ವಸಂತ ಮಹಲ್, ಕಾರಂಜಿ ವಿಲಾಸ ಅರಮನೆಗಳ ವಿಶೇಷತೆಗಳು
ಸುಂದರ ಚಿತ್ತಾರಗಳಿಂದ ಸಿಂಗರಿಸಲ್ಪಟ್ಟಂತೆ ಕಾಣುವ ವಸಂತ ಮಹಲ್ ಅರಮನೆಯು ಸುಮಾರು 30 ಎಕರೆ ಪ್ರದೇಶದಲ್ಲಿದೆ. 1842ರಲ್ಲಿ ಲೋಕರಂಜನ್ ಮಹಲ್ ಅರಮನೆ ನಿರ್ಮಾಣದ ಸಂದರ್ಭದಲ್ಲಿಯೇ ಇದನ್ನು ನಿರ್ಮಿಸಲಾಯಿತು. ಕಬ್ಬಿಣದ ಕಮಾನುಗಳ ರಚನೆಯನ್ನು ಹೊಂದಿದ್ದು, ಕಲಾತ್ಮಕ ವಾಸ್ತು ಶೈಲಿಯನ್ನು ಇದು ಹೊಂದಿದೆ. ಪ್ರಸ್ತುತ ಇಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಕಾರಂಜಿ ವಿಲಾಸ ಅರಮನೆ : ಕಾರಂಜಿಕೆರೆಯ ಸುಂದರ ಪರಿಸರದಲ್ಲಿ ನಿರ್ಮಾಣವಾಗಿರುವ ಅರಮನೆಯೇ ಕಾರಂಜಿವಿಲಾಸ ಅರಮನೆ. ಈ ಸುಂದರ ಅರಮನೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ಎರಡನೆಯ ಸಹೋದರಿ ಕೃಷ್ಣರಾಜಮ್ಮಣ್ಣಿಯವರಿಗಾಗಿ 1902ರಲ್ಲಿ ನಿರ್ಮಿಸಿದರೆಂದು ಹೇಳಲಾಗುತ್ತದೆ. ಆಗಿನ ಕಾಲದಲ್ಲಿ ಇದರ ನಿರ್ಮಾಣಕ್ಕೆ ತಗುಲಿದ ವೆಚ್ಚ ಸುಮಾರು 4,27,610 ರೂ.. ಕಾರಂಜಿ ಕೆರೆಯ ಪಕ್ಕದಲ್ಲಿರುವುದರಿಂದ ಸಾಮಾನ್ಯವಾಗಿ ಎಲ್ಲರೂ ಕಾರಂಜಿವಿಲಾಸ ಅರಮನೆ ಎಂದು ಕರೆಯುತ್ತಾರೆ. ಹಿಂದೂ ಗ್ರೀಕ್ ಶೈಲಿಯ ಈ ಅರಮನೆಗೆ ರಾಜಸ್ಥಾನಿ ಶೈಲಿಯ ಕಿಟಿಕಿಗಳನ್ನು ಕಮಲದ ಹೂವಿನ ರಚನೆಯ ಮೇಲೆ ರೂಪಿಸಿರುವುದು ವಿಶೇಷ.

ಅಲೋಕ ಮಹಲ್ ಅರಮನೆ : ಮೈಸೂರು ನಗರದ ಹೊರ ವಲಯದ ಹುಣಸೂರು ರಸ್ತೆಯ ಇಲವಾಲದ ಬಳಿಯಿರುವ ಈ ಅರಮನೆ ಚಿಕ್ಕದಾದರೂ ಸುಂದರವಾಗಿದೆ. ಮೈಸೂರು ಸಂಸ್ಥಾನದ ರೆಸಿಡೆಂಟ್ ಆಗಿದ್ದ ಅರ್ಥರ್ ಕೋಲ್ ಅವರು 1806ರಲ್ಲಿ ಇದನ್ನು ನಿರ್ಮಿಸಿದರು. ಮಹಾರಾಜರು ಬೇಟೆಗೆ ತೆರಳುತ್ತಿದ್ದ ಸಂದರ್ಭ ಈ ಅರಮನೆಯಲ್ಲಿ ತಂಗುತ್ತಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ, ಅರಣ್ಯ ಇಲಾಖೆ, ನವೋದಯ ಶಾಲೆಗಳು ಇಲ್ಲಿ ಕಾರ್ಯ ನಿರ್ವಹಿಸಿದ್ದವು. [ಮೈಸೂರಿನಲ್ಲಿ ಗಜಪಡೆಯ ತಾಲೀಮು ಹೇಗಿರುತ್ತೆ ಗೊತ್ತಾ?]
ಚೆಲುವಾಂಬ ವಿಲಾಸ ಅರಮನೆ : ನಾಲ್ವಡಿಕೃಷ್ಣರಾಜ ಒಡೆಯರ್ ತಮ್ಮ ಮೂರನೇ ಸಹೋದರಿಯಾದ ರಾಜಕುಮಾರಿ ಚೆಲುವ ರಾಜಮ್ಮಣ್ಣಿಯವರಿಗಾಗಿ 1911ರಲ್ಲಿ ಚೆಲುವಾಂಬ ವಿಲಾಸ ಅರಮನೆಯನ್ನು ಕಟ್ಟಿಸಿದರು. ಈ ಅರಮನೆಯನ್ನು ರೈಲ್ವೆ ನಿಲ್ದಾಣದ ಬಳಿ ಪಶ್ಚಿಮಕ್ಕೆ ಎತ್ತರದ ಸ್ಥಳದಲ್ಲಿ ಕಟ್ಟಲಾಗಿದೆ. ಇಂಡೋಸಾರ್ಸನಿಕ್ ಶೈಲಿಯ ಅರಮನೆಯನ್ನು 1950ರ ದಶಕದಲ್ಲಿ ಸರ್ಕಾರಕ್ಕೆ ಅತಿ ಕಡಿಮೆ ದರದಲ್ಲಿ ಮಾರಲಾಯಿತು. ಸದ್ಯ ಇದು ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‍ಟಿಆರ್‍ಐ) ಕಛೇರಿಯಾಗಿದೆ.

ಚಿತ್ತರಂಜನ್ ಮಹಲ್ ಅರಮನೆ : ಹುಣಸೂರು ರಸ್ತೆಯಲ್ಲಿರುವ ಈ ಅರಮನೆ ಸುಂದರವಾಗಿದ್ದು, ಆಕರ್ಷಕವಾಗಿದೆ. ರಾಜಮನೆತನದವರು ವಿಶ್ರಾಂತಿ ಗೃಹವಾಗಿ ಇದನ್ನು ಬಳಸುತ್ತಿದ್ದರಂತೆ. ನಂತರ ಇದರಲ್ಲಿ ಚಲನಚಿತ್ರ ನಿರ್ಮಾಣ ಚಿತ್ರೀಕರಣದ ಸಂಸ್ಥೆಯಾದ ಪ್ರೀಮಿಯರ್ ಸ್ಟುಡಿಯೋವನ್ನು ಆರಂಭಿಸಲಾಯಿತು. ಕೆಲವು ದಶಕಗಳ ಕಾಲ ಇಲ್ಲಿ ಹಲವು ಚಲನಚಿತ್ರಗಳ ಚಿತ್ರೀಕರಣ ಮಾಡಲಾಯಿತು. ಸಂಜಯ್‍ಖಾನ್‍ರ ಟಿಪ್ಪು ಖಡ್ಗ ಚಿತ್ರದ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹಲವಾರು ಕಲಾವಿದರು, ತಂತ್ರಜ್ಞರು ಬೆಂಕಿಯ ಕೆನ್ನಾಲಿಗೆಗೆ ಬಲಿಯಾದರು. ಈ ದುರಂತವನ್ನು ವಿಶ್ವದ ಚಲನಚಿತ್ರ ರಂಗದ ಮಹಾದುರಂತ ಎಂದು ಕರೆಯಲಾಗಿದೆ. ಈಗ ಸ್ಟುಡಿಯೋ ಮುಚ್ಚಲಾಗಿದ್ದು ಹೋಟೆಲ್ ಕಾರ್ಯನಿರ್ವಹಿಸುತ್ತಿದೆ. [ಅಂಬಾರಿ ಹೊರುವ ಅರ್ಜುನನ ತಾಲೀಮು ಹೇಗಿರುತ್ತೆ?]












Click it and Unblock the Notifications