ಮೈಸೂರು ದಸರಾದಲ್ಲಿ ಸೇನೆಯ ಪಥಸಂಚಲನ
ಮೈಸೂರು, ಸೆ.4 : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ಜಂಬೂ ಸವಾರಿ ಜೊತೆಗೆ ಸೇನಾ ತುಕಡಿಗಳ ಶಸ್ತ್ರಾಸ್ತ್ರ ಸಾಮರ್ಥ್ಯ ಪ್ರದರ್ಶನವೂ ನಡೆಯಲಿದೆ. ದಸರಾದಲ್ಲಿ ಮೊದಲ ಬಾರಿಗೆ ಸೇನಾ ಪಥಸಂಚಲನ ನಡೆಯಲಿದೆ.
ನಾಡಹಬ್ಬ ಮೈಸೂರು ದಸರಾದಲ್ಲಿ ಸೇನಾ ತುಕಡಿಯಿಂದ ಶಸ್ತ್ರಾಸ್ತ್ರ ಸಾಮರ್ಥ್ಯ ಪ್ರದರ್ಶನ ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿತ್ತು. ಸದ್ಯ ರಕ್ಷಣಾ ಸಚಿವಾಲಯ ಇದಕ್ಕೆ ಅನುಮತಿ ನೀಡಿದ್ದು, ಸೇನಾ ತುಕಡಿಗಳ ಪಥ ಸಂಚಲನ ನಡೆಯಲಿದೆ.

ಈ ಮೂಲಕ ಗಣರಾಜ್ಯೋತ್ಸವದಲ್ಲಿ ಮಾತ್ರ ವೀಕ್ಷಿಸಬಹುದಾಗಿದ್ದ ಸೇನಾ ತುಕಡಿಗಳ ಆಕರ್ಷಕ ಪಥ ಸಂಚಲನವನ್ನು, ದಕ್ಷಿಣ ಭಾರತದ ಜನರು ದಸರಾದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ದೊರೆಯಲಿದೆ.
ಜಂಬೂ ಸವಾರಿಯಲ್ಲಿ ಭೂ ಸೇನೆ, ವಾಯು ಸೇನೆ ಹಾಗೂ ನೌಕಾದಳದ ಪಥಸಂಚಲನ ಹಾಗೂ ಶಸ್ತ್ರಾಸ್ತ್ರ ಪ್ರದರ್ಶನಕ್ಕೆ ಅವಕಾಶ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದರು. ಸದ್ಯ ಭೂ ಸೇನೆ ಪಥ ಸಂಚಲನಕ್ಕೆ ಅವಕಾಶ ದೊರೆತಿದೆ.
ಮಂಗಳವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಸರಾ ಆಚರಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಈ ಕುರಿತು ಮಾಹಿತಿ ನೀಡಿದ್ದು, ಜಂಬೂ ಸವಾರಿ ವೇಳೆ ಭೂ ಸೇನಾ ತುಕಡಿ ಪಾಲ್ಗೊಂಡು, ಸೇನಾ ಶಸ್ತ್ರಾಸ್ತ್ರ ಸಾಮರ್ಥ್ಯದ ಪ್ರದರ್ಶನ ನಡೆಸಲಿದೆ ಎಂದು ಹೇಳಿದ್ದಾರೆ.
ನಾಡಹಬ್ಬ ಮೈಸೂರು ದಸರಾವನ್ನು ಮತ್ತಷ್ಟು ಆಕರ್ಷಕಗೊಳಿಸಿ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಸೇನಾ ತುಕಡಿಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.(ಮೈಸೂರು ದಸರಾ ವೆಬ್ ಸೈಟ್)












Click it and Unblock the Notifications