ಇತಿಹಾಸದ ಕಥೆ ಹೇಳುತ್ತವೆ ಮೈಸೂರಿನ ಅರಮನೆಗಳು
ರಾಜೇಂದ್ರವಿಲಾಸ ಅರಮನೆ ಚಾಮುಂಡಿಬೆಟ್ಟದ ಮೇಲೆ ನಿರ್ಮಾಣವಾದ ಅರಮನೆಯಾಗಿದೆ. ರಾಜಮನೆತನದವರು ವಿಹಾರಕ್ಕಾಗಿ ಇದನ್ನು ಉಪಯೋಗಿಸುತ್ತಿದ್ದರು. ರಾಜರ ಕಾಲದಲ್ಲಿ ಇದನ್ನು ನಿರ್ಮಿಸಲಾಗಿತ್ತಾದರೂ 1822ರಲ್ಲಿ ಆಗಿನ ಮೈಸೂರು ಸಂಸ್ಥಾನದ ರೆಸಿಡೆಂಟರಾದ ಅರ್ಥರ್ ಕೋಲ್ಸ್‍ರವರು ಅಭಿವೃದ್ಧಿಪಡಿಸಿದರು ಎನ್ನುತ್ತದೆ ಇತಿಹಾಸ. ಇಂಡೋಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪ ಹೊಂದಿರುವ ಈ ಅರಮನೆಗೆ 1938ರಲ್ಲಿ ನಾಲ್ವಡಿಕೃಷ್ಣರಾಜ ಒಡೆಯರ್ ಮತ್ತಷ್ಟು ಮೆರಗು ನೀಡಿದರು.
ಬೇಸಿಗೆಯ ದಿನಗಳಲ್ಲಿ ಇಲ್ಲಿ ತಂಪಾದ ಹವಾಮಾನ ಇರುವುದರಿಂದ ಇದನ್ನು ಬೇಸಿಗೆ ಅರಮನೆ ಎಂದು ಕೂಡ ಕರೆಯುತ್ತಾರೆ. ಇಲ್ಲಿರುವ ಬೃಹತ್ ಕೋಣದ ಕೊಂಬು ಅರಮನೆಯ ಆಕರ್ಷಣೆಯಾಗಿದ್ದು ಇಲ್ಲಿಗೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗರ ಪೈಕಿ ಕರ್ನಲ್ ವಾಲ್ಟರ್ ಕೇಂಪ್ ಬೆಲ್ ಇಷ್ಟು ದೊಡ್ಡ ಕೋಣದ ತಲೆಗಳನ್ನು ಎಲ್ಲೂ ನೋಡಿಲ್ಲ ಎಂದು ವರ್ಣಿಸಿದ್ದಾರೆ. [ಆನೆಗಳ ಭಾರ ಹೊರುವ, ಸಿಡಿಮದ್ದು ತಾಲೀಮು ಹೇಗಿರುತ್ತೆ?]

ಅರಮನೆಯಿಂದ ನೋಡಿದರೆ ಕಾಣುವ ನಿಸರ್ಗದ ಸುಂದರ ನೋಟ ವರ್ಣಿಸಲು ಅಸಾಧ್ಯ. ದೂರದ ಶ್ರೀರಂಗಪಟ್ಟಣದ ದೊಡ್ಡ ಮಸೀದಿಯ ಶಿಖರ, ಕೆಆರ್‍ಎಸ್, ಮೇಲುಕೋಟೆಯ ಪವಿತ್ರಬೆಟ್ಟ, ವೈನಾಡು, ಬಿಳಿಗಿರಿರಂಗನ ಬೆಟ್ಟ, ನೀಲಗಿರಿಬೆಟ್ಟಶ್ರೇಣಿಗಳ ಪಕ್ಷಿನೋಟ ಕಣ್ಮನ ಸೆಳೆಯುತ್ತದೆ. ಜೊತೆಗೆ ಮೈಸೂರು ನಗರದ ಸುಂದರ ನೋಟವಂತೂ ಮನಸ್ಸಿಗೆ ಮುದ ನೀಡುತ್ತದೆ. ದಸರಾ ಸಂದರ್ಭವಂತೂ ರಾತ್ರಿ ಅರಮನೆ ಸೇರಿದಂತೆ ಇಡೀ ನಗರ ವಿದ್ಯುತ್ ಬೆಳಕಿನಿಂದ ಜಗಮಗಿಸುವ ದೃಶ್ಯನೋಡಿದರೆ ದೇವಲೋಕವೇ ಧರೆಗಿಳಿದಂತೆ ಭಾಸವಾಗುತ್ತದೆ. ಪ್ರಸ್ತುತ ಈ ಅರಮನೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಶದಲ್ಲಿದ್ದು ಕೆಲವು ಸಮಯಗಳ ಕಾಲ ಪಂಚತಾರಾ ಹೋಟೆಲ್ ಆಗಿತ್ತು.
ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ : ಈ ಅರಮನೆಯು ಚಾಮರಾಜ ಜೋಡಿ ರಸ್ತೆಯಲ್ಲಿದೆ. ಒಂದು ಕಾಲದಲ್ಲಿ ಈ ಅರಮನೆ ಸುಂದರವಾಗಿ ನಿರ್ಮಾಣವಾಗಿತ್ತಲ್ಲದೆ, ಇದನ್ನು ಟಿಪ್ಪು ಸುಲ್ತಾನ್ ತನ್ನ ಕಲಾಭಿರುಚಿಗೆ ತಕ್ಕಂತೆ ಕಲಾತ್ಮಕವಾಗಿ ಮೊಗಲ್ ಶೈಲಿಯಲ್ಲಿ ಕಟ್ಟಿಸಿದ್ದನು. [ಅರಮನೆ ಖಾಸಗಿ ದರ್ಬಾರ್ ಬಗ್ಗೆ ಓದಿ]
ಟಿಪ್ಪು ಸುಲ್ತಾನ್ ಕೊಡಗಿಗೆ ತೆರಳುತ್ತಿದ್ದ ಸಂದರ್ಭ ಇಲ್ಲಿ ತಂಗುತ್ತಿದ್ದನು ಎನ್ನಲಾಗಿದೆ. 1956ರಲ್ಲಿ ರಾಘವೇಂದ್ರ ಮಠಕ್ಕೆ ಟಿಪ್ಪು ಮುಖ್ಯಸ್ಥರಾದ ನಿಜಾಮುದ್ದೀನ್ ಅಲಿಖಾನ್ ಹಾಗೂ ಕಮಲುದ್ದೀನ್ ಅಲಿಖಾನ್ ಎಂಬುವರು ಮಾರಾಟ ಮಾಡಿದ್ದರು. ಆದರೆ ಇದೀಗ ಅಲ್ಲಿ ಶಾಲೆಯೊಂದು ನಡೆಯುತ್ತಿದ್ದು, ಹಳೆಯ ಕಟ್ಟಡವನ್ನು ಕೆಡವಿ ಹಾಕಲಾಗಿದೆ. ಸದ್ಯಕ್ಕೆ ಈ ಸ್ಥಳ ನಂಜನಗೂಡು ಶ್ರೀ ರಾಘವೇಂದ್ರ ಮಠದ ವಶದಲ್ಲಿದೆ.
ಲೋಕರಂಜನ್ ಮಹಲ್ ಅರಮನೆ : ಮೈಸೂರು ಅರಮನೆ ಕೋಟೆಯಿಂದ ಪೂರ್ವ ಭಾಗಕ್ಕೆ ಇಟ್ಟಿಗೆಗೂಡಿನಲ್ಲಿರುವ ಅರಮನೆಯ ಹೆಸರು ಲೋಕರಂಜನ್ ಮಹಲ್ ಅರಮನೆ. ಇದನ್ನು 1842ರಲ್ಲಿ ಕಟ್ಟಲಾಗಿದೆ. ಈ ಬೃಹತ್ ಬಂಗಲೆ 1868 ರ ಮೊದಲು ರಾಜ ಮನೆತನದವರ ನಿವಾಸವಾಗಿತ್ತು ಎನ್ನುತ್ತದೆ ಇತಿಹಾಸ.
ಇದು ಚಾಮರಾಜ ಒಡೆಯರ್ ಹಾಗೂ ಕೃಷ್ಣರಾಜ ಒಡೆಯರ್ ಮತ್ತು ಯುವರಾಜರುಗಳ ಪಾಠಶಾಲೆಯಾಗಿಯೂ ಬಳಕೆಯಾಗಿತ್ತು. ಈ ಅರಮನೆಯ ಉತ್ತರ ಭಾಗದ ಬಾಗಿಲನ್ನು ಕಮಾನು ಮತ್ತು ಕೆತ್ತನೆ ಕೆಲಸದಿಂದ ಕೊರೆದು ಮಾಡಲಾಗಿದೆ. ವಿಶಾಲ ಬಯಲು ಪ್ರದೇಶದಲ್ಲಿ ಕಟ್ಟಲ್ಪಟ್ಟಿರುವುದರಿಂದ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಇದು 1893ರ ಕಾಲಾವಧಿಯಲ್ಲಿ ಗಣ್ಯರ ಅತಿಥಿಗೃಹವಾಗಿತ್ತು. ಆಗ ಇದನ್ನು ಲೋಕರಂಜನ್ ಮಹಲ್ ಅತಿಥಿಗೃಹವೆಂದು ಕರೆಯಲಾಗುತ್ತಿತ್ತು.
1923ರ ವೇಳೆಗೆ ಇದರ ಸಂಪೂರ್ಣ ನಿರ್ವಹಣೆಯನ್ನು ಮೈಸೂರು ಅರಮನೆಯ ಫಾರಸ್ ಖಾನ್ ಎಂಬುವರ ಉಸ್ತುವಾರಿಗೆ ವಹಿಸಲಾಯಿತು. ಅರಮನೆಯ ಮುಂಭಾಗದಲ್ಲಿ ಸುಂದರ ಉದ್ಯಾನವನ, ಆಟದ ಮೈದಾನ ಮತ್ತು ಈಜುಕೊಳಗಳಿದ್ದು, ಇದಕ್ಕೆ ಹೊಂದಿಕೊಂಡಂತೆ ಮೃಗಾಲಯ ಹಾಗೂ ಅಶ್ವಶಾಲೆಗಳಿವೆ. ವಿಶಾಲ ಅಸಂಖ್ಯ ಕಿಟಿಕಿಗಳು, ಕೋಣೆಗಳು, ವಿಭಿನ್ನ ಎತ್ತರದ ಮೇಲ್ಛಾವಣಿಗಳು ಅರಮನೆಯ ವಿಶೇಷತೆಯಾಗಿದೆ.












Click it and Unblock the Notifications