ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 1 ವಿಶ್ವ ನಗೆ ದಿನದಂದು ಮನಸುಬಿಚ್ಚಿ ನಕ್ಕುಬಿಡಿ

By Prasad
|
Google Oneindia Kannada News

Laugh loud
ಒಬ್ಬರು ನಕ್ಕರೆ ಸಾಕು. ಅದನ್ನು ನೋಡಿ ಉಳಿದವರು ನಗುತ್ತಾರೆ. ನಗು ಒಂದು ರೀತಿ ಸಾಂಕ್ರಾಮಿಕ ರೋಗವಿದ್ದಂತೆ. ನಾಳೆ ಈ ನಗೆಯ ಅಲೆ ಇಡೀ ವಿಶ್ವವನ್ನೇ ವ್ಯಾಪಿಸಲಿದೆ. ನಾಳೆ ಬಗೆ ಬಗೆಯ ನಗೆ ಬುಗ್ಗೆ ಚಿಮ್ಮಲಿದೆ. ಯಾಕೆಂದರೆ ನಾಳೆ ವಿಶ್ವ ನಗೆಯ ದಿನ. ಇಡೀ ಜಗತ್ತು ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗೆ ದಿನವಾಗಿ ನಗುನಗುತ್ತಾ ಆಚರಿಸುತ್ತದೆ.

ಅಯ್ಯೋ ಇನ್ನೂ ಸಂಬಳವೇ ಆಗಿರುವುದಿಲ್ಲ ಎಲ್ಲಿಂದ ನಗಲಿ ಎಂದು ಹಲುಬಬೇಡಿ. ಈ ನಗೆ ದಿನ ತಿಂಗಳ ಪಗಾರ ಕೈಸೇರಿದ ಮೇಲಾದರೂ ಬರಬಾರದಿತ್ತೆ ಎಂದು ಕರುಬಬೇಡಿ. ನಮಗೂ ಗೊತ್ತು, ನಿಮಗೂ ಗೊತ್ತು. ನಗಲು ಕಾರಣ ಹುಡುಕಿಕೊಂಡು ಹೋಗಬೇಕಾದ ದಿನಗಳಿವು. ಟ್ಯಾಕ್ಸು, ಇಎಮ್ಐ, ಹೆಂಡತಿಯ ಡಿಮ್ಯಾಂಡುಗಳು, ಮನೆಗೆ ಮೇಲಿಂದ ಮೇಲೆ ಬರುವ ನೆಂಟರಿಷ್ಟರನ್ನು ನೆನೆಸಿಕೊಂಡರೆ ನಗೆಯಾದರೂ ಎಲ್ಲಿಂದ ಬರಬೇಕು? ಆದರೂ, ಚಿಂತೆ ಮಾಡಬೇಡಿ, ಕಷ್ಟಗಳು ಯಾರಿಗಿರಲ್ಲ ಹೇಳಿ? ಮೇ 1ರಂದು ಸುಖಾಸುಮ್ಮನೆ ನಕ್ಕುಬಿಡಿ. ನಗುನಗುತಾ ನಲಿನಲಿ ಏನೇ ಆಗಲಿ ಎಂದು ಅಣ್ಣಾವ್ರೇ ಹಾಡಿಲ್ಲವೆ?

ನಗುನಗುತಾ ನಲಿನಲಿ ಏನೇ ಆಗಲಿ ಎಂದು ಅಣ್ಣಾವ್ರೇ ಹಾಡಿಲ್ಲವೆ?
ನಗುವಿಗೊಂದು ದಿನ ಇದೆ ಅಂತ ಎಲ್ಲರಿಗೂ ಗೊತ್ತು. ಬೆಂಗಳೂರಿನಲ್ಲಿ ಅಲ್ಲಲ್ಲಿ ನಗೆ ಕೂಟಗಳು ನಗುತ್ತಿರುವುದನ್ನು ನೀವು ನೋಡಿರುತ್ತೀರಿ. ನೀವು ಭಾಗವಹಿಸಿರುತ್ತೀರಿ. ಮೇ 1ರಂದು ಮಿಸ್ ಮಾಡಿಕೊಳ್ಳದೇ ನೀವು ಭಾಗವಹಿಸಲು ಹಲವು ನಗೆ ಕಾರ್ಯಕ್ರಮಗಳು ಉದ್ಯಾನನಗರಿಯಲ್ಲಿ ನಡೆಯಲಿವೆ. ಬೆಂಗಳೂರಿನಲ್ಲಿ ನಗೆ ಹಬ್ಬ ನಡೆಯುತ್ತಿರುವುದರಿಂದ ಬೆಂಗಳೂರಿನವರು ಮಾತ್ರ ನಗಬೇಕಂತೇನೂ ಇಲ್ಲ. ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ನಗುತಿರು.

ಬೆಂಗಳೂರು ನಗೆ ಕೂಟಗಳ ಸಮ್ಮೀಳನ ವಿಶೇಷ ನಗೆ ಜಾಥಾ ಹಮ್ಮಿಕೊಂಡಿದೆ. ನಗುವಿನ ಮಹತ್ವನ್ನು ಸಾರುವುದು ಇದರ ಉದ್ದೇಶ. ಈ ಜಾಥಾ ಅಪರಾಹ್ನ 3 ಗಂಟೆಗೆ ವಿಧಾನಸೌಧದಿಂದ ಆರಂಭವಾಗಿ ಎಸ್ ಜೆಆರ್ ಸಿ ಕಾಲೇಜು, ಆನಂದ್ ರಾವ್ ವೃತ್ತ ಮೂಲಕ ಸಾಗಿ ಫ್ರೀಡಂ ಪಾರ್ಕ್ ತಲುಪಲಿದೆ. ನಂತರ ಬಗೆ ಬಗೆಯ ನಗು, ಡ್ಯಾನ್ಸ್, ನಾಟಕ ಸೇರಿದಂತೆ ಹಲವು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ನಗುವಿನ ಮಹತ್ವ ಸಾರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನಗೆ ಕೂಟ ನಿಮ್ಮನ್ನು ನಗುಮೊಗದಿಂದ ಸ್ವಾಗತಿಸಿದೆ.

"ಒಂದು ನಿಮಿಷದ ನಗೆಯು 15 ನಿಮಿಷದ ವಾಕಿಂಗ್ ಸಮ ಎಂದು ಅಧ್ಯಯನಗಳು ಹೇಳುತ್ತಿವೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ, ಅಸ್ತಮಾ ಮತ್ತು ಒತ್ತಡ ಇತ್ಯಾದಿ ತೊಂದರೆಗಳಿಂದ ಪಾರಾಗಲು ರಾಮಬಾಣ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದೇ ನಮ್ಮ ಉದ್ದೇಶ" ಎಂದು ಭಾನುವಾರದ ಕಾರ್ಯಕ್ರಮದ ಕುರಿತು ಕರ್ನಾಟಕ ಲಾಫರ್ ಕ್ಲಬ್ ಅಧ್ಯಕ್ಷರಾದ ಸದಾಶಿವ್ ಹೇಳಿದ್ದಾರೆ.

ಬೆಂಗಳೂರಿನ ಸೈಂಟ್ ಮಾರ್ಕ್ ರೋಡಿನಲ್ಲೂ ಇಂಥದ್ದೇ ಒಂದು ನಗೆ ಕಾರ್ಯಕ್ರಮ ನಾಳೆ ನಡೆಯಲಿದೆ. ಇಲ್ಲಿನ ಕೋಷಿ ಚಿಲ್ಲೌಟ್ ನಲ್ಲಿ ಯೋಗ ತರಬೇತುದಾರರೊಬ್ಬರು ವಿಶ್ವ ನಗೆ ದಿನದ ಪ್ರಯುಕ್ತ ನಗೆ ಯೋಗ ನಡೆಸಿಕೊಡಲಿದ್ದಾರೆ. ಇಲ್ಲೂ ನಿಮಗೆ ನಗುವ ಯೋಗವಿದೆ. ಹೋಗಿ ಬನ್ನಿ. ನಗರದ ಜಂಜಾಟ, ಬೋರ್ ಹೊಡೆಸುವ ಜೀವನ, ಒತ್ತಡದ ಬದುಕು, ಇಲ್ಲಿನ ಟ್ರಾಫಿಕ್ ಜಂಜಾಟ, ಬದುಕಿನ ಕಷ್ಟಗಳು ಎಲ್ಲವನ್ನು ಮರೆತು ಒಂದಿಷ್ಟು ಹೊತ್ತು ನಕ್ಕು ಬಿಡಿ. ನಾಳೆ ನಗಲು ಮಾತ್ರ ಮರೀಬೇಡಿ.

ವಿಶ್ವ ನಗೆ ದಿನ ಅಂದರೆ : 1998ರಲ್ಲಿ ಡಾ. ಮದನ್ ಕತಾರಿಯಾ ವಿಶ್ವ ನಗೆ ದಿನವನ್ನು ಆರಂಭಿಸಿದರು. ಇವರು ವಿಶ್ವಾದ್ಯಂತ ನಗೆ ಯೋಗದ ಮಹತ್ವ ಸಾರಿದ ವ್ಯಕ್ತಿ. ನಗುವಿನ ಮೂಲಕ ಜಾಗತಿಕ ಶಾಂತಿ, ಸಂಭ್ರಮ, ಸ್ನೇಹ ಹಂಚುವ ಉದ್ದೇಶದಿಂದ ನಗು ದಿನವನ್ನು ಆರಂಭಿಸಲಾಯಿತು. ಇದು ದಿನೇ ದಿನೇ ಪ್ರಖ್ಯಾತಿ ಹೊಂದಿ ಈಗ ಸುಮಾರು 65 ದೇಶಗಳಲ್ಲಿ ಸುಮಾರು 6 ಸಾವಿರ ನಗೆ ಕೂಟಗಳು ಹುಟ್ಟಿಕೊಂಡಿವೆ.

ರೋಗ-ರುಜಿನ, ನೋವು, ಸಂಕಷ್ಟ, ಖಿನ್ನತೆ, ದುಗುಡ ಯಾರಿಗಿರುವುದಿಲ್ಲ ಹೇಳಿ? ಆದರೆ, ನಗುನಗುತ್ತಾ ಜೀವನ ಸಾಗಿಸುತ್ತಿರುವವರನ್ನು ನೋಡಿಲ್ಲವೆ? ನೋವು, ಸಂಕಷ್ಟಗಳಿಗೆ ನಾನಾ ಮುಖಗಳಾದರೆ ನಗುವಿಗೆ ಮಾತ್ರ ಒಂದೇ ಮುಖ. ನೋವನ್ನು ಕ್ಷಣಮ್ಟಟಿಗಾದರೂ ಮರೆಯಾಗಿಸುವ ತಾಕತ್ತು ಇರುವುದು ನಿಷ್ಕಳಂಕ ನಗುವಿಗೆ ಮಾತ್ರ. ಈ ಜಗದಲ್ಲಿ, ಅದರಲ್ಲೂ ಭಾರತದಲ್ಲಿ ನಾವು ಒಬ್ಬಂಟಿ ಅಲ್ಲವೇ ಅಲ್ಲ. ಎಲ್ಲರೂ ಒಟ್ಟಿಗೆ ಸೇರಿ ನಕ್ಕುನಲಿಯೋಣ.

English summary
First sunday of May is celebrated as World Laughter Day. This was started by Dr. Madan Kataria in 1998, founder of the Laughter Yoga movement. Leave behind all the sorrows and laugh loud on May 1. Many organization in Bangalore have organized various programs to celebrate this special day. Remember, You are not alone!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X