By ಪ್ರಶಾಂತ್ ಇಗ್ನೇಷಿಯಸ್
|
Google Oneindia Kannada News

ಗುಡ್ ಫ್ರೈಡೇ ಅಥವಾ ಶುಭ ಶುಕ್ರವಾರ ಮತ್ತೆ ಬಂದಿದೆ. ಕ್ರೈಸ್ತ ಸಮುದಾಯಕ್ಕೆ ಇದು ಬಹಳ ಪವಿತ್ರವಾದ ದಿನವಾಗಿದ್ದು, ಕ್ರೈಸ್ತರು ತಮ್ಮದೇ ಆದ ವಿಶಿಷ್ಠ ರೀತಿಯಲ್ಲಿ ಈ ದಿನವನ್ನು ಕಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲಾ ಚರ್ಚುಗಳಲ್ಲೂ ಬೆಳಿಗ್ಗೆಯಿಂದಲೇ ಪ್ರಾರ್ಥನೆಗಳು ನಡೆಯುತ್ತವೆ. ಯೇಸು ಕ್ರಿಸ್ತ ತನ್ನ ಜೀವನವಿಡೀ ತಾನು ಸಾರಿದ ಶಾಂತಿ ಪ್ರೀತಿ ಕ್ಷಮೆಯ ಸಂದೇಶವನ್ನು ಪಾಲಿಸಿದ.

ತನ್ನ ಅಪಾರವಾದ ನೋವು ಹಾಗೂ ಸಾವಿನ ಸಮಯದಲ್ಲೂ ಅದಕ್ಕೆ ಬದ್ಧನಾಗಿ ನಿಂತು, ತನ್ನ ಆ ಸ್ಥಿತಿಗೆ ಕಾರಣರಾದವರನ್ನು ಕ್ಷಮಿಸಿ ಶಾಂತಿಯ ದೂತನಾದ. ಇಂತಹ ಹಲವಾರು ಉನ್ನತವಾದ ಸಂದೇಶಗಳಿಗೆ ಸಾಕ್ಷಿಯಾದ ಈ ದಿನಕ್ಕೆ ಸಾವು, ನೋವು, ಮೀರಿದ ಮಾನವೀಯ ಆಯಾಮ ದೊರಕಿತು. ಅದರಿಂದಲೇ ಅದಕ್ಕೆ ಶುಭ ಶುಕ್ರವಾರ ಎಂಬ ಹೆಸರಾಯಿತು ಎಂಬ ಮಾತಿದೆ.

ಶಾಂತಿ ಪ್ರೀತಿ ಸಹನೆ, ಮಾನವೀಯತೆಯ ಗುಡ್ ಫ್ರೈಡೆ | Good Friday final hours of Jesus Life

ಯೇಸು ಕ್ರಿಸ್ತ ಬಂಧನಕ್ಕೆ ಒಳಗಾಗುವುದರಿಂದ ಹಿಡಿದು ಶಿಲುಬೆಯ ಮೇಲೆ ಸಾಯುವ ತನಕದ ಘಟನೆಗಳನ್ನು 14 ಭಾಗಗಳಾಗಿ ವಿಂಗಡಿಸಿ, ಪ್ರತಿಯೊಂದು ಭಾಗವನ್ನೂ ಅವಲೋಕಿಸುತ್ತಾ, ಪ್ರಾರ್ಥಿಸುತ್ತಾ ಸಾಗುವ ಪ್ರಕ್ರಿಯೆಗೆ 'ಶಿಲುಬೆ ಹಾದಿ' ಎಂಬ ಹೆಸರಿದೆ. ಇದನ್ನು ಶುಭ ಶುಕ್ರವಾರದಂದು ವಿಶೇಷವಾಗಿ ನಡೆಸಲಾಗುತ್ತದೆ. ಜೆ.ಸಿ.ರಸ್ತೆಯ ಸಂತ ತೆರೇಸಮ್ಮ ಚರ್ಚ್ ಹಾಗೂ ಇನ್ನಿತರ ಕೆಲವು ಚರ್ಚುಗಳಲ್ಲಿ ಶಿಲುಬೆ ಯಾತ್ರೆಯನ್ನು ನಾಟಕ ರೂಪದಲ್ಲಿಯೂ ಅಭಿನಯಿಸುವುದುಂಟು.

ಇನ್ನು, ಬೆಂಗಳೂರಿನ ಹೊರವಲಯದ ಅಣ್ಣಮ್ಮ ಬೆಟ್ಟ, ವೈಟ್ ಫೀಲ್ಡ್ , ಮರಿಯಣ್ಣನ ಪಾಳ್ಯ, ಹಾರೋಬೆಲೆ, ತೆರೇಸಪುರ ಮುಂತಾದ ಹಳ್ಳಿಗಳಲ್ಲಿ ಇದನ್ನು ಊರಿನ ಸಮೀಪದ ಬೆಟ್ಟಗಳಲ್ಲಿ ಮಾಡುವುದು ವಾಡಿಕೆ. ಇದರಿಂದಾಗಿ ಈ ಶಿಲುಬೆ ಹಾದಿಗೆ ಸಾಂಸ್ಕೃತಿಕ ಹಾಗೂ ಪರಿಸರದ ನಂಟೂ ದೊರಕಿದೆ. ಅಂತೆಯೇ ಚರ್ಚಿನಲ್ಲಿ ಗುರುಗಳು ರಕ್ತವರ್ಣದ ಅಂಗಿ ತೊಟ್ಟು ಯೇಸುಕ್ರಿಸ್ತನ ಕೊನೆಯ ಗಳಿಗೆಗಳ ವೃತ್ತಾಂತವನ್ನು ಓದುತ್ತಾರೆ. ಯೇಸುಕ್ರಿಸ್ತನ ಕೊನೆಯ ದಿನ ನಡೆದ ಘಟನೆಗಳನ್ನು ಆಗ ಮೆಲಕು ಹಾಕಲಾಗುತ್ತದೆ.

ಪಿಲಾತನ ಮುಂದೆ ಜನರು "ಯೇಸುವನ್ನು ಕೊಲ್ಲಿರಿ ಕೊಲ್ಲಿರಿ" ಎನ್ನುವುದು, ಅವರು ಭಾರವಾದ ಶಿಲುಬೆಯನ್ನು ಹೊತ್ತು ಮೂರು ಬಾರಿ ಬೀಳುವುದು, ತಮ್ಮನ್ನು ಸಂತೈಸಲು ಬಂದ ಜೆರುಸಲೇಮಿನ ಹೆಂಗಸರಿಗೇ ಸಾಂತ್ವನ ನೀಡುವುದು,ಕೊನೆಗೆ ತನ್ನ ವೈರಿಗಳನ್ನು ಕ್ಷಮಿಸಿ ಸಾಯುವುದನ್ನು ಸವಿವರವಾಗಿ ಓದುವಾಗ ಇಡೀ ವಾತಾವರಣದಲ್ಲಿ ದುಃಖದ ಛಾಯೆ ಕಂಡು ಬರುತ್ತದೆ. ಎಷ್ಟೋ ಜನರು ಅಲ್ಲೇ ಕಣ್ಣೀರಿಡುವುದನ್ನೂ ಕಾಣಬಹುದು. ಅದಾದ ಮೇಲೆ ಎಲ್ಲರೂ ಸಾಲಾಗಿ ಸಾಗಿ ಚರ್ಚಿನ ಒಂದು ಭಾಗದಲ್ಲಿ ಇಟ್ಟಿರುವ ಶಿಲುಬೆಯನ್ನು ಮುತ್ತಿಡುವುದು ಈ ಪ್ರಾರ್ಥನೆಯ ಬಹು ಮುಖ್ಯ ಭಾಗ.

ಬಹುತೇಕ ಕ್ರೈಸ್ತರು ಈ ದಿನವನ್ನು ಉಪವಾಸದ ದಿನವಾಗಿಯೂ ಕಳೆಯುತ್ತಾರೆ. ಬೇಸಿಗೆಯ ಬಿರುಬಿಸಿಲಿನಲ್ಲಿ ನಡೆಯುವ ಪ್ರಾರ್ಥನೆಗಳಲ್ಲಿ ಭಾಗವಹಿಸುವ ಜನರ ದಣಿವಾರಿಸಲು ಕೆಲವರು ನಿಂಬೆರಸ, ಮಜ್ಜಿಗೆಗಳನ್ನು ಪ್ರಾರ್ಥನೆಗಳು ಮುಗಿದ ಮೇಲೆ ದೇವಾಲಯದ ಅವರಣದಲ್ಲಿ ಹಂಚುವುದನ್ನೂ ಕಾಣಬಹುದು. ಈ ವಿತರಣಾ ಕ್ರಿಯೆಯನ್ನು ಕೆಲವರು ವ್ರತದಂತೆ, ಹರಕೆಯಂತೆ ಮಾಡುವುದು ವಾಡಿಕೆ. ಪ್ರಾರ್ಥನೆ ಮುಗಿದ ನಂತರವೂ ಕ್ರೈಸ್ತರು ವಿಷಾದ ಭಾವದಿಂದಲೇ ಮನೆಯತ್ತ ಹೆಜ್ಜೆ ಹಾಕುತ್ತಾರೆ. ಈ ಒಂದು ಭಾವ ಭಾನುವಾರದ ಈಸ್ಟರ್ ಹಬ್ಬದ ಪ್ರಾರಂಭದ ತನಕವೂ ಮುಂದುವರಿಯುತ್ತದೆ.

ಯೇಸು ಕ್ರಿಸ್ತ ಮುಂದೆ ಮೂರೇ ದಿನದಲ್ಲಿ ಈ ಸಾವನ್ನು ಜಯಿಸಿದ ಎಂಬ ನಂಬಿಕೆ ಕ್ರೈಸ್ತರಲ್ಲಿ ಇರುವುದರಿಂದ, ಇಷ್ಟೆಲ್ಲಾ ವಿಷಾದದ ನಡುವೆಯೂ 'ಗುಡ್ ಫ್ರೈಡೇ ' ಹೊಸ ಭರವಸೆಗೆ ಮುನ್ನಡಿಯಾಗಿ ಕಾಣುತ್ತದೆ. ಕ್ರಿಸ್ತ ಶಿಲುಬೆ ಮೇಲೆ ಸತ್ತಾಗ ಜಗತ್ತಿನಲ್ಲಿ ಕತ್ತಲು ಆವರಿಸಿಕೊಂಡಿತು ಎಂದು ಬೈಬಲ್ ಹೇಳುತ್ತದೆ. ಮುಂದೇ ಭಾನುವಾರದ ಮುಂಜಾನೆ ಬೆಳಕಿನಲ್ಲಿ ಯೇಸು ಮತ್ತೆ ಜೀವದಿಂದ ಎದ್ದರು. ಇದು "ಕತ್ತಲಿನಿಂದ ಬೆಳಕಿನೆಡೆಗೆ" ಎಂಬ ಮಾತಿಗೆ ಅನ್ವರ್ಥದಂತಿದೆ.

2000 ಸಾವಿರ ವರ್ಷಗಳು ಕಳೆದರೂ ಪ್ರಸ್ತುತವಾಗಿರುವ ಯೇಸುಕ್ರಿಸ್ತನ ಶಾಂತಿ ಪ್ರೀತಿ ಸಹನೆಯ ಸಂದೇಶದಿಂದಲೇ ಗುಡ್ ಫ್ರೈಡೇಗೆ ಜಾತಿ ಧರ್ಮ ಮೀರಿದ ಮನ್ನಣೆ ಮಹತ್ವ ಇಂದಿಗೂ ಇದೆ. ವಿಶ್ವದ ಶಾಂತಿ ಹಾಗೂ ಸೋದರತೆಯ ಭಾವದಲ್ಲಿ ಗುಡ್ ಫ್ರೈಡೇಯ ಸಾರ್ಥಕತೆ ಇದೆ.

English summary
Good Friday is a gazetted holiday in Karnataka - India. It commemorates the final hours of Jesus' life, his crucifixion, and death, as described in the Christian bible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X