ಜಯಲಕ್ಷ್ಮೀ ವಿಲಾಸ, ಲಲಿತಮಹಲ್ ಅರಮನೆ ಬಗ್ಗೆ ಓದಿ
ಜಯಲಕ್ಷ್ಮೀ ವಿಲಾಸ ಅರಮನೆ ಮಾನಸ ಗಂಗೋತ್ರಿ ಆವರಣದಲ್ಲಿದೆ. ಇದನ್ನು ಚಾಮರಾಜ ಒಡೆಯರ್ ಹಿರಿಯ ಮಗಳು ಹಾಗೂ ಕೃಷ್ಣರಾಜ ಒಡೆಯರ್ ಸಹೋದರಿ ರಾಜಕುಮಾರಿ ಜಯಲಕ್ಷ್ಮಮ್ಮಣ್ಣಿಯವರಿಗಾಗಿ 1905ರಲ್ಲಿ ಸುಮಾರು 7 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಿಸಲಾಯಿತು. ಕುಕ್ಕರಹಳ್ಳಿ ಕೆರೆ ಬಳಿ ನಿರ್ಮಾಣವಾಗಿರುವುದರಿಂದ ಕೆಬ್ಬೆಕಟ್ಟೆ ಬಂಗಲೆ ಎಂಬುವುದಾಗಿಯೂ ಕೆಲವರು ಕರೆಯುವುದುಂಟು.
ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ರಾಘವಲು ನಾಯ್ಡು ಅವರ ಮಾರ್ಗದರ್ಶನದಲ್ಲಿ ನಿರ್ಮಾಣವಾದ ಈ ಅರಮನೆಗೆ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ಪ್ರವೇಶ ದ್ವಾರಗಳಿವೆ. ನಾಲ್ಕು ಭಾಗಗಳಿಂದ ಕೂಡಿರುವ ಈ ಅರಮನೆ ಒಟ್ಟಾಗಿ ಸೇರಿ ಒಂದೇ ಕಟ್ಟಡ ಎಂಬಂತೆ ಭಾಸವಾಗುತ್ತದೆ. ಇಂಡೋಗ್ರೀಕ್ ಮತ್ತು ಇಸ್ಲಾಮಿಕ್ ಶೈಲಿಯಲ್ಲಿ ನಿರ್ಮಾಣವಾಗಿರುವ ಅರಮನೆಗೆ ಅರ್ಧ ಚಂದ್ರಾಕೃತಿಯ ಕಮಾನುಗಳು, ಗ್ರೀಕ್, ರೋಮನ್, ಕೆತ್ತನೆ ಕುಸುರಿ ಕೆಲಸಗಳು, ಬೃಹತ್ ಮರದ ಬಾಗಿಲುಗಳು ಮೆರುಗು ನೀಡಿವೆ. [ಶಾಸ್ತ್ರೋಕ್ತವಾಗಿ ನವರಾತ್ರಿ ಉತ್ಸವ ಆಚರಿಸುವ ಬಗೆ ಹೇಗೆ?]

ಈ ಅರಮನೆಯ ಒಳಾಂಗಣ ಸುಂದರವಾಗಿದೆ. ಇಲ್ಲಿ ಕಾಣಸಿಗುವ ಅಪೂರ್ವ ಕಲಾಕುಸುರಿ ಕೆಲಸ, ಮರಗಳ ಮೇಲೆ ಕೆತ್ತಲಾದ ಸಾಂಪ್ರದಾಯಿಕ ಕೆತ್ತನೆ ಕಲಾವಿದನ ಕಲಾ ಚಾತುರ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬೃಹತ್ ಬಾಗಿಲುಗಳು, ಕಿಟಕಿಗಳು, ಕಮಾನುಗಳು, ಗುಮ್ಮಟಗಳು ಇಸ್ಲಾಮಿಕ್ ಶೈಲಿಯಲ್ಲಿದ್ದು ಗಮನಸೆಳೆಯುತ್ತದೆ. ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಕೂಡಿರುವ ಅರಮನೆಯಲ್ಲಿ ನೃತ್ಯಶಾಲೆ ಮತ್ತು ಕಲ್ಯಾಣ ಮಂಟಪವಿದೆ. [ದಸರಾ ಕಾರ್ಯಕ್ರಮಗಳ ಪಟ್ಟಿ]
ಕಲ್ಯಾಣ ಮಂಟಪವು ವಿಶಾಲ ಹಜಾರದಲ್ಲಿ ತೇಗ ಮರದ 20 ಅಡಿ ಎತ್ತರದ ಸುಂದರ ಕೆತ್ತನೆಯ ವೃತ್ತಾಕಾರವಾಗಿ ಸುತ್ತುವರೆದಿರುವ 12 ಕಂಬಗಳಿಂದ ಕೂಡಿದೆ. ಅರಮನೆಯಲ್ಲಿ ಸುಮಾರು 123ಕ್ಕೂ ಹೆಚ್ಚು ಕೋಣೆಗಳಿದ್ದು, 90ಕೋಣೆಗಳನ್ನು ರಾಣಿಯರ ವಾಸಕ್ಕೆ ಮೀಸಲಿರಿಸಿ ಉಳಿದವುಗಳನ್ನು ಸೇವಕರಿಗೆ ನೀಡಲಾಗಿತ್ತು ಎನ್ನಲಾಗಿದೆ. ಇಲ್ಲಿಯ ಪ್ರತಿ ಬಾಗಿಲುಗಳ ಮೇಲೂ ದೇವ ದೇವತೆಯ ಹೂಗಳನ್ನು ರಚಿಸಿ ಸಿಂಗರಿಸಲಾಗಿದೆ.
ಈ ಅರಮನೆ ಹಾಗೂ 300 ಎಕರೆ ಜಾಗವನ್ನು ರಾಷ್ಟ್ರಕವಿ ಕುವೆಂಪುರವರು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾಗ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ 1959ರಲ್ಲಿ 10 ಲಕ್ಷ ರೂಪಾಯಿಗಳಿಗೆ ಖರೀದಿಸಿದರು ಎನ್ನಲಾಗಿದೆ. ಇದೀಗ ಅರಮನೆಯು ಮೈಸೂರು ವಿವಿಯ ಜಾನಪದ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ.

ಲಲಿತಮಹಲ್ ಅರಮನೆ : ಮೈಸೂರು ನಗರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಹಾಗೂ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿರುವ ಸುಂದರ ಅರಮನೆಯಾದ ಲಲಿತ್ ಮಹಲ್ ಅರಮನೆಯು ಎತ್ತರದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವುದರಿಂದ ನಗರದ ಹೆಚ್ಚಿನ ಭಾಗಕ್ಕೆ ಎದ್ದು ಕಾಣುತ್ತದೆ.
ಈ ಅರಮನೆಯನ್ನು ಲಲಿತಾದ್ರಿ ಎಂಬ ಮತ್ತೊಂದು ಹೆಸರಿನಿಂದಲೂ ಕರೆಯಲಾಗುತ್ತಿದೆ. 1921-22ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಅರಮನೆಯನ್ನು ಸುಮಾರು 13 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ವಾಸ್ತುಶಿಲ್ಪಿ ಇ.ಡಬ್ಲ್ಯೂ.ಫ್ರಿಟ್‍ಚ್ಲೆ ಎಂಬುವರು ಅರಮನೆಯನ್ನು ವಿನ್ಯಾಸಗೊಳಿಸಿದ್ದು, ಮುಂಭಾಗದಲ್ಲಿ ವಿಶಾಲ ಅಂಗಳವಿದ್ದು, ಇಲ್ಲಿರುವ ಹೂದೋಟ ಸುಂದರವಾಗಿದೆ.
ಅರಮನೆಗೆ ಕಾಲಿಡುತ್ತಿದ್ದಂತೆಯೇ ವಿಶಾಲ ಹಜಾರ ಎದುರಾಗುತ್ತದೆ. ಬಾಗಿಲು ಹಾಗೂ ಕಿಟಿಕಿಯ ಬಾಗಿಲಿಗೆ ಇಟಾಲಿಯನ್ ಗಾಜನ್ನು ಅಳವಡಿಸಲಾಗಿದೆ. 1955ರಲ್ಲಿ ರಾಜಮನೆತನದಿಂದ ಸರ್ಕಾರದ ವಶಕ್ಕೆ ಈ ಅರಮನೆ ಬಂದಿದ್ದು, ಭಾರತೀಯ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿದ್ದು, ಪಂಚತಾರಾ ಹೋಟೆಲ್‍ಗಳ ಪೈಕಿ ಶ್ರೇಷ್ಠ ಪಂಚತಾರಾ ಹೋಟೆಲ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇಲ್ಲಿ ಹಲವು ಚಲನಚಿತ್ರಗಳ ಚಿತ್ರೀಕರಣವೂ ನಡೆದಿದೆ.












Click it and Unblock the Notifications