• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಾವಣಗೆರೆ: ಕೈ ಸುಡುತ್ತಿದೆ ಪಟಾಕಿ, ಜನರ ಜೇಬಿಗೆ ಬೀಳುತ್ತಿದೆ ಕತ್ತರಿ; ಮಾರಾಟಗಾರರಿಗೆ ಇಲ್ಲ ಹಬ್ಬದ ಖುಷಿ!

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ನವೆಂಬರ್ 3: ದೀಪಾವಳಿ ಹಬ್ಬ ಬಂತೆಂದರೆ ಸಾಕು ಕಳೆದ ಎರಡು ವರ್ಷಗಳ ಹಿಂದೆ ಪಟಾಕಿ ಖರೀದಿ ಭರಾಟೆ ಜೋರಾಗಿರುತ್ತಿತ್ತು. ಎಲ್ಲೆಡೆ ಪಟಾಕಿಯ ಢಂ ಢಂ ಶಬ್ದ ಕಿವಿಗೆ ರಾಚುತಿತ್ತು. ಆದರೆ ಕೊರೊನಾ ಸೋಂಕು ಬಂದ ಬಳಿಕ ಹಬ್ಬದಲ್ಲಿ ಪಟಾಕಿಯ ಶಬ್ದ ಕೇಳಿ ಬಂದರೂ ಮೊದಲಿದ್ದಷ್ಟು ಜೋರು ಸೌಂಡ್ ಇಲ್ಲ. ಜನರಲ್ಲಿ ಉತ್ಸಾಹವೂ ಇಲ್ಲ. ಖರೀದಿಯೂ ಕಡಿಮೆ. ಬಂದಿರುವ ಪಟಾಕಿಯೂ ಹೆಚ್ಚೇನಿಲ್ಲ.

ಈ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ ಅರ್ಧದಷ್ಟು ಸರಬರಾಜಾಗುತ್ತಿಲ್ಲ. ಕೊರೊನಾ ಸೋಂಕು ಹರಡುವಿಕೆ ತಡೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ಮಾರಾಟವೂ ಕಡಿಮೆ ಆಗಿದೆ. ಖರೀದಿಸುವವರ ಸಂಖ್ಯೆಯೂ ಕ್ಷೀಣಿಸಿದೆ. ಇದರಿಂದಾಗಿ ಹಬ್ಬದ ಕಳೆ ಕಟ್ಟುವ ಬದಲು ಮಾರಾಟಗಾರರಿಗೆ ಮಂಕು ಕವಿದಿದೆ.‌

 ದೀಪಗಳ ಹಬ್ಬದ ಹಿನ್ನೆಲೆ ಏನು?; ಹಣತೆ ಬೆಳಗಿ ದೀಪಾವಳಿ ಆಚರಿಸೋಣ... ದೀಪಗಳ ಹಬ್ಬದ ಹಿನ್ನೆಲೆ ಏನು?; ಹಣತೆ ಬೆಳಗಿ ದೀಪಾವಳಿ ಆಚರಿಸೋಣ...

ಎಲ್ಲಾ ಕಡೆಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೂ ಪಟಾಕಿ ಖರೀದಿ ಭರಾಟೆ ಮಾತ್ರ ಜೋರಾಗಿಲ್ಲ. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಅಂಗಡಿಗಳ ಮಳಿಗೆ ಹಾಕಲಾಗಿದೆ. ಸುಮಾರು 58 ಪಟಾಕಿ ಮಾರಾಟ ಮಾಡಲು ಮಳಿಗೆಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದ್ದರೂ ಜನರು ಮಾತ್ರ ಹೆಚ್ಚಾಗಿ ಬರುತ್ತಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ‌ ಕೇವಲ ಶೇಕಡಾ 50ರಷ್ಟು ಪಟಾಕಿ‌ ಮಾತ್ರ ತರಿಸಲಾಗಿದೆ. ಇನ್ನು ಹೆಚ್ಚಾಗಿ ಈ ವರ್ಷ ಪಟಾಕಿ ತಯಾರು ಮಾಡಿಲ್ಲ. ಇದರಿಂದಾಗಿ ತರಹೇವಾರಿ ಪಟಾಕಿ ಬಂದಿಲ್ಲ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿರುವುದೂ ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ.

 ದೀಪಾವಳಿ ಬಂತೆಂದರೆ ಪಟಾಕಿ ಆಕರ್ಷಣೆ

ದೀಪಾವಳಿ ಬಂತೆಂದರೆ ಪಟಾಕಿ ಆಕರ್ಷಣೆ

ಪ್ರಮುಖ ಆಕರ್ಷಣೆ ಆಗಿ ಕಾಣುವುದು ಪಟಾಕಿ.‌ ಪಟಾಕಿ ಬೆಲೆ ಹೆಚ್ಚಳ ಆಗಿರುವುದರಿಂದ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷದ ಪಟಾಕಿ ಬೆಲೆಯಲ್ಲಿ ಶೇ.20ರಿಂದ 30ರಷ್ಟು ಜಾಸ್ತಿಯೂ ಆಗಿದೆ. ಇದನ್ನು ಸ್ವತಃ ಕೆಲ ಪಟಾಕಿ ಮಾರಾಟಗಾರರೇ ಹೇಳಿದ್ದಾರೆ.

ಹೆಚ್ಚಾಗಿ ಬರುತ್ತಿದ್ದ ಪಟಾಕಿಗಳಿಗೆ ನಿಷೇಧ ಹೇರಲಾಗಿದೆ. ಈ ಬಾರಿ ಶೇಕಡಾ 99ರಷ್ಟು ಹಸಿರು ಪಟಾಕಿ‌ ಮಾತ್ರ ಸರಬರಾಜಾಗಿದೆ. ತೈಲ ಬೆಲೆ ಏರಿಕೆ ಹಾಗೂ ಪಟಾಕಿ ತಯಾರಿಕೆಗೆ ಬಳಸುವ ಕಚ್ಚಾ ವಸ್ತು ದರ ಹೆಚ್ಚಳದಿಂದ, ಪಟಾಕಿ ಬೆಲೆ ಏರಿಕೆಯಾಗಿದೆ. ಕಡಿಮೆ ಸರಬರಾಜಾಗಿರುವುದರಿಂದ ದರವೂ ಹೆಚ್ಚಾಗಿದೆ ಎಂದು ಕಳೆದ 28 ವರ್ಷಗಳಿಂದ ಪಟಾಕಿ‌ ಮಾರಾಟ ಮಾಡುತ್ತಿರುವ ವ್ಯಾಪಾರಿ ಮಲ್ಲೇಶ್ ಹೇಳಿದರು.

 ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸೂಚನೆ

ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸೂಚನೆ

ದರ ಹೆಚ್ಚಳ ಕಾರಣದಿಂದಲೇ ಪಟಾಕಿ ಮಾರಾಟ ಪ್ರಮಾಣವು ತಗ್ಗಿದೆ ಎಂದು ಕೆಲ ವರ್ತಕರು ಅಳಲು ತೋಡಿಕೊಂಡಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳಿದ್ದು, ಜನರಲ್ಲಿ ಮೊದಲಿದ್ದ ಹಬ್ಬದ ಸಂಭ್ರಮ ಕಂಡು ಬರುತ್ತಿಲ್ಲ. ಈ ನಡುವೆ ಪರಿಸರ ಮಾಲಿನ್ಯ ಮಂಡಳಿಯು ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಮನವಿ ಮಾಡಿದೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ ಇತರೆ ಪಟಾಕಿಗಳ ಮಾರಾಟ ಮಾಡದಂತೆ ವರ್ತಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆದರೆ ಯಾವುದು ಹಸಿರು ಪಟಾಕಿ? ಅಲ್ಲ? ಎಂಬುವುದರ ಬಗ್ಗೆ ನಾಗರಿಕರಿಗೆ ಸಮರ್ಪಕ ಮಾಹಿತಿಯೇ ಇಲ್ಲವಾಗಿದೆ. ಕೆಲ ವರ್ತಕರು ಎಲ್ಲ ರೀತಿಯ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ.

 ಹಳ್ಳಿಗಳಲ್ಲಿ ಹಬ್ಬದ ಸಿದ್ದತೆ

ಹಳ್ಳಿಗಳಲ್ಲಿ ಹಬ್ಬದ ಸಿದ್ದತೆ

ಗ್ರಾಮೀಣ ಭಾಗದಲ್ಲಿ ದೀಪಾವಳಿ ಹಬ್ಬದ ಸಡಗರ, ಸಂಭ್ರಮದ ವಾತಾವರಣ ಮನೆ ಮಾಡಿದೆ. ಗೋಪೂಜೆ, ಹೋರಿಗಳ ಮೆರವಣಿಗೆ, ಬೇಸಾಯದ ಉಪಕರಣಗಳಿಗೆ ಪೂಜೆ ಈ ಹಬ್ಬದ ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ಗೋವುಗಳನ್ನು ಶೃಂಗರಿಸುವ ವಿವಿಧ ವಸ್ತುಗಳನ್ನು ಜಾನುವಾರು ಸಾಕಾಣೆದಾರರು ಖರೀದಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಲಕ್ಷ್ಮೀ ಪೂಜೆಗೂ ಸಕಲ ಸಿದ್ದತೆಗಳು ನಡೆಯುತ್ತಿವೆ. ಅಂಗಡಿ- ಮುಂಗಟ್ಟುಗಳನ್ನು ವಿಶೇಷವಾಗಿ ಸಿಂಗರಿಸಲಾಗುತ್ತಿದೆ.

ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡುವ ಹಾಗಿಲ್ಲ, ಸಿಡಿಸುವ ಆಗಿಲ್ಲ. ಹಸಿರು ಪಟಾಕಿಗಳನ್ನು ಅಧಿಕೃತವಾಗಿ ಪರವಾನಗಿ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡತಕ್ಕದ್ದು. ಪರವಾನಗಿದಾರರು ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪರವಾನಗಿ ಪತ್ರವನ್ನು ಪಡೆದಂತವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ದೀಪಾವಳಿ ಹಬ್ಬದ ಸಂಬಂಧ ದೀಪಾವಳಿ ಅಮಾವಾಸ್ಯೆ ನ.4, ಬಲಿಪಾಢ್ಯಮಿ ನ.5ರ ಹಬ್ಬದ ಸಮಯದಲ್ಲಿ ಪಟಾಕಿಗಳನ್ನು ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸುವುದು ಮತ್ತು ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗವು ಹರಡಿರುವುದರಿಂದ ಈ ಹಬ್ಬವನ್ನು ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಆಚರಿಸಬೇಕು ಎಂದು ಸೂಚಿಸಲಾಗಿದೆ.

 ಜಿಲ್ಲಾಡಳಿತ ನೀಡಿರುವ ಸೂಚನೆ ಏನು?

ಜಿಲ್ಲಾಡಳಿತ ನೀಡಿರುವ ಸೂಚನೆ ಏನು?

ಹಸಿರು ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಕನಿಷ್ಠ 6 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು. ಪಟಾಕಿ ಮಾರುವ ವ್ಯಾಪಾರಸ್ಥರು ಮತ್ತು ಖರೀದಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸತಕ್ಕದ್ದು. ಹಸಿರು ಪಟಾಕಿಗಳ ಖರೀದಿಯ ವೇಳೆ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.

ಕೋವಿಡ್-19 ಸಾಂಕ್ರಾಮಿಕ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಈ ಸೊಂಕಿನ ಸರಪಳಿಯನ್ನು ಕತ್ತರಿಸಲು ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯದ ಹಿತ ದೃಷ್ಠಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ ಅರ್ಥಗರ್ಭಿತವಾಗಿ, ಭಕ್ತಿ ಪೂರ್ವಕವಾಗಿ ಆಚರಿಸಿ.

 ನಿಗದಿತ ಅವಧಿಯಲ್ಲಿ ಹಸಿರು ಪಟಾಕಿ ಸಿಡಿಸಬೇಕು

ನಿಗದಿತ ಅವಧಿಯಲ್ಲಿ ಹಸಿರು ಪಟಾಕಿ ಸಿಡಿಸಬೇಕು

ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಹಸಿರು ಪಟಾಕಿ ಸಿಡಿತ ಪ್ರಕ್ರಿಯೆಯು ನಿಗದಿತ ಅವಧಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದು ಮತ್ತು ಕೋವಿಡ್-19ರ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಇತರೆ ಕಾನೂನುಗಳನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿಸಿದ ನಂತರದ ಘನ ತ್ಯಾಜ್ಯ ವಸ್ತುಗಳಿಂದ ಮಾಲಿನ್ಯ ಉಂಟಾಗುವುದರಿಂದ ಸರಣಿ ಸ್ಪೋಟಕ ಪಟಾಕಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಮತ್ತು ಬಳಸುವುದನ್ನು ನಿಷೇಧಿಸಿದೆ. ಸರ್ವೋಚ್ಚ ನ್ಯಾಯಾಲಯವು ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮತ್ತು ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನು ತೆರೆಯಬೇಕು. ಬೇರೆ ಸ್ಥಳ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

ಹಬ್ಬಕ್ಕೆ ಬೆಲೆ ಏರಿಕೆಯ ಬಿಸಿ

ಅತ್ಯಂತ ಸಡಗರ- ಸಂಭ್ರಮದಿಂದ ಆಚರಣೆ ಮಾಡುವ ದೀಪಾವಳಿ ಹಬ್ಬಕ್ಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ದೊಡ್ಡ ತಡೆಯಾಗಿ ಪರಿಣಮಿಸಿದೆ.‌ ಬೆಲೆ ಹೆಚ್ಚಳದ ಹೊರತಾಗಿಯೂ ಜನರು ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ತರಕಾರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. 1 ಕೆಜಿ ಟೊಮೆಟೊ ಬೆಲೆ 40 ರಿಂದ 50 ರೂ., ಬೀನ್ಸ್ 60 ರೂ., ಕ್ಯಾರೆಟ್ 60 ರೂ. ಇದೆ. ಹಾಗೆಯೇ ಕೊತಂಬರಿ ಮತ್ತಿತರ ಸೊಪ್ಪುಗಳ ಬೆಲೆಯೂ ಹೆಚ್ಚಾಗಿದೆ‌. ಉಳಿದಂತೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಮಾರಾಟ ಜೋರಾಗಿದೆ. ಮಾವಿನ ಸೊಪ್ಪು, ಹೂವು, ಬಾಳೆಕಂದು, ಬಾಳೆ ಎಲೆ, ಹಣ್ಣು- ಹಂಪಲು ಹಾಗೂ ಜಾನುವಾರುಗಳ ಪೂಜೆಗೆ ಸಂಬಂಧಿಸಿದ ವಸ್ತುಗಳ ಮಾರಾಟವೂ ಹೆಚ್ಚಾಗಿ‌ ಕಂಡುಬರುತ್ತಿದೆ.

   Bommai ಚುನಾವಣೆ ಫಲಿತಾಂಶದ ನಂತರ ಹೇಳಿದ್ದೇನು | Oneindia Kannada
   English summary
   Above 50 Firecrackers shops have been opened in Davanagere and people are not coming to buy Firecrackers because of the price hike.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X